-->
ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ -1

ಅಕ್ಕನ ಪತ್ರಕ್ಕೆ ಮಕ್ಕಳ ಉತ್ತರ -1

ಮಕ್ಕಳ ಜಗಲಿಯಲ್ಲಿ
ಅಕ್ಕನ ಪತ್ರಕ್ಕೆ
ಮಕ್ಕಳ ಉತ್ತರ - 1



ಅಕ್ಕನ ಪತ್ರ -1
   ಪ್ರೀತಿಯ "ಅಕ್ಕ "
ಅಮ್ಮ ಓದಿ ಹೇಳಿದ ಮೊದಲ ಪತ್ರ ....
ಅರ್ಥೖಸಿಕೊಂಡದ್ದನ್ನು ಹೀಗೆ ಹೇಳಿದೆ ......

"ಓ ಪರಿಸರವೇ ನೀನೆಷ್ಟು ಪಾಪ .... ನೋವಾಗದೆ .... ಹೇಸಿಗೆಯಾಗದೆ "

ನನ್ನ ಓಣಿಯಲ್ಲಿ ಹೀಗೆ ......ಅಣ್ಣನವರು ಕಸ ಹಾಕುತ್ತಾರೆ, ಕಾಲಿಡಲು ಹೇಸಿಗೆಯಾಗುತ್ತದೆ, ಮೊಲದ ಹಾಗೇ ಹಾರುತ್ತೇನೆ, ನಾನು ಪ್ರಶ್ನಿಸುತ್ತೇನೆ...... ಅಮ್ಮ ಮುಗುಳು ನಗುತ್ತಾ ಉತ್ತರಿಸುತ್ತಾರೆ

"ನೀನು ಎಲ್ಲವನ್ನು ಸರಿ ಮಾಡು ಮಗನೆ "
 
ಅಮ್ಮನ ಮುಖವನ್ನು ನೋಡುತ್ತಾ..... ತಲೆ ಅಲ್ಲಾಡಿಸುತ್ತೇನೆ.

ವಂದನೆಗಳು,
ಪ್ರಣವ್ ಪಿ ದೇವ್ 
ತರಗತಿ - ೧
ಲೇಡಿ ಹಿಲ್ ಇಂಗ್ಲೀಷ್ ಪ್ರೈಮರಿ  
ಶಾಲೆ - ಮಂಗಳೂರು - ದಕ್ಷಿಣ ಕನ್ನಡ

*****************************************

ತೇಜಸ್ವೀ ಅಕ್ಕಾ.....
               ಜಗಲಿಯಲ್ಲಿ ಅಮ್ಮನ ಸಹಾಯದಿಂದ ನಿಮ್ಮ ಪತ್ರ ಓದಿದೆ ತುಂಬಾ ಚೆನ್ನಾಗಿತ್ತು. ನಾನೂ... ತುಂಬಾ ಜನ ರೋಡಿನಲ್ಲಿ ಪ್ಲಾಸ್ಟಿಕ್ ಬಿಸಾಡುವುದನ್ನು ..... ದನಕರುಗಳು ಅದನ್ನು ತಿನ್ನುವುದನ್ನು ನೋಡಿದ್ದೇನೆ. ತುಂಬಾ ಬೇಸರವಾಗುತ್ತಿತ್ತು..... ಆಗ ನನಗೆ ಹಾಗೆಲ್ಲ ಕಸ ಬಿಸಾಡಬಾರದು ಅಂತ ಅನ್ನಿಸುತ್ತಿತ್ತು......
       ನನ್ನ ದೊಡ್ಡಮ್ಮನ ಮನೆಯಲ್ಲಿ ಒಂದು ದನ ಮೇಯಲು ಹೋದಾಗ ಪ್ಲಾಸ್ಟಿಕ್ ತಿಂದು ತಿಂದು ಒಂದು ದಿನ ಸತ್ತಿತ್ತು. ನನಗೆ ಆ ದನ ತುಂಬಾ ಇಷ್ಟದ ದನ... ರಜೆಯಲ್ಲಿ ಹೋದಾಗ ನಾನು ಅದರ ಹತ್ತಿರ ಮಾತಾಡುತ್ತಾ ಹುಲ್ಲು ಹಿಂಡಿ ಕೊಡುತ್ತಾ ಇದ್ದೆ. ಅದು ಸತ್ತಾಗ ನನಗೆ ತುಂಬಾ ಬೇಜಾರಾಯಿತು...... ನಾನು ಎಲ್ಲಿಯೂ ಪ್ಲಾಸ್ಟಿಕ್ ಬಿಸಾಡಲಿಲ್ಲ. ಮುಂದೆಯೂ ಬಿಸಾಡುವುದಿಲ್ಲ ......

                  ನಿಮ್ಮ ಪ್ರೀತಿಯ                       
ನಿನಾದ್ ಕೈರಂಗಳ್
4 ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

******************************************

        ಅಕ್ಕನ ಪತ್ರ ಓದಿದೆ. ತುಂಬಾ ಖುಷಿಯಾಯ್ತು. ಹಸಿರು ಯೋಧನಾಗಿರುವ ನಾನು ಪರಿಸರಕ್ಕೆ ಯಾವುದೇ ತೊಂದರೆ ಮಾಡದೆ ಪರಿಸರ ಮಿತ್ರನಾಗುತ್ತೇನೆ. ಅಕ್ಕ ಹೇಳಿದಂತೆ ನನ್ನಿಂದ ಹಾಗೂ ಗೆಳೆಯರಿಂದ ಮರಗಿಡ ಬೆಳೆಸಿ ಸ್ವಚ್ಚತೆಯನ್ನು ಕಾಪಾಡುತ್ತೇನೆ. ಹಸಿರು ಯೋಧನಾಗಿ ಮಾಡಿದ ಮಕ್ಕಳ ಜಗಲಿಗೆ ಧನ್ಯವಾದಗಳು

