-->
ಓ ಮುದ್ದು ಮನಸೇ...... 7

ಓ ಮುದ್ದು ಮನಸೇ...... 7

    ಗುರುರಾಜ್ ಇಟಗಿ
    ಆಪ್ತ ಸಮಾಲೋಚಕರು
    ಮಂಗಳೂರು


               ಓ ಮುದ್ದು ಮನಸೇ....! - 7

            ನೀವೂ ಕಲ್ಲುಗಳಾಗಿ, ಆದರೇ...?

         ಗಣಿತ ಟೀಚರ್ ಇವತ್ತು ಸ್ಕೂಲಿಗೆ ಬರ್ದಿದ್ದ್ರೆ ಸಾಕಪ್ಪಾ......!! ಸೈನ್ಸ್ ಟೀಚರ್ ಅಂತು ಯಾವಾಗ್ಲೂ ನನ್ನನ್ನೇ ಟಾರ್ಗೆಟ್ ಮಾಡ್ತಾರೆ...! ಇನ್ನು ಆ ಪೀ ಟಿ ಮಾಸ್ಟ್ರು, ಸರಿಯಾಗಿ ಇನ್ ಶರ್ಟ್ ಮಾಡು, ನಿನ್ನ ಬಿಹೇವಿಯರ್ ಸರಿ ಇಲ್ಲ, ಒಂದೇ ಎರಡೇ! ಅವರ ಕೈಯ್ಯಲ್ಲಿ ಏಟು ತಿನ್ನದ ದಿನಗಳೇ ಇಲ್ಲಾ. ಇವರದ್ದು ಈ ಕಥೆಯಾದರೆ, ಇನ್ನುಳಿದವರದ್ದು? ಹೋಮ್ ವರ್ಕ್ ಕಂಪ್ಲೀಟ್ ಆಗಿಲ್ಲ ನಿಂದು, ಎಗ್ಸಾಮ್ ನಲ್ಲಿ ಯಾಕೋ ಕಡ್ಮೆ ಮಾರ್ಕ್ಸ್ ತೆಗ್ದಿದ್ದೀಯಾ? ಹೀಗೆ ಇದ್ರೆ ನೀನು ಉದ್ಧಾರ ಆದ ಹಾಗೆ. ಅಬ್ಬಬ್ಬಾ! ಈ ಶಾಲೆಯ ಸಹವಾಸವೇ ಬೇಡಾ ಅನ್ನಿಸಿದೆ....!

         ಎಷ್ಟೊಂದು ಹಾಯಾಗಿರತ್ತೆ ಮನೆಯಲ್ಲಿ, ಯಾವ ಒತ್ತಡವೂ ಇಲ್ಲ, ಇದ್ದರೂ ನನ್ನ ಆರ್ಭಟದ ಮುಂದೆ ಅದು ಟುಸ್ಸ್...! ಇನ್ನು ಗೆಳೆಯರೊಂದಿಗೆ ಕ್ರಿಕೇಟ್ ಬ್ಯಾಟ್ ಹಿಡಿದು ಗ್ರೌಂಡಿಗೆ ಕಾಲಿಟ್ಟರೆ, ಅಬ್ಬಾ! ಆಟದ ಮಜವೇ ಬೇರೆ. ಆಯಾ ಕ್ಷಣಗಳನ್ನು ಅಷ್ಟಕ್ಕೇ ಸೀಮಿತಗೊಳಿಸಿ ಅನುಭವಿಸುವ ಮುದ್ದು ಮಕ್ಕಳ ಮನದಾಳದ ತುಡಿತಗಳಿವು...!! ಇಂತಹದ್ದೊಂದು ಚಂಚಲತೆಯು ನಮ್ಮನ್ನು ನಮಗರಿವಿಲ್ಲದೆಯೇ ಕ್ಷಣಿಕ ಸುಖಕ್ಕೋಸ್ಕರ ಭವಿಷ್ಯತ್ತಿನ ಅವಕಾಶಗಳಿಂದ ವಂಚಿತರಾಗುವಂತೆ ಮಾಡಿಬಿಡುತ್ತದೆ. ಚಂಚಲತೆಯ ಗೊಂದಲದಲ್ಲಿ ನೀವೂ ಸಿಲುಕಿದ್ದರೆ, ಭವಿಷ್ಯತ್ತಿನ ಅವಕಾಶಗಳನ್ನು ಬಳಸಿಕೊಂಡು ಬೆಳೆದು ಬೆಳಗಬೇಕೆಂಬ ತುಡಿತ ನಿಮ್ಮಲ್ಲೂ ಇದ್ದರೆ, ನಿಮಗೊಂದು ಸ್ವಾರಸ್ಯಕರವಾದ ಕಥೆ ಹೇಳುತ್ತೇನೆ. ಇದು ಬರಿ ಕಥೆಯಲ್ಲ, ಜೀವನದ ಸತ್ಯ....!

ಆ ಸತ್ಯ ತಿಳಿಯಲು ಆಸಕ್ತಿಯಿದೆಯೇ? ಹಾಗಿದ್ದರೆ ಕೇಳಿ.

      ಒಮ್ಮೆ ಒಬ್ಬ ಶಿಲ್ಪಿ ತನ್ನ ಬಹುದಿನದ ಕನಸಿನ ಆಕಾರಕ್ಕೆ ರೂಪಕೊಡಲು ಸೂಕ್ತ ಕಲ್ಲೊಂದನ್ನು ಹುಡುಕಿಕೊಂಡು ಹೊರಟ. ಹೀಗೆ ಸಾಗುತ್ತಿರುವಾಗ ರಸ್ತೆ ಬದಿಯ ಗಲೀಜು ಜಾಗದಲ್ಲಿ ಬಿದ್ದಿದ್ದ ಕಲ್ಲೊಂದನ್ನು ನೋಡಿದ. ಉತ್ತಮ ಆಕಾರ ಹೊಂದಲು ಇರಬೇಕಾದ ಎಲ್ಲಾ ಗುಣಗಳನ್ನು ಹೊಂದಿದ್ದ ಕಲ್ಲೊಂದು ಗಲೀಜು ಜಾಗದಲ್ಲಿರೋದನ್ನು ನೋಡಿ ಮರುಗಿದ ಮತ್ತು ತಡಮಾಡದೆ ಅದನ್ನು ಅಲ್ಲಿಂದ ಕಿತ್ತು ತನ್ನ ಮನೆಯಂಗಳದ ಶೆಡ್ ನಲ್ಲಿ ತಂದಿಟ್ಟ. ಆ ಕಲ್ಲನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ, ಶುಭ್ರ ಬಟ್ಟೆಯೊಂದರಲ್ಲಿ ಒರೆಸಿ ತನ್ನ ಕೆತ್ತನೆ ಕಾರ್ಯವನ್ನು ಶುರುವಿಟ್ಟುಕೊಂಡ. ಸುತ್ತಿಗೆ ಚಾಣಗಳನ್ನು ಬಳಸಿ ಕಲ್ಲಿನ ಅನವಶ್ಯಕ ಭಾಗಗಳನ್ನು ಬೇರ್ಪಡಿಸುತ್ತಿದ್ದಾಗ.
       ”ಅರೆ! ಇದೇನು ಮಾಡುತ್ತಿದ್ದೀಯಾ? ನನಗೆ ನೋವಾಗುತ್ತಿದೆ. ನಿನಗೆಷ್ಟು ಧೈರ್ಯ, ನನ್ನನ್ನು ಹಿಂಸಿಸುತ್ತಿದ್ದೀಯಾ? ನನಗೆ ನಿನ್ನ ಚಾಣದ ಏಟುಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನನ್ನನ್ನು ನಾನು ಮೊದಲಿದ್ದ ಸ್ಥಳಕ್ಕೆ ಬಿಟ್ಟುಬಿಡು. ಅದೆಷ್ಟು ಹಾಯಾಗಿದ್ದೆ ನಾನಲ್ಲಿ, ಎಷ್ಟೋ ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ, ಯಾವ ಕಷ್ಟಗಳಿಲ್ಲದೆ ಎಂಜಾಯ್ ಮಾಡ್ತಿದ್ದೆ. ಅದೆಲ್ಲಿಂದ ಬಂದ್ಯೋ ನೀನು ಇಲ್ಲಿಗೆ ತಂದು ಕಷ್ಟ ಕೊಡ್ತಿದ್ದೀಯಾ” ಕಲ್ಲು ಶಿಲ್ಪಿಯ ಮೇಲೆ ಸಿಟ್ಟಾಯಿತು.

       ಮರುಮಾತನಾಡದ ಶಿಲ್ಪಿ ಆ ಕಲ್ಲನ್ನು ಅದಿದ್ದ ಗಲೀಜು ಜಾಗಕ್ಕೆ ತಂದಿಟ್ಟ. ಅಬ್ಬಾ! ಅಂತು ಇವನ ಹಿಂಸೆ ತಪ್ಪಿತು. ಇನ್ನು ನಾನು ಕಷ್ಟಗಳಿಂದ ಮುಕ್ತ. ಕಲ್ಲು ನಿರಾಳವಾಯಿತು.

