-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 1

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 1

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 1


ನಮಸ್ತೆ ಮಕ್ಕಳೇ,
                ಜಗಲಿಯಲ್ಲಿ ನಿಮ್ಮ ಸಂಭ್ರಮವನ್ನು ನೋಡುವುದೇ ಹಬ್ಬ. ನಿಮ್ಮೊಡನೆ ನನಗೂ ಒಡನಾಡಬೇಕೆನ್ನುವ ಹಂಬಲ.

                ಅಲ್ಲಾ..?.ಅದೆಷ್ಟು ಬೆರಗು ಮೂಡಿಸ್ತಿದ್ದೀರಿ...!ಎಲ್ಲರೂ ಸೃಜನಾತ್ಮಕವಾಗಿ ತೆರೆದುಕೊಂಡ ಜಗಲಿಯೊಳಗೊಂದು ಬಣ್ಣದ ಲೋಕ....!!ದಿನಕ್ಕೊಮ್ಮೆ ನಿಮ್ಮತ್ತ ಇಣುಕಿದಾಗ ಸಿಗುವ ಖುಷಿ ಅಕ್ಕರೆಯ ನೆನಪಾಗಿ ಕಾಡುತ್ತಿರುತ್ತದೆ.....

                 ಮೊನ್ನೆ ಬಸ್ಸಿಗಾಗಿ ಕಾಯ್ತಾ ಇದ್ದೆ..ಕಣ್ಣು ಸುತ್ತಲೂ ಸಂಚರಿಸುತ್ತಿತ್ತು...ಸಣ್ಣ ಹುಡುಗನೊಬ್ಬನ ಕೈಯಿಂದ ಚಾಕಲೇಟು ಸಿಪ್ಪೆ ಕೆಳಗೆ ಬಿತ್ತು. ಆಗಷ್ಟೇ ನಗರಪಾಲಿಕೆಯವರು ಗುಡಿಸಿ ತೆರಳಿದ್ದರಷ್ಟೇ.. ಬೇಸರವೆನಿಸಿತು...!    ಇನ್ನೇನನ್ನೋ ಬಾಯಿಗೆ ಸುರಿದುಕೊಂಡು ಅದರ ಪ್ಯಾಕೆಟ್ ನ್ನು ಮತ್ತೊಬ್ಬ ಅಲ್ಲಿಯೇ ಎಸೆದ....!! ಅಂಗಡಿಯವರು ಒಳಗಿದ್ದ ಕಸವನ್ನೆಲ್ಲಾ ಗುಡಿಸಿ ಹೊರಗೆ ಹಾಕಿದ್ರು...ಏನಿದೆಲ್ಲ....? ನಾವೇನು ಕಲಿತಿದ್ದೇವೆ...? ಎಂದು ಆಲೋಚಿಸುತ್ತಿರುವಾಗಲೇ ಬಸ್ಸು ಬಂತು. ಆಗ ತಾನೇ ಕುಡಿದು ಖಾಲಿಯಾದ ಬಿಸ್ಲೇರಿ ಬಾಟಲ್ ಚಾಲಕನ ಕೈಯಿಂದ ಹೊರಗೆಸೆಯಲ್ಪಟ್ಟಿತು..!!ಅಲ್ಲಿಗೆ ಸಾಧಾರಣ ಎಲ್ಲರೂ ತಮ್ಮ ಕೊಡುಗೆಯನ್ನಿತ್ತು ಪರಿಸರವನ್ನು ಮಾಲಿನ್ಯದಿಂದ ಸಮೃದ್ಧಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಂತಾಯಿತು...!

           ಹಸಿರು ಯೋಧರಾಗಿ ನಾವು ನೀವೆಲ್ಲಾ ನಿಸರ್ಗವನ್ನು ಕಾಪಾಡಲು ಹೊರಟವರು.... ನಮ್ಮ ನಡುವೆಯೇ ನಮ್ಮ ಸಹಪಾಠಿಗಳೂ ಸೇರಿದಂತೆ ಇಂತಹ ಕೃತ್ಯಗಳನ್ನೆಸಗುವವರು ಸಾಮಾನ್ಯವಾಗಿ ಕಂಡುಬರುತ್ತಿದ್ದಾರೆ..... ಗಿಡವನ್ನು ಬೆಳೆಸುವ ಜೊತೆಗೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಅದರ ರಕ್ಷಣೆಯ ಒಂದು ಭಾಗ ಎಂದು ಅನಿಸುತ್ತದೆ ಅಲ್ವಾ...?

            ಕಾಲೇಜಿನ ಮಕ್ಕಳು ತಿಂಡಿ ತಿಂದು ಕಸವನ್ನು ಅಲ್ಲೇ ಎಸೆದು, ಬಸ್ಸನ್ನೇರಿ ಹೊರಟೇಬಿಟ್ಟಾಗ ಎಷ್ಟೋ ಸಲ ಹೇಳಲಾಗದ ವೇದನೆಯನ್ನು ಅನುಭವಿಸಿದ್ದಿದೆ....

            ಓದಿದ, ನೋಡಿದ, ಆಲಿಸಿದ ಒಳ್ಳೆಯ ವಿಚಾರಗಳು ನಿಜ ಬದುಕಿಗೆ ವಿಸ್ತರಿಸದಿದ್ದರೆ ಅದು ಕಲಿಕೆಯಾಗುವುದಿಲ್ಲ ಅಲ್ವೇ?

          ನಾವೇನು ಮಾಡಬಹುದು....?
ದಾರಿಯಲ್ಲಿ ನಿಂತು ಯಾರನ್ನೂ ಎಚ್ಚರಿಸಿದರೂ ಕಿವಿಗೆ ಹಾಕಿಕೊಳ್ಳುವ ವ್ಯವಧಾನವಿರಲಿಕ್ಕಿಲ್ಲ.
ಜಗಲಿಯ ಪ್ರೀತಿಯ ಪುಟಾಣಿಗಳಲ್ಲಿ ಆಂತರ್ಯದ ನಿವೇದನೆ.....ನಮ್ಮಿಂದಾಗಿ ಈ ಪರಿಸರ ಹಾಳಾಗಬಾರದೆನ್ನುವ ಕಾಳಜಿಯನ್ನು ಜಾಗೃತಗೊಳಿಸೋಣ....! ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಪ್ರಜ್ಞೆ ಇತರರಿಗೆ ಮಾದರಿಯಾಗಿರಲಿ ಅಲ್ವೇ....?

            ಮುಂದೆ ಇನ್ನೊಮ್ಮೆ ಮತ್ತೆ ಹರಟೆ ಹೊಡೆಯೋಣ....ಜಗಲಿಯಲ್ಲಿ ...
ಹೀಗೆಯೇ......
              ಅಲ್ಲಿಯವರೆಗೆ ಅಕ್ಕನ ನಮನಗಳು.
‌‌‌‌‌‌‌‌.....................ತೇಜಸ್ವಿ ಅಂಬೆಕಲ್ಲು
                                                ಶಿಕ್ಷಕಿ
                 ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
        ಗೋಳಿತ್ತಟ್ಟು,ಪುತ್ತೂರು ತಾಲ್ಲೂಕು
                               ದಕ್ಷಿಣ ಕನ್ನಡ ಜಿಲ್ಲೆ

Ads on article

Advertise in articles 1

advertising articles 2

Advertise under the article