
ಆದಿಯ ಚಿತ್ರ ಪತ್ರ - 39
Friday, January 8, 2021
Edit
ಆದಿ ಸ್ವರೂಪ
ಸ್ವರೂಪ ಅಧ್ಯಯನ ಸಂಸ್ಥೆ
ಮಂಗಳೂರು
ಆದಿಯ ಚಿತ್ರ ಪತ್ರ - 39
ಆದಿಯ ಚಿತ್ರ ಪತ್ರ - 39
ಡುರು ಡುರು ಪೋಂಯಿ ಪೋಂಯಿ.
ಅಪ್ಪನ ಬಾಲ್ಯದ ಜೋಳಿಗೆಯಿಂದ ಒಂದು ಕಥೆ ಹೆಕ್ಕಿದೆ. ಅಪ್ಪ ಸಣ್ಣವರಿರುವಾಗ ಹೈಸ್ಕೂಲ್ ಮೇಷ್ಟ್ರು ವಿಶ್ವನಾಥ ಶೆಟ್ಟಿ , ಅಡ್ಕಾರಿನ ನಮ್ಮ ಮನೆಗೆ ಬರುತ್ತಿದ್ದರು. ಅಪ್ಪನಿಗೆ ಅವರ ಕಥೆ ಪೂರ್ಣ ಗೊತ್ತಿಲ್ಲ. ಅಪ್ಪ ಅವರನ್ನು ಭೇಟಿಯಾದ 4 ಸಂದರ್ಭದ ಕಥೆ ಬಹಳ ಕುತೂಹಲದ್ದಾಗಿದೆ.
ಡುರು ಡುರು ಪೋಂಯಿ ಪೋಂಯಿ ವಿಶ್ವನಾಥ ಶೆಟ್ಟರೆಂದೇ ಕೆಲವರು ಅವರನ್ನು ಕರೆಯುತ್ತಿದ್ದರಂತೆ. ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಕಾಲ -1965 ಇರಬಹುದು. ಅಪ್ಪನ ಅಣ್ಣನಿಗೆ ಆಗ ಅವರು ಕನ್ನಡ ಮೇಷ್ಟ್ರು. ಅವರು ನಮ್ಮ ಮನೆಗೆ ಬರ್ತಾರೆ ಅಂದ್ರೆ ನಾವು ಮಕ್ಕಳೆಲ್ಲರೂ ಅಡಗಿದ್ದರೆ ಹೊರಗೆ ಬರಲ್ಲ. ಅವರು ಅಷ್ಟೊಂದು ಹೆದರಿಸುತ್ತಾರೆ. ಊಹೂಂ.. ಅಂತ ಮಗುವಿನ ಸ್ವರ ಮಾಡಿ ನೋಡಿಲ್ಲಿ ಬರ್ರ್..ಬುರ್ರ್... ಗುರ್ ಗುರ್ ನನ್ನ ಜೋಬಲ್ಲಿ ಮಕ್ಕಳಿದ್ದಾರೆ.. ನಿಮ್ಮನ್ನೆಲ್ಲ ಜೋಬಿಗೆ ಹಾಕುತ್ತೇನೆ ಅಂತ ಎಲ್ಲರನ್ನೂ ಹೆದರಿಸುವರು. ಕಪ್ಪು ಕೋಟು, ಕಪ್ಪು ಕನ್ನಡಕ ಆಜಾನುಬಾಹು ದೇಹ. ಹಣೆತುಂಬ ಹುಬ್ಬು. ಯಕ್ಷಗಾನದ ರಾಕ್ಷಸ ವೇಷದ ಹಾಗೆ ಘರ್ಜನೆ. ಕೇಳಿದರೆ ಸುತ್ತಮುತ್ತ ಮನೆಯವರೆಲ್ಲರೂ ಅವರನ್ನು ನೋಡಲು ಸೇರುತ್ತಿದ್ದರು.
ಅವರು ಬರೆದ ಕನ್ನಡ ಹಾಡಿನ ಪುಸ್ತಕ, ಡುರು ಡುರು ಪೋಂಯಿ ಪೋಂಯಿ. ಕೋಟಿನ ಜೇಬಿಗೆ ಕೈಹಾಕಿ ತೆಗೆದು ತೆಗೆದು ಸಿಕ್ಕಸಿಕ್ಕವರಿಗೆಲ್ಲಾ ಹಂಚುತ್ತಿದ್ದರು. ಮುಖ್ಯವಾಗಿ 101 ನಗೆಯ ವಿಶ್ವನಾಥ ಶೆಟ್ಟಿ ಅಂತಲೂ ಆಗ ಅವರನ್ನು ಗುರುತಿಸುತ್ತಿದ್ದರು. ಏಕಕಾಲಕ್ಕೆ 11 ರೀತಿಯಲ್ಲಿ ಒಂದು ನಗೆಗೆ ಮತ್ತೊಂದು ನಗೆ ಸೇರಿಸಿ ನಗುವ ಪ್ರದರ್ಶನ ಮೊದಲು ಮಾಡಿ ತೋರಿಸುತ್ತಿದ್ದರು. ಅದನ್ನು ನೋಡಿದವರಿಗೆ ಬಿದ್ದುಬಿದ್ದು ನಗುವುದೇ, ಕೆಲಸ. ಪ್ರೀತಿ - ನಗು ಬಗ್ಗೆ ಸಂಶೋಧನೆ ಮಾಡುತ್ತಿದ್ದೇನೆಂದು ಬಹಳಸಲ ಹೇಳುತ್ತಿದ್ದರು. ಅವರನ್ನು ಕಂಡಾಗ ನನಗೆ ಎಷ್ಟೇ ಭಯ ಇದ್ದರೂ ಅವರ ನಗು ನೋಡಲು ಮತ್ತು ಕಲಿಯಲು ಅವರ ಹಿಂದೆಯೇ ಹೋಗುತ್ತಿದ್ದೆ.
ಅವರು ಸುಳ್ಯ ಎಲಿಮಲೆ ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದಾಗ... ಹೆಂಗಸು ವೇಷ ಹಾಕಿಕೊಂಡೆ ಶಾಲೆಗೆ ಬಂದು... ಕ್ಲಾಸ್ ನಲ್ಲಿ ಇಂಗ್ಲಿಷ್ ಪಾಠದ ಪದ್ಯಕ್ಕೆ ಅಭಿನಯ ಮಾಡ್ತಿದ್ದರಂತೆ. ಕೆಲವು ಬಾರಿ ಯಾವು-ಯಾವುದೋ ಹೊತ್ತಿಗೆ ಬೆಲ್ ಹೊಡೆದು ಮಕ್ಕಳನ್ನೆಲ್ಲ ಮನೆಗೆ ಕಳುಹಿಸುತ್ತಿದ್ದರಂತೆ. ಅವರ ನಗುವಿನ ಪ್ರತಿಭೆಗೆ ಗೌರವ ಸಿಗಲೇ ಇಲ್ಲ. ನಗುವಿನ ಅಭ್ಯಾಸದ ಮಧ್ಯೆ ಎಲ್ಲರಿಗೂ ಹುಚ್ಚನಾಗಿಯೇ ಕಂಡರು.
ಒಮ್ಮೆ ದುಗ್ಗಲಡ್ಕ ಶೆಟ್ಟರ ಹೋಟೆಲಲ್ಲಿ ಬೆಳಗ್ಗೆ ಚಹಾ ಕುಡಿಯಲು ನಾನು ಕುಳಿತ್ತಿದ್ದಾಗ... ಶೆಟ್ಟರು ಅವರನ್ನು ಪರಿಚಯ ಮಾಡಿದ್ರು. ನಾನು ಅರಂತೋಡು ಹೈಸ್ಕೂಲ್ ಮೇಷ್ಟ್ರು ಅಂದೆ. ನಾನು ನಿಮ್ಮನ್ನೇ ಹುಡುಕಿಕೊಂಡು ಬಂದದ್ದು ಅಂತ ಹೇಳಲು ಧೈರ್ಯ ಬರಲಿಲ್ಲ. ನೀವು ಸಣ್ಣವರಿರುವಾಗ ಕಂಡ 101 ನಗೆ ಈಗ 300 ಆಗಿದೆ ಅಂದ್ರು. ಶೆಟ್ಟರೆ, ಇವರಿಗೆ ಬೇಕಾದ್ದೆಲ್ಲ ತಿಂಡಿ ಕೊಡಿ..... ಬೇಡ ಅಂತ ಹೇಳ್ಬಾರ್ದು...ಯುವಕರು ಗಟ್ಟಿ ತಿನ್ಬೇಕು. ನಾನು ನೋಡಿ. ಈಗಷ್ಟೇ 12 ಪ್ಲೇಟ್ ಇಡ್ಲಿ, 12 ಪ್ಲೇಟ್ ಕಡ್ಲೆ. 15 ಚಹಾ ಕುಡಿದೆ.. ಅಲ್ವ ಶೆಟ್ರೇ. ಶೆಟ್ರು ಹೌದೌದು ಅಂದ್ರು. ನನಗೆ ನಂಬಲಿಕ್ಕೇ ಆಗಲಿಲ್ಲ. ಹೆಂಡತಿ ಮಕ್ಕಳು ಅವರ ಜತೆಗಿಲ್ಲ. ಇವರೀಗ ನಮ್ಮ ಮನೆ ಪಕ್ಕದ ರೂಮ್ನಲ್ಲೇ ಇರುವುದು ಅಂತ ಹೇಳಿ ಶೆಟ್ರು ಗುಟ್ಟಾಗಿ ನನ್ನ ಕರೆದುಕೊಂಡು ಹೋಗಿ ತೋರಿಸಿದ್ರು. ಕಸದ ರಾಶಿ ಮಧ್ಯೆ ಎರಡು ಕವಾಟು ಬಿದ್ದಿದೆ. ಅದರ ಮೇಲೆ ಬಟ್ಟೆ ರಾಶಿ ಇದೆ. ನನಗೆ ನಿಮ್ಮ 300 ನಗುವಿನಲ್ಲಿ ಸ್ವಲ್ಪ ಕಲಿಸಿ ಕೊಡಿ ಅಂತ ಕೇಳಿಕೊಂಡೆ. ಆಯ್ತು ಒಳ್ಳೆಯದಾಯಿತು, ನನ್ನಿಂದ ಯಾರು ಇದುವರೆಗೆ ಕಲಿತಿಲ್ಲ. ಆದರೆ ಇಲ್ಲಿ ಬೇಡ ನಿಮ್ಮ ಶಾಲೆ, ಅರಂತೋಡಿಗೆ ಬಂದು ಕಲಿಸ್ತೇನೆ. ನನಗೊಂದು ಊಟ ಕೊಡಬೇಕು ಅಂದ್ರು.. ಶೆಟ್ರು ಹೇಳಿದ್ರು, ಸುಮ್ಮನೆ ಹೇಳ್ತಾರೆ ಬರುವುದಿಲ್ಲ.
ಮತ್ತೆ ಅವರನ್ನು ಕಂಡದ್ದು ಸುಳ್ಯದ ಹೋಟೆಲ್ ಗೋಪಿಕಾದ ಹೊರಗೆ. ತರಕಾರಿ ಅಂಗಡಿ ಮುಂದೆ. ಊಟ ಸೇರ್ಲಿಲ್ಲ, ಒಂದು ಸೌತೆಕಾಯಿ ಕೊಡಿ ಅಂದ್ರು. ಅದು ಹಳ್ಳಿಯಲ್ಲಿ ಕಾಣಲು ಸಿಗುವ ಒಂದೂವರೆ ಅಡಿ ಉದ್ದ ನಾಲ್ಕು ಇಂಚು ದಪ್ಪದ ಸೌತೆಕಾಯಿ ಜಗಿದು ತಿನ್ತಾ ಹೊರಗೆ ಹೋದ್ರು. ಪಾಪ... ಆ ದಿನ ನನ್ನ ಗುರುತು ಸಿಗಲೇ ಇಲ್ಲ..ಬಚಾವಾದೆ. ಇದನ್ನೇ ನೋಡ್ತಾ ಇದ್ದ ಹೋಟೆಲ್ ಸಪ್ಲಾಯರ್ ಅಲ್ಲಿಗೆ ಬಂದು ಹೋಟೆಲಲ್ಲಿ ತಿಂದ ಕತೆ ಹೇಳಿದ. ಊಟ ಕೊಡಿ... 6 ಪ್ಲೇಟ್ ಎಕ್ಸ್ಟ್ರಾ ... 6 ಪ್ಲೇಟ್ ಬಂಗುಡೆ, 6 ಮಟನ್, 6 ಕರ್ಡ್ಸ್ ಗಲಾಟೆ ಮಾಡಿ ತರಿಸಿಕೊಂಡು... ತಿಂದು.. ನನ್ನಲ್ಲಿ ಹಣ ಇದೆ ಕೊಡಿ ಅಂತ ಹಣ ತೋರಿಸಿ ಕೇಳಿದ್ರು, ನನಗೆ ಕೇಳಿದ್ದೆಲ್ಲ ಕೊಡ್ಲಿಲ್ಲ. ನನಗೆ ಊಟ ಸರಿ ಸೇರಲಿಲ್ಲ ಅಂತ ಬೈದುಕೊಂಡೇ ಹೊರಗೆ ಬಂದ್ರಂತೆ.
ಮತ್ತೊಮ್ಮೆ ಮೈಸೂರಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಕ್ಕಾಗ ನಾನೇ ಪರಿಚಯ ಮಾಡಿಕೊಂಡೆ. ಓಹೋ ಗೊತ್ತಾಯಿತು. ನೀವು ಮಿಮಿಕ್ರಿ ಮಾಡುವವರು.. ದುಗ್ಗಲಡ್ಕದಲ್ಲಿ ಕಡ್ಲೆ ತಿಂಡಿ ತಿಂದದ್ದು. ನೀವು ಚಿಕ್ಕವರಿರುವಾಗ ಮನೆಗೆ ಬರ್ತಾ ಇದ್ದೆ.. ನೆನಪು ಶಕ್ತಿ ಚೆನ್ನಾಗಿದೆ. ಮೈ ಮೇಲೆ ಬ್ಯಾಗ್ 5, 5 ಶರ್ಟ್ ಹಾಕಿಕೊಂಡು ಅದರ ಮೇಲೆ ಕೋಟು ಹಾಕಿದ್ದಾರೆ. ಅಣ್ಣ ನನಗೆ ಸ್ವಲ್ಪ ಸುಸ್ತಾಗ್ತಿದೆ. ಅದೂ... ಒಂದು ವರ್ಷದ ನಂತರ ಎಲಿಮಲೆ ಹತ್ತಿರ ಹೊಳೆಯಲ್ಲಿ ಚಂದ ಬಟ್ಟೆ ಒಗೆದು ಸ್ನಾನ ಮಾಡಿ ರಾತ್ರಿ ಬಸ್ಸಿಗೆ ಬಂದೆ.. ಸ್ವಲ್ಪ ಇಲ್ಲೇ ಕುಳಿತುಕೊಳ್ತೇನೆ ಅಂತ ಹೇಳಿ ಬಡ್ ಅಂತ ನೆಲಕ್ಕೆ ಬಿದ್ರು.. ಜೋರಾಗಿ ನೆಗಾಡಿದ್ರು.. ಅದೇ ಅವರ ಹನ್ನೊಂದು ಕೋಪೆ ನಗು... ಜನ ನೋಡ್ತಾ ಹೋಗುತ್ತಿದ್ದರು.. ಸರಿ ಇಲ್ಲದವರೆಂದೇ ಕಂಡವರಿಗೆ ನಗುವಿನ ಪ್ರತಿಭೆ ಕಾಣಲೇ ಇಲ್ಲ!.
ಕೊನೆಯದಾಗಿ ಕಂಡದ್ದು.. ಅವರು ನನ್ನನ್ನು ಹುಡುಕಿಕೊಂಡು ಬಂದದ್ದು.. ನಾನು ಮೇಷ್ಟ್ರಾಗಿದ್ದ ಅರಂತೋಡು ಹೈಸ್ಕೂಲ್ ಗೆ ಬಂದಾಗ. ಮಕ್ಕಳು ಶಿಕ್ಷಕರು ಎಲ್ಲರೂ ಅವರ ವೇಷ ನೋಡಿ ನಗ್ತಾ ಇದ್ರು. ನನ್ನ ಕೇಳ್ತಾ ಇದ್ರು. ನಾನು ಅವರು ಬರುವುದು ನೋಡಿ ಅಡಗಿದೆ. ನಗು ಕಲಿಸಲು ಅವರು ಊಟ ಕೇಳಿದ್ದಾರೆ. ಅವರ ಊಟದ ಕತೆ ನನಗೆ ಗೊತ್ತಿತ್ತು.
ಆಗ ನನಗೆ ತಿಂಗಳಿಗೆ ಸಂಬಳ ಕೇವಲ 150 ರೂಪಾಯಿ ಮಾತ್ರ ಇತ್ತು. 1984 ಅವರು ನನಗೆ ನಗು ಕಲಿಸಲು ನನ್ನ ಕಾಣಲು ಬಂದವರನ್ನು ನಾನು ಕಾಣಲೇ ಇಲ್ಲ..... ಅವರು ಯಾರೆಂದು ಯಾರಿಗೂ ಕಾಣಲೇ ಇಲ್ಲ.....
ಅಲ್ಲಿ ಎಲ್ಲರೂ ನಗ್ತಾ ಇದ್ರೂ ಅಪ್ಪನಿಗೆ ನಗು ಬರಲೇ ಇಲ್ಲ . ಅವರ ಒಂದೂ ನಗು ಸಿಗಲಿಲ್ಲ. ಮತ್ತೆಂದೂ ಆ 300 ನಗು ಯಾರಿಗೂ ಕಾಣಲಿಲ್ಲ.
ಅಂತ್ಯವಾದ ಆ ನಗುವಿಗೆ.. ಅಳುವಿನ ಒಂದು ಹನಿಗೆ... ಆದಿ.
ಈ ಪತ್ರ ಸದಾ ಪುಸ್ತಕ ಪ್ರೀತಿ - ನಗು ಹಂಚುತ್ತಿರುವ ಸುಳ್ಯದ ಸಹಕಾರಿ ಸಂಘಟಕ ಲೈನ್ಕಜೆ ರಾಮಚಂದ್ರ ರಿಗೆ......
ಆದಿ ಸ್ವರೂಪ