-->
ಕವಲುದಾರಿ - ಕಥೆ

ಕವಲುದಾರಿ - ಕಥೆ

    ಧನ್ಯಶ್ರೀ  10 ನೇ ತರಗತಿ
    ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
    ಬಂಟ್ವಾಳ ತಾಲೂಕು

                        ಕವಲುದಾರಿ-ಕಥೆ
   ಒಂದು ಚಿಕ್ಕದಾದ ಚೊಕ್ಕದಾದ 4 ಸದಸ್ಯರ ಸುಂದರ ಸಂಸಾರ. ಅದು ಪುಟ್ಟ ಹಳ್ಳಿಯಲ್ಲಿತ್ತು. ಮನೆಯಲ್ಲಿ ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳಿದ್ದರು. ಬಡತನವಿದ್ದರೂ ಆನಂದವಾಗಿ ಇದ್ದುದರಲ್ಲೇ ಸಂತೋಷಪಡುತ್ತಾ ಒಪ್ಪವಾಗಿತ್ತು ಆ ಸಂಸಾರ. ಇಬ್ಬರು ಮಕ್ಕಳಲ್ಲಿ ದೊಡ್ಡವಳು ಸಂಜಿತಾ, ಸಣ್ಣವಳು ಸಂಗೀತಾ. ಇಬ್ಬರೂ ಯಾವುದೇ ವಿಷಯದಲ್ಲಿಯೂ ಜಗಳ ಮಾಡುತ್ತಿರಲಿಲ್ಲ. ಒಟ್ಟಿಗೇ ಕೂಡಿ ಆಡುತ್ತಿದ್ದರು, ಒಟ್ಟಿಗೇ ಕೂತು ಓದುತ್ತಿದ್ದರು, ಬರೆಯುತ್ತಿದ್ದರು. ಒಬ್ಬಳು ಬಿದ್ದರೆ ಅವಳು ಅಳುವಾಗ ಇನ್ನೊಬ್ಬಳು ಅಳುವಂಥ ಅನ್ಯೋನ್ಯತೆ. ತಂದೆ ಮರದ ಕೆಲಸಕ್ಕೆ ಹೋಗುತ್ತಿದ್ದರು , ಹಾಗೆ ಸ್ವಲ್ಪ ಕುಡೀತಾನೂ ಇದ್ದರು. ಒಂದು ಸಮಾಧಾನಕರ ವಿಷಯವೆಂದರೆ ಕುಡಿದು ಬಂದರೆ ಮನೆಯಲ್ಲಿ ತಮ್ಮಷ್ಟಕ್ಕೆ ಇರುತ್ತಿದ್ದರು. 
     ತಾಯಿ ಬೀಡಿ ಕಟ್ಟುವುದು, ಹಾಗೂ ಶಾಲೆಯ ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು. ಹೀಗೆ ಆ ಸಂಪಾದನೆಯಿಂದಲೇ ಹೊಟ್ಟೆ ತುಂಬುತ್ತಿತ್ತು. ಸಂಗೀತಾ ಇನ್ನೂ ಎರಡನೇ ತರಗತಿ, ಸಂಜಿತಾ ನಾಲ್ಕನೇ ತರಗತಿ ಕಲಿಯುವವಳು. ಅವಳನ್ನು ಪಟ್ಟಣದಲ್ಲಿರುವ ಅವಳ ಚಿಕ್ಕಮ್ಮ-" ಸಂಜಿತಾ ಇನ್ನು ಮುಂದೆ ನಮ್ಮ ಮನೆಯಿಂದ ಶಾಲೆಗೆ ಹೋಗಲಿ,ನಮ್ಮ ಮಗಳಿಗೂ ಜೊತೆ ಇದ್ದ ಹಾಗಾಗುತ್ತದೆ " ಎಂದರು. ಸಂಜಿತಾಳ ಚಿಕ್ಕಮ್ಮನಿಗೆ ಒಬ್ಬಳೇ ಮಗಳು "ದೀಪ" ಎಂದು. ಅವಳಿನ್ನೂ ಸಣ್ಣವಳಾಗಿದ್ದಳು. ಚಿಕ್ಕಮ್ಮನ ಮಾತಿಗೆ ಸಂಜಿತಾಳ ಅಮ್ಮ " ಸರಿ " ಎಂದರು. ಹೇಗಿದ್ದರೂ ಮನೆಯಲ್ಲಿ ಬಡತನ, ಅವಳಾದರೂ ಅಲ್ಲಿ ಸುಖವಾಗಿರಲಿ ಎಂದು ಅವರ ಯೋಚನೆ.
       ಸಂಜಿತಾಳ ಮುಂದಿನ ವಿದ್ಯಾಭ್ಯಾಸ ತನ್ನ
