ಶಿಶು ಚಿತ್ರಕಲೆಗೊಂದು ಸಾಕ್ಷಿ -ಪುಟಾಣಿ ಸ್ವರ
Friday, December 25, 2020
Edit
ಶಿಶು ಚಿತ್ರಕಲೆಗೊಂದು ಸಾಕ್ಷಿ -ಪುಟಾಣಿ ಸ್ವರ
ಚಿತ್ರಕಲಾ ಪ್ರಾಕಾರಗಳಲ್ಲಿ ಶಿಶುಚಿತ್ರಕಲೆ ಅಥವಾ ಚಿಕ್ಕಮಕ್ಕಳ ಚಿತ್ರಕಲೆಯೂ ಒಂದು. ಆದಿಮಾನವರ ಚಿತ್ರಕಲೆಗೂ ಶಿಶುಚಿತ್ರಕಲೆಗೂ ಸಾಮ್ಯತೆಯಿದೆ. ಹೃದಯದ ಭಾಷೆಯನ್ನು ಅತ್ಯಂತ ಸರಳವಾಗಿ ನಿರೂಪಿಸುವುದೇ ಇದಕ್ಕೆ ಕಾರಣ.
ಮನಸ್ಸಿನ ಮುಗ್ಧ ಭಾವನೆಗಳು ಅಮೂರ್ತ ರೂಪದಲ್ಲಿ ಪ್ರಕಟವಾಗುವುದೇ ಚಿಕ್ಕ ಮಕ್ಕಳ ಚಿತ್ರಕಲೆ. ಹಿರಿಯ ಕಲಾವಿದರು ಅನೇಕ ಸಲ ಚಿಕ್ಕಮಕ್ಕಳಂತೆ ಚಿತ್ರ ಮಾಡಲು ಪ್ರಯತ್ನಪಟ್ಟದ್ದಿದೆ. ಚಿಕ್ಕಮಕ್ಕಳ ಚಿತ್ರಕಲೆಗೆ ವಿಶೇಷ ಮಹತ್ವವಿದೆ. ಮಕ್ಕಳ ಗೀಚುವಿಕೆ ಹಂತವನ್ನು ದಾಟಿ ಅಮೂರ್ತ ಕಲ್ಪನೆಗಳು ಪ್ರಕಟವಾಗುವ ಸಮಯದಲ್ಲಿ ಅದ್ಭುತವಾದ ಕಲಾಕೃತಿಗಳು ಮಕ್ಕಳಿಂದ ಮೂಡಿಬರುತ್ತವೆ.
ಮಗು ಎಳೆಯುವ ರೇಖೆಗಳಲ್ಲಿ ವೇಗವಿದ್ದು ಅದು ಎಲ್ಲೂ ಗೆರೆಗಳನ್ನು ಅಳಿಸುವ ಪ್ರಮೇಯವೇ ಬರುವುದಿಲ್ಲ. ಮಕ್ಕಳ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುವ ರೇಖೆಗಳು ತಾನು ನೋಡಿದ ಅನುಭವಿಸಿದ ವಿಷಯವಸ್ತುಗಳನ್ನು ಪ್ರಕಟಪಡಿಸುತ್ತವೆ. ಒಟ್ಟಾಗಿ ಹೇಳುವುದಿದ್ದರೆ ಶಿಶು ಚಿತ್ರಕಲೆಯನ್ನು ನೋಡಿ ಆನಂದಿಸುವುದರಿಂದ ಮನಸ್ಸು ನಿರಾಳವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇಂದಿನ ಆಧುನಿಕ ತಂತ್ರಜ್ಞಾನ ಯುಗದ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಮಕ್ಕಳಿಗೆ ಮಕ್ಕಳ ಬಾಲ್ಯವನ್ನು ಅನುಭವಿಸಲು ಅವಕಾಶವಿದೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡದೆ ಬಿಡಲಾರದು !. ಆದರೆ ಮಕ್ಕಳ ಮನೋಜ್ಞಾನವನ್ನು ಅರಿತವರು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸಹಕರಿಸುತ್ತಾರೆ. ಪೋಷಕರ ಹಸ್ತಕ್ಷೇಪವಿಲ್ಲದೆ ಬೆಳೆದ ಮಕ್ಕಳ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಅಂತಹ ನಿದರ್ಶನಗಳಲ್ಲಿ ಒಂದು ಮಗು ತನ್ನ ಎರಡು ವರ್ಷದ ಹಂತದಲ್ಲೇ ತನ್ನ ಕಲಾಕೌಶಲ್ಯವನ್ನು ಪ್ರಕಟಪಡಿಸಲು ಆರಂಭಿಸಿದೆ ಎಂದರೆ ಆಶ್ಚರ್ಯವೂ ಮೂಡುತ್ತದೆ.
ಶಿಶು ಚಿತ್ರಕಲೆಗೆ ಸಾಕ್ಷಿಯಾಗುತ್ತಿರುವ ಮಗು ಸ್ವರ ಸತೀಶ್. ಇನ್ನೂ ಮೂರೂವರೆ ವರ್ಷದ ಮಗು. ತಂದೆ ಸತೀಶ್ ಕೃಷ್ಣ ವೃತ್ತಿಯಲ್ಲಿ ಇಂಜಿನಿಯರ್. ತಾಯಿ ಶ್ರೀಮತಿ ಶ್ವೇತಾ ಸತೀಶ್ ವೃತ್ತಿಯಲ್ಲಿ ಡಾಕ್ಟರ್. ಇವರು ಮೂಲತಃ ಮಂಗಳೂರಿನವರಾದರೂ ನೆಲೆಸಿರುವುದು ದೂರದ ಯು.ಎಸ್.ಎ ಯ ಕ್ಯಾಲಿಫೋರ್ನಿಯಾದಲ್ಲಿ. ಮಗಳು ಸ್ವರ ಸೂಕ್ಷ್ಮವಾಗಿ ಗ್ರಹಿಸುವುದನ್ನು ಎಳವೆಯಲ್ಲೇ ಗುರುತಿಸಿದ ತಂದೆ-ತಾಯಿ ಮಗುವಿನಲ್ಲಿ ವಿಶೇಷ ಪ್ರತಿಭೆಯನ್ನು ಕಂಡುಕೊಂಡಿದ್ದರು.
ತಾನು ವೀಕ್ಷಿಸುವ ಟಿವಿಯ ಕಾರ್ಟೂನ್ ಚಿತ್ರಗಳು, ಕುಟುಂಬದ ಸದಸ್ಯರು, ಹೊರಸಂಚಾರ ದಲ್ಲಿ ಕಾಣುವ ಜನಸಮೂಹ, ಪರಿಸರ, ವಾಹನಗಳು ಹೀಗೆ ಅನೇಕ ದೃಶ್ಯಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ರೇಖೆಗಳಲ್ಲಿ ಪ್ರಕಟಪಡಿಸಲು ಆರಂಭಿಸಿದಳು.
ತಂದೆ-ತಾಯಿಯ ನಿರಂತರ ಪ್ರೋತ್ಸಾಹ ಮಗುವಿನಲ್ಲಿ ಆತ್ಮವಿಶ್ವಾಸವನ್ನು ಮತ್ತು ತೊಡಗಿಸಿಕೊಳ್ಳುವುದನ್ನು ಹೆಚ್ಚಿಸಿತು. ಸ್ವರ ಅತಿ ಹೆಚ್ಚಿನ ಸಮಯವನ್ನು ತನಗೆ ಸಿಕ್ಕ ಪುಸ್ತಕ ಪೇಪರ್ ಗಳಲ್ಲಿ ಚಿತ್ರ ಬಿಡಿಸುವುದರಲ್ಲಿ ಕಳೆಯುತ್ತಾಳೆ. ಆಲೋಚನೆಗೂ ನಿಲುಕದ ಅದ್ಭುತ ಕಲ್ಪನಾ ಚಿತ್ರಗಳು ಸ್ವರನ ಕುಂಚ ಗಳಲ್ಲಿ ಮೂಡಿಬರುತ್ತದೆ.
ಕಲೆಯ ಯಾವುದೇ ಪ್ರಾಕಾರಗಳಲ್ಲಿ ಅನುಭವವೇ ಇಲ್ಲದ ಮಗು ತನ್ನ ಅವ್ಯಕ್ತ ಜ್ಞಾನದ ಮುಖೇನ ಹಿರಿಯರೂ ಚಿತ್ರಿಸಲಾಗದ ಕಲಾಕೃತಿಗೆ ಸಾಕ್ಷಿಯಾಗಿರುವುದು ಪ್ರಕೃತಿಯ ಒಂದು ವೈಶಿಷ್ಟ್ಯ.
ಕೋಗಿಲೆಯ ಸ್ವರ ಹೇಗೆ ಪ್ರಕೃತಿದತ್ತವಾಗಿ ಇಂಪಾಗಿ ನಮಗೆ ಕೇಳುತ್ತದೆಯೊ ಅದೇ ರೀತಿ ಮಕ್ಕಳ ಚಿತ್ರಕಲೆಯು ನಮಗೆ ತುಂಬಾ ಸಂತೋಷವನ್ನುಂಟು ಮಾಡುತ್ತದೆ.
ಚಿಕ್ಕಮಕ್ಕಳನ್ನು ಸ್ವತಂತ್ರವಾಗಿ ಚಿತ್ರ ಬಿಡಿಸಲು ಬಿಟ್ಟಾಗ ಮಕ್ಕಳ ಮನೋ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಮಗುವು ತಾನು ನೋಡಿದ ಯಾವುದೇ ಸನ್ನಿವೇಶಗಳನ್ನು ಗ್ರಹಿಸಿ ಪ್ರಕಟಪಡಿಸಲು ಸಾಧ್ಯವಾದರೆ ಅದು ತನ್ನ ಕಲ್ಪನಾ ಸಾಮರ್ಥ್ಯವನ್ನು ವಿಸ್ತಾರಗೊಳಿಸುತ್ತದೆ. ಮಗು ತನ್ನ ದೈಹಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಬಯಸುತ್ತೇವೆ , ಅದೇ ರೀತಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ್ದು ಅತ್ಯವಶ್ಯ. ಇದು ಚಿತ್ರಕಲೆಯಿಂದ ಸಾಧ್ಯವೆನ್ನುವುದು ಮನಗಂಡ ಸತ್ಯ.
ಭೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಮಗುವೂ ಶ್ರೇಷ್ಠವೇ. ಮಕ್ಕಳ ಬಾಲ್ಯವನ್ನು ಮಕ್ಕಳಿಗೆ ಕೊಟ್ಟಾಗ ಮಕ್ಕಳು ವಿಶೇಷವಾಗಿ ಬೆಳೆಯುತ್ತಾರೆ. ಪೋಷಕರ ಶಿಕ್ಷಕರ ಸಮಾಜದ ಕೆಲವೊಂದು ಕಟ್ಟುಪಾಡುಗಳಿಗೆ ಬಲಿಯಾಗಿ ಮಗು ತನ್ನತನವನ್ನು ಕಳೆದುಕೊಳ್ಳಬಾರದು. ಮಗು ತನ್ನ ವಿಶೇಷ ಕಲ್ಪನೆಯಿಂದ ಹಕ್ಕಿಯಂತೆ ಸ್ವಚ್ಛಂದವಾಗಿ ತನ್ನ ಕನಸನ್ನು ಕಟ್ಟುವ ಪರಿಸರ ಸಿಕ್ಕಾಗ ಪ್ರತಿಯೊಂದು ಮಗುವು ಶ್ರೇಷ್ಠವಾಗಲು ಸಾಧ್ಯತೆಯಿದೆ.
ಸ್ವರ ಶ್ರೇಷ್ಠ ವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾಳೆ. ಅವಳನ್ನು ಕಾಣುವ ಕಣ್ಣುಗಳು ಮತ್ತು ಅವಳಿಗಾಗಿ ಚಪ್ಪಾಳೆ ತಟ್ಟುವ ಕೈಗಳು ಹೆಚ್ಚಾಗಬೇಕು. ಮಕ್ಕಳ ಜಗಲಿ - ಸ್ವರ ಆದಷ್ಟು ಬೇಗ ಜಗತ್ತಿಗೆ ಶ್ರೇಷ್ಠವಾಗಲಿ ಎಂದು ಶುಭ ಹಾರೈಸುತ್ತದೆ.