-->
ತಂದೆ ಎಂಬ ಸೌಭಾಗ್ಯ - ಕಥೆ

ತಂದೆ ಎಂಬ ಸೌಭಾಗ್ಯ - ಕಥೆ

ಬಿಂದುಶ್ರೀ 10 ನೇ ತರಗತಿ 
ಕರ್ನಾಟಕ ಪಬ್ಲಿಕ್ ಸ್ಕೂಲ್,  ಕನ್ಯಾನ
ಬಂಟ್ವಾಳ ತಾಲೂಕು

             ತಂದೆ ಎಂಬ ಸೌಭಾಗ್ಯ - ಕಥೆ
          ಅದೊಂದು ತುಂಬು ಸಂಸಾರದಿಂದ ಕೂಡಿದ ಕುಟುಂಬ. ಯಜಮಾನ ಬಸವ ಹಾಗೂ ಅವನ ಧರ್ಮಪತ್ನಿ ಮೇದಿನಿ. ಇವರಿಗೆ ಇಬ್ಬರು ಮಕ್ಕಳು. ಮಗಳು ಸೃಜನಾ , ಮಗ ಸುಜಿತ್. ಇವರನ್ನು ಬಿಟ್ಟರೆ ಆ ಮನೆಯಲ್ಲಿ ಬಸವನ ತಮ್ಮ ರಾಜೀವ್ ಹಾಗೂ ಅವನ ಹೆಂಡತಿ ರುಕ್ಮಿಣಿ ಮತ್ತು ಅವರ ಮಗ ಶಶಿ ಮತ್ತು ಬಸವನ ತಾಯಿ ಇದ್ದರು. ಬಸವನಿಗೆ ತನ್ನ ತಂದೆ ಯಾರೆಂಬುದೇ ತಿಳಿದಿರಲಿಲ್ಲ. ತಾಯಿಗೆ ಹಿಂದಿನ ಕಾಲದ ಪದ್ಧತಿಯಂತೆ ಬಾಲ್ಯ ವಿವಾಹವಾದ್ದರಿಂದ ತಿಳುವಳಿಕೆ ಬರೋ ಹೊತ್ತಿಗೆ ಗಂಡನನ್ನು ಕಳೆದುಕೊಂಡಿದ್ದಳು. ಹಿಂದಿನ ಕಾಲದಲ್ಲಿ ದೊಡ್ಡವರನ್ನು ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಆದ್ದರಿಂದ ಬಸವನ ತಾಯಿಯೂ ಸಮ್ಮನಿದ್ದುಬಿಟ್ಟಿದ್ದಳು. ಬಸವ ತನ್ನ ಹದಿನೈದು ಎಕರೆಯಲ್ಲಿ ಕಬ್ಬು, ಭತ್ತ, ತೆಂಗು, ಅಡಿಕೆ, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದ. ಬೆಳಿಗ್ಗೆ ಕೋಳಿ ಕೂಗುವ ಮುಂಚೆಯೇ ಎದ್ದು ಅಣಿಯಾಗಿ ಹೊಲಕ್ಕೆ ಹೋಗುವುದು ಅವನ ರೂಢಿ. ನಂತರ ಸಂಜೆ ಐದು ಗಂಟೆಗೆ ಮರಳಿ ಮನೆ ಸೇರುತ್ತಿದ್ದ . ಯಾರಾದರೂ ಅತಿಥಿ ಮನೆಗೆ ಬಂದಿದ್ದಾರೆ ಎಂದು ತಿಳಿದರೆ ಮಾತ್ರ ತನ್ನ ಕೆಲಸ ಬಿಟ್ಟು ಬರುತ್ತಿದ್ದ. ಇವನ ಪರಿಶ್ರಮಕ್ಕೆ ಫಲವಾಗಿ ಆ ಬೆಳೆಗಳು ಸೊಂಪಾಗಿ ಬೆಳೆದು, ಉತ್ತಮವಾದ ಫಸಲು ಬರುತ್ತಿತ್ತು. ಇದರಿಂದ ಆ ಊರಿನಲ್ಲಿ ' ಮಾದರಿ ರೈತ ' ಎಂದೇ ಪ್ರಸಿದ್ಧಿಯಾಗಿದ್ದ.  
          ಒಂದು ದಿನ ಬೆಳಿಗ್ಗೆ ಎದ್ದು ಬಸವ ಎಂದಿನಂತೆ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೊರಟ. ಸೃಜನಾಳ ಅಜ್ಜಿ ತಾನು ಪ್ರೀತಿಯಿಂದ ಬೆಳೆಸಿದ್ದ , ತನ್ನ ಮಲ್ಲಿಗೆ ಗಿಡಗಳಿಗೆ ನೀರೆರೆಯುತ್ತಿದ್ದಳು. ಇವಳ ಪ್ರೀತಿಗೆ ಆ ಹೂವುಗಳು ನಗು ನಗುತ್ತಾ ಅರಳಿ ನಿಂತು , ಎಲ್ಲರನ್ನು ತನ್ನ ಕಡೆಗೆ ಸೆಳೆಯುತಿತ್ತು. ಮೇದಿನಿ ಹಾಗೂ ರುಕ್ಮಿಣಿ ತಮ್ಮ ಅಡುಗೆ ಕೆಲಸಗಳಲ್ಲಿ ನಿರತರಾಗಿದ್ದರು. ರಾಜೀವ ತಾನು ಸಮಯವಿದ್ದಾಗ ಮಾತ್ರ ಅಣ್ಣನ ಜೊತೆ ಹೊಲದಲ್ಲಿ ದುಡಿಯುತ್ತಿದ್ದ. ಉಳಿದ ಸಮಯದಲ್ಲಿ ಅವನು ಹೊರಗಡೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ. 
           ಹೀಗೆ ಪ್ರಶಾಂತವಾಗಿರುವ ವಾತಾವರಣದಲ್ಲಿ ತಣ್ಣನೆ ಗಾಳಿ ಬೀಸುತ್ತಿತ್ತು. ಸುಡು ಮಧ್ಯಾಹ್ನದ ಬಿಸಿಲು. ಈ ಸಮಯದಲ್ಲಿ ಅಂದಾಜು 80 - 85 ರ ವಯಸ್ಸಿನ ಮುದುಕ ಇವರ ಮನೆಗೇ ನಡೆದು ಬರುತ್ತಿದ್ದ. ಬಿಸಿಲಿದ್ದರಿಂದ ಬೆವರಿಳಿದು, ತಲೆಯೂ ನೋಯುತ್ತಿತ್ತು. ಕಾಲುಗಳಲ್ಲಂತೂ ನಿಶ್ಯಕ್ತಿ ಕಾಡುತ್ತಿತ್ತು. ಹೇಗೋ ಮನೆಯಂಗಳಕ್ಕೆ ಬಂದ ಮುದುಕ " ಯಾರಾದರೂ ಇದ್ದೀರಾ? " ಎಂದು ಕೂಗಿ ಕರೆದ. ಇವನ ಧ್ವನಿಗೆ ಆಟದಲ್ಲಿ ಮೈ ಮರೆತಿದ್ದ ಸೃಜನಾ, ಸುಜಿತ್ ಮತ್ತು ಶಶಿ ಎಚ್ಚೆತ್ತು ಮೇದಿನಿಗೆ ಬಂದು ವಿಷಯ ತಿಳಿಸಿದರು. ' ಅವರನ್ನು ಜಗಲಿಯಲ್ಲಿ ಕೂರುವಂತೆ ಹೇಳಿ ' ಎಂದು ಆ ಮಕ್ಕಳನ್ನು ಕಳಿಸಿದ ಮೇದಿನಿ, ತಣ್ಣನೆಯ ನೀರನ್ನು ಹಿಡಿದು ಹೊರಬಂದಳು. ಮುದುಕನನ್ನು ಕಂಡು " ತಮ್ಮ ಪರಿಚಯವಾಗಲಿಲ್ಲ " ಎಂದಳು. ಅವನು 'ತನಗೆ ಬಸವ ಹಾಗೂ ಅವನ ತಾಯಿಯ ಬಗ್ಗೆ ಚೆನ್ನಾಗಿ ಗೊತ್ತು, ಅವರಿಗೆ ತಿಳಿದಿದೆಯೋ ಇಲ್ಲವೋ ನಾನರಿಯೇ' ಎಂದನು. ಆಗ ಮೇದಿನಿ ತಣ್ಣನೆಯ ನೀರನ್ನು ಅವನ ಕೈಗಿತ್ತು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವಂತೆ ತಿಳಿಸಿ , ಬಸವನನ್ನು ಕರೆಯಲು ಹೋದಳು. ಮುದುಕನನ್ನು ಆ ಪುಟ್ಟ ಮಕ್ಕಳು ಗಮನಿಸುತ್ತಲೇ ಇದ್ದರು. ಅವನು ಆ ನೀರನ್ನು ಕುಡಿದು, " ಉಸ್ " ಎಂದು ಗೋಡೆಗೊರಗಿ ಕುಳಿತನು. ಮುಖದಲ್ಲಿ ಮುಗುಳುನಗೆ ಓಲಾಡುತ್ತಿತ್ತು. ತನ್ನನ್ನೇ ಮೂಕರಂತೆ ನೋಡುತ್ತಿದ್ದ ಆ ಮಕ್ಕಳನ್ನು ಬಳಿಗೆ ಕರೆದು ಮಾತಾಡಿಸಿದನು. ತನ್ನ ಜೋಳಿಗೆಯಲ್ಲಿದ್ದ ಶೇಂಗಾವನ್ನು ತೆಗೆದು ಆ ಪುಟ್ಟ ಮಕ್ಕಳಿಗೆ ಕೊಟ್ಟು, ಪ್ರೀತಿಯಿಂದ ಮೈದಡವಿದನು. ಅಷ್ಟರಲ್ಲಿ ಮೇದಿನಿ ಬಸವನನ್ನು ಕರೆದುಕೊಂಡು ಬಂದಳು. ಬಸವ ಕೈಕಾಲು, ಮುಖ ತೊಳೆದು, ಒಂದು ಲೋಟ ನೀರನ್ನು ಕುಡಿದು ಮುದುಕನಿಗೆ ನಮಸ್ಕರಿಸಿ , ಅವನ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಕುಳಿತನು. ಮುದುಕ ಇವನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಲೇ ಇದ್ದನು. ಬಸವ ಏನು ಮಾಡಬೇಕೆಂದು ತೋಚದೆ ಅವರಲ್ಲಿ ತಾವು ಯಾರೆಂದು ಪ್ರಶ್ನಿಸಿದನು. ಮುದುಕ " ನಾನೊಬ್ಬ ಬಡವ , ಸಣ್ಣವಯಸ್ಸಲ್ಲೇ ಮದುವೆ ಮಾಡಿದರು. ನನಗೋ ಎಲ್ಲರೊಡನೆ ಬೆರೆತು, ಗೆಳೆಯರ ಜೊತೆ ಕಾಲಕಳೆಯಬೇಕೆಂಬ ಆಸೆ ಇತ್ತು. ಹಾಗಾಗಿ ಹೆಂಡತಿಯನ್ನು ಬಿಟ್ಟು ಮನೆಯವರಾರಿಗೂ ತಿಳಿಯದಂತೆ, ಹೆಂಡತಿಯ ಒಂದು ಚಿನ್ನದ ಸರ ಮತ್ತು ಒಂದು ಸಣ್ಣ ಉಂಗುರದ ಜೊತೆ ಮನೆಬಿಟ್ಟು ಹೊರಟೆ. ಮೊದಲಿಗೆ ದೂರದ ಊರಿನ ಒಬ್ಬ ಗೆಳೆಯನ ಮನೆಯಲ್ಲಿದ್ದೆ. ಆ ನಂತರ ಅವನ ಸಹಾಯದಿಂದ ಒಂದು ಜಾಗ ಖರೀದಿಸಿ, ಅದರಲ್ಲೊಂದು ಸಣ್ಣ ಮನೆ ಮಾಡಿ , ಸ್ನೇಹಿತನ ಸಲಹೆಯಂತೆ ಬೆಳೆ ಬೆಳೆದೆ. ಇದರಿಂದ ನನ್ನ ಜೀವನವೂ ಸುಧಾರಿಸಿತು. ಹೆಚ್ಚಾದ ತರಕಾರಿಗಳನ್ನು ಮಾರುಕಟ್ಟೆಗೆ ಗೆಳೆಯನ ಮೂಲಕ ಕಳಿಸುತ್ತಿದ್ದೆ. ಹಣವೂ ಬರತೊಡಗಿತು. ಕೆಲವೊಮ್ಮೆ ಗೆಳೆಯರ ಜೊತೆ ಸುತ್ತಾಡುತ್ತಾ , ಎಲ್ಲಾದರು ಗುಂಪು ಸೇರಿ ಆಟವಾಡುತ್ತಾ , ಜೊತೆಗೆ ಕೃಷಿಯನ್ನು ಮುಂದುವರೆಸಿಕೊಂಡು ಬಂದೆ. 
