ಆದಿಯ ಚಿತ್ರ ಪತ್ರ - 47
Thursday, January 21, 2021
Edit
ಆದಿ ಸ್ವರೂಪ
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
ಆದಿಯ ಚಿತ್ರ ಪತ್ರ - 47
ಆದಿಯ ಚಿತ್ರ ಪತ್ರ - 47
ನಿಮ್ಮ ಮುಖದ ರೇಟು ಎಷ್ಟು.?
ನನ್ನ ಮಗನಿಗೆ ಸೀಟು ಸಿಕ್ಕಿತು.
ಬನ್ನಿ ಎಲ್ಲರೂ ಸ್ವೀಟ್ ತಗೊಳ್ಳಿ.
ಬೆಂಗಳೂರು ನಗರದ ಒಂದು ಮುಖ್ಯ ಮಠ. ಆ ಮಠದ ದೊಡ್ಡ ಸ್ವಾಮೀಜಿಯೊಬ್ಬರ PA ಅಂದರೆ ಅವರ ಶಿಷ್ಯ ಹರ್ಷ. ಹರ್ಷರು ಹರ್ಷ ದಿಂದಲೇ ಅಲ್ಲೇ ಇದ್ದ ಅಪ್ಪನಿಗೆ ಮತ್ತು ನಮಗೆಲ್ಲರಿಗೂ ಸ್ವೀಟ್ ಹಂಚಿದರು.
ಅಬ್ಬಾ..!!. ಮಗನಿಗೆ ಸೀಟು ಸಿಕ್ಕಿದ ಹರ್ಷ ಹೇಳತೀರದ ಹರುಷ. ನೋಡಿ ಸಾರ್.. ಇದು ಆ ಶಾಲೆಯ ಬ್ರೋಷರ್. ಎಷ್ಟು ಚೆನ್ನಾಗಿದೆ ನೋಡಿ ಸಾರ್. ಮೂವತ್ತು ಬಸ್ಸು ಇದೆ. ನಲವತ್ತು ಅಡಿ ಎತ್ತರದ ಕಟ್ಟಡ ಇದೆ. ಅಲ್ಲಿ ಕುದುರೆಗಳಿವೆ, ಕತ್ತೆಗಳಿವೆ ಸಾರ್ ಅಂದ್ರು.
ಮಗನಿಗೆ ಎಷ್ಟು ಸಾರ್ ಡೋನೇಷನ್ ಅಂತ ಅಪ್ಪ ಕೇಳಿದ್ರು. ಏನಿಲ್ಲ ಸಾರ್ ಕಡಿಮೆಗೆ ಆಯ್ತು. ಸ್ವಾಮೀಜಿಯವರ ಮತ್ತು ಅವರ ಭಕ್ತ ಮಂತ್ರಿಗಳ ಬಹಳ ದೊಡ್ಡ ಇನ್ ಫ್ಲೋಯನ್ಸ್ ಇದ್ದ ಕಾರಣ ರೂಪಾಯಿ ಮೂರು ಲಕ್ಷಕ್ಕೆ ಆಯ್ತು ಸಾರ್. ಇಲ್ಲಾಂದ್ರೆ 5 ಲಕ್ಷ ತಗೊಳ್ತಾರೆ ಸಾರ್ !. ತುಂಬಾ ಸಂತೋಷ. ಮಗನನ್ನು ಯಾವ ಕಾಲೇಜ್, ಯಾವ ಡಿಗ್ರಿ ಗೆ ಸೇರಿಸಿದ್ರಿ. ಛೆ.. ಛೇ..ಡಿಗ್ರಿಗೆ ಅಲ್ಲಾ ಸಾರ್.. LKG ಗೆ ಸಾರ್. ಹಾ..ಎಲ್ ಕೆ. ಜಿ ಗಾ..!!. ಅಲ್ಲಿದ್ದ ಕೆಲವರ ಧ್ವನಿ ಒಟ್ಟು ಸೇರಿ ಕೇಳಿತು....
