-->
ಪದಗಳ ಆಟ ಭಾವಚಿತ್ರ ಪಾತ್ರ - ಸಂಚಿಕೆ - 1

ಪದಗಳ ಆಟ ಭಾವಚಿತ್ರ ಪಾತ್ರ - ಸಂಚಿಕೆ - 1

ಪದಗಳ ಆಟ ಭಾವಚಿತ್ರ ಪಾತ್ರ
ಸಂಚಿಕೆ - 1


      ಕೊಂದವರನ್ನು ಕೊಂದರು  ಸತ್ತವರು ಸತ್ತಿಲ್ಲ
*******************************************
             ಹರಿತ ಓದುಗ, ಅರಿತ-ನುರಿತ ಬೆರೆತ ಶಿಕ್ಷಕ, ವಸ್ತುನಿಷ್ಠ ವಿಮರ್ಶಕ ನನ್ನ ತಂದೆ ಬಾಲ್ಯದಲ್ಲಿ ನನಗೆ ಒಂದು ಕಿರುಹೊತ್ತಗೆಯನ್ನು ತಂದುಕೊಟ್ಟರು. ಹೊತ್ತುಗೊತ್ತಿಲ್ಲದೇ ತದೇಕಚಿತ್ತದಿಂದ ಅದನ್ನು ಅಹರ್ನಿಶಿ ಓದಿ ಮುಗಿಸಿದೆ : ಅಲ್ಲಲ್ಲ ಆಸ್ವಾದಿಸಿದೆ. ತನ್ನ ಬಾಲ್ಯದಲ್ಲಿಯೇ ಅರಿಯದೆ ಅಪಘಾತವೆಸಗಿ ಜ್ಞಾನೋದಯವಾದಾಗ ನನ್ನದು ಸರ್ವಥಾ ಅಪರಾಧವಾಯಿತು ಮನ್ನಿಸಬೇಕು ಎಂದು ತಂದೆಗೆ ಪತ್ರ ಬರೆದು ಕ್ಷಮೆಯಾಚಿಸುವ ಆ ಬಾಲಕನ ಪ್ರಾಮಾಣಿಕತೆ ಧೈರ್ಯ.. ಅಬ್ಬ...! ಹೇಗೆ ಸಾಧ್ಯ ಅನಿಸಿತು. ಕಲ್ಪನೆಗೂ ನಿಲುಕದ್ದು. 

     ನಾಟಕ ವೀಕ್ಷಿಸಿ, ಅದರ ಭಾವ ಗ್ರಹಿಸಿ, ತಾನೇ ಅದಾಗಿ ಅಂತರ್ಗತ ಮೌಲ್ಯವನ್ನು ಆದರ್ಶ ಅಂತ ಸ್ವೀಕರಿಸುವುದು, ಅದನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರುವುದು ದಿಗ್ಭ್ರಮೆಗೊಳಿಸುವ ಜೀವನ ಅನುಸಂಧಾನ. 

