-->
ಓ ಮುದ್ದು ಮನಸೇ... ಗುರುರಾಜ ಇಟಗಿ

ಓ ಮುದ್ದು ಮನಸೇ... ಗುರುರಾಜ ಇಟಗಿ

                      ಓ ಮುದ್ದು ಮನಸೇ....
            ಜೀವನದ ಎಲ್ಲಾ ಆಸೆಗಳನ್ನೂ ಈಡೇರಿಸುವ, ಭಾವನೆಗಳಿಗೆ ಸ್ಪಂದಿಸುವ ಮತ್ತು ನಮ್ಮ ಬಣ್ಣ ಬಣ್ಣದ ಕನಸುಗಳಿಗೆ ರೆಕ್ಕೆ ಕಟ್ಟಿ ಅಡೆ ತಡೆಗಳಿಲ್ಲದ ಈ ಸ್ವಚ್ಛಂದ ಪರಿಸರದಲ್ಲಿ ಹಾರಿ ಬಿಡುವ ತಾಕತ್ತು ಮತ್ತು ಬುದ್ಧಿಮತ್ತೆ ಬರೋದು ಒಬ್ಬ ವ್ಯಕ್ತಿ ಆರೋಗ್ಯಶೀಲನಾಗಿದ್ದಾಗ. ಆಧುನಿಕ ಜಗತ್ತಿನ ಜಂಜಾಟಗಳಿಗೆ ಸವಾಲೊಡ್ಡುವ ಮತ್ತು ನಮ್ಮದೇ ಕನಸಿನ ಕುದುರೆಯ ಬೆನ್ನೇರಿ ಗುರಿಮುಟ್ಟುವ ತವಕ ನಮ್ಮೆಲ್ಲರದ್ದು. ಆದರೆ ನಮಗೆ ನುಣ್ಣನೆಯ ಹಣ್ಣುಗಳನ್ನು ಮತ್ತು ಆಧುನಿಕ ತಳಿಗಳ ತರಕಾರಿಗಳನ್ನು ತಿಂದು ಕನಸು ಕಟ್ಟುವ ಕಲೆ ಗೊತ್ತಿದೆಯೇ ವಿನಹ ಮನಸ್ಸು ಕಟ್ಟುವ ಕಲೆಯಲ್ಲ. ಹಾಗಾಗಿ ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಸದೃಢವಾದಂತಹ ಮತ್ತು ಆರೋಗ್ಯಶೀಲವಾದಂತಹ ಬದುಕನ್ನು ಕಟ್ಟಿಕೊಳ್ಳುವ ಒಂದು ಅರ್ಥಪೂರ್ಣ ಜೀವನವನ್ನು ಸಾಗಿಸುವ ದೃಡನಿರ್ಧಾರ ನಮ್ಮದಾಗಬೇಕಿದೆ.
             ಇನ್ನು, ಆರೋಗ್ಯ ಅಂದಾಗ ದೈಹಿಕವಾಗಿ ನಮ್ಮನ್ನು ಕಾಡುವ ನೂರಾರು ರೋಗ ರುಜಿನಗಳು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ಸಂಶೋಧನೆಗಳ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಸುಮಾರು ಎಪ್ಪತ್ತು ಸಾವಿರಕ್ಕಿಂತ ಹೆಚ್ಚು ಜನ ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ. ಇಂದಿನ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ, ಕೌಟುಂಬಿಕ ಮತ್ತು ಸಾಮಾಜಿಕ ಬದಲಾವಣೆಗಳು ಬದುಕಿನ ಬಹುದೊಡ್ಡ ಸವಾಲುಗಳಂತೆ ಎದ್ದುನಿಂತಿವೆ. ಈ ಆಧುನಿಕ ಬದುಕಿನ ಆಡಂಬರಗಳಿಗೆ ಆದರದ ಹೆಜ್ಜೆಯನ್ನಿಡುವ ಅನರ್ಥಪೂರ್ಣ ಗೊಂದಲಗಳು ನಮ್ಮ ಜೀವಿತಾವಧಿಯನ್ನು ನೂರಾ ಇಪ್ಪತ್ತರಿಂದ ಅರವತ್ತರ ಹಾದಿ ಹಿಡಿಯುವಂತೆ ಮಾಡಿವೆ. ಅತ್ಯಂತ ಪ್ರಮುಖವಾಗಿ ಕ್ಷಣ ಕ್ಷಣಕ್ಕು ಮನುಷ್ಯನ ಮನಸ್ಸನ್ನು ಕೊಲ್ಲುವ ಅದೆಷ್ಟೋ ಮಾನಸಿಕ ಸಮಸ್ಯೆಗಳು ಹೊರಬರಲಾರದ ಜೀವನದ ಜಂಜಾಟಗಳ ಬಲೆಯಲ್ಲಿ ಸಿಲುಕಿ ಒದ್ದಾಡುವಂತೆ ಮಾಡುತ್ತಿವೆ. ಮಾನಸಿಕ ಒತ್ತಡ, ಶೈಕ್ಷಣಿಕ ಸವಾಲುಗಳು, ತಾರುಣ್ಯದ ಗೊಂದಲಗಳು ಅತೀ ಸಾಮಾನ್ಯವಾಗಿ ಮುದ್ದು ಮಕ್ಕಳ ಸ್ವಚ್ಛಂದ ಮನಸ್ಸಿನಲ್ಲಿ ಮಾಸದ ಗಾಯದಂತೆ ಕಾಣುತ್ತಿವೆ. 
        ಇನ್ನು, ಸಮಾಜದಲ್ಲಿ ಭಾವನಾತ್ಮಕವಾಗಿ ಬಾಂಧವ್ಯಗಳ ಕೊಂಡಿ ಕಳಚಿ ಬೀಳಲಾರಂಭಿಸಿದ್ದು ಸಂಬಂಧಗಳ ಸಂಕೋಲೆ ಸಡಿಲಗೊಂಡಿದೆ. ಪ್ರೀತಿ, ಪ್ರೇಮ, ನಂಬಿಕೆ, ಸಹನೆ, ತಾಳ್ಮೆ ಮತ್ತು ಮಾನವೀಯ ಮೌಲ್ಯಗಳು ಕುಸಿದು ಧರೆಗುರುಳುತ್ತಿವೆ. ಸ್ವಾರ್ಥ ಸಾಧನೆಯ ಕರಿನೆರಳಿನಡಿ ಮಾನವನ ಬದುಕು ನಿರರ್ಥಕವಾಗಿ ಕರಗಿಹೋಗುತ್ತಿದೆ. ಜೀವನದ ಹಂತ ಹಂತಕ್ಕೂ ಮಾನವ ಭಾವನೆಗಳ ತೊಳಲಾಟಕ್ಕೆ ಸಿಲುಕಿ ದಿಕ್ಕಿಲ್ಲದ ಜೀವನದ ಗುರಿಯೆಡೆಗೆ ತೇಲಿಬಿಟ್ಟ ದೋಣಿಯಂತಾಗಿದ್ದಾನೆ. ಪರಿಸರ ನಾಶ, ವಾಯು ಮತ್ತು ಜಲಮಾಲಿನ್ಯದಂತಹ ಎಡವಟ್ಟುಗಳು ಮಾನವನ ಸಾಮಾಜಿಕ ಆರೋಗ್ಯವನ್ನು ಹದಗೆಡಿಸುತ್ತಿವೆ. ಅಷ್ಟೇ ಅಲ್ಲದೆ ಸಮಾಜದಲ್ಲಿನ ಧಾರ್ಮಿಕ, ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯಗಳು ಪತನಗೊಳ್ಳುವುದರ ಮೂಲಕ ಸಂಬಂಧಗಳ ಕೊಂಡಿ ಕಳಚಿ ಬೀಳುವಂತೆ ಮಾಡಿವೆ.
           ನಗರವಾಸಿಗಳಾಗಿದ್ದರೂ ಕೂಡ ಗ್ರೀನ್-ಹೌಸ್ ಮತ್ತು ವೆಜಿಟೇಬಲ್-ಗಾರ್ಡನಿಂಗ್ ನಂತಹ ಹೊಸ ವಿಧಾನಗಳನ್ನು ಬಳಸಿಕೊಂಡು ತಮಗೆ ಬೇಕಾದ ಪೌಷ್ಠಿಕ ತರಕಾರಿಗಳನ್ನು ಅತೀ ಸುಲಭವಾಗಿ ಬೆಳೆಯುವ ಮೂಲಕ ಆರೋಗ್ಯವನ್ನು ತಾವೇ ಪಡೆದುಕೊಳ್ಳಲು ಅವಕಾಶಗಳಿವೆ. ಮತ್ತು ನಮ್ಮ ಸುತ್ತ ಬಾಂಧವ್ಯಗಳ ಹುತ್ತವನ್ನು ಕಟ್ಟಿ ಪ್ರೀತಿ, ಸ್ನೇಹ, ಸಹಬಾಳ್ವೆಯ ಮೂಲಕ ಮಾನಸಿಕ ಆರೋಗ್ಯವನ್ನು ನಾವೇ ನಿರ್ಮಿಸಿಕೊಳ್ಳುವ ಅನಿವಾರ್ಯತೆಯಿದೆ. ಸಾಮಾನ್ಯವಾಗಿ ಆರೋಗ್ಯ ಅಂದಾಗ ಪರಿಶುದ್ದ ನೀರು ಮತ್ತು ಗಾಳಿ, ಸ್ವಚ್ಛಂದ ಪರಿಸರ ಹಾಗೂ ನಿಷ್ಕಲ್ಮಶ ಸಮಾಜದ ನಿರ್ಮಾಣವು ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ದಿನನಿತ್ಯದ ಚಟುವಟಿಕೆಗಳು ಸಕಾರಾತ್ಮಕವಾಗಿದ್ದಾಗ ಅತ್ಯುನ್ನತವಾದ ಆರೋಗ್ಯದ ಭಾಗ್ಯವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯ. ಇಂತಹದ್ದೊಂದು ಕಾರ್ಯದ ಮೂಲಕ ಜಗತ್ತನ್ನು ಎಚ್ಚರಗೊಳಿಸಿದ ಸ್ವೀಡನ್ ದೇಶದ ಪುಟ್ಟ ಹುಡುಗಿ ಗ್ರೇಟಾ ತುನ್ಬರ್ಗ್ ನಮಗೂ ಮಾದರಿಯಾಗಲಿ.     
 
                   ಗುರುರಾಜ್ ಇಟಗಿ.
      ಮಕ್ಕಳ ಮನಶಾಸ್ತ್ರಜ್ಞರು , ಮಂಗಳೂರು.

Ads on article

Advertise in articles 1

advertising articles 2

Advertise under the article