ಎಲ್ ಕೆ ಜಿ ಗಾ...!!
ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಮಾತ್ರ ಕ್ಲಾಸ್ ಇರೋದು ಸಾರ್. ಇಲ್ಲಿ ಹರ್ಷ ರಂತಹವರಿಗೆ ಮಕ್ಕಳು ಹೇಗೆ ಕಲೀತಾರೆ ಅನ್ನೋದಕ್ಕಿಂತ, ಎಲ್ಲಿ ಕಲೀತಾರೆ ಅನ್ನೋದು ಅಲ್ಲಿ ಇಲ್ಲಿ ಹೇಳೋದಕ್ಕೆ ಮುಖ್ಯವಾಗಿ ಬೇಕಿತ್ತು.
ಚೆನ್ನಾಗಿದೆ..........
ಹರ್ಷರೆ , ನೀವು ಅದೃಷ್ಟವಂತರು. ಕ್ಲಾಸ್ ರೂಮ್, ಫರ್ನಿಚರ್, ಗೋಡೆ ಚಿತ್ರ, ಎತ್ತರದ ಕಾಂಪೌಂಡ್, ಹೊರಗಿನ ಭದ್ರ ಗೇಟು, ಪೋಸ್ಟರ್, ರ್ಯಂಕ್ ಬ್ಯಾನರ್ ಎಲ್ಲವೂ ಬ್ರೋಚರಲ್ಲಿ ಚೆನ್ನಾಗಿದೆ.
ಹರ್ಷ ಸಾರ್ , ಒಂದು ಮಾತು.... ನಿಮ್ಮಲ್ಲಿ ಕೇಳಿದೆ ಅಂತ ಬೇಜಾರು ಮಾಡ್ಬೇಡಿ.
ಮೂರು ಲಕ್ಷ ಫೀಸು ಕೊಟ್ಟ ನೀವು, ನಿಮ್ಮ ಮಗುವಿಗೆ ಆ ಶಾಲೆಯ ಸ್ಟಾಫ್ ರೂಮ್ ತೋರಿಸಿದ್ರಾ ಸಾರ್. (ಸ್ಟಾಫ್ ರೂಮಲ್ಲಿರುವವರ ಕಲಿಕೆ STOP ಆಗಿ ಎಷ್ಟೋ ವರ್ಷ ಆಗಿರ್ತದೆ.) ಇಲ್ವಲ್ಲಾ..!!.
ಅಯ್ಯೋ.. ದೇವರೇ.. ಮೊದಲು ನಿಮ್ಮ ಮಗುವಿಗೆ ಆ ಬ್ರಹತ್ ಕಟ್ಟಡದೊಳಗಿರುವ ಟೀಚರ್ಸ್ ಗಳ ಮುಖ ತೋರಿಸಿ. ನಿಮ್ಮ ಮಗು ಆ ಸ್ಕೂಲ್ ಬೇಕಾ ಬೇಡ್ವಾ ಅಂತ ತಕ್ಷಣ ನಿರ್ಧಾರ ಮಾಡ್ತದೆ. ಆ ಶಿಕ್ಷಕರ ಮುಖದ ರೇಟು ಎಷ್ಟಿದೆ ನೋಡಿ ಸಾರ್... ಕ್ಷಮಿಸಿ ಅವರ ಮುಖದ ಮೇಕಪ್ಪಿದಲ್ಲ......
ನೀವು ಮೂರು ಲಕ್ಷ ರೂಪಾಯಿ ಕೊಟ್ಟದ್ದು ಆ ಕಟ್ಟಡಕ್ಕಲ್ವಾ ಹರ್ಷ ಸಾರ್. ಪಾಪ ಖುಷಿ ತುಂಬಿದ್ದ ಹರ್ಷರ ಮುಖ ಒಮ್ಮೆಗೆ ತಣ್ಣಗಾಯಿತು.
