
ಜೀವನ ಸಂಭ್ರಮ ಸಂಚಿಕೆ - 1
Sunday, August 29, 2021
Edit
ಮನಸ್ಸು ಮತ್ತು ಆರೋಗ್ಯ
---------------------------------------
ಮಕ್ಕಳೇ..... ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ಮನಸ್ಸಿನಲ್ಲಿ ಏನೇ ವ್ಯತ್ಯಾಸವಾದರೂ ದೇಹದ ಮೇಲೆ ಅದರ ಪ್ರಭಾವ ಕಂಡುಬರುತ್ತದೆ. ನಮ್ಮ ನರವ್ಯೂಹದಲ್ಲಿ ಧನಾತ್ಮಕ ಅಂಶಗಳಿಗೆ ಒಂದು ರೀತಿಯ ಪ್ರತಿಕ್ರಿಯೆ ತೋರಿದರೆ , ನಕಾರಾತ್ಮಕ ಅಂಶಗಳಿಗೆ ಮತ್ತೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ (ಸಿಂಪೆತಿಟಿಕ್ ಮತ್ತು ಪ್ಯಾರಾ ಸಿಂಪೆತಿಟಿಕ್ ನರವ್ಯೂಹಗಳು). ಉದಾಹರಣೆಗೆ: ನಾವು ದಾರಿಯಲ್ಲಿ ಹೋಗುವಾಗ , ಒಂದು ಹಾವು ಅಥವಾ ಸಿಂಹ ಎದುರಿಗೆ ಬಂದಿದೆ ಎಂದು ಭಾವಿಸಿ. ಆಗ ನಮಗೆ ಭಯವಾಗುತ್ತದೆ. ತಕ್ಷಣ ಮೆದುಳು ನಮ್ಮ ನರವ್ಯೂಹದ ಮೂಲಕ ಮೂತ್ರಜನಕಾಂಗ (ಕಿಡ್ನಿ ) ಮೇಲಿರುವ ಅಡ್ರಿನಲ್ ಗ್ರಂಥಿಗೆ ಸುದ್ದಿ ರವಾನಿಸಿ , ಅಡ್ರಿನಲಿನ್ ಬಿಡುಗಡೆ ಮಾಡುವಂತೆ ತಿಳಿಸುತ್ತದೆ. ಅಡ್ರಿನಲಿನ್ ಎಂಬುದು ತುರ್ತುಪರಿಸ್ಥಿತಿ ಹಾರ್ಮೋನು. ಅದು ತಕ್ಷಣ ಪಿತ್ತಜನಕಾಂಗ (ಲಿವರ್) ಮತ್ತು ಹೃದಯವನ್ನು ಸಂಪರ್ಕಿಸುತ್ತದೆ. ಪಿತ್ತಜನಕಾಂಗವು ನಾವು ತಿಂದ ಆಹಾರದಲ್ಲಿ ಹೆಚ್ಚುವರಿಯಾದ ಆಹಾರವನ್ನು ಗ್ಲೈಕೋಜಿನ್ ಆಗಿ ಪರಿವರ್ತಿಸಿ ಇಟ್ಟುಕೊಂಡಿರುತ್ತದೆ. ಯಾವಾಗ ಅಡ್ರಿನಲಿನ್ ಹಾರ್ಮೋನು ಬಂದು ಪಿತ್ತ ಜನಕಾಂಗವನ್ನು ಸಂಪರ್ಕಿಸಿತೋ.... ಆಗ ಅದು ಮಾನವ ಆತಂಕದಲ್ಲಿ ಇದ್ದಾನೆಂದು ಭಾವಿಸಿ, ತನ್ನಲ್ಲಿದ್ದ ಗ್ಲೈಕೋಜಿನ್ನನ್ನು ಗ್ಲೂಕೋಸ್ ಆಗಿ ಪರಿವರ್ತಿಸಿ ರಕ್ತಕ್ಕೆ ಬಿಡುಗಡೆ ಮಾಡುತ್ತದೆ (ನಿಯೋಗ್ಲೂಕೋಜೆನಿಸಿಸ್). ಜೊತೆಗೆ ಕೊಲೆಸ್ಟ್ರೋಲ್ ಮತ್ತು ಸ್ಟಿರಾಯ್ಡ್ ಅನ್ನು ಬಿಡುಗಡೆ ಮಾಡುತ್ತದೆ. ಆಗ ವ್ಯಕ್ತಿ ಅಪಾಯದಿಂದ ಪಾರಾಗಿ ಓಡಲು ಆತನಿಗೆ ಬೇಕಾದ ಶಕ್ತಿ ದೊರಕುತ್ತದೆ. ಅಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಯಿತು. ಇದನ್ನು ನಾವು ಮಧುಮೇಹ ಎನ್ನುತ್ತೇವೆ. ಅದೇ ರೀತಿ ಗ್ಲೂಕೋಸ್ ಎಲ್ಲಾ ಜೀವಕೋಶಗಳಿಗೆ ತಲುಪಬೇಕಾದರೆ ರಕ್ತಸಂಚಾರ ಹೆಚ್ಚಾಗಬೇಕು. ಆಗ ಈ ಅಡ್ರಿನಲಿನ್ ಹಾರ್ಮೋನು ಹೃದಯವನ್ನು ಸಂಪರ್ಕಿಸುತ್ತದೆ. ಹೃದಯ ಬಡಿತ ಹೆಚ್ಚಾಗುತ್ತಿದೆ ಅಂದರೆ ರಕ್ತದ ಒತ್ತಡ (BP) ಹೆಚ್ಚಾಯಿತು. ನಾವು ಈ ಪ್ರಾಣಿಗಳಿಂದ ಓಡಿ, ತಪ್ಪಿಸಿಕೊಂಡು , ಸುರಕ್ಷಿತ ಸ್ಥಳಕ್ಕೆ ಬರುತ್ತಿದ್ದಂತೆ , ಇವೆಲ್ಲ ಸಹಜ ಸ್ಥಿತಿಗೆ ಬರುತ್ತವೆ. ಈಗ ನಮ್ಮ ನಕಾರಾತ್ಮಕ ಮನಸ್ಥಿತಿ ಆದ ಭಯ , ದ್ವೇಷ , ಮತ್ಸರ , ಆತಂಕ , ದುಃಖ ಮತ್ತು ಒತ್ತಡ ಇದ್ದಾಗ ಮಧುಮೇಹ, ರಕ್ತದೊತ್ತಡ , ಕೊಲೆಸ್ಟ್ರಾಲ್ ಮತ್ತು ಸ್ಟಿರಾಯ್ಡ್ ಹೆಚ್ಚಾಗುತ್ತದೆ. ಆಗ ನಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ನಮ್ಮ ಎದುರಿಗೆ ಇರುವ ರಕ್ತ ಸಂಬಂಧಿಗಳನ್ನು , ಹಿರಿಯರನ್ನು ಅಥವಾ ಅಧಿಕಾರಿಯನ್ನೋ ಸಿಂಹದಂತೆ ಭಾವಿಸಿದಾಗ....... ಮಧುಮೇಹ , ರಕ್ತದೊತ್ತಡ , ಕೊಲೆಸ್ಟ್ರಾಲ್ ಮತ್ತು ಸ್ಟಿರಾಯ್ಡ್ ಹೆಚ್ಚಾಗುತ್ತದೆ. ನಾವು ಓಡಿದರೆ ಸಹಜ ಸ್ಥಿತಿಗೆ ಬರುತ್ತದೆ. ಆದರೆ ಇವರನ್ನು ಬಿಟ್ಟು ಓಡಲು ಸಾಧ್ಯವಿಲ್ಲ. ಆಗ ಹೆಚ್ಚಿಗೆ ಆದಂತಹ ಈ ಮೇಲ್ಕಂಡ ಸ್ಥಿತಿ ಹಾಗೆಯೇ ಮುಂದುವರಿಯುತ್ತದೆ. ಈ ಕಾಯಿಲೆಗಳನ್ನು ಜೀವನಶೈಲಿ ಕಾಯಿಲೆ ಎಂದು ಕರೆಯುತ್ತೇವೆ. ಹಾಗಾಗಿ ನಕಾರಾತ್ಮಕತೆಯಿಂದ ಸಕಾರಾತ್ಮಕದ ಕಡೆಗೆ ನಮ್ಮ ಮನಸ್ಸನ್ನು ಬದಲಾಯಿಸಿದರೆ , ಈ ರೋಗ ತನ್ನಿಂದತಾನೇ ಸಹಜ ಸ್ಥಿತಿಗೆ ಬರುತ್ತದೆ. ಅದಕ್ಕೆ ಹಿರಿಯರು ಹೇಳಿದ್ದು ಚಿತೆ ಮತ್ತು ಚಿಂತೆಗೆ ಇರುವ ವ್ಯತ್ಯಾಸ ಒಂದು ಸೊನ್ನೆ. ಚಿತೆ ಬೇರೆಯವರನ್ನು ಸುಟ್ಟರೆ, ಚಿಂತೆ ನಮ್ಮನ್ನು ಸುಡುತ್ತದೆ. ಹಾಗಾಗಿ ನಾವು ಆರೋಗ್ಯವಾಗಿ , ಸಂತೋಷವಾಗಿ , ಸುಂದರ ಜೀವನ ಕಾಣಬೇಕಾದರೆ , ನಕಾರಾತ್ಮಕ ಅಂಶಗಳಿಗೆ ಗಮನ ನೀಡಬಾರದು.
ಸಕಾರಾತ್ಮಕ ಅಂಶಗಳಿಂದ ಹೇಗೆ ಅನುಕೂಲವಾಗುತ್ತದೆ.....? ಸಕಾರಾತ್ಮಕ ಅಂಶಗಳಾದ ಪ್ರೀತಿ , ಸಂತೋಷ , ಆನಂದ , ಪರೋಪಕಾರ, ಅನುಕಂಪ ಮತ್ತು ಸಹಾಯ ಗುಣಗಳನ್ನು ಬೆಳೆಸಿಕೊಂಡಾಗ ಏನಾಗುತ್ತದೆ ನೋಡೋಣ. ನಾವು ಸಂತೋಷದಿಂದ ಇದ್ದಾಗ , ನಮ್ಮ ಮೆದುಳಿನಲ್ಲಿ ಡೋಪಮೈನ್, ಸೇರೊಟೋನಿನ್, ಆಕ್ಸಿಟೋಸಿನ್ ಮತ್ತು ಎಂಡಾರ್ಪಿನ್ ನಂತಹ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಆಗ ನಮ್ಮ ನರವ್ಯೂಹದ ಮೂಲಕ ನಮ್ಮ ಎಲ್ಲಾ ಜೀವಕೋಶಗಳಿಗೆ ಆನಂದದ ಸಂದೇಶ ರವಾನೆಯಾಗುತ್ತದೆ. ಆಗ ದೇಹದ ಜೀವಕೋಶಗಳು ಆನಂದದಿಂದ ಸ್ನೇಹದಿಂದ ಇರುತ್ತವೆ. ಆಗ ನಮ್ಮ ದೇಹದಲ್ಲಿ ರೋಗ-ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ರೋಗಾಣು ನಮ್ಮ ದೇಹ ಪ್ರವೇಶಿಸಿದರೂ ಅದನ್ನು ಹೊಡೆದೋಡಿಸಲು ನೆರವಾಗುತ್ತದೆ. ನಮಗೆ ಒತ್ತಡ ಬೇಕು. ಒತ್ತಡ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಒತ್ತಡವನ್ನು ನಾವು ನಿಯಂತ್ರಿಸುತ್ತಿದ್ದರೆ , ಅದನ್ನು ಯುಸ್ಟ್ರೆಸ್ ಎನ್ನುತ್ತೇವೆ. ಇಲ್ಲದಿದ್ದರೆ ಇದನ್ನು ಡಿಸ್ಟ್ರಿಸ್ ಎನ್ನುತ್ತೇವೆ. ಇದು ಮನೋಕಾಯಿಲೆ ಆಗುತ್ತದೆ. ನಕಾರಾತ್ಮಕ ಅಂಶಗಳು ಹೆಚ್ಚಾದಲ್ಲಿ ಆಟೋ ಇಮ್ಯೂನ್ ಕಾಯಿಲೆಗಳು ಕಂಡು ಬರುತ್ತದೆ. ಅಂದರೆ ನಮ್ಮ ದೇಹದ ಜೀವಕೋಶಗಳು ಸಂತೋಷದಿಂದ ಇದ್ದಾಗ ಸ್ನೇಹಿತರಂತೆ ಸಂತೋಷವಾಗಿರುತ್ತವೆ. ನಕಾರಾತ್ಮಕ ಅಂಶಗಳು ಹೆಚ್ಚಾದಾಗ ನಮ್ಮ ದೇಹದ ಜೀವಕೋಶಗಳು ವೈರಿಗಳಂತೆ ವರ್ತಿಸಿ, ನಮ್ಮ ದೇಹದ ಜೀವಕೋಶಗಳನ್ನು , ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ನಾಶಪಡಿಸುತ್ತದೆ. ಇದು ಯಾವುದೇ ರೋಗಾಣುವಿನಿಂದ ಬಂದ ಕಾಯಿಲೆ ಅಲ್ಲದೇ ಇರುವುದರಿಂದ ವೈದ್ಯಕೀಯ ತಪಾಸಣೆಯಲ್ಲಿ ಪತ್ತೆ ಹಚ್ಚಲು ಸಾಧ್ಯವಿಲ್ಲ ಹಾಗೂ ಇದಕ್ಕೆ ಮದ್ದಿಲ್ಲ...!
ನೋಡಿದಿರಾ ಮಕ್ಕಳೇ....... ಮನಸ್ಸಿನಲ್ಲಿ ವ್ಯತ್ಯಾಸವಾದಲ್ಲಿ ಅದು ಹೇಗೆ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು. ಹಾಗಾಗಿ ನಮ್ಮ ಮನಸ್ಸಿನಲ್ಲಿ ಧನಾತ್ಮಕ ಅಂಶಗಳನ್ನು ತುಂಬಿಕೊಂಡು ಸುಂದರವಾದ , ಸಂತಸದಿಂದ ಕೂಡಿದ ಜೀವನವನ್ನು ಮಾಡಿಕೊಳ್ಳೋಣ.
...........................................ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************