ಪುಸ್ತಕದೊಳಗಿನ ಲೋಕ - ಕಥೆ
Wednesday, February 17, 2021
Edit
ಮೋಕ್ಷ.ಡಿ. 9 ನೇ ತರಗತಿ.
ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ.
ಸುಳ್ಯ ತಾಲೂಕು
ಪುಸ್ತಕದೊಳಗಿನ ಲೋಕ - ಕಥೆ
ಅಂದು ಭಾನುವಾರ...... ಮಾಡಲು ಏನೂ ಕೆಲಸವಿರಲಿಲ್ಲ. ಮನೆಯ ಹತ್ತಿರವೇ ಇದ್ದ ಪುಸ್ತಕಾಲಯಕ್ಕೆ ಹೋದೆ. ಈ ಪುಸ್ತಕಾಲಯ ಇತರ ಪುಸ್ತಕಾಲಯಗಳಂತೆ ಸಾಧಾರಣವಾಗಿಯೇ ಕಾಣುತ್ತಿತ್ತು. ನಾನು ಯಾವ ಪುಸ್ತಕ ಓದುವುದೆಂದು ಹುಡುಕುತ್ತಾ ಹೋದೆ. ನನಗೆ ತುಂಬಾ ಇಷ್ಟದ ಲೇಖಕಿಯ ಪುಸ್ತಕ ಕಂಡಿತು. ಆದರೆ ಅದು ತುಂಬಾ ಎತ್ತರವಾದ ಶೆಲ್ಫ್ ನಲ್ಲಿ ಇತ್ತು. ಅದನ್ನು ತೆಗೆಯಲು ಪ್ರಯತ್ನಿಸಿದಾಗ, ಅದೆಲ್ಲಿಂದಲೋ ಒಂದು ಪುಸ್ತಕ ನನ್ನ ತಲೆಗೆ ತಾಗಿ ಕೆಳಕ್ಕೆ ಬಿತ್ತು. ಆ ಪುಸ್ತಕ ಬಹಳ ಭಾರವಿತ್ತೇನೋ.... ! ತಲೆಗೆ ಬಿದ್ದ ತಕ್ಷಣ ಒಮ್ಮೆ ತಲೆತಿರುಗಿದಂತಾಯಿತು. ಸುಧಾರಿಸಿಕೊಂಡು ಕೆಳಕ್ಕೆ ಬಿದ್ದ ಪುಸ್ತಕವನ್ನು ನೋಡಿದೆ. ನಾನು ಆ ಪುಸ್ತಕವನ್ನು ನೋಡಿ ಒಂದು ಕ್ಷಣ ದಂಗಾಗಿ ನಿಂತೆ. ಈ ಪುಸ್ತಕ 'ತುಂತುರು ಪುಸ್ತಕ' ದ ಅಳತೆಯದು. ಅದರಲ್ಲಿ ಒಂದು ಇನ್ನೂರು ಪುಟಗಳು ಇರಬಹುದೇನೋ.... ಆದರೆ ಆ ಪುಸ್ತಕ ವಿಭಿನ್ನವಾಗಿತ್ತು. ಯಾವುದೋ ಹಳೆಯ ಕಾಲದ ಪುಸ್ತಕವದು. ಈ ಪುಸ್ತಕವನ್ನು ಕೈಗೆತ್ತಿಕೊಂಡೆ. ಬಹಳ ಹಗುರವಾಗಿರಬಹುದು ಅಂದುಕೊಂಡಿರಾ... ? ಇಲ್ಲ !
ನೋಡಲು ಚಿಕ್ಕದಾಗಿ ಇದ್ದ ಆ ಪುಸ್ತಕ ಎತ್ತಲು ಭಾರವಾಗಿತ್ತು. 'ಅರೇ....! ಇದೆಂತಹಾ ಪುಸ್ತಕ ?' ಎಂದು ಕುತೂಹಲದಿಂದ , ಮೂಲೆಯ ಒಂದು ಬೆಂಚಿನಲ್ಲಿ ಕುಳಿತು ಅದನ್ನು ಓದಲಾರಂಭಿಸಿದೆ.
