ಪ್ರತಿಭೆಯ ಆಗರ : ಆದ್ಯಂತ್ ಅಡೂರು
Wednesday, June 2, 2021
Edit
ಪ್ರತಿಭೆಯ ಆಗರ : ಆದ್ಯಂತ್ ಅಡೂರ್
"ರವಿಯ ಕಿರಣಗಳು ಹೂಗಿಡವ ಸ್ಪರ್ಶಿಸಲು ಮುದುಡಿದ ಮೊಗ್ಗೆಲ್ಲಾ ಅರಳಿ ನಗುವುದು , ಪ್ರತಿಭೆ ಎಂಬ ಮೊಗ್ಗಿಗೆ ಪ್ರೋತ್ಸಾಹದ ಪ್ರಭೆ ಇರಲು ಮನದ ಭಾವಗಳು ಚಿಗುರಿ ಅರಳುವುದು." ಎಂಬ ಮಾತಿನಂತೆ ಅಸಾಮಾನ್ಯ ಪ್ರತಿಭೆಯ ಕಿರಣವನ್ನು ಹಲವಾರು ಕ್ಷೇತ್ರಗಳಲ್ಲಿ ಪಸರಿಸಿ ಬೆಳಗುತ್ತಿರುವ ಬಾಲ ಪ್ರತಿಭೆಯೇ ಆದ್ಯಂತ್ ಅಡೂರ್.
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ ಪುತ್ತೂರು ತಾಲೂಕು ಇಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಈ ಬಾಲಕನ ವಯಸ್ಸು ಕೇವಲ ಹನ್ನೆರಡು ವರ್ಷ. ಆದರೆ ಸಾಧನೆಯ ಕ್ಷೇತ್ರ ಮಾತ್ರ ಹತ್ತು ಹಲವು. ಚಿತ್ರಕಲೆ , ಚುಟುಕು , ರಸಪ್ರಶ್ನೆ , ಭಾಷಣ , ತಬಲಾ ವಾದನ , ಕೃಷಿ , ಭಜನೆ , ಗಾಯನ , ಕ್ರೀಡೆ , ಕವನ ರಚನೆ ಇನ್ನೂ ನಾನಾ ಕ್ಷೇತ್ರ. ಕಪ್ಪೆ ಚಿಪ್ಪು ಮುತ್ತನ್ನು ತನ್ನೊಳಗೆ ಬಚ್ಚಿಟ್ಟುಕೊಂಡಂತೆ ಪ್ರತಿಭೆಗಳನ್ನೆಲ್ಲಾ ತನ್ನೊಳಗಿರಿಸಿಕೊಂಡು ಬೆಳಗುತ್ತಿರುವ ಚೇತನ.
ಹುಟ್ಟಿನಿಂದಲೇ ಪ್ರತಿಭಾನ್ವಿತರಾದ ಆದ್ಯಂತ್ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ 81% ಅಂಕ ಪಡೆದು ಶಿವಾನಂದ ಉಪ್ಪಳ ಇವರಿಂದ ತಬಲವಾದನ ಮತ್ತು ಸಂಗೀತವನ್ನು ಶಿಕ್ಷಕಿ ಶ್ರೀಮತಿ ಶಾರದಾದೇವಿ ಬೈತನಡ್ಕ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಕೊರೋನಾ ಕಾಲಘಟ್ಟದಲ್ಲಿ ತಮ್ಮ ಅಮೂಲ್ಯ ಸಮಯಕ್ಕೆ ಮೌಲ್ಯ ತಂದು ಕೊಟ್ಟ ಇವರು ಚುಟುಕು ಮತ್ತು ಚಿತ್ರಕಲೆಯಲ್ಲಿ ತನ್ನನ್ನು ತೊಡಗಿಸಿಕೊಂಡು 260ಕ್ಕೂ ಹೆಚ್ಚು ಚಿತ್ರ , ಚುಟುಕುಗಳನ್ನು ಅಂತರ್ಜಾಲದ ಮೂಲಕ ಅನೇಕರಿಗೆ ತಲುಪಿಸಿದ ಇವರ ಸಾಧನೆಗೆ ಬೆನ್ನುತಟ್ಟಲೇ ಬೇಕು.
ದೆಹಲಿಯ ಭಾರತೀಯ ವಿದ್ಯಾನಿಕೇತನ ಮತ್ತು ಕಾಸರಗೋಡಿನ ಚಿನ್ಮಯ ವಿದ್ಯಾಲಯ ನಡೆಸಿದ ವಿಜ್ಞಾನ ರಸ ಪ್ರಶ್ನೆ , ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತು ನಡೆಸಿದ ರಾಜ್ಯೋತ್ಸವ ಭಾಷಣ , ಕಾಸರಗೋಡಿನ ಕೆದಿಲಾಯ ಪ್ರತಿಷ್ಠಾನ ಮತ್ತು ಮಂಗಳೂರಿನ ಚುಟುಕು ಸಾಹಿತ್ಯ ಪರಿಷತ್ತು ನಡೆಸಿದ ಆನ್ಲೈನ್ ಚುಟುಕು ಕವಿ ಗೋಷ್ಠಿಯಲ್ಲಿ ಭಾಗವಹಿಸಿದ ಹೆಗ್ಗಳಿಕೆ ಈ ಅಮಿತೋತ್ಸಾಹಿ ಬಾಲಕನ ಹೆಗಲಲ್ಲಿದೆ.
ರಾಷ್ಟೀಯ ಶಿಕ್ಷಣ ನೀತಿಯ MY NEP ಯೋಜನೆಯ ಪೋಸ್ಟರ್ ರಚನಾ ಸ್ಪರ್ಧೆ, ಕಿನ್ನಿಗೋಳಿ ಯುಗಪುರುಷ ಪತ್ರಿಕೆಯ ಸಾಹಿತ್ಯ ಬರಹಗಳು , ಕಾಸರಗೋಡಿನ ಭೂಮಿಕಾ ಪ್ರತಿಷ್ಠಾನದ ವಾಹಿನಿಯ ಭಕ್ತಿಗೀತೆ ಸ್ಪರ್ಧೆಯಲ್ಲೂ ತನ್ನ ಪ್ರತಿಭೆಯ ಛಾಪನ್ನು ಮೂಡಿಸಿದ ಹೆಮ್ಮೆ ಈ ಎಳೆಯ ಚಿಗುರು ಬಾಲಕನದು ......
ವಿದ್ಯಾರ್ಥಿ ಜೀವನದಲ್ಲೇ ಹಲವಾರು ಸಾಧನಾ ಕ್ಷೇತ್ರದಲ್ಲಿ ಒಂದೊಂದೇ ಗೆಲುವಿನ ಮೆಟ್ಟಿಲನ್ನು ನಿರಂತರ ಶ್ರಮ , ಏಕಾಗ್ರತೆ, ಉತ್ಸಾಹದಿಂದ ಏರುತ್ತಿರುವ ಅದ್ಯಂತ್ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ಪುತ್ತೂರು ಘಟಕ ಇವರು ಆಯೋಜಿಸಿದ ಕವನ ರಚನಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸುವುದರ ಮೂಲಕ ತನ್ನೊಳಗಿನ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ದೊರಕಿಸಿ ಕೊಟ್ಟಿದ್ದಾರೆ.
ಮನೆಯಂಗಳದ ಈ ಬಾಲ ಪ್ರತಿಭೆಗೆ ಪ್ರೋತ್ಸಾಹ ಕಿರಣಗಳಾಗಿ ನಿರಂತರ ಚೈತನ್ಯ ನೀಡುತ್ತಿರುವವರು ಸಾಹಿತಿ ವಿರಾಜ್ ಅಡೂರು (ಪ್ರಶಾಂತ್ ರಾಜ್ ವಿ. ಟಿ) ಹಾಗೂ ಜಯಲಕ್ಷ್ಮಿ ದಂಪತಿಗಳು.
ಜಗತ್ತಿನಲ್ಲಿ ಜನ್ಮ ತಾಳಿದ ಪ್ರತಿಯೊಂದು ಮಗುವೂ ಪ್ರತಿಭಾನ್ವಿತ. ಬೀಜವೊಂದು ಫಲಭರಿತ ಮಣ್ಣಿನಲ್ಲಿ ಬಿದ್ದು ನೀರು ಗೊಬ್ಬರ ಸರಿಯಾದ ಸಮಯಕ್ಕೆ ದೊರೆತರೆ ಮಾತ್ರ ಚಿಗುರೊಡೆದು ಹೆಮ್ಮರವಾಗುವಂತೆ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ , ಅವಕಾಶಗಳು ತೀರಾ ಅಗತ್ಯ. ತನ್ನ ಸುತ್ತಮುತ್ತಲಿನ ಎಲ್ಲ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡು ತನ್ನೊಳಗಿನ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಿದ್ದಾರೆ ನಮ್ಮ ನಡುವಿನ ಆದ್ಯಂತ್.
ಬಾವಿಯ ನೀರು ಸೇದಿದಷ್ಟು ಮತ್ತೆ ಮತ್ತೆ ತುಂಬಿಕೊಳ್ಳುವಂತೆ, ಮರ ಗಿಡಗಳಿಂದ ಹೂ ಹಣ್ಣು ಕಿತ್ತಷ್ಟು ಮತ್ತೆ ಮತ್ತೆ ಹೊಸೆದು ಹುಟ್ಟಿಕೊಳ್ಳುವಂತೆ ಅದ್ಯಂತ್ ಅಡೂರು ಮುಂದಿನ ದಿನಗಳಲ್ಲಿ ಹೊಸತೊಂದು ದಾಖಲೆಯ ಹಾದಿಯತ್ತ ತನ್ನ ಚಿತ್ತವನ್ನು ಹರಿಸಲಿ... ಮಕ್ಕಳ ಜಗಲಿಯ ಚಿತ್ರಕಲೆ - ಬರಹ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇವರು ವಿಶೇಷ ಸಾಧಕರ ಸಾಲಿನಲ್ಲಿ ತಮ್ಮದೊಂದು ಹೆಜ್ಜೆ ಮೂಡಿಸಲಿ ಎಂಬುದೇ ನಮ್ಮೆಲ್ಲರ ಹಾರೈಕೆ.
.......... ತುಳಸಿ ಕೈರಂಗಳ
ಮೊ : 9480288214