ತನ್ಮಯ್ ಕೃಷ್ಣ ನೇರಳಕಟ್ಟೆ    9 ನೇ ತರಗತಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ 
ತೆಂಕಿಲ ಪುತ್ತೂರು 
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ                                           
******************************************

ಪ್ರೀತಿಯ ಅಕ್ಕ, 

ನಿಮ್ಮ ಪತ್ರ ಓದಿದೆ. ನೀವು ಹೇಳುವುದು ನಿಜ. ನಮ್ಮಿಂದ ತಾನೇ ಪರಿಸರ ಮಲಿನವಾಗುತ್ತಿದೆ. ನಾನು ಸಹ ಗಮನಿಸಿದ್ದೇನೆ ಪೇಟೆಗೆ ಹೋದರೆ ಸಾಕು ಒಂದೇ ಒಂದು ಪ್ರಾಣಿ ಪಕ್ಷಿ ಕೀಟ ಗಳಾಗಲಿ ಕಾಣಸಿಗುವುದಿಲ್ಲ. ಆದರೆ ಹಸಿರು ತುಂಬಿರುವ ಹಳ್ಳಿಗೆ ಬಂದರೆ ಹಲವಾರು ಪ್ರಾಣಿ ಪಕ್ಷಿ ಅವುಗಳ ಕೂಗುಗಳು ನಮ್ಮ ಮನಸ್ಸನ್ನು ಖುಷಿ ಗೊಳಿಸುತ್ತವೆ. ನಮ್ಮಿಂದ ಸಾಧ್ಯವಾದಷ್ಟು ಗಿಡಮರಗಳನ್ನು ಬೆಳೆಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಬೇಕು. ಈ ಮೂಲಕ ಪರಿಸರದಲ್ಲಿ ವಾಸಿಸುವ ವಿವಿಧ ಜೀವಿಗಳಿಗೆ ಜೀವಿಸಲು ಅವಕಾಶ ಕೊಡಬೇಕು. ದಿನ ಬೆಳಗಾದರೆ ನನ್ನ ಮನೆಯ ಸುತ್ತಲೂ ಅದೆಷ್ಟು ಪಕ್ಷಿಗಳ ಕೂಗು, ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ... ಅದೇ ನೋಡಲು ಚೆಂದ... ನಮ್ಮಂತೆ ಈ ಪರಿಸರದಲ್ಲಿ ಅವುಗಳು ಸಹ ಬದುಕಬೇಕು. ಹಾಗೆ ಬದುಕಬೇಕಾದರೆ ನಾವು ನಮ್ಮ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಪಣತೊಡಬೇಕು. ಈ ಮೂಲಕ ಶುದ್ಧ ಪರಿಸರವನ್ನು ನಿರ್ಮಿಸಲು ನಾನು ಸಹ ನನ್ನಿಂದಾಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತೇನೆ.

                       ಧನ್ಯವಾದಗಳು

ನಂದನ್ ಕೆ ಹೆಚ್
ಏಳನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆ ಕುದ್ಮಾರು
ಪುತ್ತೂರು , ದಕ್ಷಿಣ ಕನ್ನಡ ಜಿಲ್ಲೆ

*****************************************

ಮಕ್ಕಳ ಜಗಲಿ----- 
       ಅಕ್ಕನ ಪತ್ರಕ್ಕೆ ನನ್ನ ಉತ್ತರ......
ಅಕ್ಕ.... 
    ನಿಮ್ಮ ಪತ್ರ ಓದಿದೆ. ನನಗೂ ನೀವಂದಂತೆ ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವುದನ್ನು ಕಂಡಾಗ ಬೇಸರವೆನಿಸುವುದು. ಅಪ್ಪ ಹೇಳುತ್ತಾರೆ ಬಳಕೆಯಾಗದ ಯಾವುದೇ ತ್ಯಾಜ್ಯವನ್ನು ಹೊರಗೆ ಬಿಸಾಡದೆ ಆಗಾಗಲೇ ನಾಶ ಮಾಡಬೇಕು ಅಥವಾ ಪುನರ್ಬಳಕೆಯಾಗುವಂತೆ ಮಾಡಬೇಕೆಂದು. ಮನೆಯಲ್ಲಿ ತಂದ ಪ್ಲಾಸ್ಟಿಕ್ ಬಳಕೆಯಾಗದೆ ಇದ್ದಾಗ ಅಮ್ಮ ಚೆನ್ನಾಗಿ ಮಡಚಿ ಅದನ್ನು ಪ್ಯಾಕ್ ಮಾಡಿ ಅಪ್ಪನಿಗೆ ಕೊಡುವಳು. ಅಪ್ಪ ಅದನ್ನು ಅಂಗಡಿಯವರಿಗೆ ಕೊಡುವರು. ಇದನ್ನು ನಾನು ಕಂಡಿರುವೆನು. ಈಗೀಗ ನಾನೂ ಪ್ಲಾಸ್ಟಿಕ್ ಗಳನ್ನು ಚೆನ್ನಾಗಿ ಜೋಡಿಸಿಡುವೆನು.... ಅಂಗಡಿಗೆ ಕೊಡಲು. ನೀವು ಹೇಳಿದಂತೆ ನಾನೂ ಪರಿಸರ ರಕ್ಷಿಸುವಲ್ಲಿ ನನ್ನ ಅಳಿಲ ಸೇವೆ ಮಾಡುವೆನು.
             ಧನ್ಯವಾದಗಳು.

ಲಹರಿ ಜಿ.ಕೆ.   7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್,ತುಂಬೆ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

****************************************

Ads on article

Advertise in articles 1

advertising articles 2

Advertise under the article