-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ-3

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ-3

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 3

ನಮಸ್ತೆ..  ನನ್ನ ಪ್ರೀತಿಯ ಮನಸ್ಸುಗಳಿಗೆ..!
        ಮತ್ತೆ ಮತ್ತೆ ನೆನಪಾಗುವ ನಿಮ್ಮ ಮುದ್ದು ಮುದ್ದಾದ ಮುಖ... ನೀವು ನಗುತ್ತಾ ಇದ್ದರೆ ಎಷ್ಟು ಚೆಂದ.....! ಆಹಾ....! 
ಮಕ್ಕಳಾ.....
ಮಹಾಭಾರತದ ಕಥೆಗಳನ್ನು ನಾವು ಹೆಚ್ಚಾಗಿ ಕೇಳಿರ್ತೇವೆ..‌ ನಡೆ ನುಡಿಗಳಲ್ಲಿ ಮಾದರಿಯಾಗಿದ್ದ ಅನೇಕ ಹಿರಿಯರು ಇದ್ದರೂ‌... ಅವರು ತಿಳಿ ಹೇಳಿದರೂ ಕೇಳದೆ, ನಿರ್ಲಕ್ಷ್ಯ ಮಾಡಿದ್ದು.... ಸಣ್ಣ ಸಣ್ಣ ತಪ್ಪುಗಳು....! ಆಗಬಾರದ ದೊಡ್ಡ ಅನಾಹುತಗಳು... .! ಒಂದರ ನಂತರ ಇನ್ನೊಂದರಂತೆ...! ನಡೆದೇ ಹೋಯಿತು !. ಕುರುಕ್ಷೇತ್ರದೊಳಗೆ....! ಒಳ್ಳೆಯತನ ಗೆಲ್ಲಿಸುತ್ತದೆ... ತಪ್ಪುಗಳು ಪಾಠವಾಗುತ್ತವೆ..! ಅರಿತು ನಡೆದರೆ ಬಾಳು ಬೆಳಗುವುದು ........ಅಲ್ವಾ?   
           ಈ‌ ಬಾರಿ‌ ನೆನಪುಗಳ ಪಯಣ. ನಾನೂ .... ನೀವೂ ಜೊತೆಯಾಗಿ....! ಮರೆತು ಹೋಗುತ್ತಿರುವ ನೆಲದ ಹಿರಿಮೆ... ಕಥೆ‌ಯಾಗಿ ಉಳಿದು ಹೋಗದಿರಲಿ...!
  ಆ ದಿನ.... ಗದ್ದೆಗೆ ಇಳಿದಂತೆ ನನ್ನ ಕಾಲು ಇನ್ನೂ ಕೆಳಕ್ಕೂರಿತು... ಒಂದನ್ನೆಳೆದಾಗ ಇನ್ನೊಂದು ಒಳ ಸೇರಿತು... ಮಣ್ಣಿನ‌ ಪರಿಮಳ ಮನತುಂಬಾ ಆವರಿಸಿತು....! ಮೈಮರೆತಿದ್ದೆ. ಆ ಕಡೆ ನೋಡಿದರೆ ಸಾಲು ಮಹಿಳೆಯರ 'ಓ ಬೇಲೆ' ಪದ....ಅರೆ..!! ಅತ್ತ ಹೋಗೋಣವೆಂದರೆ ಕಾಲು....!!! ನಾನು ಬಿಡದಿದ್ದರೆ ಅದು ನನ್ನನ್ನು ಬಿಡುವುದೆಂತು!!ಅರಿವಾದೊಡನೆ ಒಂದೊಂದೇ ಹೆಜ್ಜೆ ಮುಂದಿಡಲಾರಂಭಿಸಿದೆ. ಸಿಕ್ಕಿಬಿದ್ದರೂ... ನಿಜದ ಗೆಲುವಿನ ಖುಷಿ......! ನಡೆಸಿತು ಮತ್ತಷ್ಟು ದೂರ...Home Work ಮಾಡಲು ಯಾರೂ ಕರೆಯಲಿಲ್ಲ...! ಅದಾಗಲೇ ಮಾಡಿ ಮುಗಿಸಿದ್ದೆ.... ಹೇಳುವ ಮೊದಲೇ..!
           ಗದ್ದೆಯ ಬದು ತುಂಬಾ ಓಡಾಡಿ, ಬಿದ್ದು ಎದ್ದು ಸಂಭ್ರಮಿಸಿದ ನೆನಪಿನ್ನೂ ಹಸಿರು...
ಗದ್ದೆ...! ನೆನಪಾಯಿತು...! ಸಾಲು ಸಾಲು ಪೈರುಗಳನ್ನು ಒಂದೊಂದಾಗಿ ನಾಟಿ ಮಾಡುತ್ತಾ ಕಥೆಯನ್ನೂ ಹೇಳುತ್ತಿದ್ದರು ಅಜ್ಜಿ....! ನಾನೂ ಅವರ ಜೊತೆ ನಡೆಯಲಾರಂಭಿಸಿದೆ...! ಅದಾಗಲೇ ಒಲೆಯ ಮೇಲೆ ಇಟ್ಟಿದ್ದ ಗಂಜಿಯ ಸುವಾಸನೆ ಹಸಿವನ್ನು ಎಚ್ಚರಿಸಿತು...!
