-->
ಸಂಗೀತ ಲೋಕಕ್ಕೊಂದು ಹೊಸ ಕೋಗಿಲೆ : ಶ್ರೀರಕ್ಷಾ ಎಸ್ ಎಚ್. ಪೂಜಾರಿ

ಸಂಗೀತ ಲೋಕಕ್ಕೊಂದು ಹೊಸ ಕೋಗಿಲೆ : ಶ್ರೀರಕ್ಷಾ ಎಸ್ ಎಚ್. ಪೂಜಾರಿ

                   ಸಂಗೀತ ಲೋಕಕ್ಕೊಂದು 
ಹೊಸ ಕೋಗಿಲೆ :  ಶ್ರೀರಕ್ಷಾ ಎಸ್.ಎಚ್. ಪೂಜಾರಿ

        ಮಕ್ಕಳ ಪ್ರತಿಭೆಗಳನ್ನು ಊಹಿಸಲು ಅಸಾಧ್ಯ. ಯಾವ ಮಕ್ಕಳಲ್ಲಿ ಯಾವ ಪ್ರತಿಭೆ ಹುದುಗಿರುತ್ತದೆ ಹೇಳಲಸಾಧ್ಯ. ಪ್ರತಿಯೊಂದು ಮಗುವಿನಲ್ಲೂ ವೈವಿಧ್ಯ ಪ್ರತಿಭೆಗಳು ಇರುತ್ತದೆ. ಮಕ್ಕಳನ್ನು ಅತಿ ಹೆಚ್ಚು ಸಾಧಕರ ಬಳಿ ಕರೆದುಕೊಂಡು ಹೋದಷ್ಟು ಅವರ ನಿರೀಕ್ಷೆಗಳು ವಿಶಾಲವಾಗುತ್ತಾ ಹೋಗುತ್ತದೆ. ಆಸಕ್ತಿಯ ಕ್ಷೇತ್ರದತ್ತ ಓಲೈಸಿದಾಗ ಆಯ್ಕೆಗಳು ಸಾಂಗವಾಗಿ ನಡೆಯುತ್ತದೆ. ತಮ್ಮ ಆಸಕ್ತಿಯ ಕ್ಷೇತ್ರಗಳ ಆಯ್ಕೆಗೆ ಸ್ವತಂತ್ರರಾದಾಗ ಮಕ್ಕಳು ಸ್ವಕಲಿಕೆಯ ಪಥ ಖಂಡಿತಾ ಹಿಡಿಯಬಲ್ಲರು. ಈ ರೀತಿಯ ಸಾಧನೆಯ ದಿಕ್ಕಿನಲ್ಲಿ ಸಾಗುತ್ತಿರುವ ಅನೇಕ ಮಕ್ಕಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀರಕ್ಷಾ ಎಸ್.ಎಚ್.ಪೂಜಾರಿ ಕೂಡಾ ಒಬ್ಬರು. ಸಂಗೀತ ಲೋಕಕ್ಕೆ ಹೊಸ ಕೋಗಿಲೆಯೊಂದು ಇವರ ಮೂಲಕ ಕೊಡುಗೆಯಾಗಿದೆ.
            ಶ್ರೀರಕ್ಷಾ ಎಸ್.ಎಚ್.ಪೂಜಾರಿ ಮಂಗಳೂರಿನ ಕೊಣಾಜೆಯ ಶ್ರೀ ಹರೀಶ್ ಪೂಜಾರಿ ಮತ್ತು ಶ್ರೀಮತಿ ಸುರೇಖಾ ಎಚ್ ಪೂಜಾರಿ ದಂಪತಿಗಳ ಮಗಳು. ವಿಶ್ವಮಂಗಳ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೊಣಾಜೆ ಮಂಗಳೂರು ಇಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಸಣ್ಣ ಹರೆಯದಲ್ಲಿಯೇ ವಿಶಿಷ್ಟ ಸಾಧನೆ ಮಾಡುತ್ತಿರುವ ಕ್ರಿಯಾಶೀಲ ಮತ್ತು ಸೃಜನಶೀಲ ಬಾಲಕಿ. 

