
ಮಳೆ ಎಲ್ಲಿ ಮರೆಯಾದೆ.......?
Friday, July 9, 2021
Edit
ದಿನೇಶ್ ಹೊಳ್ಳ
ಖ್ಯಾತ ಸಾಹಿತಿ , ಕಲಾವಿದರು , ಪರಿಸರ ತಜ್ಞರು
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
ಧಾರಾಕಾರವಾಗಿ ಮಳೆ ಸುರಿಯಬೇಕಾದ ಮಳೆಗಾಲದ ಅವಧಿ ಇದು. ಆದರೆ ಮಳೆ ಇಲ್ಲ ಬದಲಾಗಿ 30 ಡಿಗ್ರಿ ವರೆಗಿನ ಉರಿ ಬಿಸಿಲು. ಹವಾಮಾನ, ಪ್ರಾಕೃತಿಕ ಸನ್ನಿವೇಶಗಳನ್ನು
ಮರೆತು ( ಲಾಕ್ ಡೌನ್ ನಿಂದಾಗಿ ) ಅವರವರ ವೈಯ್ಯಕ್ತಿಕ ಬದುಕಿನ ಬಗ್ಗೆನೇ ಚಿಂತಿಸುವಂತಾಗಿದೆ.
ಮಳೆ ಯಾಕೆ ಮರೆಯಾಗುತ್ತಿದೆ.....?
ಮೊನ್ನೆ ಜನವರಿಯಿಂದ ಮೇ ತಿಂಗಳವರೆಗೆ ಆಗಾಗ್ಗೆ ಮಳೆ ಬರುತಿತ್ತು. ಅಕಾಲಿಕ ಮಳೆ ಯಾವತ್ತಿಗೂ ಒಳ್ಳೇದಲ್ಲ. ಮಳೆಯ ಏರು ಪೇರು ಯಾಕೆ ಆಗುತ್ತಿದೆ ಅಂದರೆ ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿಧ್ಯತೆಯ ಮೇಲೆ ಮತ್ತು ನದಿ, ಸಾಗರಗಳ ಮೇಲೆ ಮಾನವ ಚಟುವಟಿಕೆ, ಹಸ್ತ ಕ್ಷೇಪ ಮಿತಿ ಮೀರುತ್ತಿದೆ. ಪಶ್ಚಿಮ ಘಟ್ಟದ ನದೀ ಮೂಲದ ಸೂಕ್ಷ ಪ್ರದೇಶಗಳಲ್ಲಿ ಅಭಿವೃದ್ಧಿ ಎಂಬ ನೆಪದಲ್ಲಿ ಅಸಂಬದ್ಧ , ಅವೈಜ್ಞಾನಿಕ ಯೋಜನೆಗಳನ್ನು ಮಾಡಿ ಮಳೆ ನೀರು ಇಂಗಿತ ಆಗುವ ಜಲ ನಾಡಿಗಳು ತಮ್ಮ ಸಹಜ ಸ್ಥಿತಿಯನ್ನು ಕಳೆದು ಕೊಂಡಿರುವ ಕಾರಣ ಮಳೆ ಇಂದು ಹೆಚ್ಚು ಕಡಿಮೆ ಆಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ ಈ ಎರಡಕ್ಕೂ ನದೀ ಮೂಲ ಮತ್ತು ನದಿ ನೀರು ಸಾಗರ ಸೇರುವ ನಿಯಮಾವಳಿಗಳನ್ನು ಕೆಡಿಸಿದ್ದೇ ಮೂಲ ಕಾರಣ. ಇನ್ನು ಸದ್ಯವೇ ಅಂದರೆ ಮುಂದಿನ ತಿಂಗಳು ಜಲ ಸ್ಪೋಟ, ಭೂಕುಸಿತ ಮುಂತಾದ ಪ್ರಾಕೃತಿಕ ದುರಂತಗಳು ಆಗಲಿವೆ. ಪಶ್ಚಿಮ ಘಟ್ಟದ ಗುಡ್ಡ ಕುಸಿತ ಆದಾಗ ನೀರಿನ ಇಂಗಿತ ಪ್ರದೇಶಗಳು ನಾಶ ಆಗಿ ಮುಂದಿನ ಮಳೆಗಾಲದ ಅವಧಿಗೆ ಬೇಕಾಗುವಷ್ಟು ನೀರಿನ ಸಹಜ ಒರತೆ ಕಡಿಮೆ ಆಗಿ ನೀರು ಬರಿದಾದಾಗ ಮಳೆ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದೆ. ಅದರ ಜೊತೆಗೆ ಮಾನವ ನಿರ್ಮಿತ ಕಾಡ್ಗಿಚ್ಚು ಕೂಡಾ ಹುಲ್ಲುಗಾವಲು ಮತ್ತು ಶೋಲ ಅರಣ್ಯದ ನಡುವಿನ ಸಂಬಂಧ, ಸಂಪರ್ಕವನ್ನು ಕಡಿಯುವ ಮಳೆ ನೀರಿನ ಶೇಖರಣೆಗೆ ಅಡಚಣೆ ಆಗಿ ಮಳೆಗಾಲದಲ್ಲಿ ಮಳೆ ಕಡಿಮೆ ಆಗುತ್ತದೆ. ಒಟ್ಟಾರೆ ಈ ಪ್ರಕೃತಿಯನ್ನು ಮಾನವ ಸಾಮ್ರಾಜ್ಯ ತನಗೆ ಬೇಕಾದಂತೆ ರಿಮೋಟ್ ಬಳಸಿ ದಬ್ಬಾಳಿಕೆ ಮಾಡುವ ರೀತಿ ಮತ್ತು ಪಶ್ಚಿಮ ಘಟ್ಟವನ್ನು ವ್ಯಾವಹಾರಿಕ ಸ್ವಾರ್ಥ ದೃಷ್ಟಿ ಕೋನದಿಂದ ನೋಡುವಂತಹ ರೀತಿ, ನೀತಿಗಳೇ ಇಂದು ಹವಾಮಾನ ವೈಪರೀತ್ಯಕ್ಕೆ ಮೂಲ ಕಾರಣ ಆಗಿರುತ್ತದೆ.
ಮಕ್ಕಳೇ.....ನಿಮ್ಮ ಭವಿಷ್ಯದ ಭದ್ರತೆಗೆ ಪ್ರಕೃತಿಯ ನೆಮ್ಮದಿಯೇ ಅತ್ಯಗತ್ಯ ಆಗಿರುತ್ತದೆ. ಯೋಚಿಸಬೇಕಾದ ವಿಚಾರ ಇದು...
ಖ್ಯಾತ ಸಾಹಿತಿ , ಕಲಾವಿದರು , ಪರಿಸರ ತಜ್ಞರು
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