-->
ಪದಗಳ ಆಟ ಭಾವಚಿತ್ರ ಪಾತ್ರ... ಸಂಚಿಕೆ-3

ಪದಗಳ ಆಟ ಭಾವಚಿತ್ರ ಪಾತ್ರ... ಸಂಚಿಕೆ-3

ಪದಗಳ ಆಟ
ಭಾವ ಚಿತ್ರ
ಪಾತ್ರ
ಸಂಚಿಕೆ - 3

                  ದೊಡ್ಡವರು ದೊಡ್ಡವರನ್ನು
                       ಕಾಣದೇ ಹೋದಾಗ
               ಸಣ್ಣವರು ಕಳೆದು ಹೋದಾರು....!
     ****************************************     
                           ಚಿತ್ರ : ಸುಮಾಡ್ಕರ್      
            ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. ಯಾಕೆ? ಗುರು ಯಾರು....?
ಗು ಅಂದರೆ ಕತ್ತಲು.
ರು - ನಿರೋಧಃ. ಅಜ್ಞಾನದ ಅಂಧಕಾರವನ್ನು, ತಿಮಿರವನ್ನು ಓಡಿಸುವವ ಗುರು. ತನ್ನ ಶಿಷ್ಯನ ಅಭಿಲಾಷೆಗೆ ತಕ್ಕಂತೆ ಜ್ಞಾನ ಕೊಡುವವನು ಶ್ರೇಷ್ಠ ಗುರು. ಸರ್ವತ್ರ ಸಾಧನವಾದ ಧೈರ್ಯವನ್ನು ನೀಡುವವನು ಧೀಮಂತ ಗುರು. ಬದುಕಿನ ದೀಕ್ಷೆಯನ್ನು ಪ್ರೇರೇಪಿಸುವವನು ಧೀಶಕ್ತಿಯ ಗುರು. ಇರುವಲ್ಲಿ ಇಲ್ಲದಿರುವಲ್ಲೂ ತನ್ನಿರವನ್ನು ಪ್ರಜ್ಞೆಗೆ ತರುವವನು ನಿತ್ಯ ಪ್ರಜ್ವಲ್ಯಮಾನ ಗುರು: ಆಚಂದ್ರಾರ್ಕ ವರ್ಧಮಾನ ಗುರು. ಗುರುಗಳೇ ನೀವು ಅಂತಹ ಗುರು... ಗುರುದೇವ.

            ಬಾಲ್ಯದಲ್ಲಿ ಮಾತೃವಿಯೋಗ ಹೊಂದಿದ ನೀವು ಅನ್ಯರ ಜೊತೆ ಬೆಳೆದಿರಿ. ಸಾಂಪ್ರದಾಯಿಕ ಶಾಲೆ ನಿಮಗೆ ಇಷ್ಟವಾಗಲಿಲ್ಲ. ಬ್ಯಾರಿಸ್ಟರ್ ಓ ದಲು ವಿದೇಶಕ್ಕೆ ಹೋದಿರಿ. ನಿಮಗಿಷ್ಟವಾದ ಇಂಗ್ಲಿಷ್ ಭಾಷಾ ಕೃತಿಗಳನ್ನು ಓದುತ್ತಾ ಅಭ್ಯಾಸ ಮಾಡುತ್ತಾ ಕುಳಿತರಂತೆ. ಬಾಲ್ಯದಾರಭ್ಯ ಹೊಸ ಪಂಥವನ್ನು ತುಳಿಯುವ ಧೈರ್ಯವನ್ನು ತೋರಿಸಿದರಲ್ಲ....! ಎಂಟನೇ ವಯಸ್ಸಲ್ಲೇ ಪದ್ಯ ಬರೆದಿರಿ. ಅತಿಬೇಗ ಕಥೆ ಬರೆದಿರಿ. ನಿಮ್ಮ ಸಣ್ಣಕಥೆಗಳು ಲೋಕಪ್ರಿಯವಾದವು.
ಲೋಕಾಂತವಾದವು. ನಿಮ್ಮಿಂದ ಈ ಸಾಹಿತ್ಯಪ್ರಕಾರ ಬೆಳೆಯಿತು. ಅದರಿಂದ ಮತ್ತಷ್ಟು ಮಂದಿ ಉದಿಸಿದರು... ಆವಿರ್ಭವಿಸಿದರು. ನೀವು ಕವಿತೆಗೆ ನಿಲ್ಲಲಿಲ್ಲ..... ರಾಗಕ್ಕೆ ಒಲಿದಿರಿ. ನಿಮಗೆ ಯಾವುದರಲ್ಲಿ ಒಲುಮೆ ಇರಲಿಲ್ಲ ಹೇಳಿ..? ಸಂಗೀತ ಸಾಧಕರಾದಿರಿ. ಸಣ್ಣ ಕಥೆಯಿಂದ ದೊಡ್ಡ ಕಥೆಗೆ ಬೌದ್ಧಿಕ ಲಂಘನೆ. ಸಾಹಿತ್ಯ ಸರಸ್ವತಿಯ ಪರಮ ಸೇವನೆ. ಮತ್ತೆ ಕಾದಂಬರಿಯ ರಚನೆ. ಇವೆಲ್ಲದಕ್ಕೆ  ಬಂಡವಾಳ ಎಲ್ಲಿಂದ ಗುರುದೇವ....?  ಓಹೋ....! ಮನಗಂಡೆ ಗುರುಗಳೇ..... ನೀವು ಗಂಗಾಸುತ ಪದ್ಮಾ ಸರಿತೆಯ ತಟದಲ್ಲಿ ಎಷ್ಟು ವಸಂತಗಳನ್ನು ಅನುಭವಿಸಿದರಲ್ಲ. ಅಲ್ಲಿ ದೋಣಿ ಮನೆಯಲ್ಲಿ ಹೆಚ್ಚುಕಾಲ ಏಕಾಂಗಿಯಾಗಿ ವಿಹರಿಸುತ್ತಿದ್ದರಂತೆ. ಅಲ್ಲಿನ ಹಳ್ಳಿ ಜನರೊಡನೆ ನಿಮಗೆ ಭಾರಿ ಒಡನಾಟ,  ಪ್ರೀತಿಯಂತೆ. ಬಡವರ ಜೊತೆಗಿನ ಶ್ರೀಮಂತ ಅನುಭಾವದ ಭಾವಾಭಿವ್ಯಕ್ತಿ ನಿಮ್ಮ ಸಾಹಿತ್ಯದ ಶಕ್ತಿ ಅಲ್ವೇ...?  ಅದು  ಗಟ್ಟಿ ಸಾಹಿತ್ಯ ವಿಪುಲ ಸಾಹಿತ್ಯ. ಅಲ್ಲೂ ತೃಪ್ತರಾಗಲಿಲ್ಲ. ನಿಮ್ಮ ಸಾಹಿತ್ಯ ರಚನೆಗಳ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚಿಸುತ್ತಾ ವಾಗ್ಮಿಯಾಗಿ ಹೊರಹೊಮ್ಮಿದಿರಿ. ಸ್ವಾತಂತ್ರ್ಯ ಸಮರದ ಸಂದರ್ಭ ನಿಮ್ಮ ಈ ವಾಕ್ಪಟುತ್ವ, ಯೋಚನಾಲಹರಿ ಚರಿತ್ರೆಯನ್ನೇ ನಿರ್ಮಿಸಿತಲ್ಲ. 

              ನಿಮ್ಮ ತಂದೆಯ ಜೊತೆಗೆ ನಾಡಿನ ಉದ್ದಗಲ ಪ್ರವಾಸ ಹೋದಾಗ ನಿಮ್ಮ ಅನುಭವ ಕೋಶ, ಚೀಲ ಇನ್ನಷ್ಟು ಬೃಹತ್ತಾಗಿ ಬೆಳೆಯಿತು. ಆನಂತರ ಮತ್ತಷ್ಟು ಕತೆ, ಕಾದಂಬರಿ, ಕವಿತೆ ತಮ್ಮ ಕಲ್ಪನಾ ಗರ್ಭದಿಂದ ಜನ್ಮತಾಳಿದವು. ಸುಮತಿವಂತರು  ನೀವು ಪರಂಪರೆಯನ್ನು ಮೀರಿ ಸೃಜನಶೀಲ ಸಾಹಿತ್ಯದಿಂದ ಭಾರತಮಾತೆಯ ಉಡಿ ತುಂಬಿ ದಿರಿ. ಬರೆದದ್ದು ಸಾಕಾಗಲಿಲ್ಲ, ನುಡಿದದ್ದಕ್ಕೆ ತೃಪ್ತಿ ಪಡಲಿಲ್ಲ. ಹಾಡಿ ದಣಿಯಲಿಲ್ಲ. ರಾಗದ ದಾರಿಯಲ್ಲಿ ಸಾಗಿದಿರಿ. ರಾಗ ಅನುರಾಗ ಮೀಟಿ ಉಪನಿಷತ್ತುಗಳ ಲೋಕಕ್ಕೆ ನಿಮ್ಮ ಪಯಣ. ಸಾಗರದಲ್ಲಿ ಈಜಾಡಿ ಜ್ಞಾನ ಮುತ್ತುಗಳನ್ನು ಆರಿಸಿ ತಂದು ಗೀತಾಂಜಲಿಯಂತೆ ಬೊಗಸೆಯಲ್ಲಿ ತಂದಿರಿ. ಸಂಸ್ಕೃತ ಜೀರ್ಣವಾಗದವರಿಗಾಗಿ ದೇಸಿ ಭಾಷೆಯ ಸೊಗಡಿನಲ್ಲಿ ಬರೆದು ಹೊಸ ಸಾಧ್ಯತೆಯನ್ನು ಲೋಕಮುಖಕ್ಕೆ ಪರಿಚಯಿಸಿದಿರಿ, ಕಾಣಿಸಿದಿರಿ. 

           ಈ ಎಲ್ಲವನ್ನೂ ಅನುಭವಿಸುವ ನಿಮ್ಮ ಮನಸ್ಸು ಕಲಿಯುವ ಹಾದಿಯ ಮಗು. ಹಾಗಾಗಿ ಮಕ್ಕಳ ಕುತೂಹಲ, ಅಭೀಪ್ಸೆ ಗಳು ನಿಮಗೆ ಹೆಚ್ಚು ಅರ್ಥವಾದವು. ಅದಕ್ಕೆಂದೇ ಪ್ರಕೃತಿಯ ಮಡಿಲಲ್ಲಿ ಗುರುಕುಲ ತೆರೆದಿರಿ. ಅದು ಎಲ್ಲಾ ಲಲಿತಕಲೆಗಳಿಗೆ ಆಗರ ವಾಯಿತು,  ನಿಕೇತನವಾಯಿತು. ಭಾರತದ ನೃತ್ಯಪ್ರಕಾರಗಳನ್ನು ಶಿಕ್ಷಣಕ್ಕೆ ಬೆಸೆದಿರಿ. ಗೀತ ನೃತ್ಯಗಳ ಮುತ್ತನ್ನು ಪೋಣಿಸಿದಿರಿ. ಅರುವತ್ತರ ಇಳಿವಯಸ್ಸಲ್ಲಿ ಚಿತ್ರಲೋಕಕ್ಕೆ ಮಗುವಾಗಿ ಪಾದಾರ್ಪಣೆ ಮಾಡಿದಿರಿ. ಮುಖವಾಡ,  ಮಾನವ ಮೊಗ,  ಪ್ರಕೃತಿಗಳ ವರ್ಣ ಅಭಿವ್ಯಕ್ತಿಯಲ್ಲೂ ಸಿದ್ಧಭಿತ್ತಿಯನ್ನು ಒಡೆದಿರಿ. ಇಲ್ಲೂ ನಿಮ್ತನವನ್ನು ಮೆರೆದಿರಿ. ಚಿತ್ರದಲ್ಲಿ ಲಯ, ಹೊಸತನ, ವಿಭಿನ್ನ ವರ್ಣ ಸಂಯೋಜನೆಗಳ ಪ್ರವರ್ತಕರಾದಿರಿ. ಸೌಂದರ್ಯಪ್ರಜ್ಞೆಗೆ ಹೊಸ ಭಾಷ್ಯ ಬರೆದಿರಿ. ವಿಶ್ವಮಟ್ಟದ ಚಿತ್ರಕಲಾಕಾರರ ಮೇಲು ಅನನ್ಯ ಪ್ರಭಾವ ಬೀರಿದಿರಿ. 

         ನೀವು ಮುಟ್ಟಿದ ಎಲ್ಲಾ ಕಲೆಗಳು ಅನನ್ಯತೆಯಿಂದ ನಾವೀನ್ಯತೆ ಯಿಂದ ಕ್ರಿಯಾಶೀಲತೆಯಿಂದ ಚಲನಶೀಲವಾದವು. ಉಚ್ಛಲ ಉತ್ಥಾನ ಸಾಧಕರು ನೀವು. ನಿಮ್ಮ ಗುರುಕುಲದಲ್ಲಿ ಮಕ್ಕಳು ಪ್ರೀತಿಸುವ ಎಲ್ಲವೂ ಇದ್ದವು. ಪೂರ್ವ-ಪಶ್ಚಿಮಗಳ ತತ್ವಗಳ ಅಪೂರ್ವ ಸಮನ್ವಯವನ್ನು ನೀವು ಅಲ್ಲಿ ಸಾಧಿಸಿದಿರಿ. ಶಿಕ್ಷಣದಲ್ಲಿ ಲಲಿತಕಲೆಗಳ ಅವಿನಾಭಾವ ಸಂಬಂಧ- ಅನುಬಂಧವನ್ನು ಸಾಕ್ಷಾತ್ಕರಿಸಿ ನಿಮ್ಮ ವಿಶ್ವವಿದ್ಯಾನಿಲಯ ವಿಶ್ವಪ್ರಸಿದ್ಧಿಯನ್ನು ಪಡೆಯಿತು. ನಮ್ಮ ದೇಶ ಜಗ ಮನ್ನಣೆಯನ್ನು ಪಡೆಯಿತು  ನಿಮ್ಮ ದೈತ್ಯಪ್ರತಿಭೆಯಿಂದ. 

        ಜೀವನದ ಕೊನೆತನಕವೂ ಹೊಸದನ್ನು ಕಲಿಯುವ ಕಾತರ ಕುತೂಹಲವನ್ನು ಜೀವಂತವಾಗಿರಿಸಿಕೊಂಡಿದ್ದ  ನಿಮ್ಮ ಮೂರ್ತಿಯನ್ನು ಅನೇಕ ದೇಶಗಳು ಪ್ರತಿಷ್ಠಾಪಿಸಿವೆ. ದೇಶದ ಐದು ಕಡೆ ನಿಮ್ಮ ಬಗೆಗಿನ ಮ್ಯೂಸಿಯಂ ಗಳಿವೆ. ಭಾರತಮಾತೆ ಕಂಡ ಲೋಕೋತ್ತರ ಗುರು ಹಾಗೂ ವಿದ್ಯಾರ್ಥಿ ನೀವು ಗುರುದೇವ. 

ಹಕ್ಕಿಯಾಗಿ ಹಾರಿದ್ದಿ 
ಮಳೆಯಾಗ ಕುಣಿದಿದ್ದಿ
ಮಕ್ಕಳೊಂದಿಗೆ ಆಡಿದ್ದಿ
ನಿನ್ ಹಂಗ ಆಡಾಕ 
ನಿನ್ ಹಂಗ ಹಾಡಕ 
ಪಡೆದು ಬಂದಿರಬೇಕು ಗುರುದೇವ....!

ಇವರು ನಿಮ್ಮೊಳಗಿಲ್ಲವೇ......?                        
..................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372

**********************************************

Ads on article

Advertise in articles 1

advertising articles 2

Advertise under the article