ಶಿಕ್ಷಕರ ನಗುಮುಖದ ಸ್ವಾಗತ, ನಿತ್ಯದ ಸಂಭ್ರಮಕ್ಕೆ ಮತ್ತು ಮಕ್ಕಳಲ್ಲಿ ಹುಟ್ಟಿಕೊಳ್ಳಲಿರುವ ಪ್ರಶ್ನೆಗಳನ್ನು ಕೇಳಿಕೊಳ್ಳುವ ಧೈರ್ಯಕ್ಕೆ ಪ್ರಥಮ ಆಹ್ವಾನ ಕೇಂದ್ರವೇ ಮುಖ. ಮಗು ಮನಸ್ಸು, ಸುಂದರ ಭಾವನೆಗಳ ಮುಖಗಳನ್ನು ಕಂಡ ತಕ್ಷಣ ಎಲ್ಲವನ್ನೂ ಮುಗ್ದವಾಗಿ ಒಪ್ಪಿಕೊಳ್ಳುತ್ತದೆ. ಸುಳ್ಳಿನ ಭಯದ ಲೋಕದೊಳಗೆ ಅಡಗುತ್ತಿರುವ ಮಕ್ಕಳು ಮೊದಲು ಇಲ್ಲೇ ತೆರೆದುಕೊಳ್ಳಬೇಕಾಗಿರೋದು.
ಶಿಕ್ಷಕರ ಕೋಣೆ ಮಗುವಿಗೆ - ಮಕ್ಕಳಿಗೆ ಮೊದ್ಲು ತೋರಿಸಿ.. ಅಂತ ಹೇಳಿದ್ದನ್ನು ಪಾಲಿಸಿದ ಅಪ್ಪನ ಕೆಲವು ಪೋಷಕ ಮಿತ್ರರು ಇನ್ನೂ ಅವರ ಮಕ್ಕಳಿಗೆ ಎಂಟು ವರ್ಷ ವಯಸ್ಸಾದರೂ.. ಶಾಲೆ ಆಯ್ಕೆ ಮಾಡಲಾಗದೆ ಉಳಿದಿದ್ದಾರೆ.
ನಿಮ್ಮ ಕಟ್ಟಡದೊಳಗಿರುವ ನಿಮ್ಮ ನಿಮ್ಮ ಮುಖ.. ಹೇಗಿದೆ..?. ಮತ್ತೇ...ರೇಟು...?.
ರೇಟು ಚೆನ್ನಾಗಿದ್ದರೆ ಮನೆ ಮನೆಗೆ.. ಮಕ್ಕಳಿಗೆ ಮಾತ್ರ ಅಲ್ಲಾ.. ಶಾಲೆಗೆ, ಊರಿಗೆ, ರಾಜ್ಯ, ದೇಶ - ದೇಶಗಳಿಗೆ ಜಗತ್ತಿಗೆ ಬೇಕಾಗಿದೆ.
ಇದೇ.. ಸ್ವ -ರೂಪ ಕೊಡಲು ಸಿದ್ದವಾಗಿರುವ ಗೋಪಾಡ್ಕರ್ ಸ್ವರೂಪ ಶಿಕ್ಷಣ..
ಇದು ಅದಲ್ಲಾ......
ಯಾರಿಗೆ ಬೇಕು ಹೇಳಿ...ಬೇಕೇ ಬೇಕು ಅನ್ನುವವರಿಗೆ ಇದು ಸಿಕ್ಕೇ ಸಿಗ್ತದೆ..
ಹಾಗಂತ ಮೂವತ್ತು ವರುಷದಿಂದ ಕಿರಿಚುತ್ತಿರುವ ಅಪ್ಪನ ಜತೆ ಈಗೀಗ ನಾನೂ ಧ್ವನಿಗೂಡಿಸುತ್ತಿದ್ದೇನೆ.
ಮತ್ತೆ..ನೀವು..?.
ಸ್ವ - ರೂಪಕ್ಕೆ ಇನ್ನೂ ಹತ್ತಿರ ಬನ್ನಿ... ಒಳಗೆ ಬನ್ನಿ.
