ಆದಿಯ ಚಿತ್ರ ಪತ್ರ - 41
Tuesday, January 12, 2021
Edit
ಆದಿ ಸ್ವರೂಪ
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
ಆದಿಯ ಚಿತ್ರ ಪತ್ರ - 41
ಆದಿಯ ಚಿತ್ರ ಪತ್ರ - 41
ಬೈತಾರೆ... ಅವರು ನನ್ನನ್ನೇ ನೋಡ್ತಾರೆ...!
ಅಲ್ಲಿದ್ದಾಳೆ ನೋಡಿ.. ಅದೇನು ಮಾಡುತ್ತೀರೋ ಮಾಡಿ. ಒಂದು ವರ್ಷ ಆಗ್ತಾ ಬಂತು. ಆರು ಸೈಕಾಲಜಿಸ್ಟ್, ಸೈಕೋತೆರಪಿಸ್ಟ್ ಗಳು ಅವಳನ್ನು ನೋಡಿ ಆಯ್ತು. ನೀವೇನು ಮಾಡುತ್ತೀರೋ ಮಾಡಿ.. ಅವರಿಂದ ಯಾರಿಂದಲೂ ಆಗಿಲ್ಲ. ಅಲ್ಲಿದ್ದಾಳೆ ನೋಡಿ ಅಂತ ತಿರಸ್ಕಾರ ಭಾವನೆಯಿಂದ ಆ ಕಡೆಯ ಕೋಣೆ ತೋರಿಸಿದ್ದು ಅವಳ ತಾಯಿ.
ತಂದೆ ಇಷ್ಟೂ ಹೇಳಲಿಲ್ಲ. ಯಾರಿಂದಲೂ ಆಗುವುದಿಲ್ಲ. ಏನೇನೋ ನಾಟಕ ಮಾಡುತ್ತಾಳೆ.. ಗೊತ್ತಾಗುತ್ತಿಲ್ಲ. ಹೊಡೆದು ಬಡಿದು, ಎಲ್ಲಾ ಬಗೆಯ ಶಿಕ್ಷೆ ಕೊಟ್ಟು ನೋಡಿಯೂ ಆಗಿದೆ. ಬಾಯಿಬಿಡಲ್ಲ. ಸಾಧ್ಯವಾದರೆ ಮಾತನಾಡಿಸಿ.. ನಮಗೆ ಸಾಕಾಯಿತು. ಸೈಕಾಲಜಿಸ್ಟ್.. ಡಾಕ್ಟರ್ ಗಳು.. ಅದೇನು ಅವರು ಹೇಳಿದ್ದೆಲ್ಲ ಮಾಡಿಯೂ ಆಗಿದೆ. ಶಾಲೆಗೆ ಹೋಗುವುದು ವೇಸ್ಟ್. ಹಾಗೆ ಹೀಗೆ ಅಂತ ಹೇಳ್ತಾ , ಅಧಿಕಾರಿ ಕಾರಿನಲ್ಲಿ ಹೊರಟು ಹೋದರು. ಸಮಸ್ಯೆ ಈ ಮನೆಯೊಳಗೇ ಇದೆ ಅಂತ ನಿಮಗೆ ಗೊತ್ತಾಗಿರಬೇಕು ಅಲ್ವೇ..?
ಲೇಬರ್ ಡಿಸಿ ಹುದ್ದೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಅಧಿಕಾರಿ.. ಮತ್ತೆ ಬರ್ತೀನಿ ನೀವು ಅದೇನು ಮಾಡುತ್ತೀರೋ ಮಾಡಿ ಅಂತ ಹೇಳಿ.. ಯಾರಿಂದಲೂ ಆಗಿಲ್ಲ... ನೀವೇನು ಮಾಡುತ್ತೀರೋ... ಮಾಡಿ.. ಅಂತ ತಾತ್ಸಾರ ಭಾವನೆಯಿಂದಲೇ ನನ್ನ ಕೈಗೆ ಕೊಟ್ಟ ಕೇಸು ಇದು.
ಆ ಹುಡುಗಿಯನ್ನು ಏನು .. ಹೇಗೆ ಮಾತನಾಡಿಸಿದರೂ...ಏನೂ ಉತ್ತರ ಕೊಡುವುದಿಲ್ಲ. ಬಾಯಿ ಬಿಡುವುದಿಲ್ಲ.. ಅಂತ ಎಚ್ಚರಿಕೆ ಮೊದಲೇ ಕೊಟ್ಟಿದ್ದಾರೆ !. ನೀವೇನು ಮಾಡುತ್ತೀರೋ ಮಾಡಿ.. ನಂಗೆ ಸಾಕಾಯ್ತು.. ಅಂತ ಅಂದದ್ದು ಅವಳ ಬಗ್ಗೆ ರೋಸಿ ಹೋದ ತಾಯಿ.
ಪ್ರಿಯಾ ಆರನೇ ತರಗತಿ ವಿದ್ಯಾರ್ಥಿನಿ. ಕಲಿಕೆಯಲ್ಲಿ ಹುಷಾರಿದ್ದು. ಚುರುಕಿನ ಮಾತುಗಾರ್ತಿ. ಈಗೀಗ ಅವಳಿಗೆ ಮೌನದ ಹಠವೇ ಸುಖ. ಅದನ್ನು ಜಾಗ್ರತೆಯಿಂದ ಸಾಕುತ್ತಿದ್ದಾಳೆ. ಈ ವರ್ಷ ಶಾಲೆ ಆರಂಭವಾದಾಗಿನಿಂದಲೇ ಈ ಸಮಸ್ಯೆ ಆರಂಭವಾಗಿದೆ. ಹೋದಲ್ಲಿ ಅಲ್ಲೇ ತಲೆ ತಿರುಗಿ ಬೀಳುತ್ತಾಳೆ. ಮತ್ತೆ ಶಾಲೆಯಿಂದ ಟೀಚರ್ಸ್ ತಂದುಬಿಡುತ್ತಾರೆ. ಎಲ್ಲಾ ಡಾಕ್ಟರ್ ಗಳ ಸಲಹೆ, ಚಿಕಿತ್ಸೆ ಎಲ್ಲಾ ಮುಗೀತು. ಆರು ತಿಂಗಳಿಂದ ಸರಿಯಾಗಿ ಶಾಲೆಗೆ ಹೋಗಲಿಕ್ಕೆ ಆಗಲಿಲ್ಲ. ಈ ಸಮಸ್ಯೆ ಯಾರ ಕೈಯಲ್ಲಿ ಇದೆ ಅಂತ ನಿಮಗೂ ಗೊತ್ತಾಗಿರಬಹುದು. ಈ ಮಾತನ್ನು ಓದುವವರಿಗೆ ಕೇಳಿದ್ದೇನೆ.. ಹೇಳಿದ್ದೇನೆ. ಯಾರದೋ ತಪ್ಪಿಗೆ ಅಡಗಿದ ಮುಗ್ದ ಮಗುವಿನ ಮೌನದ ಕೋಟೆಗೆ ಇದೀಗ ನನ್ನ ಪ್ರವೇಶ.
ಬಾಗಿಲು ಸರಿಸಿ ಒಳಗೆ ಹೋದೆ. ತಲೆ ಕೆಳಗೆ ಹಾಕಿಕೊಂಡು ಕುರ್ಚಿಯಲ್ಲಿ ಕುಳಿತಿದ್ದಾಳೆ. ಬದಿಯಲ್ಲಿದ್ದ ಪ್ಲಾಸ್ಟಿಕ್ ಚೆಯರ್ ತೆಗೆದುಕೊಂಡು ಹೋಗಿ ಅವಳ ಹತ್ತಿರ ಕುಳಿತೆ. ಸ್ವಲ್ಪ ಹೊತ್ತು ಮೌನ ಇದ್ದೆ. ತಲೆ ಮೇಲೆ ಎತ್ತಲಿಲ್ಲ. ನನಗೆ ನಿನ್ನ ಕಂಡರೆ ಭಯ ಆಗುತ್ತದೆ ಅಂದೆ. ತಲೆ ಮೇಲೆತ್ತಿ ಯಾಕೆ ಅಂದಳು. ನೀನು ಮಾತೇ ಆಡುವುದಿಲ್ಲ ಅಂದಿದ್ರು. ( ನಾನು ಬಚಾವಾದೆ ಮಾತು ಆರಂಭಿಸಿಬಿಟ್ಟಳು) ನನಗೆ ಭಯ ಆಗುವವರನ್ನು ಕಂಡರೆ ಇಷ್ಟ ಅಂದೆ. ಯಾಕೆ..?. ನಗಾಡಿದ್ಲು. ಮತ್ತೆ.. ಡಾಕ್ಟರ್ ಹೇಳಿದ್ದು.. ಭಯ ಪಡ್ಬಾರದೆಂದು.. ಯಾರು ಹೇಳಿದ್ದು ಪ್ರಿಯಾ... ಶಂಕರ್ ಡಾಕ್ಟರ್, ಮಾದೇವ ಡಾಕ್ಟರ್.. ಹಾಗಲ್ಲ ಪ್ರಿಯಾ.. ನೀನು ಭಯ ಪಡಲೇಬೇಕು.. ಗಮ್ಮತ್ತಾಗ್ತದೆ. ಹ್ಹ ಹ್ಹ.. ನಿಮ್ಮ ಮಾತು ಕೇಳುವುದಕ್ಕೆ ಗಮ್ಮತ್ತ್ ಆಗುತ್ತಿದೆ. ಪ್ರಿಯ.. ನಿನ್ನಲ್ಲಿ ಮಾತನಾಡುವುದಕ್ಕೆ ಖುಷಿಯಾಗುತ್ತದೆ.
ನಿನಗೆ ಸ್ಕೂಲಲ್ಲಿ ಭಯ ಆಗುತ್ತದೆ ಅಲ್ವಾ..! ನನಗೆ ಭಯಪಡುವವರನ್ನು ಕಂಡರೆ ಇಷ್ಟ. ಭಯ ಆದಾಗ ಏನೇನು ಆಗುತ್ತದೆ..? ಪ್ರಿಯಾಳಿಂದ ನನ್ನ ಪ್ರಶ್ನೆಗಳಿಗೆ ಉತ್ತರಕ್ಕೆ ಕಾಯದೆ ನಾನೇ ತಕ್ಷಣ ಪ್ರಶ್ನೆ ಹಾಕುತ್ತಾ ಹೋದೆ. ಭಯ ಆದಾಗ ಏನೇನು ಆಗುತ್ತದೆ..? ಮೈ ನಡುಗುತ್ತದಾ.. ? ಹೌದು.. ನಿಮಗೆ ಹೇಗೆ ಗೊತ್ತಾಯ್ತು ಅಂಕಲ್.. ಸುಮ್ಮನೆ ಕೇಳಿದೆ. ಆಮೇಲೇನಾಗುತ್ತದೆ. ಕತ್ತಲೆ ಆದ ಹಾಗೆ ಆಗಿ ತಲೆತಿರುಗಿ ಬೀಳುತ್ತೇನೆ. ಬಿದ್ದ ಮೇಲೆ.. ನನಗೇನು ಗೊತ್ತಾಗುವುದಿಲ್ಲ. ಮನೆಯಲ್ಲಿ ಎಚ್ಚರವಾದಾಗ ಬೆಡ್ ಅಲ್ಲಿ ಇರ್ತೇನೆ.
ಖುಷಿ ಆಗ್ತಾ ಇದೆ ಪ್ರಿಯಾ.. ನೀನು ಚಂದ ಮಾತನಾಡುತ್ತಿ. ಅಂಕಲ್ ನೀವು ಡಾಕ್ಟರಾ ..? ಅಲ್ಲಪ್ಪ. ನಾನು ಪಾಪದ ಮೇಷ್ಟ್ರು. ಯಾರು ಹೇಳಿದ್ದು ನಿಮ್ಮನ್ನು ಪಾಪ ಅಂತ.. ಮಕ್ಕಳು.. ಅಲ್ವಾ ಮತ್ತೆ.. ಹೌದೌದು.. ಪಾಪ ಇದ್ದೀರಿ. ಮೊದಲು ನಿಮ್ಮ ಮುಖ ನೋಡುವುದಕ್ಕೆ ಭಯ ಆಯಿತು. ನಿಮ್ಮ ಧ್ವನಿ ಕೇಳಿದಾಗ ಇಷ್ಟ ಆಯ್ತು.. ನನಗೇ ಪ್ರಶ್ನೆ ಹಾಕಲು ಆರಂಭಿಸಿದಳು. ಮುಂದುವರಿದರೆ ಹರಟೆ ಆಗುತ್ತದೆ. ಈಗ ಸದ್ಯ ಬ್ರೇಕ್ ಆಗಬೇಕು.
ಪ್ರಿಯ.. ನಿನಗೆ ಶಾಲೆಯಲ್ಲಿ ಮೊದಲು ಮಕ್ಕಳನ್ನು ಕಂಡರೆ ಭಯನಾ.. ಅಥವಾ ಟೀಚರನ್ನು ಕಂಡರೆ ಭಯವಾ..? ಮೊದಲು ಟೀಚರನ್ನು ಕಂಡರೆ ಕಂಡರೆ ಭಯ ಆಗುತ್ತಿತ್ತು. ಈಗ ಮಕ್ಕಳನ್ನು, ಅಪ್ಪ-ಅಮ್ಮನನ್ನು.. ದೊಡ್ಡ ಸ್ವರದಲ್ಲಿ ಯಾರು ಮಾತನಾಡಿದರು ಭಯ ಆಗ್ತದೆ. ಭಯ ಆದಾಗ ಏನೇನಾಗುತ್ತದೆ ಪ್ರಿಯಾ..? ಮೊದಲು ಮೈ ನಡುಗ್ತದೆ. ಮತ್ತೆ ಬೆವರ್ತದೆ. ಮೈ ನಡುಗುವ ಮೊದಲು ಏನು ಯೋಚಿಸುತ್ತಿ. ಯಾರಿಗೋ ಬೈತಾರಂತ ಕಾಯುತ್ತೇನೆ. ನಿನಗೆ ಬೈದಾಗಲಾ ಅಥವಾ ಬೇರೆಯವರಿಗಾ.. ಮೊದಮೊದಲು ನನಗೆ.. ಮತ್ತೆ ಬೇರೆಯವರಿಗೆ ಬೈದಾಗಲೂ ಮೈಯೆಲ್ಲಾ ಬಿಸಿಯಾಗಿ ನಡುಗಿ.. ಕತ್ತಲೆ ಆದ ಹಾಗೆ ಆಗಿ ತಲೆತಿರುಗಿ ಬೀಳುತ್ತೇನೆ.
ನಿನಗೆ ಹೊಡೆದಿದ್ದಾರ..? ಇಲ್ಲ.. ನನ್ನ ಹತ್ತಿರದವರಿಗೆ.. ಬೇರೆಯವರಿಗೆ.. ಇತ್ತೀಚೆಗೆ ಅಂದ್ರೆ ಆಚೆ ಕ್ಲಾಸಲ್ಲಿ.. ಹೊಡೆಯುವ.. ಬೈಯುವ ಸ್ವರ ಕೇಳಿದರೂ.. ಭಯ ಆಗುತ್ತದೆ. ಮಕ್ಕಳನ್ನು ಕಂಡರೆ ಭಯ ಆಗುತ್ತದಾ... ಹೌದೌದು.. ಅವರು ಏನೇನೋ ಹೇಳುತ್ತಾರೆ. ಏನು ಹೇಳುತ್ತಾರೆ.. ಹೇಳು. ತಲೆ ತಿರುಗಿ ಬೀಳುವವಳು, ಭಯದ ಭೂತ ಬಂದಳು ಅಂತ ಏನೇನೋ ಹೇಳ್ತಾರೆ.. ನನ್ನ ಕಡೆಗೆ ಕೈತೋರಿಸಿ ನಗುತ್ತಾರೆ.
ಪ್ರಿಯ ಖುಷಿ ಆಗ್ತಿದೆ.. ಯಾಕೆ ಅಂಕಲ್..? ಚಂದ ಮಾತನಾಡುತ್ತಿ. (ಪ್ರಿಯಾಳಿಂದ ಸಣ್ಣ ನಗು) ಪ್ರಿಯಾ.. ನಿನಗೆ ಟೀಚರನ್ನು ಕಂಡರೂ ಭಯ ಆಗುತ್ತದೆ ಅಲ್ವಾ? ಒಳ್ಳೆಯದು. ಮತ್ತೆ ಡಾಕ್ಟರ್ ಹೇಳ್ತಾರೆ ಭಯಪಡಬಾರದು ಅಂತ. ಹಾಗಲ್ಲ.. ಅದು ಭಯಪಡಬೇಕು, ಯಾಕೆ ಭಯ ಪಡಲೇಬೇಕು ಅಂತ ತಿಳಿದುಕೊಳ್ಳುವ. ಅಂಕಲ್ ಹೇಳುವುದು ಗಮ್ಮತ್ತಿದೆ. ಪ್ರಿಯ.. ಟೀಚರ್ ಬೈತಾರೆ.. ಹೊಡಿತಾರೆ.. ಅವರಿಗೆ ಬೈಬಾರ್ದು ಅಂತ ಗೊತ್ತಿಲ್ಲ ಅಲ್ವಾ.. ಆ ಕಾಯಿಲೆ ಗುಣ ಆಗಲಿಕ್ಕೆ ನೀನು ಸಹಾಯ ಮಾಡಬಹುದಾ..?ಚೆನ್ನಾಗಿದೆ ಅಂಕಲ್. ಪಾಪ ಅವರ ಕಾಯಿಲೆ ಗುಣ ಆಗಲು ನೀನು ಸಹಾಯ ಮಾಡಬಹುದಾ.. ( ಈ ಸಂದರ್ಭಕ್ಕೆ ಮಾತ್ರ ಕಾಯಿಲೆ ಅಂತ ಪದ ಬಳಕೆ ಮಾಡಿದ್ದೇನೆ) ಹಾಂ.. ಚೆನ್ನಾಗಿದೆ. ಮಾಡುತ್ತೇನೆ.
ಒಳ್ಳೆಯ ಹುಡುಗಿ ನೀನು.. ನಾನೇನು ಮಾಡಲಿ ಹೇಳಿ ಅಂಕಲ್. ಅವರನ್ನು ಕ್ಲಾಸಲ್ಲಿ ಅಥವಾ ಹೊರಗೆ ಎಲ್ಲೇ ಕಂಡಾಗಲೂ ನಗು ಮುಖವೇ ತೋರಿಸಬೇಕು. ಆಮೇಲೆ ದೇವರು ನಿಮ್ಮನ್ನು ಬೇಗನೆ ಆ ಕಾಯಿಲೆಯಿಂದ ಗುಣಪಡಿಸಲೀ.. ಅಂತ ಮನಸಲ್ಲೇ ಹೇಳಬೇಕು. ಅಂಕಲ್ ಅವರಿಗೆ ಬೈಯಲಿಕ್ಕೆ ಬಿಡಬೇಕಾ..? ಹೌದು..! ಒಂದು ದೀರ್ಘ ಉಸಿರು ತೆಗೆದುಕೊಂಡು. ಮಕ್ಕಳು ತಮಾಷೆ ಮಾಡಿದಾಗ.. ಪಾಪ ಅವರಿಗೆ ಹಾಗೆಲ್ಲ ಹೇಳಬಾರದು ಅಂತ ಗೊತ್ತೇ ಇಲ್ಲ. ಯಾರು ಕಲಿಸಲೇ ಇಲ್ಲ ಅಂತ ತಿಳಿದುಕೋ.. ನನ್ನ ಅಪ್ಪ ಯಾವತ್ತೂ ಅಮ್ಮನಿಗೆ ಬೈತಾರೆ.. ಇದಕ್ಕೆ ಏನು ಹೇಳಿಕೊಳ್ಳುತ್ತಿ ಪ್ರಿಯ. ನೀವೇ ಹೇಳಿ ಅಂಕಲ್.. ಬೇಡ ಬೇಡ. ನಿನಗೆ ಗೊತ್ತಿದೆ.!! ನೀನೇ ಹೇಳಬಲ್ಲೆ. ಮಕ್ಕಳ ಮುಂದೆ ಅಮ್ಮನಿಗೆ ಬಯ್ಯಬಾರದು, ಕಿರಿಕಿರಿ ಮಾಡಬಾರದು ಅಂತ ಅಪ್ಪನಿಗೆ ಗೊತ್ತಿಲ್ಲ ಹಾಗಂತ ತಿಳಿದುಕೊಳ್ಳುತ್ತೇನೆ !. ಅಮ್ಮ ಅಪ್ಪನಿಗೆ ಬೈಯ್ಯ ಬಹುದಾ..? ಮಕ್ಕಳ ಮುಂದೆ ಯಾರು ಯಾರಿಗೂ ಬಯ್ಯೋ ಹಾಗಿಲ್ಲ. ಪ್ರಿಯ ಸರಿಯಾಗಿಯೇ ಹೇಳಿದೆ. ಬೇಗ ಅರ್ಥ ಮಾಡಿಕೊಂಡೆ.