ಅರೆ...? ನಮ್ಮದೇ ಗದ್ದೆಯಲ್ಲಿ‌ ಬೆಳೆದ ಅಕ್ಕಿಯದು...! ನಾವೇ ಬೆಳೆದದ್ದು ನಮಗಾಗಿ...!ಎಷ್ಟು ಖುಷಿಯ ದಿನಗಳು....!
ಬಿತ್ತನೆಗೆ ಮೊದಲು ಹೊಲವನ್ನು ಉಳುತ್ತಾರೆ...! ನೇಗಿಲಿಗೆ ಎತ್ತುಗಳು ಜೊತೆಯಾಗಿ, ಉಳುವವರ ಏರು ದನಿಗೆ ಕಿವಿಯಾಗುತ್ತಾ ಸಾಗುವ ಸೊಗಸು...!ಹೌದು.. ಹೊಲವನ್ನು ಉಳುವಾಗಲೂ ಅದರದ್ದೇ ಪದಗಳನ್ನು ರಾಗವಾಗಿ ಹಾಡುತ್ತಿದ್ದರು....!
ಛೆ!!! ಈಗ ಎಲ್ಲವೂ ನೆನಪುಗಳಷ್ಟೇ....!
ಹಳ್ಳಿ ಮನೆ...! ಪ್ರೀತಿಯ ಜೊತೆ ಬದುಕು ಗೆಲುವಾಗುವ ಸಂಭ್ರಮ...!
    ಗೆಳೆಯರೇ... ನಾವು ಊಟ ಮಾಡುವ ಅನ್ನದ ಅಕ್ಕಿಯನ್ನು ಎಲ್ಲಿ ಬೆಳೆಯುತ್ತಾರೆ...? ನಾವೆಲ್ಲರೂ ಸಾಮಾನ್ಯವಾಗಿ ಬೇರೆ ಬೇರೆ ತರಕಾರಿಗಳ, ಹಣ್ಣುಗಳ ಗಿಡಗಳನ್ನು ನೋಡಿರುತ್ತೇವೆ... ಭತ್ತ ಬೆಳೆವ ಗದ್ದೆಗಳನ್ನು ಮಾತ್ರ ನಮ್ಮ ಮನೆಯಂಗಳದಿಂದ ದೂರ ಸರಿಸಿದ್ದೇವೆ...! 
ಹಸಿರು ಸಿರಿಯ ಸೊಬಗನ್ನು ಕಣ್ತುಂಬಿಕೊಂಡು ಬೆಳೆಯುವ ಅಪೂರ್ವ ಅವಕಾಶಗಳು ವಿರಳವಾಗುತ್ತಿವೆ...! 
ಭತ್ತದಿಂದ ಅಕ್ಕಿ... ಅಕ್ಕಿಯಿಂದ ಅನ್ನ...! ಪರಿಸರದ ಸೃಷ್ಟಿಯೊಳಗೆಂತಹಾ ಬೆರಗು...!!!
ಹುಡುಕಬೇಕು... ಕುತೂಹಲ ಜೊತೆಯಾಗಬೇಕು...! ಅಮ್ಮ.. ಅಪ್ಪ.. ಅಜ್ಜ ..ಅಜ್ಜಿ... ಯಾರೊಂದಿಗಾದರೂ ಸರಿ...! ಹಳ್ಳಿಯಲ್ಲಿ ಅಲ್ಲೊಂದು ಇಲ್ಲೊಂದು ಈಗಲೂ ಉಳಿದುಕೊಂಡಿರುವ ಗದ್ದೆಗಳಿಗೊಮ್ಮೆ ಕರೆದುಕೊಂಡು ಹೋಗಲು ಹೇಳಿ.....!!
ಎಷ್ಟೋ ಸಲ‌ ನಮ್ಮದೇ ಅಕ್ಕ ಪಕ್ಕದಲ್ಲಿದ್ದರೂ ಹೆಚ್ಚಿನವರು ನಾವಿದನ್ನು ನೋಡಿರುವುದಿಲ್ಲ.... ಅಜ್ಜ ಅಜ್ಜಿಯಲ್ಲಿ ನೆನಪಿನ ದೊಡ್ಡ ಬುತ್ತಿಯೇ ಇದೆ... ಬಿಚ್ಚಿಡಲು ಹೇಳಿ... ಅನುಭವಗಳ ಸವಿಯನ್ನು ಉಂಡು... ನಿಮ್ಮ ಖುಷಿಯನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ......!

ಇನ್ನೊಂದು ಪತ್ರದೊಂದಿಗೆ ಭೇಟಿಯಾಗೋಣ ......
      ಅಲ್ಲಿಯವರೆಗೆ ಅಕ್ಕನ‌‌ ನಮನಗಳು..
.......................................ತೇಜಸ್ವಿ ಅಂಬೆಕಲ್ಲು
    ಶಿಕ್ಷಕಿ
    ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
    ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
    ದಕ್ಷಿಣ ಕನ್ನಡ ಜಿಲ್ಲೆ

********************************************


Ads on article

Advertise in articles 1

advertising articles 2

Advertise under the article