-->
ಮಾಯಾಲೋಕ - ಕಥೆ

ಮಾಯಾಲೋಕ - ಕಥೆ

         ಮೋಕ್ಷ.ಡಿ. 9ನೇ ತರಗತಿ
         ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ.
        ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

                  ಮಾಯಾಲೋಕ - ಕಥೆ

       ಅದೊಂದು ಸುಂದರ ಲೋಕ. ನೋಡಿದಷ್ಟು ಹೆಚ್ಚು ಹೆಚ್ಚು ವಿಸ್ಮಯ ತರಿಸುವಂತಹದು. ನನಗೋ ಅದನ್ನು ಬಿಟ್ಟರೆ ಬೇರೇನೂ ಕಾಣದು. ಓ....ಅಂದ ಹಾಗೆ ನಾನು ಯಾರು ಅಂತ ಯೋಚಿಸುತ್ತಿದ್ದೀರಾ? ನಾನು ಮೀನಾ. ನನಗೆ ಈಗ ಐದು ವರ್ಷ. ನಾನು ಇಲ್ಲೇ ಸೀತಾಪುರದಲ್ಲಿ ಇರೋದು. ನನ್ನ ಅಪ್ಪ ಅಮ್ಮನಿಗೆ ಏಕೈಕ ಪುತ್ರಿ. ಸ್ವಲ್ಪ ತುಂಟತನ ಜಾಸ್ತಿ. ಆದರೂ ಅಪ್ಪ ಅಮ್ಮನಿಗೆ ನನ್ನನ್ನು ಕಂಡರೆ ಪ್ರಾಣ. ಮೊನ್ನೆಯಷ್ಟೇ ನನ್ನ ಐದನೇ ಹುಟ್ಟು ಹಬ್ಬ ಆಚರಿಸಿದೆ. ಆಗ ಅಮ್ಮ ನನಗೆ ಈ ಮಂಜಿನ ಗ್ಲೋಬ್ ಉಡುಗೊರೆಯಾಗಿ ಕೊಟ್ಟರು..ನಾನು ಮಾತನಾಡುತ್ತಿದ್ದ ವಿಸ್ಮಯ ಲೋಕ ಇದೇ. 
               ಇದು ಒಂದು ಅಪೂರ್ವ ಸ್ನೋ ಗ್ಲೋಬ್. ಅದರೊಳಗೆ ಎರಡು ಮೂರು ಮರಗಳು. ಮತ್ತೆ ಒಂದು ಸೇತುವೆ. ಅದು ಶರತ್ಕಾಲದ ದೃಶ್ಯ. ಯಾವುದೋ ಅನಾಮಿಕ ಸ್ಥಳ. ನನಗೋ ಶಾಲೆಯಿಂದ ಬಂದ ಮೇಲೆ ಅದನ್ನು ನೋಡುವುದೊಂದೇ ಕೆಲಸ. ಮನೆಗೆ ಬಂದು, ಕೋಣೆಗೆ ನುಗ್ಗಿ, ಅದನ್ನೇ ನೋಡಲಾರಂಬಿಸಿದರೆ ಅಮ್ಮ ತಿಂಡಿಗೆ ಕರೆಯುವ ತನಕ ಅಲ್ಲೇ ಇದ್ದು ಅನಂತರ ಆಟ ಪಾಠ ಮುಂತಾದ ಕೆಲಸ ಕಾರ್ಯಗಳನ್ನು ಮುಗಿಸಿ ಮತ್ತೆ ಬಂದು ಅದನ್ನೇ ನೋಡುತ್ತಾ ಕುಳಿತು ನಿದ್ದೆ ಹೋಗುತ್ತಿದ್ದೆ. ನನಗೆ ಯಾವಾಗಲೂ ಈ ಲೋಕ ಹೇಗಿರಬಹುದೆಂಬ ಯೋಚನೆ...!!
         ಅಲ್ಲಿ ಮನುಷ್ಯರಿರಬಹುದು, ಅಲ್ಲಿ ದೂರದರ್ಶನದಲ್ಲಿರುವ ರೀತಿ ಯಕ್ಷ ಯಕ್ಷಿಣಿಯರು, ಮತ್ಸ್ಯ ಕನ್ನಿಕೆಯರು, ಯಂತ್ರ ಮಾನವರು ,ಮಾತನಾಡುವ ಪ್ರಾಣಿ ಪಕ್ಷಿಗಳೂ, ಮಾತನಾಡುವ ಕಾರು ಬೈಕುಗಳೂ ಇರಬಹುದಲ್ಲ !! ಅಲ್ಲಿ ಜನರು ಹಕ್ಕಿಗಳಂತೆ ಹಾರಾಡಬಹುದು, ಕಾರುಗಳು ಚಾಲಕನಿಲ್ಲದೆ ತಮ್ಮಷ್ಟಕ್ಕೆ ಓಡಾಡಬಹುದು. ನಮಗೆ ಏನು ಬೇಕಾದರೂ ಮ್ಯಾಜಿಕ್ ಮಾಡಿ ತರಬಹುದು. ಎಷ್ಟು ಚಂದ ಇರಬಹುದು.....!
ಆ ಲೋಕದಲ್ಲಿ ಶಾಂತಿ ಇರಬಹುದು. ಕೊಲೆ, ಮೋಸ, ಸಂಚು ಗೊತ್ತಿಲ್ಲದ ಮುಗ್ಧ ಜನರಿರಬಹುದು ಅಲ್ಲಿ. ಎಲ್ಲೆಲ್ಲೂ ಪ್ರೀತಿ, ಸ್ನೇಹವಿರಬಹುದು. ಒಬ್ಬರಿಗೆ ನೋವಾದಾಗ ಸಹಾಯ ಮಾಡುವ ಹಲವು ಸ್ನೇಹಿತರಿರಬಹುದು. ಒಬ್ಬರ ತಪ್ಪು ತಿದ್ದಲೂ ತುಂಬಾ ಸ್ನೇಹಿತರು. ಚುಚ್ಚು ಮಾತುಗಳಿಲ್ಲ. ಒಬ್ಬರು ಏನಾದರೂ ಹೊಸತನ್ನು ಕಲಿತರೆ , ಮಾಡಿದರೆ ಅವರಿಗೆ ಪ್ರೋತ್ಸಾಹ ಕೊಡುವ ಅದೆಷ್ಟೋ ಮಂದಿ. ಬಿದ್ದರೆ ಎಬ್ಬಿಸಲು ಹಲವಾರು ಕೈಗಳು. ಎಲ್ಲೆಡೆ ಸಂತಸ ಸಡಗರ. ಈಗ ಅನಿಸಿತು. ಎಷ್ಟು ಚೆನ್ಬಾಗಿರುತ್ತದೆ ಈ ಲೋಕವೂ ಹಾಗಿದ್ದರೆ......!!
ಜನರ ಮಧ್ಯೆ ಭೇದ - ಭಾವ ಇಲ್ಲದೆ ಜೊತೆಯಾಗಿ ಒಂದು ಪರಿವಾರವಾಗಿರುತ್ತಿದ್ದರೆ.....!
ಈ ಯೋಚನೆಗಳೆಲ್ಲ ತಲೆಯಲ್ಲಿ ಓಡತೊಡಗಿತು. ಆಗ ಕಣ್ಣಿಗೆ ನಿದ್ದೆಯ ತೆರೆ ಬಿತ್ತು.

          ಮೋಕ್ಷ.ಡಿ. 9ನೇ ತರಗತಿ
         ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ.
        ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

Ads on article

Advertise in articles 1

advertising articles 2

Advertise under the article