ದುರಾಸೆಯ ರಾಜ - ಕಥೆ
Monday, March 22, 2021
Edit
ಚಿರಾಗ್ ಎಸ್ ನಾಯಕ್ 7ನೇ ತರಗತಿ
ಸೈಂಟ್ ಜೋಸೆಫ್ ಹೈಸ್ಕೂಲ್ ಬಜಾಲ್
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ದುರಾಸೆಯ ರಾಜ -ಕಥೆ
ಒಂದೂರಲ್ಲಿ ಒಬ್ಬ ರಾಜ. ಆ ರಾಜನಿಗೆ ಒಬ್ಬಳು ಸುಂದರವಾದ ಮಗಳು. ಆ ಮಗಳು ದೇಶ ಸಂಚಾರಕ್ಕಾಗಿ ಹಲವಾರು ದೇಶಗಳಿಗೆ ಹೋಗುತ್ತಿದ್ದಳು. ವಿದ್ಯಾವಂತ ಬುದ್ಧಿವಂತ ಆಗಿದ್ದ ಮಗಳು ಮದುವೆ ವಯಸ್ಸಿಗೆ ಬಂದಿದ್ದಳು. ಆದ್ದರಿಂದ ರಾಜನಿಗೆ ಮದುವೆಯ ಜವಾಬ್ದಾರಿ ಇತ್ತು. ತನ್ನ ಮಗಳಿಗೆ ಸೂಕ್ತವಾದ ವರನನ್ನು ಹುಡುಕುವ ಕಾರ್ಯದ ಬಗ್ಗೆ ಯೋಚಿಸುತ್ತಿದ್ದನು. ಹಾಗೆ ಯೋಚಿಸುತ್ತಿರುವಾಗ ತನ್ನ ಉದ್ಯಾನವನಕ್ಕೆ ವಾಯು ವಿಹಾರಕ್ಕಾಗಿ ಹೋಗುತ್ತಿದ್ದ ರಾಜನಿಗೆ ಅಲ್ಲಿ ದಂಪತಿಗಳು ನೀರಿಲ್ಲದೆ ತುಂಬಾ ದಾಹದಿಂದ ನರಳುತ್ತಿದ್ದುದನ್ನು ನೋಡಿ ರಾಜನಿಗೆ ತುಂಬಾ ದುಃಖವಾಯಿತು ತಕ್ಷಣ ಅವನು ಅವರಿಗಾಗಿ ನೀರನ್ನು ತಂದು ಕೊಟ್ಟನು. ಅದನ್ನು ಕಂಡು ದೇವತೆಯು ಪ್ರತ್ಯಕ್ಷಳಾದಳು. ದೇವತೆ " ಇಂದು ನಿನ್ನ ಒಳ್ಳೆಯ ಕಾರ್ಯವನ್ನು ನೋಡಿ ನನಗೆ ತುಂಬಾ ಖುಷಿಯಾಯಿತು ಆದ್ದರಿಂದ ನಿನಗೆ ನಾನು ಒಂದು ವರವನ್ನು ನೀಡುತ್ತಿದ್ದೇನೆ. ನೀನು ಏನು ಬೇಕಾದರೂ ಕೇಳು" ಎಂದು ಹೇಳಿದಳು. ಆಗ ರಾಜನು ಎಷ್ಟೇ ಒಳ್ಳೆಯವನಾಗಿದ್ದರು ಅವನಿಗೆ ಚಿನ್ನದ ಮೇಲೆ ವ್ಯಾಮೋಹವಿತ್ತು . ಆದ್ದರಿಂದ ಅವನು ದೇವತೆಯ ಬಳಿ " ನಾನು ಮುಟ್ಟಿದ್ದೆಲ್ಲ ಚಿನ್ನವಾಗಲಿ" ಎಂದು ಕೇಳಿದನು. ಆಗ ದೇವತೆಯು ಅವನು ಕೇಳಿದ ವರವನ್ನು ಕೊಟ್ಟು "ತಥಾಸ್ತು" ಎಂದಳು.