         ಪುಸ್ತಕ ಓದಿಯಾದ ಮೇಲೆ ಆ ವ್ಯಕ್ತಿಯ ಜೀವನಾನುಭವದ ಲಹರಿಯಲ್ಲೇ ಕಳೆದುಹೋಗಿದ್ದ ನಾನು ಮತ್ತೆ ನನ್ನ ತಂದೆಯಲ್ಲಿ ಕೇಳಿದೆ. ಈ ವ್ಯಕ್ತಿ ಯಾರು? ಆಗ ಅಪ್ಪ ಕೊಟ್ಟ ಉತ್ತರ - ಸರಳವಾಗಿ ಬದುಕಿ ಉದಾತ್ತವಾಗಿ ಚಿಂತಿಸಿದವ. ಚಿಂತನೆಯಲ್ಲಿ ಶ್ರೀಮಂತ ಬದುಕಿನ ರೀತಿಯಲ್ಲಿ ಬಡವ - ಸರಳತೆಯನ್ನೇ ಉಸಿರಾಡುತ್ತಿದ್ದ ಕಾಯಕವನ್ನೇ ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ನನ್ನ ಅಜ್ಜನನ್ನು ಕೇಳಿದೆ. ಅಂಗಿಯೆಲ್ಲಾ ಕಳಚಿ ಬೆತ್ತಲಾದವ, ಸತ್ಯಕ್ಕಾಗಿ ಸತ್ತವ, ಬಲಿಯಾದವ, ಸಾಯದೆ ಬದುಕಿದವ ಅಂದರು. ಆದರೆ ಆ ವ್ಯಕ್ತಿ ಕಾಡುವುದು ತಪ್ಪಲಿಲ್ಲ. ಈ ಬಾರಿ ಆತನ ಆತ್ಮಕತೆಯ ದೊಡ್ಡ ಪುಸ್ತಕವನ್ನು ತಂದು ಕೊಟ್ಟರು ಅಪ್ಪ. ಕುಳಿತು, ಮಲಗಿ, ಎದ್ದು ಓದಿದೆ. ಯಾವುದೋ ನಿದ್ದೆಯಿಂದ ಕೊಡವಿ ಎದ್ದಂತೆ ಎದ್ದೆ. ಸ್ವಾವಲಂಬನೆ, ಮಾನವ ಪ್ರೀತಿ, ಮುಖವಾಡ ಕಳಚಿದ ಪಾರದರ್ಶಕತೆ....! ತೆರೆದ ಪುಸ್ತಕದಂತಹ ಹೃದಯ..... ಇವೆಲ್ಲಾ, ನನಗೇ ಅರಿವಿಗೆ ಬರದೆ ನನ್ನ ಜೀವನದ ಅವಿಭಾಜ್ಯ ಸಂಗತಿಗಳಾದವು. ಆ ಸಾಂಗತ್ಯದಲ್ಲೇ ಪರಮ ಸುಖವನ್ನು ಅನುಭವಿಸುತ್ತಾ ದೊಡ್ಡವಳಾದೆ. ಆತನ ತತ್ವ ಅನುಯಾಯಿಗಳು ಪ್ರಪಂಚದಾದ್ಯಂತ ಪ್ರಭಾವಿತರಾಗಿರುವುದನ್ನು ತಿಳಿದುಕೊಂಡೆ. ವಿಶ್ವದಲ್ಲಿ ಸ್ವಾತಂತ್ರ್ಯಕ್ಕೆ, ಸತ್ಯನಿಷ್ಠೆ ಗೆ ಅಹಿಂಸೆಗೆ ಒಂದು ಪ್ರತೀಕವಾದ ಅವರು ಜಗತ್ತಿನಾದ್ಯಂತ ಎಲ್ಲರ ಮನಸಲ್ಲಿ ದಾಖಲಾದದ್ದಲ್ಲದೆ ನಿತ್ಯ- ನಿರಂತರ ಭಾವಚಿತ್ರದಲ್ಲಿ ಸಂಚಾರಿಯಾದರು. ಭಾರತದ ಹೆಗ್ಗುರುತಾದರು. ಭಾರತ ಅಂದಕೂಡಲೇ ವಿದೇಶಿಯರ ಸ್ಮೃತಿ ಪಟಲದಲ್ಲಿ ತಂದುಕೊಳ್ಳುವ ಚಿತ್ರವಾದರು. ಮಂತ್ರವಾದರು. ವೇದೋಪನಿಷತ್ತುಗಳ ಗಹನ ತತ್ವಗಳ ಜಂಗಮ ಸ್ವರೂಪಿಯಾದರು. ಅದನ್ನೇ ಸರಳವಾಗಿ ಬದುಕಿ ಕೋಟಿ ಶತಕೋಟಿ ಜನರ ಜೊತೆಗಾರರಾದರು. . ನಿರ್ಮಲ ಅಂತಃ ಕರಣ ಭಾವ ಶುದ್ಧಿಯಿಂದ ಭಾರತದ ಸಾಕ್ಷಿಪ್ರಜ್ಞೆಯಾದರು. ಭಾರತ ಅಪ್ಪಿಕೊಂಡ ವಿಶ್ವ ಪ್ರಜ್ಞೆಗೆ ಪ್ರೇರಣೆಯಾದರು. ಸದ್ದಿಲ್ಲದೆ ಉರಿದು ಹೋದರು. ಕರ್ಪೂರದಂತೆ ಕರಗಿಹೋದ ಆ ವಿರಾಟ್ ಚೈತನ್ಯ ಒಂದು ಸಾಮಾಜಿಕ ತತ್ವವಾಗಿ ಭಾರತವನ್ನು ಬೆಳಗುತ್ತಾ ಇದೆ. ಅಂತರಂಗವನ್ನು ಬಹಿರಂಗ ಮಾಡುತ್ತಾ ಅಧ್ಯಾತ್ಮ ಸಾಧನೆಯ ಸಾಧ್ಯತೆಯನ್ನು ವಿಸ್ತರಿಸುತ್ತಾ ಹೋಗುತ್ತಿರುವ
       ಇವರು ನಿಮ್ಮೊಳಗೆ ಇಲ್ಲವೇ.........?
ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
**********************************************

Ads on article

Advertise in articles 1

advertising articles 2

Advertise under the article