
ಪರೋಪಕಾರ - ಕಥೆ
Thursday, March 4, 2021
Edit
ಸಾನ್ವಿ ಸಿ ಎಸ್ 3 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು
ಪರೋಪಕಾರ - ಕಥೆ
ಒಂದು ಊರಿನಲ್ಲಿ ವಿಮಲ ಹಾಗೂ ಸುಮನ ಎಂಬ ಇಬ್ಬರು ಗೆಳತಿಯರಿದ್ದರು. ಅವರಿಬ್ಬರೂ ಅಕ್ಕಪಕ್ಕದ ಮನೆಯವರು. ವಿಮಲ ಶ್ರೀಮಂತೆ ಆದರೆ ಸುಮನ ಬಡವಿ. ವಿಮಲಾಳ ತಂದೆ ಇಂಜಿನಿಯರಿಂಗ್ ಕೆಲಸದಲ್ಲಿದ್ದರು, ತಾಯಿ ಶಿಕ್ಷಕಿಯಾಗಿದ್ದರು. ಸುಮನಾಳ ತಂದೆ ಕೂಲಿ ಕೆಲಸ ಮಾಡುತ್ತಿದ್ದರು, ತಾಯಿ ಬೀಡಿ ಕಟ್ಟುತ್ತಿದ್ದರು. ಅವರಿಬ್ಬರೂ ಒಂದೇ ತರಗತಿಯಲ್ಲಿದ್ದರು. ಒಂದೇ ಶಾಲೆಗೆ ಒಟ್ಟಿಗೆ ಹೋಗುತ್ತಿದ್ದರು.
ಒಂದು ವಾರ ಸುಮನ ಶಾಲೆಗೇ ಬರಲಿಲ್ಲ. ಆಗ ಶಿಕ್ಷಕಿ ವಿಮಲಾಗೆ ಹೇಳಿದರು "ನೀನು ಸುಮನಾಳನ್ನು, ಶಾಲೆಗೆ ಏಕೆ ಬರಲಿಲ್ಲ ಎಂದು ಕೇಳಿ ಬಾ. ನಿನ್ನ ಹಾಗೂ ಅವಳ ಮನೆ ಹತ್ತಿರವಲ್ಲವೇ?" ಎಂದು ಕೇಳಿದರು. ಆ ದಿನ ಸಂಜೆ ವಿಮಲ ಸುಮನಾಳ ಮನೆಗೆ ಬಂದಳು. ಆಗ ಸುಮನ ಬೀಡಿ ಕಟ್ಟಿಕೊಂಡು ಕುಳಿತಿದ್ದಳು. ಆಗ ವಿಮಲ "ಸುಮನಾ, ನೀನು ಏಕೆ ಬೀಡಿ ಕಟ್ಟುತ್ತಿರುವೆ?" ಎಂದು ಸುಮನಾಳಲ್ಲಿ ಕೇಳಿದಳು. ಆಗ ಸುಮನ "ವಿಮಲಾ, ನನ್ನ ಅಮ್ಮನಿಗೆ ಈ ಒಂದು ವಾರದಿಂದ ಜ್ವರ. ಆದ ಕಾರಣ ನನ್ನಮ್ಮನಿಗೆ ಬೀಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ನಾನೇ ಬೀಡಿ ಕಟ್ಟುತ್ತಿರುವೆ. ಇಲ್ಲದಿದ್ದರೆ ನಮಗೆ ಊಟಕ್ಕೆ ಹಣ ಸಾಲದು" ಎಂದಳು. ಆಗ ವಿಮಲಾಳಿಗೆ ಅಯ್ಯೋ ಪಾಪ ಅನಿಸಿತು. ಅವಳು "ಸುಮನಾ, ನಾನು ನಿನಗೆ ಈ ಒಂದು ವಾರದ ಪಾಠ ಕಲಿಸುತ್ತೇನೆ" ಎಂದು ವಿಮಲ ಮನೆಗೆ ಓಡಿ ತನ್ನ ಪುಸ್ತಕ, ನೋಟ್ಸ್ ಎಲ್ಲವನ್ನೂ ತಂದು ಸುಮನಾಳಿಗೆ ಬರೆಯಲು ಸೂಚಿಸಿ ತಾನೂ ಸ್ವಲ್ಪ ಬರೆದು ಕೊಟ್ಟಳು. ಮರುದಿನವೇ ಪರೀಕ್ಷೆ ಶುರುವಾದುದರಿಂದ ಸುಮನಾಳಿಗೆ ಎಲ್ಲವನ್ನೂ ಓದಲು ಆಗಲಿಲ್ಲ. ಆದ ಕಾರಣ ಆಕೆಗೆ ಕಡಿಮೆ ಅಂಕ ಬಂದಿತು. ಅವಳು ಮನೆಯಲ್ಲಿ ಅಳುತ್ತಾ ಕುಳಿತಳು. ಆಗ ಅಲ್ಲಿಗೆ ವಿಮಲಾ ಬಂದಳು. ಅವಳು "ನಾನು ನಿನಗೆ ಎಲ್ಲವನ್ನೂ ಕಲಿಸಿಕೊಡುತ್ತೇನೆ. ನೀನು ಮುಂದಿನ ಪರೀಕ್ಷೆಯಲ್ಲಿ ಹುಷಾರಾಗುತ್ತೀಯ" ಎಂದು ಸಮಾಧಾನಪಡಿಸಿದಳು. ಮತ್ತೆ ಅವರಿಬ್ಬರೂ ಒಟ್ಟಿಗೆ ಕುಳಿತು ಅಭ್ಯಾಸಮಾಡಿದರು. ಮುಂದಿನ ಪರೀಕ್ಷೆಯಲ್ಲಿ ಇಬ್ಬರೂ ಒಳ್ಳೆಯ ಅಂಕ ಗಳಿಸಿದರು. ವಿಮಲಾಳ ಒಳ್ಳೆ ಬುದ್ಧಿಯನ್ನು ಶಿಕ್ಷಕರೆಲ್ಲರೂ ಮೆಚ್ಚಿಕೊಂಡರು.
...............ಸಾನ್ವಿ ಸಿ ಎಸ್ 3 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು