ಲಾಕ್ ಡೌನ್ ನ ತುಂಟಾಟ
Sunday, January 31, 2021
Edit
ಸಾನ್ವಿ ಸಿ ಎಸ್ 3 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು
ಲಾಕ್ ಡೌನ್ ನ ತುಂಟಾಟ
ಅಂದು ಲಾಕ್ ಡೌನ್ ಸಮಯ. ಆಗ ನನ್ನ ದೊಡ್ಡಪ್ಪ-ದೊಡ್ಡಮ್ಮ ಹಾಗೂ ನನ್ನ ತಂಗಿ ಧೃತಿ ಬೆಂಗಳೂರಿನಿಂದ ಬಂದಿದ್ದರು. ಧೃತಿ ಬಹಳ ತುಂಟಿ. ನಾವಿಬ್ಬರೂ ಸರಿಸಮ ಒಂದೇ ಪ್ರಾಯದವರು. ಆಗ ನಾವು ಹಲವಾರು ತುಂಟತನಗಳನ್ನು ಮಾಡಿದ್ದೆವು. ಅದರಲ್ಲಿ ಇದೂ ಒಂದು :
ಒಮ್ಮೆ ನಾನು ಮತ್ತು ಧೃತಿ.... ಸ್ಟೋರ್ ರೂಮಿನಲ್ಲಿ ಏನಾದರೂ ತಿನ್ನಲಿಕ್ಕಿದೆಯೇ ಎಂದು ನೋಡಲು ಹೋದೆವು. ಹೀಗೆ ಒಂದೊಂದೇ ಡಬ್ಬವನ್ನು ತೆಗೆದು ನೋಡಿದೆವು. ಹೀಗೆ ಹುಡುಕಿಕೊಂಡಿರುವಾಗ ಒಂದು ಮೂಲೆಯಲ್ಲಿ ತಟ್ಟೆಯಲ್ಲಿದ್ದ ಬರ್ಫಿ ತುಂಡುಗಳನ್ನು ಕಂಡೆವು. ನೋಡಿದ ಕೂಡಲೇ ಧೃತಿ ಒಂದು ಚಿಕ್ಕ ತುಂಡನ್ನು ತಿಂದಳು. ನನಗೂ ಒಂದು ತುಂಡನ್ನು ಕೊಟ್ಟಳು. ನಾವು ಯಾವಾಗಲೂ ಹಂಚಿಕೊಂಡು ತಿನ್ನುತ್ತೇವೆ. ಹಾಗೆ ನಾವಿಬ್ಬರೂ ಬರ್ಫಿ ತುಂಡನ್ನು ತಿಂದೆವು. ಅದು ಒಂದು ತರಾ ಕೆಟ್ಟ ರುಚಿಯ ಅನುಭವವಾಯಿತು. ನಾವು ಅದನ್ನು ಕೂಡಲೇ ಉಗುಳಿದೆವು. ಆ ನಂತರ ನಮಗೆ ಅದು ಬರ್ಫಿಯಲ್ಲ ಎಂದು ಅರ್ಥವಾಯಿತು. ಸ್ವಲ್ಪ ಹೊತ್ತು ಹುಡುಕಿಯಾದ ನಂತರ ನಮಗೆ ಪಿಸ್ತಾ ತಿನ್ನಲು ಸಿಕ್ಕಿತು. ಆದರೂ ಮೊದಲು ತಿಂದದ್ದು ಏನಿರಬಹುದು ಎಂಬ ಕುತೂಹಲ ನಮ್ಮನ್ನು ಕಾಡುತ್ತಿತ್ತು. ನಾವು ಭಯದಿಂದ ಅದೇನೆಂದು ನಮ್ಮ ಅಜ್ಜಿಯನ್ನು ಕೇಳಿದೆವು. ಅಜ್ಜಿ, "ಅದು ಮನೆಯಲ್ಲಿ ತಯಾರಿಸಿದ ಸಾಬೂನು. ನೀವು ಅದನ್ನು ತಿಂದಿರ?" ಎಂದು ಪ್ರಶ್ನಿಸಿದರು. ನಾವು "ತಿಂದೆವು" ಎಂದು ಹೇಳಿದೆವು. ಆ ಮಾತನ್ನು ಕೇಳಿ ಮನೆಯವರೆಲ್ಲ ನಕ್ಕಿದ್ದೇ ನಕ್ಕಿದ್ದು. ಈಗಲೂ ನನ್ನ ಅಪ್ಪ ಹಾಗೂ ದೊಡ್ಡಪ್ಪ ಅದನ್ನು ಹೇಳಿ ಹೇಳಿ ತಮಾಷೆ ಮಾಡುತ್ತಿರುತ್ತಾರೆ.
ಸಾನ್ವಿ ಸಿ ಎಸ್
3 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು