-->
ಹಕ್ಕಿ ಕಥೆ - 5

ಹಕ್ಕಿ ಕಥೆ - 5

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

                           ಹಕ್ಕಿ ಕಥೆ - 5

**********************************************

ಸ್ನೇಹಿತರೇ ನಮಸ್ತೇ


        ಸಾಮಾನ್ಯ ಕೆರೆ, ನದಿಗಳ ಹತ್ರ ಬಯಲು ಪ್ರದೇಶಗಳಲ್ಲಿ ಕಾಣ್ಲಿಕ್ಕೆ ಸಿಗೋ ಈ ಹಕ್ಕೀನ ಬಹಳಷ್ಟು ಜನ ನೋಡಿರ್ತೀರಿ. ಮಾರ್ಚ್ ನಿಂದ ಆಗಸ್ಟ್ ತಿಂಗಳ ಮಧ್ಯೆ ಇದರ ಸಂತಾನಾಭಿವೃದ್ಧಿ ಕಾಲ. ಈ ಸಮಯದಲ್ಲಿ ಇವುಗಳು ಕೂಗೋದು ಜಾಸ್ತಿ.  ಇವು ಗೂಡನ್ನೇ ಮಾಡೋದಿಲ್ಲ. ನೆಲದ ಮೇಲೆ ದುಂಡಗಿನ ಕಲ್ಲುಗಳ ಜೊತೆ ಮಬ್ಬು ಬಣ್ಣದ ತಕ್ಷಣ ಗುರುತಿಸಲು ಸಾಧ್ಯವಾಗದ 3-4 ಮೊಟ್ಟೆಗಳನ್ನು ಇಡ್ತದೆ. ಮೊಟ್ಟೆಗಳ ಗಾತ್ರ ಸುಮಾರು 4cm ಅಂದ್ರೆ ಕೋಳಿಮೊಟ್ಟೆಯ ಅರ್ಧಗಾತ್ರದ್ದು. ನೆಲದ ಮೇಲೆ ಮೊಟ್ಟೆಗಳು ಯಾವುದು ಕಲ್ಲು ಯಾವುದು ಅಂತ ಗುರುತು ಹಿಡಿಯೋದು ಭಾರೀ ಕಷ್ಟದ ಕೆಲಸ. ಸಿಟಿಗಳಲ್ಲಿ ಕಟ್ಟಡದ ಮೇಲೆ ಟೆರೇಸ್ ಗಳಲ್ಲಿ ಮಾತ್ರ ಅಲ್ಲ ರೈಲ್ವೇ ಹಳಿಗಳ ಮಧ್ಯೆ ಮೊಟ್ಟೆ ಇಟ್ಟು ಮರಿ ಮಾಡಿದ ಉದಾಹರಣೆಗಳೂ ಇದೆ. ಮೊಟ್ಟೆ ಇಟ್ಟ ಮೇಲೂ ಏನಾದ್ರೂ ಅಪಾಯ ಅನ್ಸಿದ್ರೆ ನಿಧಾನವಾಗಿ ಮೊಟ್ಟೆಗಳನ್ನು ಉರುಳಿಸಿಕೊಂಡು ಹೋಗಿ ಗೂಡಿನ ಜಾಗ ಬದಲಾಯಿಸಿದ್ದೂ ಇದೆ ಅಂತ ಹೇಳ್ತಾರೆ.
         ಗಂಡು ಹೆಣ್ಣು ಎರಡೂ ಹಕ್ಕಿಗಳು ಸರದಿ ಪ್ರಕಾರ ಮೊಟ್ಟೆಗಳಿಗೆ ಕಾವು ಕೊಡ್ತವೆ. ತಮ್ಮ ಗೂಡಿನ ಹತ್ರ ಯಾವುದಾದರೂ ಪ್ರಾಣಿ ಸುಳಿದರೂ ಸಾಕು ಜೋರಾಗಿ ಬೊಬ್ಬೆ ಹಾಕುತ್ತಾ ಅವುಗಳ ದಿಕ್ಕು ತಪ್ಪಿಸುತ್ತದೆ. ಎಲ್ಲಾದರೂ ಹಾವು, ಉಡ, ಮುಂಗುಸಿ ಹೇಗೋ ಗೂಡಿನ ಹತ್ರ ಬಂದ್ರೆ ಅರಚಾಡಿ ರೆಕ್ಕೆ ಎತ್ತಿ ಹೆದರಿಸಿ ಓಡಿಸಿಬಿಡ್ತವೆ. ಅಗತ್ಯ ಬಿದ್ರೆ ವೈರಿಗಳ ಮೇಲೆ ಆಕಾಶದಿಂದ ಮಿಸೈಲ್ ಥರ ಧಾಳಿ ಮಾಡಿ ಶತ್ರುಗಳನ್ನ ಓಡಿಸ್ತವೆ.
           ಸುಮಾರು 28 - 30 ದಿನಗಳಲ್ಲಿ ಮೊಟ್ಟೆ ಒಡೆದು ಮರಿಗಳು ಹೊರಗಡೆ ಬರ್ತವೆ. ಹೊರಗಡೆ ಬಂದ ಕ್ಞಣದಿಂದಲೇ ನಡೆದಾಡುವ ಸಾಮರ್ಥ್ಯ ಈ ಮರಿಗಳಿಗೆ ಇರ್ತದೆ, ಅವಾಗಿಂದಲೇ ತಮ್ಮ ತಂದೆ ತಾಯಿಗಳನ್ನು ಇವು ಹಿಂಬಾಲಿಸುತ್ತವೆ. ಏನಾದರೂ ಆಪತ್ತಿನ ಸೂಚನೆ ಸಿಕ್ಕಿದ ತಕ್ಷಣ ನೆಲದಲ್ಲಿ ಅಥವಾ ಹುಲ್ಲುಗಳ ಎಡೆಯಲ್ಲಿ ಅಡಗಿಕೊಳ್ಳುತ್ತವೆ.
         ನೆಲದ ಮೇಲೆ ಸಿಗುವ ಕೀಟಗಳೇ ಇವುಗಳ ಮುಖ್ಯ ಆಹಾರ. ಜೊತೆಗೆ ಶಂಕು ಹುಳದಂತಹ ಜೀವಿಗಳನ್ನೂ, ಕೆಲವೊಮ್ಮೆ ಕಾಳುಗಳನ್ನೂ ತಿನ್ನುತ್ತದೆ. ಬಿರುಬೇಸಗೆಯ ದಿನಗಳಲ್ಲಿ ತನ್ನ ಹೊಟ್ಟೆಯನ್ನು ನೀರಿನಲ್ಲಿ ಒದ್ದೆಮಾಡಿಕೊಂಡು ಬಂದು ಮರಿಗಳಿಗೆ ನೀರು ಉಣಿಸುತ್ತದೆಯಂತೆ.
ಇದರ ಉದ್ದವಾದ ಕಾಲುಗಳು ಮತ್ತು ಬೆರಳುಗಳು ಮಣ್ಣು, ಕೆಸರು, ಮರಳು ಎಲ್ಲದರ ಮೇಲೂ ನಡೆಯೋದಕ್ಕೆ ಅನುಕೂಲಕರ. ಹಾರಲಿಕ್ಕೆ ಸಾಧ್ಯ ಆದ್ರೂ ಇವುಗಳು ಮರದಮೇಲೆ ಕೂತ್ಕೊಳ್ಲೋಕ್ಕೆ ಸಾದ್ಯ ಆಗಲ್ಲ. ಬಲಿಷ್ಟವಾದ ರೆಕ್ಕೆ ಇರೋದ್ರಿಂದ ತಕ್ಷಣ ಹಾರುವ ಮತ್ತು ಅಗತ್ಯ ಬಿದ್ರೆ ಡೈವ್ ಮಾಡುವ ಸಾಮರ್ಥ್ಯ ಇವಕ್ಕಿದೆ. ಸುಸ್ತಾದಾಗ ನೆಲದಮೇಲೆ ಕೂತುಕೊಳ್ಳುತ್ತವೆ ಅಥವಾ ಒಂಟಿಕಾಲಿನಲ್ಲಿ ನಿಂತು ಆಯಾಸ ಪರಿಹಾರ ಮಾಡಿಕೊಳ್ತವೆ.
           ಇವು ರಾತ್ರಿಯೆಲ್ಲ ಕೂಗ್ತಾ ಇರ್ತವಲ್ಲಾ ಹಾಗಾದ್ರೆ ಇವು ನಿದ್ರೆ ಮಾಡೋದಿಲ್ವಾ ಅಂತ ಕೆಲವರು ಕೇಳ್ತಾರೆ. ಸಂತಾನಾಭಿವೃದ್ಧಿ ಕಾಲದಲ್ಲಿ ಅಗತ್ಯ ಬಿದ್ರೆ ಇವು ರಾತ್ರೆಯೂ ಎಚ್ಚರವಾಗಿ ಇರ್ತವೆ.
            ಈ ಹಕ್ಕಿ ನದಿಗಿಂತ ತುಂಬಾ  ಎತ್ತರ ಪ್ರದೇಶದಲ್ಲಿ ಗೂಡು ಮಾಡಿದ್ರೆ ಭಾರೀ ಮಳೆಗಾಲ ಬರುತ್ತೆ, ಒಣಗಿದ ನದಿಯ ಮದ್ಯದಲ್ಲಿ ಗೂಡು ಮಾಡಿದ್ರೆ ಮಳೆಗಾಲ ಬರೋದು ತಡ ಆಗುತ್ತೆ , ನದಿಬದಿಯಲ್ಲೇ ಮೊಟ್ಟೆ ಇಟ್ರೆ ಮಳೆಗಾಲ ಸರಿಯಾದ ಸಮಯಕ್ಕೆ ಬರುತ್ತೆ ಅಂತ ಕೆಲವುಕಡೆ ಜನ ನಂಬ್ತಾರಂತೆ. ಪ್ರಾಣಿ ಪಕ್ಷಿಗಳು ನಮಗಿಂತ ಬೇಗ ಪರಿಸರದ ಬದಲಾವಣೆಗಳನ್ನು ಗ್ರಹಿಸುತ್ತವೆ.  ಅವುಗಳನ್ನು ನೋಡಿ ಪ್ರಕೃತಿಗೆ ಹತ್ತಿರವಾಗಿ ಬದುಕೋದನ್ನು ನಾವು ಕಲೀಬೇಕು ಅಲ್ವಾ....