ರಾಜನು ಪರೀಕ್ಷಿಸಲು ಉದ್ಯಾನವನದ ಬಳಿಯಿದ್ದ ಗಿಡಗಳನ್ನು ಮುಟ್ಟಿದ ತಕ್ಷಣ ಅದು ಚಿನ್ನವಾಯಿತು, ದಾಹವಾಗುತ್ತಿರುವುದರಿಂದ ನೀರನ್ನು ತರಲು ಕೆಲಸದವನಿಗೆ ಹೇಳಿದನು. ಕೆಲಸದವನು ತಂದುಕೊಟ್ಟ ನೀರಿನ ಪಾತ್ರೆಯನ್ನು ಮುಟ್ಟಿದಾಗ ಅದು ಚಿನ್ನವಾಯಿತು ಮತ್ತು ತಾನು ಊಟ ಮಾಡುವ ತಟ್ಟೆ ಮತ್ತು ಲೋಟಗಳನ್ನು ಮುಟ್ಟಿದನು ಅದೂ ಚಿನ್ನವಾಯಿತು. ಆ ದಿನ ರಾಜನ ಮಗಳು ದೇಶಸಂಚಾರ ಮುಗಿಸಿಕೊಂಡು ತನ್ನ ತಂದೆಯನ್ನು ನೋಡಲು ಬಂದಳು. ಆಗ ರಾಜನಿಗೆ ತುಂಬಾ ಭಯವಾಯಿತು. ಎಲ್ಲಿ ನಾನು ನನ್ನ ಮಗಳನ್ನು ಮುಟ್ಟಿದರೆ ಅವಳು ಚಿನ್ನವಾಗಿ ಬಿಡುತ್ತಾಳೆಂದು ಮಗಳನ್ನು ತಡೆಯಲು ಪ್ರಯತ್ನಪಟ್ಟನು, ಆದರೆ ಮಗಳು ಜೋರಾಗಿ ಓಡಿಕೊಂಡು ಬಂದು ತನ್ನ ತಂದೆಯನ್ನು ಅಪ್ಪಿಕೊಂಡಳು. ತಕ್ಷಣವೇ ಅವಳು ಚಿನ್ನವಾದಳು ಇದನ್ನು ಕಂಡು ರಾಜನಿಗೆ ತುಂಬಾ ದುಃಖವಾಯಿತು.
ತಾನು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿರುವುದನ್ನು ಕಂಡ ರಾಜನು ತುಂಬಾ ದುಃಖಿತನಾಗಿ ಕೊನೆಗೆ ಆ ವರವನ್ನು ಹಿಂದಕ್ಕೆ ಪಡೆಯುವ ಸಲುವಾಗಿ ದೇವತೆಯ ಬಳಿ ಬೇಡಿಕೊಳ್ಳುತ್ತಾನೆ. ಆಗ ದೇವತೆಯು ಪ್ರತ್ಯಕ್ಷವಾಗಿ " ಮಗು, ನೀನು ಮಾಡಿರುವ ಒಳ್ಳೆಯ ಕಾರ್ಯಕ್ಕೆ ನಾನು ಒಂದು ವರವನ್ನು ಕೇಳು ಎಂದಿದ್ದೆ ಆದರೆ ನೀನು ನಿನಗೆ ಬೇಕಾದ ವರವನ್ನು ನೀನು ಕೇಳಿದೆ ಆದರೆ ಅ ಆಸೆಯು ದುರಾಸೆಯಾಗಿತ್ತು. ಈಗ ನಿನಗೆ ಬುದ್ದಿ ಬಂದಿದೆ ಎಂದುಕೊಳ್ಳುತ್ತೇನೆ ನಾನು ನಿನ್ನ ವರವನು ಹಿಂದಕ್ಕೆ ಪಡೆಯುತ್ತಿದ್ದೇನೆ ಇನ್ನು ಮುಂದೆ ಸಮಾಜದ ಕಲ್ಯಾಣಕ್ಕಾಗಿ ಹಾಗೂ ನಿನ್ನ ರಾಜ್ಯದ ಪ್ರಜೆಗಳಿಗಾಗಿ ಏನಾದರೂ ಒಳ್ಳೆಯ ಕೆಲಸವನ್ನು ಮಾಡು " ಎಂದು ಹೇಳಿ ದೇವತೆಯು ಮಾಯವಾಗುತ್ತಾಳೆ. ಆಗ ರಾಜ ಮಗಳನ್ನು ಮುಟ್ಟುತ್ತಾನೆ , ಆಗ ಚಿನ್ನವಾದ ಎಲ್ಲಾ ವಸ್ತುಗಳು ಸಹಜ ಸ್ಥಿತಿಗೆ ಬರುತ್ತದೆ ಇದರಿಂದ ರಾಜ ಒಳ್ಳೆಯ ಪಾಠವನ್ನು ಕಲಿಯುತ್ತಾನೆ ಮತ್ತು ತನ್ನನ್ನು ನಂಬಿದವರಿಗಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಾನೆ. ರಾಜನ ಜೀವನವು ಖುಷಿಯಿಂದ ಸಾಗುತ್ತದೆ.
ನೀತಿ : ಅತಿಯಾಸೆ ಗತಿಗೇಡು
..............ಚಿರಾಗ್ ಎಸ್ ನಾಯಕ್ 7ನೇ ತರಗತಿ
ಸೈಂಟ್ ಜೋಸೆಫ್ ಹೈಸ್ಕೂಲ್ ಬಜಾಲ್ , ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