           ಬೇಸರಗೊಳ್ಳದ ಶಿಲ್ಪಿ ಬೇರೊಂದು ಕಲ್ಲನ್ನು ಹುಡುಕುತ್ತಾ ಹೊರಟ. ಸ್ವಲ್ಪವೇ ದೂರದಲ್ಲಿ ಇನ್ನೊಂದು ಕಲ್ಲು ಅಂತಹದ್ದೇ ಗಲೀಜು ಜಾಗದಲ್ಲಿ ಬಿದ್ದಿದ್ದನ್ನು ಕಂಡ. ಅದನ್ನು ತನ್ನ ಮನೆಗೆ ತಂದು ನೀರಿನಿಂದ ತೊಳೆದು, ಬಟ್ಟೆಯಿಂದ ಒರೆಸಿ, ತನ್ನ ಕೆತ್ತನೆ ಕಾರ್ಯ ಶುರುವಿಟ್ಟುಕೊಂಡ. ಚಾಣ ಸುತ್ತಿಗೆಗಳನ್ನು ಬಳಸಿ ಕಲ್ಲಿನ ಬೇಡದ ಭಾಗಗಳನ್ನು ಒಡೆದು ತೆಗೆದ.

         “ಎಷ್ಟೋ ವರ್ಷಗಳಿಂದ ಆ ಗಲೀಜು ಜಾಗದಲ್ಲಿದ್ದೆ ನಾನು. ಕೆಲವರು ಕಸ ತಂದು ನನ್ನ ಮೈಮೇಲೆ ಎಸೆದರು, ಇನ್ನು ಕೆಲವರು ಕ್ಯಾಕರಿಸಿ ಉಗಿದರು. ನನಗೇ ಗೊತ್ತಿರದ, ನನ್ನಲ್ಲಿದ್ದ ಶಕ್ತಿಯನ್ನು, ಗುಣಗಳನ್ನು ಗುರುತಿಸಿದ ಮೊದಲ ವ್ಯಕ್ತಿ ನೀನು. ನಿನ್ನಲ್ಲಿ ನನಗೆ ನಂಬಿಕೆಯಿದೆ. ಯಾವ ಪ್ರಯೋಜನಕ್ಕೂ ಬಾರದೆ ಬಿದ್ದಲ್ಲೇ ಇದ್ದು ಮಣ್ಣಲ್ಲಿ ಮಣ್ಣಾಗಿ ಬೆರೆಯುವುದಕ್ಕಿಂತ ನಿನ್ನಂತವರ ಕೈಯ್ಯಲ್ಲಿ ಕಲ್ಲಾಗಿ ಬದುಕುವುದೇ ಸೂಕ್ತವೆನ್ನಿಸುತ್ತಿದೆ. ನನ್ನ ಮನಸ್ಸು ದೇಹಗಳೆಲ್ಲವನ್ನೂ ನಿನಗೆ ಸಮರ್ಪಿಸಿಕೊಳ್ಳುತ್ತಿದ್ದೇನೆ. ನಿನ್ನ ಕನಸಿನ ರೂಪವಾಗಿ ನಿಲ್ಲುತ್ತೇನೆಂಬ ಸಂಕಲ್ಪ ನನ್ನದಾಗಿದೆ.” ಶಿಲ್ಪಿಯ ಸುತ್ತಿಗೆಯ ಏಟುಗಳಿಗೆ ಮೈಯ್ಯೊಡ್ಡಿತು ಕಲ್ಲು.

        ಶಿಲ್ಪಿಯ ಚತುರತೆ, ಜ್ಞಾನ, ಕಲ್ಲಿನ ಸಹನೆ, ಸಹಕಾರ ಒಂದಾದವು. ಸುತ್ತಿಗೆಯ ಏಟುಗಳು ಕಲ್ಲಿನ ಗಟ್ಟಿ ಮನಸ್ಸನ್ನು ವಿಚಲಿತಗೊಳಿಸಲಿಲ್ಲ, ಚಾಣದ ಹೊಡೆತದ ನೋವುಗಳು ಕಲ್ಲನ್ನು ಮತ್ತಷ್ಟು ಹದಗೊಳಿಸಿದವು. ಗಬ್ಬು ನಾರುವ ಬೀದಿ ಬದಿಯಲ್ಲಿ ಬಿದ್ದಿದ್ದ ಕಲ್ಲು ತನ್ನ ಕಲ್ಮಶಗಳನ್ನೆಲ್ಲಾ ಕಳೆದುಕೊಂಡು, ಆಂತರ್ಯದ ಶಕ್ತಿಯನ್ನು ಮರೆಮಾಚಿದ್ದ ವಿಕಾರ ರೂಪವನ್ನು ಬೇರ್ಪಡಿಸಿಕೊಂಡು ಒಂದು ಸುಂದರ ವಿಗ್ರಹವಾಗಿ ಕಂಗೊಳಿಸಿತು.

          ಇದೇ ವಿಗ್ರಹವನ್ನು ಆಲಯದ ಗರ್ಭಗುಡಿಯಲ್ಲಿ ಇಟ್ಟರು ಭಕ್ತರು. ಹಾಲು, ಜೇನು, ಮೊಸರು ಶುಭ್ರಗೊಂಡಿತು ಕಲ್ಲು. ಬೆಳ್ಳಿ, ಬಂಗಾರ, ವಜ್ರ-ವೈಢೂರ್ಯ, ಫಲ-ಪುಷ್ಪಗಳಿಂದ ಕಂಗೊಳಿಸಿತು. ಚೆಂಡೆ, ತಾಳ-ಮೃದಂಗಗಳು ವಿಜೃಂಭಿಸಿದವು. ವಿವಿಧ ಭಕ್ಷ್ಯಭೋಜನಗಳು ಘಮ ಘಮಿಸಿದವು. ಬಡವ, ಶ್ರೀಮಂತ, ಮೇಲು, ಕೀಳು ಎಲ್ಲರೂ ಶರಣಾದರು ಕಲ್ಲಿಗೆ. ರೂಪಕೊಟ್ಟ ಶಿಲ್ಪಿಗೂ ಕಲ್ಲನ್ನು ಮುಟ್ಟಲು ಅವಕಾಶವಿಲ್ಲ! ಕಲ್ಲಿನ ಕಣ್ಣಂಚಲ್ಲಿ ಧನ್ಯತಾ ಭಾವ, ಶಿಲ್ಪಿಗೆ ಸಾರ್ಥಕ ಅನುಭವ.

ಎಲ್ಲಿದೆ ಮೊದಲನೇ ಕಲ್ಲು.....?

           ನಮ್ಮಲ್ಲೂ ಕೆಲವರಿದ್ದಾರೆ. ಕ್ಷಣಿಕ ಸುಖಕ್ಕಾಗಿ, ತಮ್ಮೊಳಗಿನ ತಮ್ಮತನವನ್ನೇ ಗುರುತಿಸದೆ, ಬರುವ ಸಣ್ಣ ಸಣ್ಣ ಕಷ್ಟಗಳನ್ನೇ ವೈಭವೀಕರಿಸಿ ಹೇಳುತ್ತಾರೆ, ಶಾಲೆ ಸರಿಯಿಲ್ಲ, ಶಿಕ್ಷಕರು ಚೆನ್ನಾಗಿ ಕಲಿಸೋದಿಲ್ಲ, ಊಟ ರುಚಿಯಿಲ್ಲ, ಮನೆಯಲ್ಲಿ ಹಣವಿಲ್ಲ! ಅಂತವರು ಯಾವತ್ತೂ ಕಲ್ಲಾಗಿಯೇ ಉಳಿದುಬಿಡುತ್ತಾರೆ. ಇನ್ನು ಕೆಲವರು ತಾಳ್ಮೆ ಮತ್ತು ಛಲವನ್ನು ಸಮೀಕರಿಸಿ ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಅದೇ ಶಾಲೆ, ಶಿಕ್ಷಕರು, ಊಟ ಮತ್ತು ಮನೆಯನ್ನು ತಮ್ಮಲ್ಲಿರುವ ವಿಕಾರಕ್ಕೊಂದು ಆಕಾರ ಕೊಡಬಲ್ಲ ಸುತ್ತಿಗೆ ಚಾಣಗಳಂತೆ ನೋಡಿ ಸುಂದರ ವಿಗ್ರಹಗಳಾಗಿ ರೂಪುಗೊಳ್ಳುತ್ತಾರೆ. ಹಾಗಿದ್ದರೆ ಮತ್ತೇಕೆ ತಡ? ನೀವೂ ಕಲ್ಲುಗಳಾಗಿ, ಆದರೆ...?


            ..............ಗುರುರಾಜ್ ಇಟಗಿ
                        ಆಪ್ತ ಸಮಾಲೋಚಕರು
                            ಮಂಗಳೂರು

Ads on article

Advertise in articles 1

advertising articles 2

Advertise under the article