  ಚಿಕ್ಕಮ್ಮನ ಮನೆಯಲ್ಲಿ ನಡೆಯುವುದಿತ್ತು. ಶಾಲೆಗೆ ಸೇರಿಸಿದರು. ಅಂದು ಮೊದಲನೇ ದಿನವಾದ್ದರಿಂದ ಸ್ವಲ್ಪ ಭಯವಿದ್ದರೂ ಖುಷಿಯಿಂದಿದ್ದಳು. ಎಲ್ಲರ ಜೊತೆಗೂ ಮಾತುಕತೆ ಎಲ್ಲಾ ಇತ್ತು. ಮೊದಲ ದಿನ ಅಂದಮೇಲೆ ಹಾಗೇ ಅಲ್ಲವೇ? ಕೆಲವರು ತುಂಬಾ ಮಾತನಾಡುವುದಿಲ್ಲ , ಮುಜುಗರ ಮೊದಮೊದಲು ಹಾಗೆಯೇ ಇವಳು ಸಹ. ಅಂದು ಪಾಠ ಶುರುವಾದ ದಿನ. ಇಂಗ್ಲೀಷ್ ತರಗತಿ , ಸಂಜಿತಾ ಸ್ವಲ್ಪ ಇಂಗ್ಲೀಷ್ ವಿಷಯದಲ್ಲಿ ಅಷ್ಟಕ್ಕಷ್ಟೇ. ಶಿಕ್ಷಕಿ ಪಾಠ ಮಾಡಿದ ನಂತರ ಅವಳಲ್ಲಿ ಎದ್ದು ನಿಂತು ಓದಲು ಹೇಳಿದಾಗ ಸುಮ್ಮನೇ ನಿಂತಿದ್ದಳು. ನಂತರ ಉಕ್ತಲೇಖನ ಕೊಡುವಾಗಲೂ ಸಹ ಒಳ್ಳೆಯ ಅಂಕಗಳನ್ನು ಪಡೆಯಲಿಲ್ಲ. ಆದರೂ ಅವಳು 'ಗೊತ್ತಿಲ್ಲ' ಎಂದು ಸುಮ್ಮನಿರಲಿಲ್ಲ. ಗೊತ್ತಿಲ್ಲದ ವಿಷಯಗಳನ್ನು ಶಿಕ್ಷಕರಲ್ಲಿ , ತನ್ನ ಗೆಳೆಯರಲ್ಲಿ ಕೇಳಿ ಪ್ರಯತ್ನ ಪಟ್ಟು ಕಲಿಯುತ್ತಿದ್ದಳು. ನಿಧಾನಕ್ಕೆ ಅವಳಿಗೆ ಸುಲಭವಾಗತೊಡಗಿತು. 
     ಆಮೇಲೆ ಆರನೇ ತರಗತಿಯಲ್ಲಿರುವಾಗ ಶಾಲೆಗೆ ಸಂಗೀತ ಶಿಕ್ಷಕಿಯೊಬ್ಬರು ಬಂದರು. ಹೆಸರು ಪಲ್ಲವಿ. ಸಂಗೀತ ಅಭ್ಯಾಸ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಮಾಡಬೇಕಿತ್ತು. ಸಂಗೀತ ತರಗತಿಯಲ್ಲಿ ಚೆನ್ನಾಗಿ ಹಾಡುವುದರಿಂದ ಸಂಜಿತಾಳನ್ನು ತಂಡದ ನಾಯಕಿಯಾಗಿ ಆಯೋಜಿಸಿದರು. ಇದು ಸಂಜಿತಾಳಿಗೆ ತುಂಬಾ ಖುಷಿಯ ಸಂಗತಿಯಾಗಿತ್ತು. ಸಂಗೀತ ಶಿಕ್ಷಕಿ ಬಂದು ಎರಡು-ಮೂರು ವಾರ ಆಗಿತ್ತು. ನಂತರದಿಂದ ಅವರು ಶಾಲೆಗೆ ಬರುತ್ತಿರಲಿಲ್ಲ. ಸಂಜಿತಾಳಿಗೆ ಬೇಸರವಾಗಿದ್ದರೂ ನಂತರದಲ್ಲಿ ಅವಳಿಗೆ ಹಾಡುವುದೆಂದರೆ ಅಚ್ಚುಮೆಚ್ಚಿನ ಹವ್ಯಾಸವಾಯ್ತು. ಶಾಲೆಯಲ್ಲಿ ಹಾಡುವ ಸ್ಪರ್ಧೆಗಳಿದ್ದರೂ ಅವಳು ತಪ್ಪದೆ ಭಾಗವಹಿಸುತಿದ್ದಳು ಮತ್ತು ಬಹುಮಾನ ಪಡೆಯುತ್ತಿದ್ದಳು. ಶಾಲೆಯ ಗುರುಗಳೆಲ್ಲರೂ ಅವಳನ್ನು ಹೊಗಳುತಿದ್ದರು.    
        ವಿದ್ಯಾಭ್ಯಾಸದಲ್ಲಿಯೂ ಉತ್ತಮ ಅಂಕಗಳನ್ನು ಪಡೆಯುತಿದ್ದಳು. ಈಗ ಅವಳು ಹತ್ತನೇ ತರಗತಿ. ತನ್ನ ಓದು ಹಾಗೂ ಹಾಡುವ ಹವ್ಯಾಸ. ಇದನ್ನು ಬಿಟ್ಟು ಬೇರೆ ಕಡೆ ಗಮನ ಹರಿಸುತ್ತಿರಲಿಲ್ಲ. ಹತ್ತನೇ ತರಗತಿ ಅಂದಮೇಲೆ ಕೇಳಬೇಕೆ ? ಚೆನ್ನಾಗಿ ಓದಲೇಬೇಕು.. ಓದದೇ ಇದ್ದಲ್ಲಿ ಪರೀಕ್ಷೇ ದಿನ ಇನ್ನೊಬ್ಬರ ಉತ್ತರ ಪತ್ರಿಕೆಯನ್ನು ನೋಡಿ ನಕಲು ಮಾಡಲೂ ಸಾಧ್ಯವಿಲ್ಲ. ಸಂಜಿತಾಳಿಗೆ ಒಬ್ಬ ಉತ್ತಮ ಹಾಡುಗಾರ್ತಿಯಾಗಬೇಕು, ಒಂದೊಳ್ಳೆಯ ಕೆಲಸ ದೊರೆತು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ಇತ್ತು. ಆದ್ದರಿಂದ ಅದಕ್ಕಾಗಿ ಅವಳು ತುಂಬಾ ಶ್ರಮ ಪಡುತ್ತಿದ್ದಳು. ಹತ್ತನೇ ತರಗತಿಯ ಪರೀಕ್ಷೆ ಬರೆದು ಫಸ್ಟ್ ರಾಂಕ್ ಪಡೆದುಕೊಂಡಳು. ಹಾಗೆ ಮುಂದಿನ ಪಿ.ಯು.ಸಿ, ಡಿಗ್ರಿ ಹೀಗೆ ಮುಂದಿನ ವ್ಯಾಸಾಂಗ ಮಾಡಿ ಎಲ್ಲದರಲ್ಲೂ ಒಳ್ಳೆಯ ಅಂಕಗಳನ್ನು ಪಡೆದಳು. ನಂತರ ಅವಳು ಕೆಲಸ ಹುಡುಕಲು ಶುರು ಮಾಡುತ್ತಿದ್ದ ಹಾಗೆಯೇ ಹಾಡಲು ಹಲವಾರು ಉತ್ತಮ ಅವಕಾಶಗಳು ದೊರೆತವು. ಹಾಡಲು ಅವಕಾಶ ತುಂಬಾ ದೊರೆತರೆ ಹಾಡುಗಾರ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ ಅಲ್ಲವೇ? ಹಾಗೆಯೇ ಹಾಡುಗಾರ್ತಿಯಾದಳು. ಸಿನಿಮಾದಲ್ಲಿ ಹಾಡಲು ಅವಕಾಶ ಸಿಕ್ಕಿತು. ಅವಳು ಪ್ರತಿಯೊಂದು ಹಾಡು ಹಾಡುವಾಗಲೂ ಮೊದಲಾಗಿ ತನ್ನ ಸಂಗೀತ ಶಿಕ್ಷಕಿ, ತನ್ನ ಗುರುಗಳು ಹಾಗೂ ತಂದೆ - ತಾಯಿಯರನ್ನು ನೆನೆಯುತಿದ್ದಳು. ಮುಂದೊಂದು ದಿನ ಒಳ್ಳೆಯ ಕೆಲಸವೂ ದೊರೆಯಿತು. ಅವಳು ಒಬ್ಬ ಉತ್ತಮ ಶಿಕ್ಷಕಿಯಾದಳು. 
        ಈಗ ಅವಳು ಒಬ್ಬ ಜವಾಬ್ದಾರಿಯುತ ಹೆಣ್ಣಾದಳು. ತನ್ನ ತಂದೆ - ತಾಯಿ, ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವಳು. ತಂಗಿಗೆ ಮುಂದೆ ಇನ್ನೂ ಓದಬೇಕೆಂಬ ಆಸೆಯಿದ್ದುದರಿಂದ ಓದಿಸಿದಳು. ಸಂಜಿತಾಳಿಗೆ ತನ್ನ ಬಾಳನ್ನು ನೆನೆದು ಸಂತಸವಾಯಿತು.
                  ಧನ್ಯಶ್ರೀ 10ನೇ ತರಗತಿ
           ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ

Ads on article

Advertise in articles 1

advertising articles 2

Advertise under the article