ಹೂವಿನ ಮನಸು - ಕಥೆ
Sunday, January 17, 2021
Edit
ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ. ಸುಳ್ಯ ತಾಲೂಕು.
ಹೂವಿನ ಮನಸು - ಕಥೆ
ಒಂದು ಮುಂಜಾನೆ ಕಣ್ಣು ತೆರೆದಾಗ ಸುತ್ತೆಲ್ಲಾ ಮಂಜು. ಬೆಳಗ್ಗೆ ಸುಮಾರು ಏಳು ಗಂಟೆ ಆಗಿರಬೇಕು. ಸಣ್ಣಗೆ ಚಳಿ ಇತ್ತು... ಓ ಕ್ಷಮಿಸಿ, ನಾನು ಯಾರು ಅಂತ ಹೇಳಿಲ್ಲ ಅಲ್ಲವೇ?... ನಾನು ಗುಲಾಬಿ. ಸುಮಾರು ಹತ್ತು ದಿನದ ಹಿಂದೆ ಪುಷ್ಪ ಎಂಬಾಕೆಯ ಹೂ ತೋಟದಲ್ಲಿ ಇರುವ ಕೆಂಪು ಗುಲಾಬಿ ಗಿಡದಲ್ಲಿ ಸಣ್ಣ ಮೊಗ್ಗಾಗಿ ಹುಟ್ಟಿದೆ.
ಇಂದು ನಾನು ದೊಡ್ಡ ಗುಲಾಬಿಯಾಗಿ ಅರಳಿದ್ದೇನೆ. ನನ್ನ ಹತ್ತು ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ನಾನು ಮೊದಲ ಬಾರಿ ಕಣ್ತೆರೆದು ಈ ಪ್ರಪಂಚವನ್ನು ನೋಡಿದ ದಿನ.... ಅದೇನೋ ಒಂತರ ರೋಮಾಂಚನ....! ತುಂಬಾ ಖುಷಿಯಿಂದ ಹತ್ತು ದಿನಗಳನ್ನು ಕಳೆದಿದ್ದೆ. ಪ್ರತಿದಿನ ಒಂದು ಹೊಸ ಉತ್ಸಾಹ ಇತ್ತು. ನನ್ನ ಈ ಆಲೋಚನೆಗಳ ನಡುವೆ ಯಾರದೋ ಹೆಜ್ಜೆ ಸಪ್ಪಳ ಕೇಳಿಸಿತು. ನೋಡಿದರೆ ಪುಟ್ಟಿಯು ಮುಂದೆ ನಿಂತಿದ್ದಳು. ಅಂದಹಾಗೆ ಪುಟ್ಟಿ , ಪುಷ್ಪಾಳ ಎಂಟು ವರ್ಷದ ಮಗಳು. ನಾನು ಹುಟ್ಟಿದ ದಿನದಿಂದ ಇಂದಿನವರೆಗೂ ಒಂದು ದಿನ ತಪ್ಪದೆ ಬಂದು ಮಾತನಾಡುತ್ತಿದ್ದಳು. ದಿನಾ ಬಂದು " ನೀನು ಬೇಗ ದೊಡ್ಡದಾದ ಸುಂದರವಾದ ಹೂವಾಗಿ ಬೆಳೀಬೇಕು' ಎಂದು ಹೇಳುತ್ತಿದ್ದಳು. ನಾನು 'ಆಯ್ತು' ಎಂಬಂತೆ ಮೆಲ್ಲಗೆ ಅಲ್ಲಾಡುತ್ತಿದ್ದೆ. ಅವಳಿಗೆ ಅದು ಅರ್ಥವಾಗುತ್ತಿತ್ತೊ ಇಲ್ಲವೋ ಗೊತ್ತಿಲ್ಲ. ಆದರೆ ಪ್ರತೀ ದಿನ ಬಂದು ಅಂದು ಏನೆಲ್ಲಾ ನಡೆಯಿತು ಎಂದು ಹೇಳಿಕೊಳ್ಳುತ್ತಿದ್ದಳು. ಅವಳಿಗೆ ಯಾರಾದರೂ ನನ್ನ ಮುಂದೆ ಬೈಯ್ಯುತ್ತಿದ್ದರೆ ನನಗೆ ಸಹಿಸಲಾರದ ಕೋಪ ಬರುವುದು, ಅವಳಿಗೆ ಬೇಜಾರಾದರೆ ನನಗೆ ಅಳು ಬರುವುದು , ಹೀಗೆ ಆಕೆಯ ಮೇಲೆ ಏಕೋ ಪ್ರೀತಿ..... ಅಕ್ಕರೆ ಜಾಸ್ತಿ...!.ಇಂದು ಆಕೆ ನನ್ನನ್ನು ನೋಡಿ " ಅಮ್ಮ ನೋಡು ನನ್ನ ಹೂ ಎಷ್ಟು ಚೆನ್ನಾಗಿ ಬೆಳೆದಿದೆ" ಎಂದಳು. ಮತ್ತೆ ನನ್ನತ್ತ ತಿರುಗಿ " ನಾಳೆ ಇನ್ನು ದೊಡ್ಡವಳಾಗಬೇಕು ನೀನು ಪ್ಲೀಸ್" ಎಂದು ಮನೆಗೆ ಓಡಿದಳು. ಇಂದಿನ ದಿನ ಹಾಗೆ ಜಾರಿ ರಾತ್ರಿಯಾಯಿತು.
ಮುಗಿಲ ಮೇಲೆ ಅದೆಷ್ಟೋ ಚಿಕ್ಕ ಚಿಕ್ಕ ನಕ್ಷತ್ರ. ಅದರ ನಡುವೆ ಕಣ್ಸೆಳೆವ ಚಂದ್ರ. ಆದರೆ ಅದೆಲ್ಲಿಂದಲೋ ಮೋಡ ಆವರಿಸಿತು. ಜೋರಾಗಿ ಗಾಳಿ ಬೀಸತೊಡಗಿತು. ಅದೊಂದು ಅಕಾಲಿಕ ಮಳೆ. ಅಷ್ಟೂ ಹೊತ್ತು ಇದ್ದ ಹಿತವಾದ ವಾತಾವರಣ ಕ್ಷಣದಲ್ಲೆ ಮಾಯವಾಯಿತು. ಆ ಜೋರಾದ ಗಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ, ಕೊನೆಗೆ ತಪ್ಪಿಸಿಕೊಳ್ಳಲಾಗದಿದ್ದರೆ ಏನಂತೆ ಅಲ್ಲೇ ಗಟ್ಟಿಯಾಗಿ ನಿಲ್ಲೋಣ ಎಂದು ನಿರ್ಧರಿಸಿದೆ. ಆದರೆ ನನ್ನ ಹಿಂದೆಯೇ ಸ್ವಲ್ಪ ದೂರದಲ್ಲಿ ಬೆಳೆದು ನಿಂತಿದ್ದ ಮರವೊಂದು ಗಾಳಿಯ ರಭಸ ತಾಳಲಾರದೆ ನನ್ನ ಮೇಲೆ ಬಿತ್ತು. ನನ್ನನ್ನು ಅದರ ಒಂದು ರೆಂಬೆಯ ಕೆಳಗೆ ಅಪ್ಪಚ್ಚಿ ಮಾಡಿತು.ನನಗೆ ತಾಳಲಾರದ ನೋವಾಯಿತು. ಉಸಿರುಗಟ್ಟಿತ್ತು. ಶಕ್ತಿ ಹೀನಳಾಗಿದ್ದೆ. ನಾನು.. ನಾನು ಸಾಯುತ್ತಿದ್ದೆ. ನನಗೆ ಅದು ಗೊತ್ತಿತ್ತು. ಆದರೆ ಒಂದು ಬಾರಿ ಪುಟ್ಟಿಯನ್ನು ನೋಡುವ ಆಸೆ. ಅದಕ್ಕೆ ಗಟ್ಟಿಯಾಗಿ ಇರಬೇಕು ಎಂದು ನಿರ್ಧರಿಸಿದೆ. ಬೆಳಗಾಗುವಾಗ ಮಳೆ ನಿಂತಿತ್ತು. ವಾತಾವರಣ ಸರಿಯಾಯಿತು. ಪುಟ್ಟಿ ಮತ್ತು ಆಕೆಯ ಅಪ್ಪ, ಅಮ್ಮ ನನ್ನತ್ತ ಬರುವುದು ಕಂಡಿತು. ಪುಟ್ಟಿ ನನ್ನತ್ತ ಓಡಿ ಬಂದಳು. ನನ್ನ ಸ್ಥಿತಿ ನೋಡಿ ಅಳತೊಡಗಿದಳು. ಆಕೆ ಅಳುವುದನ್ನು ನೋಡಿ ನೋವಾಯಿತು. 'ಅಳಬೇಡ ಮತ್ತೆ ನಿನ್ನ ತೋಟದಲ್ಲಿ ಹುಟ್ಟಿ ಬರುವೆ " ಎನ್ನಬೇಕು ಅನಿಸಿತು. ಆದರೆ ಅವಳಿಗೆ ಹೇಳಲು ಸಾಧ್ಯವಾಗಲಿಲ್ಲ... ಕಣ್ಣೆದುರು ಕತ್ತಲು ಆವರಿಸಿತು.....!
ಮೋಕ್ಷ .ಡಿ.
ಒಂಬತ್ತನೇ ತರಗತಿ
ಜ್ಞಾನ ಗಂಗಾ ಸೆಂಟ್ರಲ್
ಸ್ಕೂಲ್ ಬೆಳ್ಳಾರೆ. ಸುಳ್ಯ
ತಾಲೂಕು.