-->
ಹಾರಾಟ ,  ಹೊಸ ಬದುಕಿನೆಡೆಗೆ... ಕಥೆ

ಹಾರಾಟ , ಹೊಸ ಬದುಕಿನೆಡೆಗೆ... ಕಥೆ

ಮೋಕ್ಷ. ಡಿ. 9ನೇ ತರಗತಿ.
ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ
ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ


         ಹಾರಾಟ, ಹೊಸ ಬದುಕಿನೆಡೆಗೆ...... ಕಥೆ

        ಆಕೆಯ ಹೆಸರು ತ್ರಿಯಾ. ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಆಕೆಯ ಶಾಲೆ ಮನೆಯಿಂದ ಸುಮಾರು ಮೂರು ಕಿಲೋಮೀಟರ್ ದೂರವಿರಬಹುದು. ಶಾಲೆಗೆ ಪ್ರತಿ ದಿನ ಸೈಕಲ್ ನಲ್ಲಿ ಹೋಗಿ ಬರುತ್ತಿದ್ದಳು. ಆದರೆ ಸಂಜೆ ಬರುವುದು ಒಂದು ಚಿಕ್ಕ ಕಾಲುದಾರಿಯಂತಹ ಮಾರ್ಗದಲ್ಲಿ. ಅದು ಹಾಗೆ ಸುಮ್ಮನೆ ಅಲ್ಲ. ಅದಕೊಂದು ಕಾರಣವಿತ್ತು. ಯಾಕೆಂದರೆ ಈ ಕಾಲುದಾರಿ ಹೋಗುತ್ತಿದ್ದುದು ಒಂದು ಚಿಕ್ಕ ಕಾಡಿನಂತಹ ಪ್ರದೇಶದಲ್ಲಿ. ಹಾಗೆಂದು ಸಂಪೂರ್ಣ ಕಾಡಲ್ಲ, ಹಲವು ಮರಗಳು ಅದೆಷ್ಟೊ ಅಪರಿಚಿತ ಗಿಡಗಳು ಇವುಗಳ ಮಧ್ಯೆ ಈ ಕಾಲುದಾರಿ.   ಇಲ್ಲಿ ಮೆಲ್ಲಗೆ ಸೈಕಲ್ ಮೆಟ್ಟಿಕೊಂಡು, ಅತ್ತ ಇತ್ತ ಸುಂದರ ಪರಿಸರ ನೋಡಿಕೊಂಡು ಬರುವುದೆಂದರೆ ತ್ರೀಯಳಿಗೆ ಬಲು ಇಷ್ಟ. ಮುಸ್ಸಂಜೆಯ ಸೂರ್ಯನ ಬೆಳಕು , ಬಣ್ಣ ಬಣ್ಣದ ಪಾತರಗಿತ್ತಿಗಳು ಹಕ್ಕಿಗಳ ಮಧುರ ಕಲರವ ಅದೆಷ್ಟೊ ಪರಿಚಿತ ಅಪರಿಚಿತ ಹೂಗಳು. ಆದರೆ ಇದೆಲ್ಲದರ ನಡುವೆ ತ್ರೀಯಳನ್ನು ಹಿಂದಿನ ಕೆಲವು ದಿನಗಳಿಂದ ತುಂಬಾ ಆಕರ್ಷಿಸುತ್ತಿದ್ದುದು ಅಲ್ಲಿದ್ದ ಚಿಕ್ಕ ಅಡು ಮಾವಿನ ಮರದ ಮೇಲಿದ್ದ ಪುಟ್ಟ ಹಕ್ಕಿಗಳ ಸಂಸಾರ.
      ಆ ಹಕ್ಕಿಗಳು ಗೂಡು ಕಟ್ಟಲು ಆರಂಬಿಸಿದ ದಿನದಿಂದ ಹಿಡಿದು ಇಂದಿನವರೆಗೆ ಒಂದು ದಿನವೂ ಬಿಡದೆ ಅದನ್ನು ನೋಡಲು ಬರುತ್ತಿದ್ದಳು. ಶಾಲೆಗೆ ರಜೆ ಇದ್ದರೂ ಅಲ್ಲಿಗೆ ಬರುವ ಅಭ್ಯಾಸ ಬೆಳೆಸಿಕೊಂಡಳು. ಆ ಮರದಿಂದ ಕೊಂಚ ದೂರದಲ್ಲಿ ನಿಂತು ನೋಡಿ ಆನಂದದಿಂದ ಮೈ ಮರೆಯುತ್ತಿದ್ದಳು. ಅದು ಮೊಟ್ಟೆ ಇಟ್ಟು ಕಾವು ಕೊಡುವ ದಿನಗಳಲ್ಲಂತೂ ಯಾವಾ ಮೊಟ್ಟೆ ಒಡೆದು ಮರಿಗಳ ಮಧುರ ಸ್ವರ ಕೇಳುವೆನೆಂಬ ಆತುರವಿತ್ತು.