ಅದರ ಮೊದಲ ಪುಟದ ಒಂದು ಪದ ಓದಿದ್ದೇ ತಡ ಆ ಪುಸ್ತಕ ನನ್ನನ್ನು ಒಳಗೆ ಹೀರಿಕೊಂಡಿತು. ಪುಸ್ತಕದ ಒಳಹೊಕ್ಕ ನಾನು ಧಡ್ಡನೆ ನೆಲಕ್ಕೆ ಬಿದ್ದೆ!. ಆದರೆ ಆಶ್ಚರ್ಯವೇನೆಂದರೆ ನನಗೆ ನೋವಾಗಲಿಲ್ಲ. ನಾನು ಎದ್ದು ನಿಂತೆ. ನಾನು ಎದ್ದು ನಿಂತು ಸುತ್ತ ನೋಡಿದೆ. ಅದು ಹಸುರು ಹಸುರಾದ ಪ್ರದೇಶ. ಆಶ್ಚರ್ಯವಾಯಿತು....! ಅಲ್ಲಿ ಅದೆಷ್ಟೋ ಅಸಂಖ್ಯಾತ ಮರಗಳು....! ಈ ಪ್ರಪಂಚದಿಂದ ಮರೆಯಾಗಿ ಹೋಗಿದ್ದ ಪ್ರಾಣಿ ಪಕ್ಷಿಗಳು , ಗಿಡಮರಗಳೂ ಅಲ್ಲಿದ್ದವು. ನೋಡಿ ಒಂದು ಕ್ಷಣ ಹೆದರಿದೆ. ಆದರೆ ಅವು ಯಾವುವೂ ನನಗೆ ತೊಂದರೆ ಉಂಟು ಮಾಡಲಿಲ್ಲ.
ನಾನು ಮುಂದೆ ನಡೆದು ಹೋದಂತೆ ಒಂದು ದೊಡ್ಡ ಕಟ್ಟಡ ಕಂಡಿತು. ಈ ಕಟ್ಟಡ ಪುಸ್ತಕದ ಆಕಾರದಲ್ಲಿತ್ತು. ಅದರ ಒಳಹೊಕ್ಕೆ. ಅಲ್ಲಿ ಅದೆಷ್ಟೋ ಜನರು. ಆದರೆ ಅವರ್ಯಾರೂ ಸಾಮಾನ್ಯದ ಮನುಷ್ಯರಲ್ಲ. ಅಲ್ಲಿ ಮತ್ಸ್ಯ ಕನ್ನಿಕೆಯರು, ಯಕ್ಷ - ಯಕ್ಷಿಣಿಯರು ಇದ್ದರು. ನಾನು ಮುಂದೆ ಹೋದಾಗ ನನಗೆ ಒಂದು ಸಭಾಂಗಣ ಕಂಡಿತು. ಅಲ್ಲಿ ಒಬ್ಬಳು ಯಕ್ಷಿಣಿ ಇದ್ದಳು. ನನ್ನನ್ನು ನೋಡಿ ನಾನಾರೆಂದು ವಿಚಾರಿಸಿದಳು. ನಾನು... ನಾನಾರೆಂದೂ, ಅಲ್ಲಿಗೆ ಹೇಗೆ ಬಂದೆಯೆಂದೂ ಹೇಳಿದೆ. ಮತ್ತೆ ಇದು ಯಾವ ಪ್ರಪಂಚ ? ಎಂದು ಕೇಳಿದೆ. ಆಗ ಆಕೆ ಅದು ಪುಸ್ತಕಗಳ ಲೋಕವೆಂದು ಹೇಳಿದಳು. ನಾನು ಅವಳೊಂದಿಗೆ ಮಾತಾನಾಡತೊಡಗಿದೆ.
ಮಾತನಾಡುತ್ತಾ ಮುಂದೆ ನಡೆದೆವು. ಅಲ್ಲಿ ಒಂದು ಕೋಣೆಯಿತ್ತು. ಅದಕ್ಕೆ ಅದೆಷ್ಟೋ ಕಿಟಕಿಗಳು. ಆದರೆ ಒಳಗೆ ಕಡುಕತ್ತಲು...! ಯಾವ ಬೆಳಕೂ ಆ ತೆರೆದ ಕಿಟಕಿಗಳ ಮೂಲಕ ಒಳಹೋಗುತ್ತಿರಲಿಲ್ಲ....! ನಾನು ಅದೇನೆಂದು ಕೇಳಿದೆ. ಆಗ ಯಕ್ಷಿಣಿ ಅದು ಕತ್ತಲ ಕೋಣೆ ಎಂದು ಹೇಳಿದಳು. "ಮನುಷ್ಯರು ಈಗ ಓದುವ ಹವ್ಯಾಸವನ್ನು ಮರೆಯುತ್ತಿದ್ದಾರೆ. ಮೊಬೈಲಿಗೆ ಅವಲಂಬಿಸಿದ್ದಾರೆ. ಪುಸ್ತಕಗಳು ಹಲವು ಪ್ರದೇಶಗಳಲ್ಲಿ ಮೂಲೆಗುಂಪಾಗಿದೆ. ಹಾಗೆಂದು ಮೊಬೈಲ್ ನೋಡಬಾರದೆಂದಲ್ಲ. ನೋಡಿ.... ಆದರೆ ಬಳಕೆ ಹಿತಮಿತವಾಗಿರಲಿ... ತಂತ್ರಜ್ಞಾನದ ಎಷ್ಟೋ ಒಳ್ಳೆಯ ರೂಪಗಳಿವೆ. ದೂರದ ಸ್ನೇಹಿತರೊಂದಿಗೆ ಮಾತನಾಡಬಹುದು, ಮನೆಯಲ್ಲೇ ಕುಳಿತು ಮೊಬೈಲ್ನಲ್ಲಿ ಪುಸ್ತಕ ಡೌನ್ ಲೋಡ್ ಮಾಡಬಹುದು. ಆದರೆ, ಯಾಕೋ ಈಗ ಅದರ ಉಪಯೋಗ ಅವಶ್ಯಕತೆಗಿಂತ ಜಾಸ್ತಿಯಾಗಿದೆ. ಅದರ ರೂಪಕವಾಗಿ ಈ ಕೋಣೆ". ಎಂದಳು.
ಅದಾಗಲೇ ಘಂಟೆ ನಾಲ್ಕು ಆಗುತ್ತಾ ಬಂದಿತು. ಆಕೆ ನನ್ನನ್ನು ಮನೆಗೆ ಕಳುಹಿಸಲು ನಿರ್ಧರಿಸಿದಳು. ನನಗೆ ಒಂದು ದ್ವಾರ ತೋರಿಸಿ 'ಈ ಬಾಗಿಲಿನಿಂದ ನಿನ್ನ ಜಗತ್ತಿಗೆ ಹಿಂತಿರುಗಬಹುದು.' ಎಂದಳು. ನನಗೊಂದು ಪುಸ್ತಕಾಕಾರದ ಕೀ ಚೈನ್ ಕೊಟ್ಟಳು. ನಾನು ಆಕೆಗೆ ವಿದಾಯ ಹೇಳಿ ದ್ವಾರದ ಒಳ ನಡೆದೆ.
ಕಣ್ಣು ತೆರೆದಾಗ ನಾನು ಪುಸ್ತಕ ಓದುತ್ತಾ ನಿದ್ದೆ ಹೋಗಿದ್ದೆ ಎಂದು ಗೊತ್ತಾಯಿತು. ಇದೆಲ್ಲ ಕನಸೆಂದು ಭಾವಿಸಿದೆ. ಆದರೆ ಅದು ಕನಸಲ್ಲ ಎಂದು ಗೊತ್ತಾಗಿದ್ದು ನನ್ನ ಕೈಯ್ಯಲ್ಲಿದ್ದ ಕೀಪಂಚ್ ನೋಡಿ. ಈಗ ತಿಳಿಯಿತು.... ಪುಸ್ತಕ ಭಾರವಾಗಿರುವುದು ಅದರ ಪುಟಗಳಿಂದ ಅಥವಾ ಅಳತೆಯಿಂದಲ್ಲ, ಅದು ಭಾರವಾಗುವುದು ಅದರೊಳಗಿನ ಒಳ್ಳೆಯ ವ್ಯಕ್ತಿತ್ವ ರೂಪಿಸಬಲ್ಲ ಶಕ್ತಿಯಿಂದ. ಒಂದು ಪುಸ್ತಕ ಒಬ್ಬನ 'ಬದುಕನ್ನೇ ಬದಲಿಸಬಹುದು'.
.............ಮೋಕ್ಷ.ಡಿ.
9 ನೇ ತರಗತಿ.
ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ.