-->
ಓ ಮುದ್ದು ಮನಸೇ...! - 4

ಓ ಮುದ್ದು ಮನಸೇ...! - 4

ಗುರುರಾಜ್ ಇಟಗಿ
ಮಕ್ಕಳ ಮನಶಾಸ್ತ್ರಜ್ಞರು , ಮಂಗಳೂರು


                ಓ ಮುದ್ದು ಮನಸೇ...! - 4
         ಮಕ್ಕಳೇ ನಿಮಗೆ ತಾರುಣ್ಯದಲ್ಲಾಗುವ ಕೆಲವು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಅನುಭವ ಹಾಗೂ ಬದಲಾವಣೆಗಳಿಂದಾಗುವ ಸಮಸ್ಯೆಗಳನ್ನು ಇನ್ನೊಬ್ಬರಲ್ಲಿ ಹೇಳಿಕೊಳ್ಳಲು ಮುಜುಗರವೇ? ಹಾಗಿದ್ದರೆ ನಾನಿವತ್ತು ಅಂತಹ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಯಸುತ್ತೇನೆ. ಅರೇ! ಅದೇಕಷ್ಟು ಆತುರ? ಓದಿ ತಿಳಿಯುವಲ್ಲಿ ಇರುವ ಆಸಕ್ತಿಯನ್ನು ಸಮಸ್ಯೆಗಳಿದ್ದಾಗ ಸಮರ್ಪಕರಲ್ಲಿ ಹೇಳಿ ತಿಳಿದುಕೊಳ್ಳುವಂತಾದರೆ ಅದೆಷ್ಟು ಉತ್ತಮ. ಆದರೂ ಪರವಾಗಿಲ್ಲ, ನಿಮ್ಮ ಓದುವ ಆಸಕ್ತಿ ನನ್ನನ್ನೂ ಹುರಿದುಂಬಿಸಿದೆ, ಹಾಗಿದ್ದರೆ ತಡವೇಕೆ? ಇಲ್ಲಿಂದ ಬೇಗನೆ ಕೆಳಗಿನ ಸಾಲಿನತ್ತ ಜಾರಿಕೊಳ್ಳಿ.

                 ಸರಿಸುಮಾರು ಹನ್ನೊಂದರಿಂದ ಹತ್ತೊಂಬತ್ತು ವಯೋಮಾನದವರನ್ನು ಹದಿಹರೆಯದವರು ಎನ್ನುತ್ತಾರೆ. ಮಕ್ಕಳು ತಮ್ಮ ಪ್ರೌಢಾವಸ್ಥೆಯಿಂದ ವಯಸ್ಕರ ಹಂತವನ್ನು ತಲುಪುವವರೆಗಿನ ಈ ವಯಸ್ಸು ವಿಶಿಷ್ಟವೂ ಮತ್ತು ಕ್ಲಿಷ್ಟಕರವಾದ ಕೆಲವು ಬದಲಾವಣೆಗಳೊಂದಿಗೆ ಮಕ್ಕಳನ್ನು ಯುವಕ ಯುವತಿಯರನ್ನಾಗಿ ಬದಲಾಯಿಸುತ್ತದೆ. ಹದಿಹರೆಯವನ್ನು ಆರಂಭಿಕ ಹಂತ, ಮಧ್ಯಮ ಹಂತ ಮತ್ತು ಕೊನೆಯ ಹಂತಗಳಲ್ಲಿ ವಿಂಗಡಿಸಲಾಗುತ್ತದೆ. ಪ್ರತೀ ಹಂತಗಳೂ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಯ ಮೇಲೆ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದು ಅವು ಹಲವರಲ್ಲಿ ಭಿನ್ನ ವಿಭಿನ್ನ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆಯೇ ಹೆಚ್ಚು. ಹಾಗಿದ್ದರೆ ಮೊದಲು ಮಕ್ಕಳಲ್ಲಾಗುವ ಕೆಲವು ದೈಹಿಕ ಮಾನಸಿಕ ಬೆಳವಣಿಗೆಗಳನ್ನು ನೋಡೋಣ.

            ಬಹುಮುಖ್ಯವಾಗಿ ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ಕಂಡುಬರುವ ದೈಹಿಕ ಬದಲಾವಣೆಗಳಲ್ಲಿ ಸೆಕ್ಷುವಲ್ ಹಾರ್ಮೋನುಗಳ ಉತ್ಪತ್ತಿಯು ವಿರುದ್ಧ ಲಿಂಗದೆಡೆಗಿನ ಆಕರ್ಷಣೆಯುನ್ನು ಹೆಚ್ಚಿಸುತ್ತದೆ. ಹೆಣ್ಣುಮಕ್ಕಳಲ್ಲಿ ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಮುಟ್ಟಿನ ಆರಂಭವಾಗುತ್ತದೆ. ಧ್ವನಿಯ ಬದಲಾವಣೆಯೂ ಕೂಡ ತಾರುಣ್ಯದ ಅತ್ಯಂತ ಪ್ರಮುಖ ದೈಹಿಕ ಬದಲಾವಣೆಗಳಲ್ಲೊಂದು. ಇನ್ನು ತಾರುಣ್ಯದಲ್ಲಿ ಮಾನಸಿಕವಾಗಿ ಹಿಂದೆಂದಿಗಿಂತಲೂ ಸ್ವಾವಲಂಬಿಗಳಾಗುವ ಮಕ್ಕಳು ತಮ್ಮ ವರ್ತನೆಯಲ್ಲಿಯೂ ಯಥೇಚ್ಛ ಬದಲಾವಣೆಗಳನ್ನು ಪಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಅದೆಷ್ಟೋ ಮಕ್ಕಳು ತಮ್ಮ ದೇಹ ಮತ್ತು ಮನಸ್ಸಿನಲ್ಲಾಗುತ್ತಿರುವ ಬದಲಾವಣೆಗಳ ಕುರಿತು ಭಯಪಡುತ್ತಾರೆ ಮತ್ತು ಇವುಗಳನ್ನು ಇನ್ನೊಬ್ಬರಲ್ಲಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಕೆಲವೊಮ್ಮೆ ತಮ್ಮಲ್ಲಾಗುತ್ತಿರುವ ಅತೀ ಸೂಕ್ಷ್ಮ ಬದಲಾವಣೆಗಳನ್ನು ಮುಚ್ಚಿಡುವ ಪ್ರಯತ್ನದೊಂದಿಗೆ ಗೆಳೆಯರು, ಪಾಲಕರು ಅಥವಾ ಇನ್ನಾರೊಟ್ಟಿಗೂ ಬೆರೆಯದೆ ತಮ್ಮನ್ನು ತಾವು ಏಕಾಂತದೆಡೆಗೆ ದೂಡಿಕೊಳ್ಳುವುದೂ ಇದೆ. ಇದಕ್ಕೆ ಅವರಲ್ಲಿರುವ ಅತೀಯಾದ ನಾಚಿಕೆತನ, ಕೀಳರಿಮೆ, ಇನ್ನೊಬ್ಬರು ನನ್ನನ್ನು ನೋಡಿ ನಗುತ್ತಾರೆಂಬ ಭಯ ಅಥವಾ ತಮಗೇನಾಗುತ್ತಿದೆ ಎಂದು ಅರಿಯುಲು ಅವರಲ್ಲಿರುವ ಜ್ಞಾನದ ಕೊರತೆಯೇ ಕಾರಣ. ಇನ್ನು ಕೆಲವರು ತಮಗೆ ತೋಚಿದ ಅಸಮರ್ಪಕ ವಿಧಾನಗಳನ್ನು ಬಳಸಿ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾರೆ.
             ತಾರುಣ್ಯದ ಅಸಮರ್ಪಕ ಜೀವನ ಶೈಲಿಯು ಮಕ್ಕಳ ಮನೋದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೈಹಿಕ ಆರೋಗ್ಯದಲ್ಲಿ ಏರುಪೇರು, ಭಾವನಾತ್ಮಕ ಅಸಮತೋಲನ, ಮಾನಸಿಕವಾಗಿ ಒತ್ತಡ, ಖಿನ್ನತೆ, ವರ್ತನೆಯ ಸಮಸ್ಯೆಗಳು, ನಿದ್ರಾಹೀನತೆ ಮೊದಲಾದ ಸಮಸ್ಯೆಗಳು ನೇರವಾಗಿ ಮಕ್ಕಳ ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣವಾಗುತ್ತವೆ. ಈ ವಯಸ್ಸಿನ ಮಕ್ಕಳು ಹೆಚ್ಚಾಗಿ ಗೆಳೆತನದತ್ತ ಆಕರ್ಷಿಸಲ್ಪಡುವುದರಿಂದ ಅವರ ವರ್ತನೆಯ ಮೇಲೆ ಗೆಳೆಯರ ಪ್ರಭಾವವೂ ಯಥೇಚ್ಛವಾಗಿರುತ್ತದೆ. ಹೀಗೆ ಸಿಗುವ ಗೆಳೆಯರು ಉತ್ತಮರಾಗಿದ್ದರೆ ಒಳಿತು ಇಲ್ಲದಿದ್ದರೆ ಯಾರ ಹಿಡಿತಕ್ಕೂ ಸಿಗದೆ ಮಕ್ಕಳು ಅಸಂಬದ್ಧ ನಡವಳಿಕೆಯನ್ನು ಅಳವಡಿಸಿಕೊಂಡು ಒಳ್ಳೆಯದಲ್ಲದ್ದರೆಡೇಗೆ ಹೆಜ್ಜೆ ಇಡುತ್ತಾರೆ.

              ತಾರುಣ್ಯಕ್ಕೆ ಕಾಲಿಡುವ ಮಕ್ಕಳಲ್ಲಿ ಕಂಡುಬರುವ ಮತ್ತೊಂದು ಸಮಸ್ಯೆ ಎಂದರೇ ಅದು ಲೇಝಿನೆಸ್. “ಕೂತಲ್ಲಿಂದ ಏಳೋದಿಲ್ಲ! ಒಂದು ಕಸ ಕಡ್ಡಿಯನ್ನೂ ಇಲ್ಲಿಂದೆತ್ತಿ ಅಲ್ಲಿಡೋದಿಲ್ಲ,” ಅಮ್ಮನ ಸಂಕಟ! ಮುಂಜಾನೆ ಆರು ಗಂಟೆಗೆ ಆರಂಭವಾಗುವ ಅಮ್ಮನ ಸುಪ್ರಭಾತ "ಯಾವಾಗ್ಲೂ ಮಲ್ಕೊಂಡೇ ಇರು, ಏಳ್ಬೇಡಾ, ಓದೋದು ಬರೆಯೋದನ್ನಂತು ಕೇಳೋದೆ ಬೇಡ, ಪಕ್ಕದ ಮನೆ ರಮೇಶನ್ನ ನೋಡು ಎಷ್ಟು ಬೇಗ ಎದ್ದು ಅಮ್ಮಂಗೆ ಕೆಲ್ಸಾ ಮಾಡಿಕೊಡ್ತಾನೆ.’ ಅಮ್ಮ ಅದೆಷ್ಟು ಬೊಬ್ಬೆ ಹೊಡೆದರೂ ಏಳೋದು ಮಾತ್ರ ದೇವರ ಕೋಣೆಯಿಂದ ಅಪ್ಪನ ಘಂಟೆ ಶಬ್ಧ ಕಿವಿಗೆ ಬಿದ್ದ ಮೇಲೆ. ಇನ್ನು ಇತ್ತೀಚಿನ ಮಕ್ಕಳಾದರೆ ಮೊಬೈಲ್, ಟೀವಿ ಅಥವಾ ಕಂಪ್ಯೂಟರ್ ಅಂತ ಅದರಲ್ಲಿಯೇ ಸ್ನಾನ, ಬ್ರೇಕ್ ಫಾಸ್ಟ್, ಊಟ ನಿದ್ದೆ ಎಲ್ಲಾ!. ಇವೆಲ್ಲವೂ ಸಾಮಾನ್ಯವಾಗಿದ್ದರೂ ಭವಿಷ್ಯತ್ತನ್ನು ಕಟ್ಟಿಕೊಳ್ಳುವ ಅತ್ಯಂತ ಪ್ರಮುಖ ಹಂತಗಳಾದ ಹತ್ತು ಮತ್ತು ಹನ್ನೆರೆಡನೇ ತರಗತಿಗಳ ಪರೀಕ್ಷೆಗಳನ್ನು ಯಶಸ್ವಿಯಾಗಿ ಉತ್ತಮ ಅಂಕಗಳೊಂದಿಗೆ ಪಾಸ್ ಮಾಡಲು ಸ್ವಲ್ಪ ಹೆಚ್ಚಿನ ಪರಿಶ್ರಮ ಬೇಕೇ ಬೇಕು.

              ಹಾಗಿದ್ದರೆ ತಾರುಣ್ಯವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುವುದು ಹೇಗೆ? ಏನೆಲ್ಲಾ ಅವಕಾಶಗಳಿವೆ ಮತ್ತು ಅವುಗಳಿಂದಾಗುವ ಪ್ರಯೋಜನಗಳೇನು? ಈ ನಿಮ್ಮ ಪ್ರಶ್ಣೆಗಳಿಗೆ ಸಲಹೆಗಳೊಂದಿಗೆ ಉತ್ತರವನ್ನೂ ಕೊಟ್ಟಿದ್ದೇನೆ.

              ತಾರುಣ್ಯದಲ್ಲಾಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳೂ ಸರಿಸುಮಾರು ಹನ್ನೊಂದರಿಂದ ಹತ್ತೊಂಬತ್ತು ವರ್ಷ ವಯಸ್ಸಿನ ಎಲ್ಲಾ ಮಕ್ಕಳಲ್ಲೂ ಆಗುವ ಅತ್ಯಂತ ಸಹಜ ಬೆಳವಣಿಗೆಯ ಪ್ರಕ್ರಿಯೆಗಳಾಗಿವೆ. ಅತೀ ಪ್ರಮುಖವಾಗಿ ಹಾರ್ಮೋನ್ ಬದಲಾವಣೆಗಳಾಗಲಿ ಅಥವಾ ಹೆಣ್ಣು ಮಕ್ಕಳಲ್ಲಾಗುವ ಮುಟ್ಟಿನ ಆರಂಭವಾಗಲಿ ಇವು ಯಾವುದೇ ಸಮಸ್ಯೆಗಳಲ್ಲ. ಆತಂಕವಿಲ್ಲದೆ, ಭಯಪಡದೆ, ಹಿಂಜರಿಕೆಯಿಲ್ಲದೆ ಇಂತಹ ಅನುಭವವಾದಾಗ ಅಮ್ಮನಲ್ಲಿಯೋ, ಅಪ್ಪನಲ್ಲಿಯೋ ಅಥವಾ ನಿಮ್ಮ ಆಪ್ತ ಶಿಕ್ಷಕರಲ್ಲಿಯೋ ಮುಕ್ತವಾಗಿ ಹೇಳಿಕೊಂಡಾಗ ಅವರು ವಹಿಸಬೇಕಾದ ಜಾಗರೂಕತೆಯ ಕುರಿತು ಮಾಹಿತಿಯೊಂದಿಗೆ ಮಾರ್ಗದರ್ಶನ ಮಾಡುತ್ತಾರೆ. ಇನ್ನು ಹೆಚ್ಚಿನ ಮಕ್ಕಳು ತಮ್ಮ ಗೆಳೆಯರಲ್ಲಿ ಇಂತಹ ವಿಚಾರಗಳನ್ನು ಹಂಚಿಕೊಳ್ಳುವುದನ್ನು ನೋಡಬಹುದು. ಆದರೆ, ಕೆಲವೊಮ್ಮೆ ಗೆಳೆಯರು ಹೀಯಾಳಿಸುವುದು, ನಿಮ್ಮ ವಯಕ್ತಿಕ ವಿಚಾರವನ್ನು ಎಲ್ಲರಲ್ಲಿಯೂ ಹೇಳುವುದು ಮಾಡುವುದರಿಂದ ನೀವು ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿರುತ್ತದೆ. ಇನ್ನು ವಯಸ್ಕ ಅಕ್ಕ ಅಥವಾ ಅಣ್ಣಂದಿರಲ್ಲಿಯೋ ಹೇಳಿಕೊಳ್ಳಲು ಸಮಸ್ಯೆಯಿಲ್ಲ. ನೀವು ಸೇವಿಸುವ ಉತ್ತಮ ಆಹಾರ, ಪ್ರತಿನಿತ್ಯದ ವ್ಯಾಯಾಮ, ಯೋಗ-ಧ್ಯಾನಗಳು ನಿಮ್ಮನ್ನು ಇಂತಹ ಸಂದರ್ಭದಲ್ಲಿ ಆರೋಗ್ಯವಂತರನ್ನಾಗಿ ಮತ್ತು ಕ್ರೀಯಾಶೀಲರನ್ನಾಗಿಸುತ್ತವೆ.

         ಗೆಳೆತನದ ವಿಚಾರಕ್ಕೆ ಬಂದರೆ, ತಾರುಣ್ಯವು ಮಕ್ಕಳನ್ನು ಸಮಾಜದತ್ತ ತೆರೆದುಕೊಳ್ಳುವಂತೆ ಮಾಡುವ ಒಂದು ಪ್ರಮುಖ ಘಟ್ಟವಾಗಿದೆ. ಹಂತ ಹಂತವಾಗಿ ಸ್ವಾವಲಂಬಿಗಳಾಗುವ ಮಕ್ಕಳು ಮನೆಯವರಿಗಿಂತ ಹೆಚ್ಚು ಹೊರಗಿನವರೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಈಗಿನ್ನೂ ಪ್ರಬುದ್ಧತೆ ಹೊಂದಿರದ ಚಂಚಲ ಮನಸ್ಸಿನ ತಾರುಣ್ಯದ ಮಕ್ಕಳು ಸರಿತಪ್ಪುಗಳನ್ನು ಅಳೆಯುವ, ಅಥವಾ ಇನ್ನೊಬ್ಬರನ್ನು ವಿಮರ್ಶಾತ್ಮಕವಾಗಿ ನೋಡುವ ಗೋಜಿಗೆ ಹೋಗದೆ, ತಮಗೆ ಹೊಂದಿಕೊಳ್ಳುವ ಮತ್ತು ಸಂತೋಷದ ಸಂದರ್ಭಗಳಲ್ಲಿ ತಮ್ಮೊಂದಿಗಿರುವವರೊಂದಿಗೆ ಸುಲಭವಾಗಿ ಬೆರೆಯುವುದೇ ಹೆಚ್ಚು. ಇಂತಹದ್ದೇ ಸಂದರ್ಭವನ್ನು ತಮ್ಮ ದುಷ್ಟ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಕಾಯುತ್ತಿರುವ ಹಲವರು ನಮ್ಮ ಕಣ್ಣಮುಂದಿದ್ದಾರೆ. ಆದ್ದರಿಂದ, ಹೊಸಬರೊಂದಿಗೆ ಗೆಳೆತನ ಮಾಡುವಾಗ, ಸಂಪರ್ಕ ಬೆಳೆಸುವಾಗ ಅಥವಾ ಹೊಸ ಗೆಳೆಯರ ಗುಂಪನ್ನು ಸೇರಿಕೊಳ್ಳುವಾಗ ತವಕ ಬೇಡ. ತಾಳ್ಮೆಯಿಂದ ಅಂತವರ ಗುಣ ನಡತೆಗಳನ್ನು ಗ್ರಹಿಸಿ ಅರ್ಥೈಸಿಕೊಂಡು ಸೇರುವುದು ಉತ್ತಮ. ಹೀಗೆ ಯಾರೊಂದಿಗೆ ಬೆರೆತರೂ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಪ್ಪ ಅಮ್ಮಂದಿರಲ್ಲಿ ಹೇಳುವುದು ಅತ್ಯಂತ ಮುಖ್ಯ. ಗೆಳೆಯರೊಂದಿಗಿನ ನಿಮ್ಮ ಚಟುವಟಿಕೆಗಳು ಯಾವಾಗಲೂ ಮುಕ್ತವಾಗಿರಲಿ, ಅವರೇನಾದರೂ ಅಸಂಬದ್ಧ ಕಾರ್ಯದಲ್ಲಿ ತೊಡಗಿದ್ದರೆ ಹಾಗೂ ನಿಮ್ಮನ್ನೂ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರೆ ಹಿಂದೆ ಮುಂದೆ ಯೋಚಿಸದೆ ಅಂತವರ ಬಗ್ಗೆ ಶಿಕ್ಷಕರಲ್ಲಿಯೋ ಅಥವಾ ನಿಮ್ಮ ಪಾಲಕರಲ್ಲಿಯೋ ಹೇಳಿಬಿಡಿ ಮತ್ತು ಅಂತಹವರಿಂದ ನೀವೂ ದೂರ ಸರಿಯಿರಿ.

                ತಾರುಣ್ಯದಲ್ಲಿ ಮಕ್ಕಳು ತಮ್ಮ ವಿಚಾರಗಳನ್ನು ಅಪ್ಪ ಅಮ್ಮನಲ್ಲಿ ಹೇಳಿಕೊಳ್ಳುವುದು ಕಡಿಮೆ. ಇನ್ನು, ಅವರ ಮಾತುಗಳನ್ನು ಕೇಳುವುದಕ್ಕಿಂತ ತಿರಸ್ಕರಿಸುವುದೇ ಹೆಚ್ಚು. ಇಂತಹದ್ದೊಂದು ತಪ್ಪು ಅದೆಷ್ಟೋ ಮಕ್ಕಳನ್ನು ಹಿಂಡಿ ಹಿಪ್ಪೆ ಮಾಡಿದೆ. ಹೇಳಿಕೊಳ್ಳಲೂ ಆಗದೆ, ಹೊರಬರಲೂ ಆಗದೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಮಕ್ಕಳು ಅಪಾಯಗಳಿಗೆ ತಮ್ಮನ್ನೇ ತಾವು ಎಳೆದುಕೊಂಡು ಬಿಡುತ್ತಾರೆ. ನನ್ನ ಜೀವನದಲ್ಲಿ ಯಾರೂ ಇಲ್ಲ, ನನ್ನಿಂದ ಏನೂ ಪ್ರಯೋಜನವಿಲ್ಲ ಮತ್ತು ತನ್ನನ್ನು ತಾನು ನಿಸ್ಸಹಾಯಕನಂತೆ ಕಂಡುಕೊಳ್ಳುವ ಮಕ್ಕಳು ಸಮಾಜದಿಂದ ದೂರ ಉಳಿದುಬಿಡುತ್ತಾರೆ. ಹಾಗಾಗಿ, ತಾರುಣ್ಯದಲ್ಲಿ ಪಾಲಕರ ಪಾತ್ರ ಅತ್ಯಂತ ಪ್ರಮುಖದ್ದಾಗಿದೆ. ನಿಮ್ಮ ಎಲ್ಲಾ ಸಮಸ್ಯೆ ಸಂಶಯಗಳನ್ನು ಪಾಲಕರಲ್ಲಿ ಮುಕ್ತವಾಗಿ ಹಂಚಿಕೊಳ್ಳಿ. ಅವರಿಂದ ಮುಚ್ಚಿಡುವ ತಪ್ಪನ್ನೆಂದೂ ಮಾಡಬೇಡಿ. ಅದು ನಿಮ್ಮ ಗೆಳೆಯರ ವಿಚಾರವಾಗಿರಲಿ, ದೈಹಿಕ ಬದಲಾವಣೆಗಳ ವಿಷಯವಾಗಿರಲಿ ಅಥವಾ ವಿರುದ್ಧ ಲಿಂಗದ ಕಡೆಗಿನ ನಿಮ್ಮ ಆಕರ್ಷಣೆಯ ವಿಚಾರವಾಗಿರಲಿ ಯಾವುದಕ್ಕೂ ಮುಜುಗರ, ನಾಚಿಕೆ, ಭಯ ಬೇಡ. ಹೀಗೆ ಹೇಳಿಕೊಳ್ಳುವ ಹವ್ಯಾಸವನ್ನು ಆರಂಭದಿಂದಲೇ ರೂಢಿಸಿಕೊಂಡರೆ ಒಳ್ಳೆಯದು. ಈ ವಯಸ್ಸಿನಲ್ಲಿ ಹೊರಗಿನವರೊಂದಿಗೆ ಬೆರೆಯುವುದು ಎಷ್ಟು ಮುಖ್ಯವೋ ಹಾಗೆ ಮನೆಯವರೊಂದಿಗೆ ಬೆರೆಯುವುದೂ ಅಷ್ಟೇ ಮುಖ್ಯ. ಪಾಲಕರಷ್ಟೇ ಶಿಕ್ಷಕರೂ ಅತ್ಯಂತ ಪ್ರಮುಖ ಪಾತ್ರವಹಿಸುತ್ತಾರೆ ಅವರ ಸಹಾಯವೂ ನಿಮಗೆ ಅತೀ ಮುಖ್ಯ.

               ತಾರುಣ್ಯದ ಗೊಂದಲಗಳಲ್ಲಿ ಸಿಲುಕಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಬೆಪ್ಪಾಗಿ, ಫೀನಿಕ್ಸ್ ಪಕ್ಷಿಯಂತೆ ಮತ್ತೆ ಜಿಗಿದು ಬಂದ ಸ್ನೇಹಾಳ ರಿಯಲ್ ಸ್ಟೋರಿಯೊಂದಿಗೆ ಮುಂದಿನ ವಾರ ಬರುತ್ತೇನೆ. ನಿಮ್ಮ ನಾಳೆಗಳ ನಿರ್ಮಾಣಕ್ಕೆ ಅಡಿಗಲ್ಲಾಗಬಲ್ಲ ಒಂದಿಷ್ಟು ಮಾಹಿತಿಗಳನ್ನೊಳಗೊಂಡ ಈ ಕಿಂಚಿತ್ ಪ್ರಯತ್ನ ನಿಮ್ಮೆಲ್ಲಾ ಮುದ್ದು ಮನಸ್ಸುಗಳನ್ನು ಮುಟ್ಟಲಿ ತಟ್ಟಲಿ.

 

ಗುರುರಾಜ್ ಇಟಗಿ.
ಮಕ್ಕಳ ಮನಶಾಸ್ತ್ರಜ್ಞರು
ಮಂಗಳೂರು

Ads on article

Advertise in articles 1

advertising articles 2

Advertise under the article