           ಏನು ಇಷ್ಟೆಲ್ಲಾ ಕತೆ ಹೇಳಿ ಈ ಹಕ್ಕಿ ಹೆಸರೇ ಹೇಳ್ಲಿಲ್ಲ ಅಂತಿದೀರಾ.. ಅಷ್ಟಾಂಗ ಯೋಗದಲ್ಲಿ ಒಂದು ಆಸನ ಇದೆ.  ಎರಡೂ ಕಾಲುಗಳನ್ನು ಭುಜದ ಹಿಂಬಾಗದಿಂದ ಮೇಲ್ಮುಖವಾಗಿ ಎತ್ತಿ ಕೈಗಳ ಆಧಾರದಲ್ಲಿ ನಿಲ್ಲುವ ಭಂಗಿ, ಅದೇ ಟಿಟ್ಟಿಭಾಸನ... ಹಕ್ಕಿಯಿಂದಾಗಿ ಆಸನಕ್ಕೆ ಈ ಹೆಸರು ಬಂತು ಅಂತ ಹೇಳ್ತಾರೆ..  Yes you are right..
         ಈ ಹಕ್ಕಿಯ ಕನ್ನಡ ಹೆಸರು ಟಿಟ್ಟಿಭ.. ಮಲೆನಾಡಿನ ಕಡೆ  ತೇನೆಹಕ್ಕಿ ಅಂತ ಕರೀತಾರೆ, ಕುಂದಗನ್ನಡದಲ್ಲಿ ಟ್ಯಾಂಟ್ರಕ್ಕಿ ಅಂತ್ರ್, ಇನ್ನು ಕೆಲವರು ಟವಕ್ಕಿ ಅಂತನೂ, ತುಳುವಿನಲ್ಲಿ ಟಿರಿಂ ಟಿರಿ ಪಕ್ಕಿ ಅಂತಾನೂ ಕರೀತಾರೆ...
ಇದರ English ಹೆಸರು Red Wattled Lapwing..
ವೈಜ್ಞಾನಿಕ ಹೆಸರು ( Vanellus indicus )
ನಿಮ್ಮೂರಲ್ಲಿ ಈ ಹಕ್ಕಿಯನ್ನ ಏನೂಂತ ಕರೀತಾರೆ ನಮಗೂ ತಿಳಿಸ್ತೀರಲ್ಲಾ .....
ರಜಾ ದಿನಗಳ ಮಜಾ ಹೆಚ್ಚು ಮಾಡ್ಲಿಕ್ಕೆ ಅಂತ ನಾನು ಈ ಹಕ್ಕಿ ಚಿತ್ರಬರಿಯೋ ಪ್ರಯತ್ನ ಮಾಡಿದ್ದೇನೆ, 

                        ಚಿತ್ರ : ಅರವಿಂದ ಕುಡ್ಲ
ನೀವೂ ನಿಮ್ಮ ಇಷ್ಟದ ಹಕ್ಕಿಯ ಚಿತ್ರ ಬರೀರಿ...  ಮತ್ತೆ ಸಿಗೋಣ...

............................................ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

*********************************************


Ads on article

Advertise in articles 1

advertising articles 2

Advertise under the article