-->
ನಾನೂ ಒಬ್ಬ ಸೈನಿಕ ..... ಸಂಚಿಕೆ - 4

ನಾನೂ ಒಬ್ಬ ಸೈನಿಕ ..... ಸಂಚಿಕೆ - 4

ಜಗಲಿಯ ಮಕ್ಕಳ 
ಮನದ ಮಾತು
ನಾನೂ ಒಬ್ಬ ಸೈನಿಕ
ಸಂಚಿಕೆ - 4
 


          ನಾನೂ ಒಬ್ಬ ಸೈನಿಕ.... ಚೈತ್ರ
-------------------------------------------------
      ಮನುಷ್ಯನ ಅತಿ ಆಸೆ, ಏರುತ್ತಿರುವ ಜನಸಂಖ್ಯೆ, ಆಡಂಬರದ ಜೀವನ ಶೈಲಿ ಇಂದು ಪರಿಸರವನ್ನು ಹಾಳು ಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ನೀರು ಗಾಳಿ ಭೂಮಿ ಎಲ್ಲವೂ ಇಂದು ಅತಿ ಹೆಚ್ಚು ಕಲುಷಿತಗೊಳ್ಳುತ್ತಿವೆ. ಮಲಿನವಾಗುತ್ತಿರುವ ಈ ಪರಿಸರ ಇಂದು ಕೇವಲ ಮನುಕುಲಕ್ಕೆ ಮಾತ್ರವಲ್ಲದೆ ವಿಶ್ವದ ಇಡೀ ಜೀವಸಂಕುಲಕ್ಕೆ ಮಾರಕವಾಗಿದೆ. ಆರೋಗ್ಯಕರ ಜೀವನಕ್ಕೆ ಅತಿ ಅಗತ್ಯವಾದ ಶುದ್ಧಗಾಳಿ, ನೀರು, ಆಹಾರ ಎಲ್ಲವೂ ಇಂದು ವಿಷಪೂರಿತವಾಗುತ್ತಿವೆ. ಆದುದರಿಂದ ನಾವು ಎಚ್ಚೆತ್ತುಕೊಂಡು ಪರಿಸರವನ್ನು ಸೈನಿಕರಂತೆ ಕಾಯುವ ಜವಾಬ್ದಾರಿ ನಮ್ಮದಾಗಿದೆ. ಆದುದರಿಂದ ನಾನು ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನನ್ನಿಂದಾದಷ್ಟು ಪ್ರಯತ್ನ ಮಾಡುವ ಮೂಲಕ ಇತರರಿಗೆ ಮಾದರಿಯಾಗುತ್ತೇನೆ. ನನ್ನ ಸುತ್ತ ಮುತ್ತಲಿನ ಜಲಮೂಲಗಳ ಬಳಿ ತ್ಯಾಜ್ಯ ವಿಸರ್ಜನೆ ಮಾಡುವುದು, ಕಂಡುಬಂದಲ್ಲಿ ಅವರಿಗೆ ತಿಳಿಹೇಳಿ ಅವರ ಮನವೊಲಿಸಿ ಜಲ ಮಾಲಿನ್ಯವನ್ನು ತಕ್ಕಮಟ್ಟಿಗೆ ನಿಯಂತ್ರಿಸಲು ಪ್ರಯತ್ನಿಸುತ್ತೇನೆ. ಪ್ಲಾಸ್ಟಿಕ್ ಸುಡುವುದರಿಂದ ಅತಿಯಾದ ವಾಯುಮಾಲಿನ್ಯ ಉಂಟಾಗುತ್ತದೆ. ಆದುದರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬೇಕು. ಈ ಬಗ್ಗೆ ನಮ್ಮ ಸುತ್ತಮುತ್ತಲ ಜನರಲ್ಲಿ ಜಾಗೃತಿ ಮೂಡಿಸಲು ನಾನು ಪ್ರಯತ್ನಿಸುತ್ತೇನೆ.
ಅಲ್ಲದೆ ನನ್ನಿಂದ ಆದಷ್ಟು ಗಿಡಮರಗಳನ್ನು ನೆಟ್ಟು ಪೋಷಿಸುವುದರ ಮೂಲಕ ಮುಂದಿನ
ಜನಾಂಗಕ್ಕೂ ಪರಿಸರವನ್ನು ಸುಸ್ಥಿತಿಯಲ್ಲಿ ಉಳಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿಯಿಂದ ನನ್ನ ಪ್ರಯತ್ನವನ್ನು ಖಂಡಿತ ಮಾಡುತ್ತೇನೆ. 
..................................................... ಚೈತ್ರ
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಡ್ಮಾಣ್ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**************************************