        ಹಕ್ಕಿಗಳು ಮೊಟ್ಟೆ ಇಟ್ಟು ಸುಮಾರು ಹತ್ತೊಂಬತ್ತು ದಿನಗಳಾದವು. ಅಂದು ಸಂಜೆ ಮರದ ಬಳಿ ಬಂದಾಗ ಆಕೆಗೆ ಸಣ್ಣಗೆ ಚಿಲಿ ಪಿಲಿ ಧ್ವನಿ ಕೇಳಿತು. ಅದು ಆ ಪುಟ್ಟ ಹಕ್ಕಿಗಳ ಸ್ವರವಲ್ಲ. ಹೌದು! ಮೊಟ್ಟೆ ಒಡೆದು ಹೊರಬಂದ ಮರಿಗಳ ಸ್ವರವಾಗಿತ್ತದು!.....

         ತ್ರಿಯಾಳ ಆನಂದಕ್ಕೆ ಪಾರವೇ ಇರಲಿಲ್ಲ.
ಅಂದಿನಿಂದ ಶಾಲೆ ಬಿಟ್ಟ ಕೂಡಲೆ ತಡಮಾಡದೇ ಮಾವಿನ ಮರದ ಹತ್ತಿರ ಬರುವಳು. ತಂದೆ ತಾಯಿ ಹಕ್ಕಿಗಳು ಪುಟ್ಟ ಮರಿಗಳಿಗೆ ತಿಂಡಿ ತಂದುಕೊಡುವುದನ್ನು ನೋಡುವುದು, ಪುಟ್ಟ ಮರಿಗಳ ಕಲರವ ಕೇಳುವುದು ತ್ರಿಯಾಳಿಗೆ ಬಲು ಇಷ್ಟ. ನೋಡ ನೋಡುತ್ತಿದ್ದಂತೆ ಮರಿಗಳಿಗೆ ಗರಿ ಬೆಳೆಯತೊಡಗಿತು. ಈಗ ತ್ರಿಯಾಳಿಗೆ ಅವುಗಳು ಎಂದು ಹಾರಿಯಾವು ಎಂಬ ಕಾತರ!!.....
          ಅಂದು ಭಾನುವಾರ. ತ್ರಿಯಾ ಮುಂಜಾನೆಯ ಹೂ ಬಿಸಿಲಿಗೇ ಎದ್ದು ಸಿದ್ಧಳಾದಳು. ಅಮ್ಮನಿಗೆ ಹೇಳಿ ಆ ಪುಟ್ಟ ಕಾಡಿಗೆ ಪ್ರಯಾಣ ಬೆಳೆಸಿದಳು. ಕಳೆದ ಒಂದು ವಾರ ತ್ರಿಯಾ ಮನೆಯಲ್ಲಿರಲಿಲ್ಲ. ಹಬ್ಬಕ್ಕೆ ತನ್ನ ಅಜ್ಜಿ ಮನೆಗೆ ಹೋಗಿದ್ದಳು. ಹೀಗಾಗಿ ಇಂದು ಹಕ್ಕಿಗಳನ್ನು ಕಾಣುವ ಕಾತರ...... ಅಂದು ಸ್ವಲ್ಪ ವೇಗವಾಗಿ ಸೈಕಲ್ ತುಳಿದಳು. ಆಕೆ ಮಾವಿನ ಮರದ ಬಳಿ ತಲುಪಿದಳು. ಅಲ್ಲಿ ಆಕೆ ಕಂಡಳು ಆ ಪುಟ್ಟ ಮರಿಗಳ ಹಾರಾಟವನ್ನು!.......... ಹೌದು ಆ ಮರಿಗಳು ಹಾರಲು ಕಲಿತಿದ್ದವು. ಅವು ಮರದಿಂದ ಮರಕ್ಕೆ ರೆಂಬೆಯಿಂದ ರೆಂಬೆಗೆ ಹಾರುತ್ತಿರಲಿಲ್ಲ. ಆಕಾಶದೆಡೆಗೆ ಹಾರುತ್ತಿದ್ದವು!..... ತ್ರಿಯಾ ನಿಂತು ನೋಡಿದಳು. ಅವು ಹಾರಾಡತೊಡಗಿದವು.
ತಮ್ಮ ಹೊಸ ಬದುಕಿನೆಡೆಗೆ. ಈ ವಿಶಾಲ ಪ್ರಪಂಚ ನೋಡಲು ಹಾರಾಡುತ್ತಿದ್ದವು. ಆ ವಿಶಾಲ ಮುಗಿಲನ್ನು ಮುಟ್ಟುವ ಆಸೆಯಿಂದ ಹಾರತೊಡಗಿದವು. ಈ ವಿಶಾಲ ಜಗತ್ತನ್ನು ಎದುರಿಸಲು ಅವು ಸಿದ್ಧರಾಗಿದ್ದವು.......!!!


......... ಮೋಕ್ಷ. ಡಿ. 9ನೇ ತರಗತಿ.
ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ
ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

Ads on article

Advertise in articles 1

advertising articles 2

Advertise under the article