         ಸಂಗೀತ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿರುವ ಇವರು ಸಂಗೀತ ವಿದ್ವಾನ್ ಶ್ರೀ ವೆಂಕಟಕೃಷ್ಣ ಭಟ್ ಇವರಲ್ಲಿ ಸಂಗೀತಾಭ್ಯಾಸವನ್ನು ಮಾಡುತ್ತಿದ್ದಾರೆ. ಕಠಿಣ ಪರಿಶ್ರಮ , ಬದ್ಧತೆ , ಛಲ , ಏನಾದರೊಂದು ಸಾಧಿಸಬೇಕೆನ್ನುವ ಉತ್ಸಾಹವನ್ನು ಇವರು ಮೈಗೂಡಿಸಿಕೊಂಡಿದ್ದಾರೆ. ಸಣ್ಣ ಪ್ರಾಯದಿಂದಲೇ ಅಭ್ಯಾಸವನ್ನು ಆರಂಭಿಸಿದವರು ಗಾಯನದಲ್ಲಿ ಸೃಜನಶೀಲತೆಯನ್ನು ಅರಗಿಸಿಕೊಂಡಿದ್ದಾರೆ. ಫಲಿತಾಂಶಾಧಾರಿತ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಇವರು ಅನೇಕ ಸಾಹಿತ್ಯಕ್ಕೆ ರಾಗ ಸಂಯೋಜನೆಯನ್ನು ಮಾಡಿ ಹಾಡಿದ್ದಾರೆ. ತನ್ನ ಪ್ರಾಯಕ್ಕೆ ಅಸಾಧಾರಣವಾದ ಯೋಚನೆಗಳಿಂದ ಶ್ರೀರಕ್ಷಾ ಎಲ್ಲರಿಗಿಂತಲೂ ಭಿನ್ನವಾಗುತ್ತಾರೆ. 
        ಭಗವಂತನ ಮೇಲೆ ಅಪಾರ ನಂಬಿಕೆಯನ್ನು ಇರಿಸಿರುವ ಇವರು ' ಭಕ್ತಿಗೀತೆಯ ಅನೇಕ ಹಾಡುಗಳನ್ನು ಹಾಡಿದ್ದಾರೆ. ತನ್ನ ಕಂಠದಿಂದ ಹಾಡಿರುವ ಅನೇಕ ಸುಮಧುರ ಭಕ್ತಿಗೀತೆಗಳನ್ನು ತನ್ನದೇ ಆದ ಯುಟ್ಯೂಬ್ ಚಾನೆಲ್ SHRIRAKSHA S H POOJARY - YouTube channel ನಲ್ಲಿ ಬಿತ್ತರಿಸಿದ್ದಾರೆ. ಶ್ರೀ ನಾರಾಯಣಗುರು ಸ್ವಾಮಿಗಳ ಭಕ್ತಿಗೀತೆ , ಭಗವತಿ ಯ ತುಳು ಹಾಡುಗಳಿಗೆ ಸಾಹಿತ್ಯ ಬರೆದಿರುವ ಶ್ರೀ ಅಮೃತ ಸೋಮೇಶ್ವರರ ಪದ್ಯಗಳನ್ನು  , ಶಿವನನ್ನು ಸ್ತುತಿಸುವ , ಶ್ರೀಕೃಷ್ಣನ ಭಕ್ತಿಗೀತೆ ಹೀಗೆ ಅನೇಕ ಭಕ್ತಿ ಗೀತೆಗಳನ್ನು ಹಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

    ತುಳು ನಾಡಿನ ಜನಪದ ವೀರರಲ್ಲಿ ಕೋಟಿ-ಚೆನ್ನಯರು ಪ್ರಮುಖವಾಗುತ್ತಾರೆ. ಇವರ ಪವಿತ್ರವಾದ ನಂದನ ಬಿತ್ತ್ ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿಯು ಭಕ್ತಾದಿಗಳ ಪಾಲಿಗೆ ಶ್ರೇಷ್ಠವಾಗಿದೆ. ದಕ್ಷಿಣ ಕನ್ನಡದ ಅನೇಕ ಭಕ್ತಾದಿಗಳು ಭೇಟಿ ನೀಡುವ ವಿಶಿಷ್ಟ ಕ್ಷೇತ್ರವಾಗಿ ಗೆಜ್ಜೆಗಿರಿಯು ಪ್ರಸಿದ್ಧವಾಗಿದೆ. ಈ ಕ್ಷೇತ್ರದ ಪರಮ ಶಕ್ತಿಗಳನ್ನು ಕೊಂಡಾಡಿ ಹಾಡುವ ಭಕ್ತಿಗೀತೆ - ಶ್ರೀ ರಕ್ಷಾ ಎಸ್. ಹೆಚ್ ಪೂಜಾರಿಯವರ ಕಂಠದಲ್ಲಿ , ಶ್ರೀ ಸುಧಾಕರ ಸುವರ್ಣ ತಿಂಗಳಾಡಿ ಇವರ ಸಾಹಿತ್ಯ , ಶ್ರೀಮುರಳೀಧರ ಕಾಮತ್ ಇವರ ಸಂಗೀತ ನಿರ್ದೇಶನದಲ್ಲಿ ಗೆಜ್ಜೆಗಿರಿ ನಂದನಾಮೃತ ಅದ್ಭುತವಾಗಿ ಮೂಡಿ ಬಂದಿದೆ. ಮಾರ್ಚ್ 1 , 2021 ರ ಗೆಜ್ಜೆಗಿರಿಯ ವಾರ್ಷಿಕ ಮಹೋತ್ಸವದಂದು ಲೋಕಾರ್ಪಣೆಗೊಳ್ಳಲಿದೆ.
         ಭಕ್ತಿಗೀತೆಗಳ ಅನೇಕ ಸರಣಿ ಕಾರ್ಯಕ್ರಮಗಳನ್ನು ಜಿಲ್ಲೆಯ ಪ್ರಸಿದ್ಧ ವೇದಿಕೆಗಳಲ್ಲಿ , ಟಿವಿ ಚಾನೆಲ್ ಗಳಲ್ಲಿ ನೀಡಿ ಗೌರವಾದರಗಳನ್ನು ಪಡೆದುಕೊಂಡಿರುವ ಶ್ರೀರಕ್ಷಾ ಬೆಳೆಯುತ್ತಿರುವ ಅದ್ಭುತ ಪ್ರತಿಭೆ ಎಂದರೆ ತಪ್ಪಾಗಲಾರದು. ಸುಮಧುರ ಕಂಠದ ಜೊತೆ ರಾಗಸಂಯೋಜನೆಯ ಜವಾಬ್ದಾರಿಯನ್ನು ಹೊತ್ತು ಹಾಡುವ ಹೊಣೆಗಾರಿಕೆಯನ್ನು ಈ ಸಣ್ಣ ಪ್ರಾಯದಲ್ಲಿ ಹೊತ್ತಿರುವುದು ಪ್ರಶಂಸನೀಯ. ಸಂಗೀತದ ಜೊತೆ ಪಜೀರು ವಿದುಷಿ ರೇಷ್ಮಾ ನಿರ್ಮಲ್ ಭಟ್ ಇವರಲ್ಲಿ ಭರತನಾಟ್ಯ ನೃತ್ಯ  ಅಭ್ಯಾಸ ಮಾಡುತ್ತಿದ್ದಾರೆ.  ಚಿತ್ರಕಲೆಯ ಹವ್ಯಾಸವನ್ನು ಹೊಂದಿಕೊಂಡು ಕ್ರೀಡಾ ಕ್ಷೇತ್ರದಲ್ಲಿಯೂ ಮಿಂಚುತ್ತಿರುವ ಇವರದ್ದು ಅಸಾಮಾನ್ಯ ಪ್ರತಿಭೆ. 
        ಮಕ್ಕಳ ಜಗಲಿಯ ಶೀರ್ಷಿಕೆ ಗೀತೆಯನ್ನು ಇಂಪಾಗಿ ಹಾಡಿರುವ ಮತ್ತು ಕಿರಿಯ ವಯಸ್ಸಿಗೆ ಸಾಧನೆಯ ಬೆನ್ನೇರಿ ಹೊರಟ ಶ್ರೀರಕ್ಷಾನಿಗೆ ಮಕ್ಕಳ ಜಗಲಿಯ ಶುಭ ಹಾರೈಕೆಗಳು. SHRIRAKSHA S H POOJARY - YouTube channel ಈ ಚಾನೆಲನ್ನು ವೀಕ್ಷಿಸಿ ಪ್ರೋತ್ಸಾಹಿಸುವ ಮೂಲಕ ನಾವೆಲ್ಲರೂ ಪ್ರತಿಭೆಯನ್ನು ಬೆಳೆಸೋಣ.
          
         


Ads on article

Advertise in articles 1

advertising articles 2

Advertise under the article