-->
ಬದಲಾಗೋಣವೇ ಪ್ಲೀಸ್ .....! - 1

ಬದಲಾಗೋಣವೇ ಪ್ಲೀಸ್ .....! - 1

ಮಕ್ಕಳ ಜಗಲಿಯಲ್ಲಿ
ಬದಲಾಗೋಣವೇ ಪ್ಲೀಸ್ ........! 
ಸಂಚಿಕೆ -1
    
        ಬದುಕಿನ ಸಿಹಿಗಾಗಿ ಬದಲಾಗೋಣವೇ...

          ಇತ್ತೀಚೆಗೆ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದಲ್ಲಿ ತರಬೇತಿ ನೀಡುತ್ತಿರುವ ಸಂದರ್ಭದಲ್ಲಿ ಗುಂಗುರು ಕೂದಲಿನ ಮಧ್ಯ ವಯಸ್ಕರೊಬ್ಬರು ಎದ್ದು ನಿಂತು" ಸರ್, ನಮ್ಮ ಸುತ್ತಮುತ್ತಲಿರುವ ವಿವಿಧ ವ್ಯಕ್ತಿತ್ವವನ್ನು ಗುರುತಿಸುವುದು ಹೇಗೆ ? ಸ್ವಲ್ಪ ಸರಳವಾಗಿ ಹೇಳುವಿರಾ ಪ್ಲೀಸ್." ಎಂದು ಪ್ರಶ್ನೆ ಮಾಡಿದರು. ಒಂದು ಕ್ಷಣ ನನಗೂ ಗಲಿಬಿಲಿ . ಏನು ಹೇಳೋದು ಎಂಬ ಗೊಂದಲ. ಒಂದು ಕ್ಷಣ ಯೋಚಿಸಿದಾಗ ನನ್ನ 6ನೇ ಇಂದ್ರಿಯಕ್ಕೆ ತಕ್ಷಣವೇ ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ಭಾರತೀ ಮೇಡಂ ನೆನಪಾದರು. ನಾನು 9ನೇ ತರಗತಿಯಲ್ಲಿರುವಾಗ ವಿಜ್ಞಾನ ಪಾಠದ ಅವಧಿಯಲ್ಲಿ ಅರ್ಧ ಭಾಗ ನೀರು ತುಂಬಿದ 4 ಗಾಜಿನ ಲೋಟವನ್ನು ತರಗತಿ ತಂದಿದ್ದರು. ಆ ನಾಲ್ಕು ಗಾಜಿನ ಲೋಟಗಳಿಗೆ ನಮ್ಮೆದುರಲ್ಲಿಯೇ ಕ್ರಮವಾಗಿ ಸಣ್ಣಕಲ್ಲು, ಸ್ಪಾಂಜ್, ಕೆಸರು ಹಾಗೂ ಸಕ್ಕರೆಯನ್ನು ಹಾಕಿ ಸ್ಥಿತಿ ಬದಲಾವಣೆಯನ್ನು ವೀಕ್ಷಿಸಲು ಹೇಳಿದರು.. 5 ನಿಮಿಷದ ತರುವಾಯ ಅವರು ನೀರಿನಲ್ಲಿ ಆ ವಸ್ತುಗಳ ಕರಗುವಿಕೆ ಬಗ್ಗೆ ವಿವರಿಸಿ ವಿಜ್ಞಾನ ಪಾಠ ನಿಲ್ಲಿಸಿದರು. ಆದರೆ ಅವರು ಆ ದಿನ ನಿಲ್ಲಿಸಿದ ಪಾಠ ತಕ್ಷಣಕ್ಕೆ ನೆನಪಿಗೆ ಬಂತು. ಪರಿಹಾರವೊಂದು ಗೋಚರಿಸಿತು. ನೆರೆದ ಶಿಬಿರಾರ್ಥಿಗಳಿಗೆ ಗಾಜಿನ ಲೋಟದ ಪ್ರಯೋಗವನ್ನು ವಿವರಿಸಿದೆ. ತದನಂತರ ಪ್ರಶ್ನೆ ಕೇಳಿದ ಮಧ್ಯ ವಯಸ್ಕರಿಗೆ ಹೀಗೆ ಹೇಳಿದೆ

           "ನಮ್ಮ ಬದುಕಿನ ಜನನ ಹಾಗೂ ಬಾಲ್ಯದಲ್ಲಿ ನಾವೆಲ್ಲರೂ ಗಾಜಿನ ಲೋಟದ ನೀರಿನಂತೆ ಪಾರದರ್ಶಕ ಹಾಗೂ ಮುಗ್ದ ಭಾವದ ಶುದ್ಧ ಮನಸ್ಕರಾಗಿರುತ್ತೇವೆ. ದಿನದಿಂದ ದಿನಕ್ಕೆ ಬೆಳೆದಂತೆ ನಮಗೆ ಕಲ್ಲು- ಸ್ಪಾಂಜ್ - ಕೆಸರು - ಸಕ್ಕರೆಯಂಥ ವ್ಯಕ್ತಿತ್ವದವರು ಸಂಪರ್ಕಕ್ಕೆ ಸಿಗುತ್ತಾರೆ. ನಾವು ಯಾರ ಜತೆ ಸೇರುತ್ತೇವೋ ಅದೇ ಆಗಿ ಬರುತ್ತೇವೆ. ನಾವು ಸೇರಬಹುದಾದ ಒಂದನೇ ವರ್ಗದವರು ಕಲ್ಲಿನಂತಹ ವ್ಯಕ್ತಿತ್ವದವರು. ಅವರು ನಮ್ಮ ಬದುಕಿನ ಜತೆಗಿದ್ದರೂ ಕಲ್ಲಿನಂತೆ ನಿಶ್ಚಲರಾಗಿ ನಮ್ಮಲ್ಲಿ ಯಾವುದೇ ಬದಲಾವಣೆ ತರದವರು. ಆದರೆ ಇವರಿಂದ ಯಾವುದೇ ಲಾಭವು ಇಲ್ಲ. ಅಪಾಯವಂತೂ ಇಲ್ಲವೇ ಇಲ್ಲ. ಇವರ ಜತೆ ಬದುಕಬಹುದು.

       ಎರಡನೆಯ ವರ್ಗದವರು ಸ್ಪಾಂಜ್ ನಂಥ ವ್ಯಕ್ತಿತ್ವದವರು.. ಸ್ಪಾಂಜ್ ಹೇಗೆ ಲೋಟದಲ್ಲಿರುವ ನೀರನ್ನು ಹೀರಿ ತಾನು ದಪ್ಪವಾಗಿ ಆಶ್ರಯ ಕೊಟ್ಟ ನೀರನ್ನೇ ಮಾಯ ಮಾಡುತ್ತದೊ ಹಾಗೆಯೇ ಇಂತಹ ವ್ಯಕ್ತಿಗಳು ತನ್ನ ಸ್ವಾರ್ಥಕ್ಕಾಗಿ ನಮ್ಮಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಅನುಕೂಲಗಳನ್ನು ಬಳಸಿಕೊಂಡು ಕೊನೆಗೆ ನಮ್ಮಿಂದ ಏನೂ ಲಾಭವಿಲ್ಲ ಎಂದಾಗ ನಮ್ಮನ್ನೇ ನಾಶ ಮಾಡುವವರು ಅಥವಾ ನಮ್ಮ ವ್ಯಕ್ತಿತ್ವವನ್ನು ಮಾಯವಾಗಿಸುವವರು. ಇವರು ಸ್ವಾರ್ಥಿಗಳು ಇವರ ಬಗ್ಗೆ ತುಂಬಾ ಎಚ್ಚರ ಅಗತ್ಯ.

        ಮೂರನೇ ವರ್ಗದವರು ಕೆಸರಿನಂಥ ವ್ಯಕ್ತಿತ್ವದವರು. ಕೆಸರು ಹೇಗೆ ತಾನು ಸೇರಿದ ನೀರನ್ನೂ ಕೆಸರು ಮಾಡುತ್ತದೊ ಅದೇ ರೀತಿ ಇಂಥಹವರು ನಮ್ಮ ಬದುಕನ್ನು ಸೇರಿ ಕೆಸರು ಮಾಡಿ ವ್ಯಕ್ತಿತ್ತ ನಾಶ ಪಡಿಸುವವರು. ಇವರು ಅಪಾಯಕಾರಿಗಳು ಹಾಗೂ ಕೆಟ್ಟವರು ಇವರಿಂದ ದೂರವಿದ್ದರೆ ಕ್ಷೇಮ. 

        ಇನ್ನು ನಾಲ್ಕನೆಯ ವರ್ಗದವರು ಸಕ್ಕರೆಯಂಥ ವ್ಯಕ್ತಿತ್ವದವರು. ಸಕ್ಕರೆ ಹೇಗೆ ನೀರಿನೊಂದಿಗೆ ಸೇರಿ ನಿಸ್ವಾರ್ಥಿಯಾಗಿ ತನ್ನ ಭೌತಿಕ ಅಸ್ತಿತ್ವ ಕಳೆದುಕೊಂಡು ನೀರನ್ನು ಸಿಹಿ ಮಾಡುತ್ತದೋ ಅದೇ ರೀತಿ ಇ೦ಥವರು ನಮ್ಮ ಬದುಕಿನಲ್ಲಿ ಒಳ್ಳೆಯತನ ತುಂಬಿ ಶುದ್ಧ ಪ್ರೀತಿಯನ್ನು ನೀಡಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬದುಕನ್ನು ಸಿಹಿ ಮಾಡುತ್ತಾರೆ. ಒಂಥರಾ ಎಲೆಮರೆಯ ಕಾಯಿಯಂತೆ ನಮ್ಮನ್ನು ತಿದ್ದುವವರು ಅಥವಾ ಹಿನ್ನೆಲೆಯಲ್ಲಿದ್ದು ನಮ್ಮನ್ನು ಮುನ್ನೆಲೆಗೆ ತರುವವರು. ಇಂಥವರನ್ನು ನಾವು ಆಶ್ರಯಿಸಬೇಕು .ಇಂಥವರಿಂದ ವ್ಯಕ್ತಿತ್ವ ಸಾರ್ಥಕ್ಯ ಪಡೆಯುತ್ತದೆ".
ಈ ಸರಳ ವಿವರಣೆ ಪ್ರಶ್ನೆಗೆ ಉತ್ತರವಾಯಿತು. ಶಿಬಿರಾರ್ಥಿಗಳಿಗೆ ಅರ್ಥವಾಯಿತು. 

        ಹೌದು ಗೆಳೆಯರೇ ದಿನನಿತ್ಯ ನಮ್ಮ ವೃತ್ತಿ ಕ್ಷೇತ್ರ, ನೆರೆಹೊರೆ, ವ್ಯವಹಾರ ಕ್ಷೇತ್ರಗಳಲ್ಲಿ ಇಂಥಹವರು ಸಿಗುತ್ತಿರುತ್ತಾರೆ. ಹಾಗಾಗಿ ಈವರೆಗೆ ನಾವು ಈ ನಾಲ್ಕರಲ್ಲಿ ಏನಾಗಿದ್ದೆವು ಅಥವಾ ನಾವು ಈವರೆಗೆ ಯಾರ ಸಂಪರ್ಕದಲ್ಲಿದ್ದೆವು ಎಂಬುದನ್ನು ಅರಿಯೋಣ .ನಮ್ಮ ಬದುಕಿನಲ್ಲಿ ಆದದ್ದೂ ಆಯಿತು . ಈವರೆಗೆ ಕೆಟ್ಟದಾಗಿದ್ದರೆ ಮರೆತುಬಿಡೋಣ. ಒಳ್ಳೆಯದಾಗಿದ್ದರೆ ಮುಂದುವರೆಸೋಣ. ಇನ್ನು ಮುಂದಿನ ಬದುಕಿಗೆ ಬೇಕಾಗಿರುವುದು ಕಲ್ಲೋ, ಸ್ಪಾಂಜೋ , ಕೆಸರೋ ಅಥವಾ ಸಕ್ಕರೆಯೋ ... ಎಂಬುದನ್ನು ಆಯ್ಕೆ ಮಾಡೋಣ. ಬನ್ನಿ ಸಮರ್ಪಕ ಆಯ್ಕೆಯಿಂದ ಬಾಳು ಸಿಹಿಯಾಗಿಸೋಣ. ಈ ಬದಲಾವಣೆಗೆ ಇನ್ನೊಬ್ಬರನ್ನು ಕಾಯದೇ ನಾವೇ ಬದಲಾಗೋಣ. ಬದಲಾವಣೆ ನಮ್ಮ ದಿನನಿತ್ಯದ ನಿಯಮವಾಗಲಿ. ಬದುಕಿನ ಸಿಹಿಗಾಗಿ ಬದಲಾಗೋಣವೇ ಪ್ಲೀಸ್ .....!!!

               ....................ಗೋಪಾಲಕೃಷ್ಣ ನೇರಳಕಟ್ಟೆ
                                ಶಿಕ್ಷಕರು ಹಾಗೂ ತರಬೇತುದಾರರು
                                    mob :   +919980223736

Ads on article

Advertise in articles 1

advertising articles 2

Advertise under the article