ಮಕ್ಕಳ ಮುಂದೆ ಅಪ್ಪ-ಅಮ್ಮ ಜಗಳ ಮಾಡಬಾರದು ಅಂತ ನೀನು ಅವರಿಗೆ ಹೇಗೆ ಹೇಳುತ್ತಿ..? ಮೊದಲು ಅವರಿಬ್ಬರನ್ನು ಪ್ರೀತಿ ಮಾಡಿ ಗೆಲ್ಲುತ್ತೇನೆ. ಆಮೇಲೆ ಯಾವುದು ಸರಿ.. ಯಾವುದು ತಪ್ಪು ಅಂತ ಮಾತನಾಡುತ್ತೇನೆ. ಪ್ರಿಯ ಹೇಳಿದ್ದು ಅವರು ಕೇಳುತ್ತಾರಾ..? ತುಂಬಾ ಪ್ರೀತಿ ಮಾಡುತ್ತೇನೆ.. ಮಕ್ಕಳ ಪ್ರೀತಿಗೆ ಎಂತಹ ಅಪ್ಪ ಅಮ್ಮನೂ ಕರಗುತ್ತಾರೆ..ಕೇಳುತ್ತಾರೆ. ಅಬ್ಬಾ..!. ಏನಾಶ್ಚರ್ಯ.. ಎಲ್ಲಾ ಗೊತ್ತಿದೆ ನಿನಗೆ.
ಮುಂದೇನಾಯ್ತು....?.
ಈ ಪತ್ರ ಧಾರಾವಾಹಿ ಆಗಿದೆ..
ಕೌನ್ಸಿಲಿಂಗ್ ಹೇಗೆ ಪರಿಣಾಮ ಆಗುತ್ತದೆ ನೋಡೋಣ !.
ಇಲ್ಲಿ ನನ್ನ ಅಪ್ಪನ ಅನುಭವಕ್ಕೆ ಸಿಕ್ಕಿದ್ದು.. ಹಾಗೆಯೇ ಬರೆದೆ..
ಚಿತ್ರ ಪತ್ರ - ಎರಡು ದಿನ ವಿಳಂಬವಾಗಿದೆ. ಕ್ಷಮಿಸಿ. ಅಲ್ಲಲ್ಲ.. ಸಹಿಸಿಕೊಳ್ಳಿ. ಅಪ್ಪನ ಮಾತು ಚರ್ಚೆಯಾಗಿ.. ವಿಮರ್ಶೆಯಾಗಿ ಅದು ಪತ್ರವಾಗಲೂ ಕೆಲೊವೊಮ್ಮೆ ಅರ್ಧ ದಿನ.. ಒಂದು ದಿನ ತೆಗೆದುಕೊಳ್ಳುವುದೂ ಇದೆ. ಯಾಕಂದ್ರೆ ನನಗೆ ಅರ್ಥ ಮಾಡಿಸಿ ಬರೆಯುವ ಕಡೆಗೆ ಕರಕೊಂಡು ಹೋಗೋ ದೃಶ್ಯ...!