ಜಗತ್ತಿಗೇ ಶ್ರೇಷ್ಠವಾಗಬೇಕಿದ್ದ ಒಂದು ಮಗುವನ್ನಾದರೂ ದೌರ್ಬಲ್ಯಗಳ ಮೂಟೆ ಹೊತ್ತವರಿಂದ.. ಹೊರಿಸುವವರಿಂದ ರಕ್ಷಿಸಬೇಕಾಗಿದೆ.
ಮೊದಲು ತನ್ನ ಗಮನಿಸುತ್ತಾ ತನ್ನ ರೇಟು ಏರಿಸಿ ಕೊಳ್ಳುತ್ತಿರುವಲ್ಲಿ..... ಆದಿ
ಈ ಕೈ ಬರಹದ ಪತ್ರ ಯಾರ ಮಡಿಲಿಗೆ.. ಗೊತ್ತಾ..?
ಕಾರ್ಕಳದ ಸಾಗರ್ ಹೋಟೆಲ್ ಮ್ಯಾನೇಜರ್...ಅಬ್ಬು (ಅಬೂಬಕರ್ ) ಯಾರು ಅಂತ ನಿಮಗೆ ಗೊತ್ತಿರ್ಲಿಲ್ವಾ...? ಅಬ್ಬು ಯಾರಂತ ಸಹಜ ಕೃಷಿ ಯಲ್ಲಿ ಅವರು ಬೆಳೆಸಿದ 115 ಜಾತಿಯ ಭತ್ತಕ್ಕೆ ಗೊತ್ತಿದೇ...!! 115 ಜಾತಿಯ ಭತ್ತದ ಹೆಸರೂ, ಮತ್ತದರ ಪೂರ್ಣ ಚರಿತ್ರೆಯೂ ಅಬ್ಬು ಅವರಿಗೂ ಗೊತ್ತಿದೆ.
ಅಬ್ಬಾ..! ಅಬ್ಬು ಬೆಳೆದ ಪ್ರತಿಯೊಂದು ಆಳೆತ್ತರ ಗಿಡಗಳ ಜತೆಗೆ ಅವರಿಬ್ಬರ ಮಕ್ಕಳು, (ಸರಕಾರಿ ಶಾಲೆಯಲ್ಲಿ ಓದುತ್ತಿರುವ ) ಆ ಮಕ್ಕಳ ಮಹಾತಾಯಿ ಸರಕಾರಿ ಹೈಸ್ಕೂಲ್ ನ ಕ್ರಿಯಾಶೀಲ ಶಿಕ್ಷಕಿ ಅಸ್ಮಾ- ಅಪ್ಪಿಕೊಂಡು ಮಾತನಾಡಿದ್ದಾರೆ. ಆ 115 ಜಾತಿಯ ಭತ್ತದ ಅಕ್ಕಿ ಅನ್ನವಾಗಿ ತಿಂದಾಗ ಅವರಿಗೆ ಅದೆಂತಹ ರುಚಿಯಂತೆ. ಆ ಮಕ್ಕಳಿಗೆ ಅಕ್ಕಿಯ ರೇಟು ಮಾತ್ರ ಅಲ್ಲಾ ನೂರಾರು ಭತ್ತದ ರೇಟೂ ಗೊತ್ತಿದೆ.!
ಪಾಪ.. ಭತ್ತ ಬೆಳೆಯುವುದು ಮರದಲ್ಲಾ...... ನೆಲದಲ್ಲಾ....... ಅಂತಾ ಕೇಳುವ ಲಕ್ಷ ಫೀಸು ಕಟ್ಟಿ ಕಳುಹಿಸಿಕೊಟ್ಟ ಪೋಷಕರ ಅಂಗಡಿ ಶಾಲೆಯ ಮಕ್ಕಳದ್ದೇನೂ ತಪ್ಪಿಲ್ಲ....!?
ಆದಿ ಸ್ವರೂಪ
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು