-->
ನಾದಣ್ಣನ ಕಥೆ ಮುಂದುವರಿಸಿ ( ಸಂಚಿಕೆ -2)

ನಾದಣ್ಣನ ಕಥೆ ಮುಂದುವರಿಸಿ ( ಸಂಚಿಕೆ -2)

     
ಪ್ರೀತಿಯ ಮನಸುಗಳೇ......
ಎಲ್ಲರಿಗೂ ನಮಸ್ಕಾರ. ಇದೊಂದು ಆಟ..... ಖುಷಿಯಿಂದ, ಸಂತಸದಿಂದ ಎಲ್ಲರೂ ಸೇರಿ ಆಡೋಣ. ದೊಡ್ಡವರು ಇದರಲ್ಲಿ ಭಾಗವಹಿಸುವಂತಿಲ್ಲ. ಸಣ್ಣ ಮಕ್ಕಳಿಂದ ಪಿಯುಸಿ ಒಳಗಿನ ಮಕ್ಕಳು ಭಾಗವಹಿಸಿದರೆ ಸಾಕು. ನೀವೇನು ಮಾಡಬೇಕು ಅಂದ್ರೆ..?
ನಾನಿಲ್ಲಿ ಒಂದು ಪೂರ್ಣವಾಗದ ಕತೆಯನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ನೀವು ಇದನ್ನು ಓದಿ ನಿಮ್ಮ ಕಲ್ಪನೆಯಂತೆ ಮುಂದುವರಿಸಿ ಮುಗಿಸಬೇಕು. ಇದು ಅರ್ಧ  ಕಥೆ ಆಗಿದ್ರೆ ನೀವು ಇನ್ನರ್ಧ ಬರೆದು ಪೂರ್ತಿ ಮಾಡಬೇಕು. ನೀವೆಲ್ಲವೂ ವಿಶಿಷ್ಟವಾಗಿ ಯೋಚಿಸುವವರು ಮತ್ತು ಕಲ್ಪಿಸುವವರೇ ಆಗಿದ್ರೂ ನಾವಿಲ್ಲಿ, ನೀವು ಕಳಿಸುವ ಬಹಳ ವಿಶಿಷ್ಟವಾದ, ಬಹಳ ಸೃಜನಶೀಲವಾದ  ಕಥೆಗಳನ್ನು  ಆಯ್ಕೆ ಮಾಡಿ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸುತ್ತೇವೆ. ಕೆಲವು ಒಪ್ಪಂದ ಮಾಡಿಕೊಳ್ಳೋಣ :
★ ನಿಮ್ಮ ಸ್ವಂತ ಕಲ್ಪನೆಯ ಕಥೆ ಬೇಕು.
★ 500ರಿಂದ 1000 ಪದಗಳ ಮಿತಿಯಲ್ಲಿರಲಿ.
★ ಕತೆಗೆ ಬೇಕು ಅನಿಸಿದರೆ ನೀವೇ ಚಿತ್ರ ಕೂಡ ಬಿಡಿಸಿಕೊಂಡು ಕಳಿಸಬಹುದು.
ಹಾಗಾದ್ರೆ ತಡ ಯಾಕೆ..... ಕಥೆ ಓದಿ ಮುಂದಿನ ಭಾಗ ನೀವೇ ಬರೀತಿರಲ್ಲ......? ಕಥೆ ಓದೋಣ ಬನ್ನಿ.....