ಅದೊಂದು ಮನೋ ವಿಶ್ಲೇಷಣೆ. ಬರೆಯುವ ಸಾಮರ್ಥ್ಯ ಮತ್ತು ಮನೋವಿಜ್ಞಾನದ ಕಡೆಗೆ ನನ್ನನ್ನು ಕರಕೊಂಡು ಹೋಗೋದು.. ಅದೇ ಒಂದು ಚಂದದ, ಶಿಕ್ಷಣದ ಧಾರಾವಾಹಿ ಚಿತ್ರ ಆಗಬಹುದು. ನನಗೆ ಸಾಮರ್ಥ್ಯ ಕಾಣಿಸುವ ಮತ್ತು ಕಾಣುವ ಕಡೆಗೆ ನನ್ನನ್ನು ಕರಕೊಂಡು ಹೋಗುವ ದೃಶ್ಯ ವಿಡಿಯೋ ದಾಖಲಾದ್ರೂ ಬಾರೀ ಲಾಭ ಆಗಬಹುದು. ನಾನು ನನ್ನಪ್ಪನನ್ನು.. ಅಮ್ಮನನ್ನು ಈ ಪತ್ರ ಬರೆಯುವ ಮೂಲಕ ಇನ್ನಷ್ಟು ಕಾಣುವ ಒಳ ಕಣ್ಣಿನ ಹೋರಾಟ !. ಇದು ಜಗಳ ಅಲ್ಲ.. ವಾದ / ಸಂವಾದ ಎರಡರ ಮಧ್ಯೆ ಸಿಲುಕಿರುವ ಪತ್ರದ ಪದ.. (ಅದು ನೀವೇ ಹುಡುಕಿಕೊಳ್ಳಿ. ) ಬಿಡುವಿಲ್ಲದೆ ತಡವಾಯ್ತು ಅನ್ನುವುದಕ್ಕಿಂತಲೂ.. ಈ ಬಾರಿಯ ಅಪ್ಪ ಹೇಳಿದ ಕೌನ್ಸಿಲಿಂಗ್ ಕತೆ ಸ್ವಲ್ಪ ಉದ್ದವಿತ್ತು !. ಪದ ಕಟ್ ಮಾಡಿದ್ರೆ ಫಲಿತಾಂಶಕ್ಕೆ ಧಕ್ಕೆಯಾಗಬಹುದು.
ನನ್ನ ಪತ್ರಕ್ಕೆ ಕಾಯುತ್ತಿದ್ದೀರಿ ಅನ್ನೋದು ನಿತ್ಯ ಓದಿದವರಿಂದ ಕೆಲವರಿಂದ ಗೊತ್ತಾಯ್ತು.
ಜಗಲಿಗೆ ಬಿದ್ದ ಪತ್ರವನ್ನು ಹೆಕ್ಕಿ ಜೋಡಿಸಿ ನಿಮಗೆ.. ನಿಮ್ಮ ಬೆರಳಲ್ಲಿ ಕುಟ್ಟಿ ಓದುವ ಚಟ್ಟೆ ಪೆಟ್ಟಿಗೆಗೆ ತಕ್ಷಣ ಜೋಡಿಸಿ ತಲುಪಿಸುವ ಕೈರಂಗಳರಿಗೆ.. ಕೈ ಬರಹ ಅಲ್ಲಲ್ಲ ಒಂದು ಸಣ್ಣಕಡ್ಡಿಯೊಳಗಿಂದ.. ಸರಕಾರ ಸಿದ್ದ ಮಾಡಿಕೊಟ್ಟ ಪೇಪರಿಗೆ ವಾಂತಿ ಮಾಡಿಸಿ ..ಆ ವಾಂತಿ ಹೋಗಿ ಬಿದ್ದ ಕೆಂಪು ಡಬ್ಬಾದಿಂದ ಬಾಚಿ ಹೆಕ್ಕಿದ ಆ ವಿಳಾಸಕ್ಕೆ ತಲುಪಿಸಿದ 39 ಅಂಚೆಯಣ್ಣ ನಿಗೆ ಥ್ಯಾಂಕ್ಸ್.
ಕಾದು ಓದುವ.. ಪತ್ರ ಬೇಕು ಅನ್ನುವ ಬೇಡಿಕೆ ಹೆಚ್ಚು ಇಟ್ಟವರಿಗೆ ಧನ್ಯವಾದಗಳು.
ಇದೀಗ ಒಂದು ಧಾರಾವಾಹಿ ಕೌನ್ಸಿಲಿಂಗ್ ಪತ್ರಗಳು ತಲುಪಲಿದೆ.
ಹಾಗಿದ್ರೆ ಈ ಪತ್ರ ಯಾರಿಗೆ...?.
ನಿರೀಕ್ಷಿಸಿ..
ಹೀಗೊಂದು ಬದಲಾವಣೆಯ... ಆದಿ.
ಆದಿ ಸ್ವರೂಪ
ಮಂಗಳೂರು