
ಬದಲಾಗೋಣವೇ ಪ್ಲೀಸ್....... ! ಸಂಚಿಕೆ - 2
Wednesday, July 14, 2021
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು
ಸಂಚಿಕೆ - 2
ಮನದ ಕನ್ನಡಿ ಮಸುಕಾಗದಿರಲಿ
**********************************************
ಸುಮಾರು 15 ವರ್ಷದ ಬಾಲಕನಾಗಿದ್ದ ವೇಳೆ ಮನೆಯೊಳಗೆ ಕನ್ನಡಿ ಇಲ್ಲವೆಂದು ಗೊಣಗುತ್ತಿದ್ದ ನನಗೆ ಅಮ್ಮ ಹೇಳಿದಳು..... " ಮಗನೇ ಮನೆಯೊಳಗೊಂದು ಕನ್ನಡಿ ಇಲ್ಲದಿದ್ದರೂ ಚಿಂತೆಯಿಲ್ಲ. ಆದರೆ ಮನದೊಳಗೊಂದು ಕನ್ನಡಿ ಇರಲಿ" ಎ೦ದು.. ಆ ವೇಳೆ ಅದು ನನಗೆ ಅರ್ಥವಾಗಲಿಲ್ಲ..... ಈಗ ಅರ್ಥವಾಗುತಿದೆ. ಮನೆಯೊಳಗಿನ ಕನ್ನಡಿ ಬಾಹ್ಯ ಸೌಂದರ್ಯ ವೀಕ್ಷಣೆಗಾದರೆ ಮನದೊಳಗಿನ ಕನ್ನಡಿ ಅಂತರಂಗದ ಸೌಂದರ್ಯ ರಕ್ಷಣೆಗೆ. ಜೀವಸಂಕುಲದಲ್ಲಿ ಕೇವಲ ಮನುಜಕುಲದಲ್ಲಿ ಮಾತ್ರ ಕಂಡು ಬರುವ ಹಾಗೂ ನಮ್ಮ ನಮ್ಮೊಳಗಿನ ಪ್ರತಿಷ್ಠೆಗೆ ಕಾರಣವಾದ ಬಾಹ್ಯ ರೂಪ , ಮೈ ಬಣ್ಣ , ಎತ್ತರದ ನಿಲುವು , ಸಂಪತ್ತು , ಮುಖ ಸೌಂದರ್ಯ, ದೇಹಾಲಂಕಾರ..... ಇತ್ಯಾದಿಗಳನ್ನು ನೋಡಲು ಮನೆಯೊಳಗೆ ಕನ್ನಡಿ ಇರಬೇಕು. ಆದರೆ ನಮ್ಮ ನಿಜವಾದ ವ್ಯಕ್ತಿತ್ವ ವಿಕಸನದ ದರ್ಶನಕ್ಕೆ ಮನದೊಳಗಿನ ಕನ್ನಡಿ ಅತೀ ಅಗತ್ಯ. ಅಂತರಂಗದ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿದರೆ ಅದ್ಭುತ ಸೃಷ್ಟಿಯಾಗುವುದು. ನಮ್ಮ ನೈಜ ಪ್ರತಿಭೆಯ ಅನಾವರಣವಾಗುವುದು. ಕೋಶ ತೆರೆದರಷ್ಟೇ ಚಿಟ್ಟೆಗೆ ಬದುಕು ಆರಂಭವಾದಂತೆ ಅಂತರಂಗದ ಕನ್ನಡಿಯ ಅರಿವಾದರೆ ಮಾತ್ರ ಸಾಧನೆಯ ಪಥ ಗೋಚರಿಸುವುದು. ಆದರೆ ಹೆಚ್ಚಿನವರಲ್ಲಿ ಅಂತರಂಗಕ್ಕೆ ಕನ್ನಡಿಯೇ ಇರುವುದಿಲ್ಲ. ಅಂತರಂಗದ ಕನ್ನಡಿ ನಮ್ಮ ನಿರ್ಲಕ್ಷ್ಯದಿಂದ ಧೂಳು ಹಿಡಿದು ಮಸುಕಾದರೆ ಪ್ರತಿಬಿಂಬವೂ ಮಸುಕಾಗಿ ಕಾಣುವುದು. ಒಂದು ವೇಳೆ ಅಜಾಗ್ರತೆಯಿಂದ ಅಥವಾ ಆಕಸ್ಮಿಕವಾಗಿ ಕನ್ನಡಿ ಒಡೆದು ಹೋದರೆ ಜೋಡಿಸಬಹುದು.... ಆದರೆ ಮೂಲ ಸ್ವರೂಪ ಪಡೆಯುವುದು ಕಷ್ಟ. ಜೋಡಿಸಿದರೂ ಗೆರೆ ಅಳಿಸುವುದು ಅಸಾಧ್ಯ. ಅದರಂತೆ ನಮ್ಮ ಮನಸೊಮ್ಮೆ ಒಡೆದರೆ ಮೂಲಸ್ವರೂಪಕ್ಕೆ ಮರಳುವುದು ಕಷ್ಟ. ಬೇರೆ ಬೇರೆ ಕಾರಣ, ಪರಿಸ್ಥಿತಿ ಹಾಗೂ ನಿರ್ಲಕ್ಷ್ಯಗಳಿಂದಾಗಿ ಹನುಮನಂತೆ ನಮ್ಮ ನೈಜ ಸಾಮರ್ಥ್ಯದ ಅರಿವಾಗದೆ ಶಕ್ತಿಹೀನವಾಗಿ ಮಸುಕಾಗಿ ಕಾಣುವುದು. ಮಸುಕು ತೆಗೆದು ನನ್ನೂಳಗಿನ ನಾನುವಿನ ಪರಿಚಯವಾದರೆ ಸಾಮಾನ್ಯನೂ ಅಸಾಮಾನ್ಯನಾಗುವನು. ಬಿಂದುವು ಸಿಂಧುವಾಗುವುದು.
ಅಂತರಂಗದ ಕನ್ನಡಿಯಿಂದಾಗಿ ನಮ್ಮಂತೆಯೇ ಸಾಮಾನ್ಯವಾಗಿ ಬದುಕಿದವರು ಜಗದ ಬೆಳಕಾಗಿ ಬದಲಾವಣೆಗೆ ಕಾರಣಕರ್ತರಾದರು. ಅರಮನೆಗೆ ಸೀಮಿತನಾಗಿದ್ದ ಸಿದ್ಧಾರ್ಥನು ಜಗತ್ತಿಗೆ ಬುದ್ಧನಾದ. ನರೇಂದ್ರನು ಸಮಾಜಕ್ಕೆ ಸ್ವಾಮಿ ವಿವೇಕಾನಂದರಾದರು. ಮೋಹನದಾಸರು ಭಾರತಕ್ಕೆ ಮಹಾತ್ಮರಾದರು..... ಹೀಗೆ ಅವರ ಸಾಲಲ್ಲಿ ಆಗದಿದ್ದರೂ ಕನಿಷ್ಠ ನಮ್ಮ ಪರಿಸರದಲ್ಲಾದರೂ ನಮ್ಮದೊಂದು ಹೆಸರಿರಲಿ. ಬನ್ನಿ ನಮ್ಮ ಮನದ ಕನ್ನಡಿಯ ಮಸುಕು ತೆಗೆಯೋಣ. ಈ ಬದಲಾವಣೆಗೆ..... ಯಾರನ್ನು ಕಾಯದೇ ನಾವೇ ಬದಲಾಗೋಣ. ಬದಲಾವಣೆ ನಮ್ಮ ದಿನನಿತ್ಯದ ನಿಯಮವಾಗಲಿ.. ಬದಲಾಗೋಣವೇ ಪ್ಲೀಸ್
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
**********************************************
ಶೀಘ್ರದಲ್ಲಿಯೇ ಮಕ್ಕಳ ಜಗಲಿಯಲ್ಲಿ ಆರಂಭವಾಗುವುದು.... ಸಣ್ಣ ಮಕ್ಕಳಿಂದ ಪಿಯುಸಿವರೆಗಿನ ಮಕ್ಕಳು ಇದರಲ್ಲಿ ಭಾಗವಹಿಸಬಹುದು... ಇದು ನಿಮ್ಮ ಮನೆಯ ಮಕ್ಕಳ ಜಗಲಿ .
ಮಾಹಿತಿಗಾಗಿ :
*********************************************