ನಾದ ಮಣಿನಾಲ್ಕೂರು
ತೆಕ್ಕೂರು , ಚಿಕ್ಕಮಗಳೂರು
------------------------------------------------
  ನಾದಣ್ಣನ ಕಥೆ ಮುಂದುವರಿಸಿ ( ಸಂಚಿಕೆ -2)
          
            ಕಥೆ : ಅಟ್ಟದ ಮೇಲಿನ ಗುಟ್ಟು
       *******************************
       ಹನಿ ಮತ್ತು ತನು, ಇಬ್ಬರು ಒಂದೇ ಮನೆಯ ಮಕ್ಕಳು. ಹನಿ ಈಸಲ ಲಾಕ್ಡೌನ್ ನಲ್ಲಿ ಆರನೇ ಕ್ಲಾಸ್ ಪಾಸ್ ಆದವಳು. ತನು ಇನ್ನೂ ಶಾಲೆಗೆ ಹೋಗದೇನೆ ಎರಡನೇ ಕ್ಲಾಸ್ ಆದವನು. ಹನಿಯು ; ಅಕ್ಕಳೂ, ಶಾಲೆಗೆ ಹೋಗಿ ಅಭ್ಯಾಸ ಇರುವವಳೂ ಆಗಿದ್ದರಿಂದ ಶಾಲೆಗೆ ಸಂಬಂಧ ಪಟ್ಟ ತನುವಿನ ಈ ಸಾವಿರಾರು ಪ್ರಶ್ನೆಗಳಿಗೆ ಉತ್ತರ ಹೇಳಿ ಹೇಳಿ ಸಂಜೆಯ ಹೊತ್ತಿಗೆ ಉಸ್ಸಪ್ಪಾ ಅನ್ನುತ್ತಾ ಮಲಗಿ ಬಿಡುತ್ತಿದ್ದಳು.
ಇವರ ಮನೇಲಿ ಅಮ್ಮ ಎಂಬ ಒಬ್ಬರು ಹೆಂಗಸು, ಅಪ್ಪ ಎಂಬ ಒಬ್ಬರು ಗಂಡಸು ಮತ್ತು ಅಜ್ಜಿ ಎಂಬ ಒಂದು ಮುದ್ದು ಜೀವ ಇದ್ದರು. ಪಕ್ರು ಎಂಬ ನಾಯಿ ಇತ್ತು. ಅದಕ್ಕೆ ಕೆದರಿದ ಕೂದಲು ಮತ್ತು ದಪ್ಪ ಜೂಲು ಬಾಲ ಇತ್ತು. ಡಿಂಕಿ ಅಂತ ಒಂದು ಬೆಕ್ಕು ಇತ್ತು. ಇದು ನೋಡಲು ಥೇಟ್ ಚಿರತೆಯ ಮರಿ ಥರಾನೇ ಇತ್ತು. ಇಷ್ಟು ಮೂಲ ಪರಿಚಯ.
ಪ್ರತಿ ದಿನ ಇವರ ಮನೇಲಿ ಬೆಳಗಾಗುತ್ತಿದ್ದುದೇ ಹನಿ ಹೇಳುವ ಕಥೆಗಳಿಂದ. ಅವಳು ವಿಶಿಷ್ಟವಾದ ಕಲ್ಪನೆಗಳಿಂದ ಅಜ್ಜಿಗೆ ಕಥೆ ಹೇಳುತ್ತಿದ್ದಂತೆ ಅಮ್ಮ ಮತ್ತು ಅಪ್ಪ ಇವರ ಪಕ್ಕದಲ್ಲೇ ಬಂದು ಕುಳಿತು ಕಥೆ ಕೇಳಿಕೊಂಡು ಹೊಸ ದಿನದ ಉಲ್ಲಾಸ ಪಡೆಯುತ್ತಿದ್ದರು. ಇವರ ಕಥೆ ಮುಗಿಯುತ್ತಿದ್ದಂತೆ ತನು ಕೂಡ ಎಚ್ಚರವಾಗಿ ಕುಳಿತು ಬಿಡುತ್ತಿದ್ದ. ಆ ಮನೆಯಲ್ಲಿ ಸುಮಾರು ಏಳು ವರ್ಷಗಳಿಂದ ಬೆಳೆದುಕೊಂಡು ಬಂದ ಬೆಳಗಿನ ರೀತಿ ಅದು. ಒಂದು ಥರ ಸಂಪ್ರದಾಯವೇ ಆಗಿತ್ತು. ಕಥೆ ಮುಗಿದ ಮೇಲೆ ಎಲ್ಲರೂ ಉತ್ಸಾಹದಿಂದ ಹಲ್ಲುಜ್ಜಿಕೊಂಡು ದಿನಚರಿ ಮುಂದುವರಿಸುತ್ತ ಇದ್ದರು. ಇವರ ಕಥೆಗಳನ್ನು ಕೇಳುತ್ತಾ, ಕೇಳುತ್ತಾ ಆ ಮನೆಯ ಕಿಟಕಿ, ಬಾಗಿಲುಗಳು ಕೂಡ ಕಿರ್ ಕಿರ್ ಅನ್ನುವ ನಟಿಕೆ ಮುರಿಯುವುದನ್ನು ಮರೆತು ಸುಮ್ಮನಿರುತ್ತಾ ಇದ್ದವು.
           ಒಂದು ದಿನ ಎಲ್ಲೋ ಹೊರಗೆ ಹೋಗಿ ವಾಪಾಸು ಬರುವಾಗ ಇವರ ಮನೆಯ ಅಂಗಳದ ತುಂಬಾ ಉದ್ದುದ್ದ ಹೆಜ್ಜೆಗಳು ಮೂಡಿದ್ದವು. ಅವು ಅರ್ಧ ಅಡಿ, ಒಂದಡಿ ಉದ್ದವಾಗಿ ಕೋಲು ಕೋಲಾಗಿದ್ದವು.  ಅಪ್ಪ ಅದನ್ನು ನೋಡಿದವರೇ 'ಯಾರೋ ಏನೋ ತಂದು ಇಲ್ಲಿ ಹೊರಳಾಡಿಸಿದ್ದಾರೆ ' ಎಂದರು. ಅಜ್ಜಿಯೂ ಕಣ್ಣು ಸಣ್ಣದು ದೊಡ್ಡದು ಮಾಡಿ, ನಂಗೆ ತಿಳಿಯಲ್ಲಪ್ಪ ಅನ್ನುತ್ತಾ ಕೈಚೆಲ್ಲಿದರು. ಇನ್ನು ಅಮ್ಮ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಬಲಗೆನ್ನೆಗೆ ತೋರುಬೆರಳಿನಿಂದ ಟಿನ್ ಟಿನ್ ಬಡಿದುಕೊಂಡು ಏನೂ ಹೊಳೆಯದೆ ಆಕಾಶ ನೋಡುತ್ತ ನಿಂತುಬಿಟ್ಟರು. ಹನಿ ಇದನ್ನೆಲ್ಲಾ ಗಮನಿಸುತ್ತಾ ಅತ್ತಿತ್ತ ಓಡಾಡುತ್ತಿದ್ದಳು. ತನು ಮಾತ್ರ ತನಗೇನೂ ಗೊತ್ತೇ ಇಲ್ಲ ಎಂಬಂತೆ ಪಾಚಿ ಮತ್ತು ಅಂಗಳದ ಮಣ್ಣಲ್ಲಿದ್ದ ಆ ಗುರುತುಗಳನ್ನು ಒಕ್ಕುತ್ತಿದ್ದ. ಅವರವರು ತಮ್ಮ ಕೆಲಸ ಮುಗೀತು ಎಂಬಂತೆ ಮನೆಯೊಳಗೆ ಹೋದರು. ಹನಿಗೆ ತನು ಒಕ್ಕುತ್ತಿದ್ದಲ್ಲಿ ಏನೋ ಗುರುತುಗಳು ಕಾಣಿಸಿದವು. ಏನೇನೇನೋ ಇದ್ದವು.. ಅವು ಇಂಗ್ಲಿಷ್ ತರದ ಗುರುತು. ಆದರೆ ಯಾವ ಕಡೆಯಿಂದ ಹೇಗಿದೆ ತಿಳಿಯಲಿಲ್ಲ. ಹನಿ ಒಳಗೆ ಓಡಿ ಹೋಗಿ ಅವಳ ರಫ್ ಪುಸ್ತಕ ಮತ್ತು ಪೆನ್ಸಿಲ್ ತಂದು ಅಲ್ಲಿ ಕಾಣಿಸಿದ ಗುರುತುಗಳನ್ನು ಹಾಗೆ ಬರೆದುಕೊಂಡಳು. ಅದೇನು ಅಂತ ಅವಳಿಗಾಗಲಿ, ಮನೆಯ ಯಾರಿಗೂ ಓದಲು ಆಗಲಿಲ್ಲ. ಆದರೆ ತನು ಮಾತ್ರ ಅದನ್ನು ಹಿಡಿದುಕೊಂಡು ಬಡಬಡ ಅನ್ನುತ್ತಾ ಭಯಂಕರ ಓದುತಿದ್ದ. ಅದೇನೆಂದು ಕೇಳಿದರೆ ಅವನಿಗೂ ಗೊತ್ತಿಲ್ಲ ಅನ್ನುತ್ತಿದ್ದ. ಅದನ್ನು ಹಾಗೆ ನೋಡುತ್ತಾ ಬಿಸಿ ಅನ್ನವನ್ನು ತಂದು ಉಜ್ಜಿ ಗಮ್ ಥರ ಮಾಡಿ ಗೋಡೆಗೆ ಅಂಟಿಸಿ ಬಿಟ್ಟಳು ಹನಿ. ಎಲ್ಲರು ಮಲಗಿದರೂ ಹನಿಗೆ ನಿದ್ದೆ ಸುಳಿಯಲಿಲ್ಲ. ಅದೇ ಗುರುತುಗಳನ್ನು ನೆನಪಿಸುತ್ತಾ ಆಲೋಚಿಸುತ್ತಿದ್ದಂತೆ ಅಟ್ಟದ ಮೇಲಿಂದ ಗುಸುಗುಸು ಮಾತಾಡುವುದು ಹನಿಗೆ ಕೇಳಿಸಿತು. ಮೆಲ್ಲ ಎದ್ದು ಕೂತಳು. ಅಟ್ಟದ ಮೇಲೆ ನೆಟ್ಟ ಇವಳ ಕಿವಿಗಳಿಗೆ ಆ ಭಾಷೆ ಸ್ಪಷ್ಟವಾಗುತ್ತ ಹೋಯ್ತು...
'ಅಬ್ಬಾ, ಅವರಿಗಿನ್ನೂ ಗೊತ್ತಾಗಲಿಲ್ಲ' ಅಂದಿತು ಒಂದು ದನಿ.
'ಗೊತ್ತಾದರೂ ಯಾರೂ ನಂಬುವುದಿಲ್ಲ ಬಿಡು ' ಅಂದಿತು ಇನ್ನೊಂದು ಧ್ವನಿ.
ಗುಸುಗುಸು... ಪಿಸುಪಿಸು...
ಕೇಳ್ತಾ ಕೇಳ್ತಾ ಹನಿಗೆ ನಿದ್ದೆ ಬಂದಿದ್ದೆ ತಿಳಿಯಲಿಲ್ಲ. ಹನಿಯ ಅಂದಿನ ಕಥೆಯೊಂದಿಗೆ ಆ ಮನೆಯಲ್ಲಿ ಬೆಳಗಾಯ್ತು. ಮುಖ ತೊಳೆದು ಬಂದು ಕನ್ನಡಿ ಮುಂದೆ ನಿಂತ ಹನಿಗೆ ಕನ್ನಡಿಯಲ್ಲಿ  'MANGALORE TILES '  ಎಂಬ ಅಕ್ಷರಗಳು ಹಿಂದಿನ ಗೋಡೆಯಲ್ಲಿ ಕಾಣಿಸಿದವು. ಅದು ನಿನ್ನೆ ಅವಳೇ ಬರೆದು ಅಂಟಿಸಿದ್ದ ಗುರುತುಗಳ ಚೀಟಿ. ಅದೇ ಅಂಗಳದಲ್ಲಿ ಸಿಕ್ಕಿತಲ್ಲ, ಏನೇನೋ ಗುರುತುಗಳು. ಅಲ್ಲಿ ಅದು ಉಲ್ಟಾ ಇತ್ತು.ಕನ್ನಡಿಯಲ್ಲಿ ಸರಿಯಾಗಿ ಕಾಣುತ್ತಿತ್ತು. ಅವಳಿಗದನ್ನು ಓದಲು ಕಷ್ಟವಾಗಿ ಓಡಿಹೋಗಿ ಅಮ್ಮನನ್ನು ಕರೆದು ತಂದಳು. ಅದು 'ಮಂಗಳೂರು ಟೈಲ್ಸ್' ಎಂದು ಓದುತ್ತಾ ಅಂಗಳದಲ್ಲಿ ಇದ್ದುದು ಇದೇಯಾ ಅಂತ ಉದಾಸೀನವಾಗಿ ಒಳಹೋದಳು. ಅಪ್ಪನಿಗೂ ವಿಷಯ ತಿಳಿಯಿತು. ಅವರ ಕೆಲಸದತ್ತ ಅವರು ನಡೆದರು.
       ತಿಂಡಿ ತಿನ್ನುತ್ತಾ ತನು ಜೊತೆಗೆ ಇದನ್ನು ಮಾತಿಗೆ ಶುರು ಮಾಡಿದ ಹನಿ, ಯೋಚಿಸುತ್ತಾ ಅಟ್ಟದ ಮೇಲೆ ನೋಡಿದಳು. ಕನ್ನಡಿಯಲ್ಲಿ ಕಾಣಿಸಿದ MANGALORE TILES ಎಂಬ ಅಕ್ಷರಗಳು ಮಾಡಿನ ಅಲ್ಲಲ್ಲಿ ಕಾಣಿಸಿದ ಹಾಗಾಯ್ತು ಅವಳಿಗೆ. ಎದ್ದು ನಿಂತು ಕಣ್ಣು ಸಣೂದು ಮಾಡಿ ನೋಡಿದಳು... ದೊದೂಡು ಮಾಡಿ ನೋಡಿದಳು.. ಅರೇ.. ಅದೇ... ಮಂಗಳೂರು ಟೈಲ್ಸ್... ಮಾಡಿನ ಹೆಂಚಿನ ಅಕ್ಷರಗಳು...
ಈಗ ಅವಳಿಗೆ ನೆನಪಾಯ್ತು.. ರಾತ್ರಿಯ ಗುಸುಗುಸು... ಪಿಸುಪಿಸು...
ಹನಿಗೆ ಎಲ್ಲಾ ಗೊತ್ತಾಯ್ತು.... ಹ್ಹೋ.. ಅನ್ನುತ್ತಾ ಇಡೀ ಮನೆಯೇ ಎದ್ದು ಕುಣಿಯುವಂತೆ ನಗುತ್ತಾ ಕುಣಿದಾಡಿದಳು ಹನಿ. ಅಷ್ಟೋತ್ತಿಗೆ ಮನೆಯ ಎಲ್ಲರೂ ಅಲ್ಲಿ ಬಂದು ಗುಂಪು ಕುಳಿತರು. ಹನಿಯ ವಿಶೇಷ ಕಥೆ ಕೇಳಲು ಕಿವಿಗಳನ್ನು ನಿಮಿರಿಸಿಕೊಂಡು, ಕಣ್ ಮಿಟುಕಿಸದೆ ಕುಳಿತರು.
ಹನಿ ಕಥೆ ಶುರು ಮಾಡಿದಳು...
(ಮುಂದುವರಿಸಿ...)
ನೀವು ಕಥೆ ಬರೆದು , ಮೊಬೈಲಲ್ಲಿ ಟೈಪ್ ಮಾಡಿ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ : 9844820979
******************************************


Ads on article

Advertise in articles 1

advertising articles 2

Advertise under the article