-->
ಓ ಮುದ್ದು ಮನಸೇ....! - 8

ಓ ಮುದ್ದು ಮನಸೇ....! - 8

     
ಗುರುರಾಜ್ ಇಟಗಿ
ಆಪ್ತ ಸಮಾಲೋಚಕರು 
ಮಂಗಳೂರು


                ಓ ಮುದ್ದು ಮನಸೇ....! - 8

                   ಮಣ್ಣ ಮಕ್ಕಳು ನಾವು
       ಭಾರತೀಯ ಸಂಸ್ಕೃತಿ ಅದೆಷ್ಟು ಪರಮೋಚ್ಛ ವಾದದ್ದು ಅಂದರೆ ಇಲ್ಲಿನ ಎಲ್ಲಾ ದೇವಾನು ದೇವತೆಗಳೂ ಪ್ರಕೃತಿಯ ಪ್ರತಿರೂಪವೇ ಆಗಿವೆ. ಈ ನಾಡಿನ ಕಲ್ಲು-ಮಣ್ಣು, ನೆಲ-ಜಲ, ಪ್ರಾಣಿ-ಪಕ್ಷಿ, ಸಕಲ ಜೀವ ಜಲ-ಚರ ಜಂತುಗಳೂ ಕೂಡ ಶ್ರೇಷ್ಠ ಮಾನವರಿಂದ ಗೌರವಿಸಲ್ಪಡುತ್ತವೆ. ಇವೆಲ್ಲವೂ ಮಾನವನ ದಿನನಿತ್ಯದ ಬದುಕಿನ ಭಾಗವಾಗಿ ಈ ವಸುಧೆಯ ಒಡಲಲ್ಲಿ ಬದುಕಿ ಬೆಳೆದು ಮಡಿದು ಪ್ರಕೃತಿಮಾತೆಯ ಮಡಿಲಲ್ಲಿ ಮಣ್ಣಾಗಿ ಮರವಾಗಿ ಮತ್ತೆ ಮತ್ತೆ ಪುಟಿದೇಳುತ್ತವೆ. ಇಂತಹದ್ದೊಂದು ಪುಣ್ಯ ಭೂಮಿಯಲ್ಲಿ ಜನ್ಮವೆತ್ತ ನಾವೇ ಧನ್ಯರು.

        ತಿಂಡಿ ಹಾಕಿ ಕೊಡ್ಲಾ? ಅಮ್ಮನ ಮುಂಜಾನೆಯ ಕರೆ ನನ್ನ ಕಿವಿಯಾಲೆಯಲ್ಲಿ ನುಸುಳುವಾಗ ನಾನು ದೇವರ ಕೋಣೆಯಲ್ಲಿ ಮಿಣಿ ಮಿಣಿ ಘಂಟೆ ಭಾರಿಸುತ್ತಿದ್ದೆ. ಹೊಟ್ಟೆ ಸ್ವಲ್ಪ ಜೋರಾಗಿಯೇ ಚುರುಗುಟ್ಟುತ್ತಿತ್ತು, ಹೂಂ.. ಹಾಕು, ಎಂದವನೆ ಪೂಜೆ ಮುಗಿಸಿ ನೇರವಾಗಿ ಅಡುಗೆ ಮನೆಗೆ ಬಂದೆ. ಬೆಳ್ಳನೆಯ ಬಿಸಿ ಬಿಸಿ ಇಡ್ಲಿ ತಟ್ಟೆಯಲ್ಲಿ ಕುಳಿತು ನನಗಾಗಿ ಕಾಯುತ್ತಿದ್ದವು. ಚಟ್ನಿ ಬೇಕಾ? ಇಲ್ಲಾ ಸಾಂಬಾರ್ ಹಾಕ್ಲಾ?, ಟೀ ಕುಡಿ ಇಲ್ಲಾಂದ್ರೆ ತಣ್ಣಗಾಗತ್ತೆ. ಇನ್ನೊಂದಿಡ್ಲಿ ತಗೋ.... ಅಬ್ಬಬ್ಭಾ ಮುಂಜಾನೆ ಐದು ಗಂಟೆಗೆ ಎದ್ದು, ಬಚ್ಚಲು ಹಂಡೆಗೆ ನೀರು ತುಂಬಿ, ಎಲ್ಲರ ಸ್ನಾನಕ್ಕೆ ನೀರು ಕಾಯಿಸಿ, ಕಸ ಗುಡಿಸಿ, ನೆಲವರೆಸಿ, ರಾತ್ರಿ ಬಳಸಿದ್ದ ಪಾತ್ರೆಗಳನ್ನೆಲ್ಲ ಸ್ವಚ್ಛಗೊಳಿಸಿ ಮನೆಮಂದಿಗೆಲ್ಲಾ ತಿಂಡಿ ರೆಡಿ ಮಾಡಿ, ಬಡಿಸಿ, ಎಲ್ಲರದ್ದೂ ಆದ ಮೇಲೆ ಅವಳು 
ತಿನ್ನೋದು .....!. ತುತ್ತು ಬಾಯಲ್ಲೇ ನಿಂತಿತು, ನನ್ನಮ್ಮನ ಮುಖವನ್ನೊಮ್ಮೆ ನೋಡಿದೆ. ಮತ್ತೊಂದು ಇಡ್ಲಿ ಬೇಕಾ? ಅಮ್ಮ ಅಂದಳು. ಸುಮ್ಮನೆ ತಲೆಯಾಡಿಸಿ ಇಡ್ಲಿ ತಿಂದೆ.

        ಕೈಯ್ಯಲ್ಲಿ ಇಡ್ಲಿಯಿತ್ತು ಮತ್ತೆ ತಲೆಯಲ್ಲಿ? ಹೌದು ನನ್ನಮ್ಮ. ಮನೆಯಲ್ಲಿ ಅದೆಂತಹದ್ದೇ ಕಷ್ಟಗಳಿರಲಿ, ದುಃಖ ದುಮ್ಮಾನಗಳಿರಲಿ. ನನ್ನಮ್ಮನ ಕೈಗಳು ಮಾತ್ರ ಯಾವತ್ತೂ ಅಕ್ಷಯ ಪಾತ್ರೆಯಂತೆ ಹಸಿವಿನ ಹೊಟ್ಟೆಗೆ ಅನ್ನ ಬಡಿಸುವ ಕಾಯಕಕ್ಕೆ ಬ್ರೇಕ್ ಹಾಕಿಲ್ಲ. ಹಾಗಾದರೆ ಅವಳಲ್ಲಿ ಅಂತಹದ್ದೊಂದು ಸಹನೆ, ಪ್ರೀತಿ, ಕರುಣೆ ಮತ್ತು ಚೈತನ್ಯ ಸದಾ ನೆಲೆಸಲು ಕಾರಣವೇನು. ತನ್ನೆಲ್ಲಾ ನೋವುಗಳನ್ನು ಎದೆಯಾಳದಲ್ಲಿ ಹುದುಗಿಟ್ಟು ಮೊಗೆದಷ್ಟೂ ಮುಗಿಯದ ಪ್ರೀತಿಯನ್ನು ಜೀವನವಿಡೀ ತನ್ನ ಕುಟುಂಬಕ್ಕೆ ಧಾರೆ ಎರೆಯಲು ಅವಳಲ್ಲಿನ ಉತ್ಸಾಹಕ್ಕೆ ಮೂಲ ಯಾವುದು... ಎನ್ನುವ ಕುತೂಹಲ ನನ್ನಲ್ಲಿ ಮೂಡಿತು.

          ನೆಲ, ಜಲ ಪ್ರಕೃತಿಯನ್ನು ಹೆಣ್ಣಾಗಿ ಗೌರವಿಸುವುದೇ ನಮ್ಮ ಸಂಸ್ಕೃತಿಯಲ್ಲವೇ..? ಅಮ್ಮನೂ ಕೂಡ ಹಾಗೆ ಪ್ರತಿ ಕುಟುಂಬದಲ್ಲಿ ನೆಲೆಸಿರುವ ಅದರ ಒಂದು ಭಾಗ ಅವಳು. ಅವಳ, ಪ್ರಕೃತಿಯ ಸಂಬಂಧವೇ ಅಂತದ್ದು, ಮುಂಜಾನೆ ಏಳುವ ನನ್ನಮ್ಮ ಸ್ನಾನದ ನಂತರ ಮೊಟ್ಟ ಮೊದಲು ಮಾಡುವ ಕೆಲಸವೇ ಮನೆಯಂಗಳದ ತುಳಸಿ ಗಿಡಕ್ಕೆ ನೀರೆರೆದು, ಕುಂಕುಮವಿಟ್ಟು ನೇರವಾಗಿ ನಡೆಯೋದು ಕೊಟ್ಟಿಗೆಗೆ. ಆಕಳ ಕೆನ್ನೆ ನೆವರಿ ಹಣೆಗೆ ಕುಂಕುಮ ಸವರಿ, ಅದರೊಟ್ಟಿಗೆ ಕ್ಷಣಕಾಲವಾದರೂ ಮಾತನಾಡಲಿಕ್ಕುಂಟು. ಅಮ್ಮನ ದಿನನಿತ್ಯದ ಈ ಕಾಯಕ ಸರ್ವ ಸಹಜವೇ ಆಗಿದ್ದರೂ ಅದರಲ್ಲೇನೋ ದಿವ್ಯಾರ್ಥದ ಒಳ ಹರಿವು ನಮ್ಮ ಅರಿವಿಗೆ ಬಾರದೆ ನಡೆಯುತ್ತಿದೆ.

       ಇಂತಹದ್ದೊಂದು ಗೊಂದಲ ಹೊತ್ತು ..... ಉತ್ತರದ ಹುಡುಕಾಟದಲ್ಲಿ ಬಿದ್ದ ನನ್ನ ಅರಿವಿಗೆ ಬಂದ ಸೋಜಿಗದ ವಿಚಾರಗಳು ಅದ್ಭುತ....!! ಸಂಶೋದನೆಗಳ ಪ್ರಕಾರ ಅದೆಷ್ಟೋ ಸಸ್ಯಗಳಿಗೆ, ಪ್ರಾಣಿಗಳಿಗೆ ಮನುಷ್ಯನಲ್ಲಿನ ನಕಾರಾತ್ಮಕತೆಗಳನ್ನು ಹೀರಿಕೊಂಡು ಸಕಾರಾತ್ಮಕತೆಯನ್ನು ಅವನ ಮನಸ್ಸಿನಾಳಕ್ಕೆ ತುಂಬುವ ಶಕ್ತಿಯಿದೆ. ಜಪಾನ್ ದೇಶದ ಶಿನ್ ರಿನ್ ಯೊಕು ಎನ್ನುವ ಒಂದು ಸಹಜ ಪ್ರಕೃತಿ ಚಿಕಿತ್ಸಾ ವಿಧಾನವು ಇವತ್ತು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇಂತಹದ್ದೊಂದು ಚಿಕಿತ್ಸೆಯಲ್ಲಿ ಜನರು ದಟ್ಟಾರಣ್ಯದಲ್ಲಿ ಗಿಡ ಮರಗಳೊಟ್ಟಿಗೆ ಬೆರೆತು, ಬರಿಕಾಲಿನಲ್ಲಿ ದರಗೆಲೆ ತುಳಿದು, ಮರವಪ್ಪಿ ಅಲ್ಲಿನ ಪ್ರಕೃತಿ ಸೊಬಗನ್ನು ತಮ್ಮ ಮನಸ್ಸಿನೊಂದಿಗೆ ಬೆರೆಸಿ ನಿರಾಳರಾಗುತ್ತಾರೆ. ಇವತ್ತಿನ ಆಧುನಿಕ ಬದುಕಿನಲ್ಲಿಯೂ ಸಾಕು ಪ್ರಾಣಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವುಗಳನ್ನು ಸ್ಟ್ರೆಸ್ ರಿಲೀವರ್ಸ್ ಅಂತಲೆ ಕರೆಯುತ್ತಾರೆ. ಇನ್ನು ಭಾರತದ ಅದೆಷ್ಟೋ ಪ್ರಕೃತಿ ಚಿಕಿತ್ಸಾ ವಿಧಾನಗಳೂ ಕೂಡ ಜಗತ್ತಿನ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿವೆ. ನಮ್ಮಲ್ಲಿನ ಯೋಗ ಧ್ಯಾನಗಳೂ ಕೂಡ ಪ್ರಕೃತಿಯೊಂದಿಗೆ ಬೆಸೆಯುವ ವಿಧಾನಗಳೇ ಆಗಿವೆ. ಇನ್ನು ಇಲ್ಲಿನ ಮಣ್ಣಿನ ಗುಣಗಳು ಜಗತ್ತಿನ ಯಾವ ಭಾಗದಲ್ಲೂ ಇರಲಿಕ್ಕಿಲ್ಲ. ಅದರಲ್ಲಿನ ಔಷಧೀಯ ಗುಣಗಳು ಸಕಲ ಜೀವಿಗಳ ಆರೋಗ್ಯದ ಮೇಲೆ ಸದಾಕಾಲ ನಿಸರ್ಗದತ್ತ ಚಿಕಿತ್ಸೆಯ ಮೂಲಕ ಆರೋಗ್ಯ ವರ್ಧನೆಯ ಮೂಲಗಳಾಗಿವೆ. ಇತ್ತೀಚಿನ ಸಂಶೋಧನೆಯೊಂದು ಮಣ್ಣಿನಲ್ಲಿ ರೋಗನಿರೋಧಕ ಗುಣಗಳಿರೋದನ್ನು ಪತ್ತೆ ಹಚ್ಚಿದೆ. ಬಹುಶ: ನಮ್ಮಮ್ಮನ ಆ ಎಲ್ಲಾ ಶಕ್ತಿಗೆ ಕಾರಣ ಅವಳ ಪ್ರಕೃತಿಯೊಂದಿಗಿನ ಒಡನಾಟವೇ ಆಗಿರಬಹುದು.!!

         ಆದರೆ, ಪ್ರತಿ ದಿನ ಜಗತ್ತಿನಾದ್ಯಂತ ಸುಮಾರು 29 ಮಿಲಿಯನ್ ಮರಗಳು ಕಡಿಯಲ್ಪಡ್ತಾ ಇವೆ, ಸುಮಾರು 139 ಎಕ್ರೆಯಷ್ಟು ಕಾಡು ಪ್ರತಿ ನಿಮಿಷಕ್ಕೆ ನಾಶ ಆಗ್ತಿದೆ. ಪ್ರತಿವರ್ಷ ನಾವು ಸುಮಾರು 300 ಮಿಲಿಯನ್ ಟನ್ ಪ್ಲಾಸ್ಟಿಕ್ ಬಳಸ್ತೀವಿ. ಇವೆಲ್ಲವುಗಳ ಪರಿಣಾಮ ಕೇವಲ 2019 ಮತ್ತು 2020 ರಲ್ಲಿ ನಾವು ಸರಿ ಸುಮಾರು 38.5 ಸಾವಿರ ಹೆಕ್ಟೇರ್ ನಷ್ಟು ಕಾಡನ್ನ ಕಳೆದುಕೊಂಡಿದ್ದೇವೆ. ವಿಶ್ವದ ಶೇಕಡಾ 7 ವಿವಿಧ ಜೀವ ಪ್ರಭೇದಗಳಿಗೆ ನೆಲೆಯಾಗಿರುವ ಭಾರತದ ಕಾಡು ಸುಮಾರು 275 ಮಿಲಿಯನ್ ಜನರಿಗೆ ಬದುಕಿನ ಆಧಾರವಾಗಿದೆ. ಆದರೆ ಜನಸಂಖ್ಯಾ ಸ್ಪೋಟ, ಕೈಗಾರೀಕರಣ, ಆಧುನೀಕರಣ ಮುಂತಾದವುಗಳ ಪರಿಣಾಮ ನಮ್ಮ ಪ್ರಕೃತಿ ನಶಿಸುತ್ತಿದೆ. ಪ್ರಾಣಿ, ಪಕ್ಷಿಗಳು ನೆಲೆಯಿಲ್ಲದೆ ನಲುಗುತ್ತಿವೆ, ಕಾಡು ಕಡಿದು ಕೃಷಿ ಮಾಡುವ ನಮ್ಮ ಯೋಚನೆ ಯೋಜನೆಗಳು ನಮ್ಮ ಹೊಟ್ಟೆ ತುಂಬಿಸುವುದರ ಜೊತೆ ಜೊತೆಗೆ ಭವಿಷ್ಯತ್ತಿನ ಪೀಳಿಗೆಗೆ ಮಾರಕವಾಗುತ್ತಿವೆ.
         ಇಂತಹದ್ದೊಂದು ದೊಡ್ಡ ತಪ್ಪಿನ ಅರಿವಾದಾಗ ನಾನು ಮಾಡಿದ ಒಂದು ಸಣ್ಣ ಪ್ರಯತ್ನದ ಫಲವಾಗಿ ಇವತ್ತು ನೂರಾರು ಮರಗಳು ನಮ್ಮೂರಿನ ಕಾಡುಗಳಲ್ಲಿ ಬೆಳೆದು ಅದೆಷ್ಟೋ ಪ್ರಾಣಿ ಪಕ್ಷಿಗಳಿಗೆ ನೆರಳಾಗಿವೆ. ಪ್ರತಿವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ನಾವು ತಿಂದು ಬಿಸಾಡುವ, ಹಲಸು, ಮಾವು, ಗೇರು ಮುಂತಾದ ಹಣ್ಣಿನ ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಕಾಡಿಗೊಯ್ದು ನೆಡುವ ಕಾಯಕವದು. ಪ್ರಾಣಿ ಪಕ್ಷಿಗಳಿಗೆ ಆಹಾರವಾದಂತೆಯೂ ಆಯಿತು, ಕಾಡೂ ಉಳಿಯಿತು ಮತ್ತೆ ನಮಗೆ ನಮ್ಮ ಪೀಳಿಗೆಗೆ ಉಸಿರೂ ಸಿಕ್ಕಿತು. ಎಲ್ಲರೂ ಇಂತಹದ್ದೊಂದು ಕೆಲಸಕ್ಕೆ ಕೈ ಜೋಡಿಸಬೇಕಿದೆ, ಅಮ್ಮನ ಕೈಗಳಿಗೆ ಇನ್ನೊಂದಿಷ್ಟು ಶಕ್ತಿ ತುಂಬಬೇಕಿದೆ.     


..........................ಗುರುರಾಜ್ ಇಟಗಿ
                            ಆಪ್ತ ಸಮಾಲೋಚಕರು 
                                   ಮಂಗಳೂರು

Ads on article

Advertise in articles 1

advertising articles 2

Advertise under the article