  ನಾ ಸೈನಿಕನಾಗುವೆ....ಪ್ರಣವ್ ದೇವ್
---------------------------------------------------
          ಅಮ್ಮ, ನಾ ಸೈನಿಕನಾಗುವೆ
          ಶತ್ರುಗಳ ಓಡಿಸುವೆ .....
ಅಮ್ಮ, ನಾ ಭೀಮನಾಗುವೆ
ಎಲ್ಲರನ್ನೂ ಪ್ರೀತಿಸುವೆ.....
         ಅಮ್ಮ, ನಾ ಸುಭಾಷ್ ನಾಗುವೆ
          ನ್ಯಾಯವ ಕೊಡಿಸುವೆ .....
ಅಮ್ಮ, ನಾ ಕಲಾಂ ನಾಗುವೆ
ನನ್ನ ದೇಶವ ಮೇಲಕ್ಕೆತ್ತುವೆ ......
..................................ಪ್ರಣವ್ ದೇವ್
1 ನೇ ತರಗತಿ 
ಲೇಡಿ ಹಿಲ್ ಪ್ರೈಮರಿ ಶಾಲೆ
ಮಂಗಳೂರು - ದಕ್ಷಿಣ ಕನ್ನಡ ಜಿಲ್ಲೆ
**************************************




   ನಾನು ಸೈನಿಕನಾಗುತ್ತೇನೆ - ಶ್ರಾವ್ಯ ಜಿ ನಾಯ್ಕ್
 -----------------------------------------------
   ನಾವು "ಜನನಿ ಜನ್ಮ ಭೂಮಿ" ಎಂದು ಹೇಳುತ್ತಾ ಜನ್ಮ‌ಭೂಮಿಯನ್ನು ಮಾತೆಯಾಗಿ ಪೂಜಿಸುತ್ತೇವೆ. ಆದರೆ ನಾವು ಆಕೆಯನ್ನು ಜಗತ್ತಿಗೆ ಕೊಳಕು ಭರಿತವಾಗಿ ಪ್ರಸ್ತುತ ಪಡಿಸಿದ್ದೇವೆ ಎನ್ನುವುದು ಕಟುಸತ್ಯ. ಆದರೆ ಇನ್ನು ಮುಂದೆಯಾದರೂ ನಾವು ಅಘೋಷಿತ ಸ್ವಚ್ಚತಾ ಸೈನಿಕರಾಗಿ ನಮ್ಮ ತಾಯಿ ಭಾರತಿಯನ್ನು ಕೊಳಕಿನಿಂದ, ಮುಕ್ತಗೊಳಿಸಿ ಆಕೆಗೆ ಕಸದಿಂದಲೂ ಸ್ವಾತಂತ್ರ್ಯ ಕೊಡಿಸುವ ಸೈನಿಕನಾಗುತ್ತೇನೆ. 
          ಜಪಾನಿಯರ ಮೇಲೆ ಅಣುಬಾಂಬ್ ಹಾಕಿ ಅವರ ದೇಶವನ್ನು ನಾಶಮಾಡಲು ಪ್ರಯತ್ನ ಮಾಡಿದ ಅಮೇರಿಕಾವನ್ನು ತಮ್ಮ ಸ್ವಾಭಿಮಾನದಿಂದ ಮಾರಕಟ್ಟೆಯಿಂದ ದೂರ ಇಟ್ಟು ಬಲಿಷ್ಠವಾದಂತೆ ನಾವು ಸ್ವಾತಂತ್ರ್ಯ ಪಡೆದ 75ವಸಂತದ ಈ ಸಂಧರ್ಭದಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ. ಭಾರವನ್ನು ಹೆಜ್ಜೆ ಹೆಜ್ಜೆಗೂ ಪೀಡಿಸುತ್ತಾ ವಿರೋಧಿಸುತ್ತ ನಮ್ಮ ರಾಷ್ಟ್ರದ ಭೂಭಾಗವನ್ನು ಕಸಿದುಕೊಳ್ಳಲು ಪ್ರಯತ್ನ ಪಡುತ್ತಾ. ಪಾಪಿ ಪಾಕಿಸ್ತಾನಕ್ಕೆ ಬೆಂಗಾವಲಾಗಿ ನಿಂತ ಚೀನಾದ ವಸ್ತುಗಳನ್ನು ಬಳಸುವುದನ್ನು ನಾನು ಆದಷ್ಟು ಕಡಿಮೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸ್ವಾಭಿಮಾನಿ ಸೈನಿಕನಾಗುತ್ತೇನೆ.
       ಕೈಯ್ಯಲ್ಲಿನ ಐದು ಬೆರಳುಗಳು ಹೇಗೆ ವಿಭಿನ್ನವಾಗಿದೆಯೋ ಅಂತೆಯೇ ನಮ್ಮ ಬೃಹತ್ 130ಕೋಟಿ ಜನಸಂಖ್ಯೆಯುಳ್ಳ ಜನರ ಮನಸ್ಸುಗಳು ಭಿನ್ನ ಭಿನ್ನವಾಗಿದೆ. ನಾನೊಬ್ಬ ಸೈನಿಕನಾಗಿ ನನ್ನ ರಾಷ್ಟ್ರದ ಕೆಲ ಜನರ ಮನಸಲ್ಲಿ ಮನೆಮಾಡಿರುವ ಜಾತಿವಾದ, ಮತಾಂಧತೆ, ಅಸಮಾನತೆ, ಕೀಳುಭಾವನೆಯನ್ನು ನಾಶ ಮಾಡುತ್ತೇನೆ.
          ದೇಶ ಎಂದಾಗ ಅಲ್ಲಿನ ಜನರ ಆಚಾರ ವಿಚಾರ ವಿಭಿನ್ನವಾಗಿದೆ ಅದರಲ್ಲೂ ನಮ್ಮ ಭಾರತವಂತೂ ವಿಶೇಷದಲ್ಲಿ ವಿಶೇಷ. ಇಲ್ಲಿ ಸಾವಿರಕ್ಕೂ ಮಿಗಿಲಾದ ಭಾಷೆ, ನೂರಾರು ಸಂಸ್ಕೃತಿ ಆಚಾರ- ವಿಚಾರದ ಹಲವು ವರ್ಣದ ಜನರಿದ್ದೇವೆ. ಆದರೆ ಇದನ್ನೆಲ್ಕ ಮಿಗಿಲಾದ ದಕ್ಷಿಣ-ಉತ್ತರ, ಈಶಾನ್ಯ ಬಿಳಿಯ-ಕರಿಯ ಎನ್ನುವ ಬೇಧಭಾವವನ್ನು ದೂರ ಮಾಡಿ ನಾವೆಲ್ಲ ಒಂದು ನಾವೆಲ್ಲ ಭಾರತ ಮಾತೆಯ ಮಕ್ಕಳು ಎನ್ನುವ ಸಮಾನತೆಯನ್ನು ಸಾರುವ ಸೈನಿಕ ನಾನಾಗುತ್ತೇನೆ.
      ಇಂದು ತಾಯಿ ಭಾರತಿಯ ಹೆಮ್ಮೆಯ ಮಕ್ಕಳಾದ ಮೇರಿಕೋಮ್‌, ಲೊವ್ಲಿನ, ಮೀರಾಭಾಯಿ ಚಾನು ಪದಕಗಳನ್ನು ಗೆದ್ದು ಬಂದಾಗ ಅವರ ಬಗ್ಗೆ ಹೆಮ್ಮೆಯಿಂದ ಬೀಗುವ ನಾವುಗಳು ಅದೇ ಅವರ ಅಸ್ಸಾಂ, ಮಣಿಪುರದಂತಹ ಈಶಾನ್ಯ ರಾಜ್ಯದಿಂದ ಶಿಕ್ಷಣಕ್ಕಾಗಿ ಅಥವಾ ಕೆಲಸಕ್ಕಾಗಿ ಇತರ ರಾಜ್ಯಗಳಿಗೆ ಬಂದಂತಹ ಭಾರತೀಯರನ್ನು ಚೀನೀ ಯರೆಂದು ಸಂಭೋದಿಸುವರಿಗೆ ತಿಳಿಹೇಳುವ ಮೂಲಕ ಪ್ರಾದೇಶಿಕತೆ ದೇಹಸ್ವರೂಪಕ್ಕಿಂತ ಅವರಲ್ಲಿರುವ ರಾಷ್ಟ್ರೀಯತೆ ಮೇಲು ಎಂದು ಏಕತೆಯನ್ನು ಪ್ರತಿಪಾದಿಸುವ ಸೈನಿಕನಾಗುತ್ತೇನೆ.
      ಆಧುನಿಕತೆಯ ಭರಾಟೆಯಲ್ಲಿ ವಿದೇಶಿ ಸಂಸ್ಕೃತಿಯೆಡೆಗೆ ವಾಲುವ ಇಂದಿನ ಜನರಲ್ಲಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ,ಯೋಗದ ಶಕ್ತಿಯನ್ನು, ಆಯುರ್ವೇದದ ಪ್ರಭಾವವನ್ನು ನನ್ನ ಭಾರತೀಯರಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ತಿಳಿಹೆಳುವ ಸಂಸ್ಕೃತಿಯ ಸೈನಿಕನಾಗಿ ನಿಲ್ಲುತ್ತೇನೆ.
      ಭಾರತೀಯರಲ್ಲದ ಅಲೆಗ್ಸಾಂಡರ್, ಬಾಬರ, ಅಕ್ಬರ, ರೋಮ್ ಸಾಮ್ರಾಜ್ಯದ ಬಗ್ಗೆ ಜನರಿಗೆ ಇತಿಹಾಸ ಹೇಳುವಾಗ ನಾನು ನಮ್ಮ ರಾಷ್ಟ್ರದ 5 ಸಾವಿರಕ್ಕೂ ಮಿಗಿಲಾದ ಅಯೋಧ್ಯಾಪತಿ ಶ್ರೀರಾಮನಿಂದ ಹಿಡಿದು ಬುದ್ಧ, ಚಂದ್ರಗುಪ್ತ, ಅಶೋಕ, ಚಂದ್ರಗ ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿಯ ಆಡಳಿತ ವೈಖರಿಯನ್ನು , ಹೊಯ್ಸಳ, ಕದಂಬ, ರಾಷ್ಟ್ರಕೂಟರು ವಿಜಯನಗರದ ಅರಸರ ವೈಭವಭರಿತ ರಾಜಮನೆತನಗಳ ಇತಿಹಾಸವನ್ನು ತಿಳಿಸಿ ಭಾರತೀಯರಲ್ಲಿ ಸ್ವಾಭಿಮಾನ ಜಾಗೃತಗೊಳಿಸುವ ಸೈನಿಕನಾಗುತ್ತೇನೆ.
......................................ಶ್ರಾವ್ಯ ಜಿ ನಾಯ್ಕ್
 ಪ್ರಥಮ ಪಿಯುಸಿ
 ಕ್ರೈಸ್ಟ್ ಕಿಂಗ್ ಕಾಲೇಜು
 ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
***************************************



    ನಾನೂ ಒಬ್ಬ ಸೈನಿಕ : ಮಧುಶ್ರೀ ಎ. 
  ---------------------------------------------
ನಮ್ಮ ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅಪಾರವಾದುದು. ಎಷ್ಟೋ ಸೈನಿಕರು ನಮ್ಮ ದೇಶದ ರಕ್ಷಣೆಯ ಸಲುವಾಗಿ ದುಡಿದು ವೀರ ಮರಣವನ್ನಪ್ಪಿದ್ದಾರೆ. ಅವರಿಗೆ ರಕ್ತದ ಕಣಕಣದಲ್ಲೂ ದೇಶ ರಕ್ಷಣೆಯ ಹುರುಪಿದೆ…ಭಾರತ ನನ್ನದು ಎನ್ನುವ ಒಂದೇ ಒಂದು ಉದಾತ್ತವಾದ ಗುರಿಯನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ದೇಶದ ಮೇಲಿನ ಪ್ರೀತಿಯಿಂದ ತನ್ನ ಕುಟುಂಬದಿಂದ ದೂರವಿದ್ದು ಸಾಕಷ್ಟು ಸವಾಲುಗಳೊಂದಿಗೆ ಜೀವನದ ಹಂಗು ತೊರೆದು ಓರ್ವ ಸೈನಿಕನಾಗಿ ನಮ್ಮ ದೇಶವನ್ನು ಕಾಯುವ ವೀರ ಯೋಧರು ನಮ್ಮ ನಾಡಿನ ರಕ್ಷಕರು ಮತ್ತು ನಮಗೆಲ್ಲರಿಗೂ ಪ್ರೇರಕರಾಗಿದ್ದಾರೆ. "ಹೇಡಿಗಳಿಲ್ಲದ ನಾಡು ನಮ್ಮ ಭಾರತ ನಾಡು" ಎಂಬ ಕವಿವಾಣಿಯನ್ನು ತೋರಿಸಿಕೊಟ್ಟಿದ್ದಾರೆ. ನೈಸರ್ಗಿಕ ವಿಕೋಪಗಳಾದ ಭೂಕಂಪ,ಚಂಡಮಾರುತ,ನೆರೆ ಪ್ರವಾಹ ಇತ್ಯಾದಿ ಸಂದರ್ಭಗಳಲ್ಲಿ ಅನಾಹುತಗಳಾದಾಗ ಕೂಡಾ ರಕ್ಷಣಾ ಕಾರ್ಯಗಳಲ್ಲಿ ತೊಡಗುತ್ತಾರೆ. ಎಲ್ಲರಿಂದಲೂ ದೂರವಿದ್ದು ಶತ್ರುವಿನ ಬಂದೂಕಿನ ನಳಿಗೆಗೆ ಈಡಾಗಿ ಪ್ರಾಣವನ್ನು ಪಣವಾಗಿಟ್ಟು ದೇಶವನ್ನು ಕಾಯುವ, ನಮ್ಮ ಹೆಮ್ಮೆಯ ಯೋಧರ ಬಗ್ಗೆ ಆಳವಾಗಿ ಯೋಚಿಸಿದಾಗ ನಾನೂ ಒಬ್ಬ ಸೈನಿಕನಾಗಿ ನಮ್ಮ ದೇಶಕ್ಕಾಗಿ ಕಿಂಚಿತ್ತಾದರೂ ಸೇವೆ ಮಾಡಬೇಕೆಂಬ ಭಾವನೆ ಮೂಡುತ್ತದೆ. ಏಕೆಂದರೆ ಒಬ್ಬ ಪ್ರಜೆಯ ದೇಶಪ್ರೇಮವು ತಾಯಿ ಮಕ್ಕಳ ಸಂಬಂಧ ಇದ್ದ ಹಾಗೆ. ಚಿಕ್ಕ ಮಕ್ಕಳಿಗೆ ತಾಯಿಯ ಮೇಲಿರುವ ಭಾವನೆಯಂತೆಯೇ ನಮಗೆ ನಮ್ಮ ದೇಶದ ಮೇಲೆ ಪ್ರೀತಿ ಮತ್ತು ಗೌರವವಿದೆ. ಆದುದರಿಂದ ನಮ್ಮ ದೇಶದ ನೆಲ, ಜಲ, ಪರಿಸರ ಎಲ್ಲವನ್ನೂ ರಕ್ಷಿಸಿ ನಾಳೆಗಾಗಿ ಉಳಿಸೋಣ.
..................................... ಮಧುಶ್ರೀ ಎ. 
9 ನೇ ತರಗತಿ 
ಶ್ರೀರಾಮಕುಂಜೇಶ್ವರ ಪ್ರೌಢಶಾಲೆ , ರಾಮಕುಂಜ 
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************

  
   
           ನಾನೂ ಒಬ್ಬ ಸೈನಿಕ - ವೈಶಾಲಿ 
  --------------------------------------------------
            ತನ್ನ ಪ್ರಾಣವನ್ನು ಲೆಕ್ಕಿಸದೆ  ನಮಗೋಸ್ಕರ ದುಡಿಯುತ್ತಿರುವವರು  ಅಂದ್ರೆ ಯೋಧರು. ನಾವು ಸುಖವಾಗಿ ಇದ್ದೀವಿ ಅಂದ್ರೆ ಇಬ್ಬರು ಕಾರಣ..... ರೈತರು ಮತ್ತು ಯೋಧರು. ಸೈನಿಕರು ವರ್ಷದ ಎಲ್ಲಾ ದಿನವೂ ದೇಶದ ಗಡಿ ಕಾಯುತ್ತಿರುವುದರಿಂದ ಜನ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಳೆ ಬಿಸಿಲೆನ್ನದೇ ಹೊಲದಲ್ಲಿ ದುಡಿದು ಜನರಿಗೆ ಅನ್ನ ನೀಡುವ ರೈತನಂತೆ ಜೀವವನ್ನೇ ಪಣವಾಗಿಟ್ಟು ದೇಶ ಕಾಯುವ ಸೈನಿಕರು ದೇಶವಾಸಿಗಳಿಗೆ ಅತ್ಯಂತ ಶ್ರೇಷ್ಠ ವ್ಯಕ್ತಿಗಳು. ಸೈನಿಕರೇ ನನಗೆ ನಿಜವಾದ ಹೀರೋಗಳು. ನಮ್ಮ ದೇಶಕ್ಕಾಗಿ ಹೋರಾಡಿ ಮಡಿದ ಎಲ್ಲಾ ಯೋಧರಿಗೆ ಕೋಟಿ ಕೋಟಿ ನಮನಗಳು.  ನಾನೂ ಸೈನಿಕನಾಗಬೇಕು. ನೆಲ, ಜಲ, ವಾಯುವನ್ನು ರಕ್ಷಿಸುವ ಸೈನಿಕನಾಗುತ್ತೇನೆ.  
................................................ವೈಶಾಲಿ 
9 ನೇ ತರಗತಿ ಕನ್ನಡ ಮಾಧ್ಯಮ                                ಸರಕಾರಿ ಪ್ರೌಢಶಾಲೆ ಶಂಭೂರು , 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ .    
*************************************  


       ನಾನು ಸೈನಿಕನಾಗುತ್ತೇನೆ... ಕಾವ್ಯ ರೈ
-----------------------------------------------------
           ಎಲ್ಲರಿಗೂ ತನ್ನ ದೇಶದ ಬಗ್ಗೆ ಹಾಗೂ ತಮ್ಮ ದೇಶವನ್ನು ಕಾಯುವ ಸೈನಿಕನ ಬಗ್ಗೆ ಹೆಮ್ಮೆ ಇರಬೇಕು. ನಾವಿಲ್ಲಿ ಜೀವಿಸುತ್ತಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು. ನಾವು ಇಲ್ಲಿ ಹಬ್ಬ ಹರಿದಿನಗಳನ್ನು ಸಂತೋಷದಿಂದ ತನ್ನ ಬಂಧು- ಮಿತ್ರರೊಂದಿಗೆ ಆಚರಿಸುತ್ತೇವೆ. ಸೈನಿಕರಿಗೆ ಗಡಿ ಕಾಯುವುದೆಂದರೆ ಒಂದು ಹಬ್ಬ, ಸಂತೋಷ ಅದನ್ನು ಬಿಟ್ಟು ಅವರ ತಲೆಯಲ್ಲಿ ಬೇರೇನೂ ಇರುವುದಿಲ್ಲ. ಇಂತಹ ಸೈನಿಕರ ಬಗ್ಗೆ ಹೇಳಲೂ ನನಗೆ ಹೆಮ್ಮೆ ಅನಿಸುತ್ತಿದೆ. ನಾನೂ ಸೈನಿಕನಾಗಬೇಕು. ನಮ್ಮೊಳಗಿನ ಸಮಸ್ಯೆಗಳನ್ನು ಹೊಡೆದೋಡಿಸುವ ಸೈನಿಕನಾಗುತ್ತೇನೆ. ನಮ್ಮ ದೇಶದ ಕೀರ್ತಿಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಲು ನಾನು ಸದಾ ಸಿದ್ಧ.
.............................................. ಕಾವ್ಯ ರೈ 
10ನೇ ತರಗತಿ 
ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ 
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*************************************
                                                 
      

Ads on article

Advertise in articles 1

advertising articles 2

Advertise under the article