         ಜೀವನ ನೆಮ್ಮದಿಯಾಗೇ ಇತ್ತು. ಆದರೆ ಹೆಂಡತಿ ಜೊತೆಯೊಳಿಲ್ಲವೆಂಬ ಚಿಂತೆ, ಆದರೆ ಮರುಮದುವೆಗೆ ಮನಸ್ಸೂ ಒಪ್ಪಲಿಲ್ಲ. ಒಂಟಿಯಾಗೇ ಇದ್ದೆ. ಸಣ್ಣದಿರುವಾಗ ಈ ಕಡೆಗೂ ಬರುತ್ತಿದ್ದೆ. ಈಗ ವಯಸ್ಸು ಆಗಿದೆ. ಆದರೂ ಈ ಕಡೆಗೆ ಬರಬೇಕೆಂದೆನಿಸಿ ಬಂದೆ. ಕೊನೆಗೆ ವಿಚಾರಿಸಿದಾಗ ನಿನ್ನ ಮನೆಯಲ್ಲಿ ಉಳಿಯಲು ಜಾಗ ಸಿಗಬಹುದೆಂದು ಕೆಲವರು ಹೇಳಿದರು, ಹಾಗಾಗಿ...... " "ಹಾಗೋ, ಸರಿ. ನಿಮ್ಮನ್ನು ನೋಡಿದಾಗ ತುಂಬಾ ಒಳ್ಳೆಯವರಂತೆ ಕಾಣಿಸುತ್ತೀರಿ. ತಾವು ಇಲ್ಲೇ ಆಶ್ರಯ ಪಡೆಯಬಹುದು " ಎಂದನು ಬಸವ , ನಿರಾಳವಾಗಿ. ಮುದುಕ ತುಂಬ ಖುಷಿಗೊಂಡಿರುವುದು ಅವನ ಮುಖದ ಭಾವನೆಯಲ್ಲಿ ತಿಳಿಯುತ್ತಿತ್ತು. ಮೇದಿನಿ ಒಳಗೆ ಕರೆದುಕೊಂಡು ಹೋಗಿ ಅವನ ಕೋಣೆ ತೋರಿಸಿ, ವಿಶ್ರಾಂತಿಗಾಗಿ ಚಾಪೆ ಹಾಸಿಕೊಟ್ಟು ಹೊರಬಂದಳು. ಬಸವ ಮತ್ತೆ ತನ್ನ ಕೆಲಸಕ್ಕೆ ಹೊರಟು ಹೋದನು. ಮತ್ತೆ ಎಲ್ಲರೂ ಎಂದಿನಂತೆ ತಮ್ಮ ತಮ್ಮ ಕೆಲಸದಲ್ಲಿ ನಿರತರಾದರು. ರಾತ್ರಿಯ ಊಟವಾದ ಬಳಿಕ ಎಲ್ಲರೂ ನಿದ್ರೆಗೆ ಜಾರಿದರು. ಆದರೆ ಬಸವನ ತಾಯಿಗೆ ಮಾತ್ರ ನಿದ್ದೆ ಕಣ್ಣಿಗೆ ಸುಳಿಯಲಿಲ್ಲ. ಆ ಮುದುಕನನ್ನು ಎಲ್ಲೋ ನೋಡಿದಂತೆ ಭಾಸವಾಗುತ್ತಿತ್ತು. ತನಗೆ ಹತ್ತಿರದವರು ಎಂಬ ಭಾವನೆ ಬೇರೆ ನಿದ್ರೆಯನ್ನು ಹಾಳುಗೆಡಹಿತ್ತು. ಕೊನೆಗೆ ಹೇಗೋ ಹೊರಳಿ ನಿದ್ರೆಗೆ ಜಾರಿದರು. ಪ್ರತಿದಿನವೂ ಮುದುಕ ನಿಧಾನವಾಗಿ ಎದ್ದು ಆಹಾರ ಸೇವಿಸಿ, ಸ್ವಲ್ಪ ಹೊತ್ತು ಮನೆಯ ಜಗುಲಿಯ ಮೇಲೆ ಕುಳಿತು, ನಂತರ ಹೊರಗಡೆ ಹೋಗುತ್ತಿದ್ದನು. ಹಾಗೆ ಹೋದವನು ಕತ್ತಲಾಗುತ್ತ ಬರುವಾಗ ಬಂದು ಮನೆ ಸೇರುತ್ತಿದ್ದನು. ಚಾ ಕುಡಿದು ರಾತ್ರಿಯ ಊಟವಾದ ಬಳಿಕ ಹಾಗೆ ನಿದ್ರೆಗೆ ಜಾರುತ್ತಿದ್ದ. ಕೆಲವೊಮ್ಮೆ ಬರುವಾಗ ಮಕ್ಕಳಿಗೆ ಸ್ವಲ್ಪ ತಿಂಡಿ ತಿನಿಸುಗಳನ್ನು ತರುತ್ತಿದ್ದ. ಮಕ್ಕಳಿಗೂ ಇವನಲ್ಲಿ ಬಹಳ ಹಿಡಿಸುತ್ತಿತ್ತು. ಬಸವನಿಗೂ ಮುದುಕನ ಮೇಲೆ ಅಕ್ಕರೆ ಮೂಡತೊಡಗಿತ್ತು. ಆದರೆ, ಪ್ರತಿದಿನ ಬೆಳಿಗ್ಗೆ ಹೊರಗೆ ಹೋದವನು ಸಂಜೆ ಕತ್ತಲಾಗುತ್ತಾ ಬರುವಾಗ ಬರುತ್ತಾನೆ. ಎಲ್ಲಿಗೆ ಹೋಗುತ್ತಾನೆ ಅನ್ನೋ ಪ್ರಶ್ನೆ ಮನದ ಮೂಲೆಯಲ್ಲಿ. ಹೊರಗಿಂದ ಬಂದಿರೋ ಅತಿಥಿ, ಬೇಜಾರು ಮಾಡೋದು ಬೇಡ ಅಂತ ಸುಮ್ನಿದ್ದ. ಎಂದಿನಂತೆ ರಾತ್ರಿ ಎಲ್ಲರೂ ಮಲಗಿಕೊಂಡರು. ಮುದುಕನೂ ಇವರೊಂದಿಗೆ ಉಂಡು ಮಲಗಿದ. 
          ಮಾರನೇ ದಿನ ಎಲ್ಲರೂ ಎದ್ದು ತಮ್ಮ ಕೆಲಸಗಳಲ್ಲಿ ನಿರತರಾದರು. ಮುದುಕ ಎದ್ದಿರಲಿಲ್ಲ. ಯಾವಾಗಲೂ ನಿಧಾನವಾಗಿ ಏಳ್ತಾರೆ. ಏನೋ ಇವತ್ತು ಹೆಚ್ಚು ಸುಸ್ತಾಗಿರಬೇಕಂದು ಮೇದಿನಿ ಕರೆಯೋ ಗೋಜಿಗೆ ಹೋಗಲಿಲ್ಲ. ಈ ಪುಟ್ಟ ಮಕ್ಕಳು ಅಜ್ಜನ್ನ ಮಾತಾಡಿಸೋಕೆ ಹತ್ತಿರ ಬಂದು ಕರೆದರು. ಮುದುಕ ಮೌನವಾಗಿದ್ದ. ಮತ್ತೆ ಜೋರಾಗಿ ಕರೆದರು . ಊಹುಂ , ಅಜ್ಜ ಏಳಲೇ ಇಲ್ಲ. ಮೈ ಕುಲುಕಿಸಿ ಕರೆದಾಗಲೂ ಅಜ್ಜ ಏಳದಿದ್ದಾಗ, ಮೇದಿನಿಗೆ ವಿಷಯ ತಿಳಿಸಿದರು. ವಿಷಯ ತಿಳಿದಾಗ ಮೇದಿನಿಗೆ ಸ್ವಲ್ಪ ಹೆದರಿಕೆಯೂ ಆಯಿತು. ಮೇದಿನಿ ಮತ್ತು ರುಕ್ಮಿಣಿ ಮುದುಕನನ್ನು ಕರೆದರು. ನೀರು ಚಿಮುಕಿಸಿದರು, ಮುದುಕ ಏಳಲೇ ಇಲ್ಲ. ಅನುಮಾನದಿಂದ ರುಕ್ಮಿಣಿ ಮೂಗಿನ ಬಳಿ ಕೈ ತಂದಳು. ಉಸಿರಾಟ ನಿಂತಿರುವುದು ತಿಳಿಯಿತು. ಮುದುಕ ಸತ್ತಿದ್ದಾನೆ ಅನ್ನೋ ವಿಷಯ ಬೆಳಕಿಗೆ ಬಂತು. ಮೇದಿನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅವಸರದಿಂದ ಹೋಗಿ ಬಸವನನ್ನು ಕರೆದುಕೊಂಡು ಬಂದು ವಿಷಯ ತಿಳಿಸಿದಳು. ಬಸವನಿಗೂ ಗಾಬರಿ, ಮುದುಕನನ್ನು ಬಂದು ನೋಡಿದ. ಅವನ ಪಕ್ಕದಲ್ಲಿ ಮಡಿಚಿದ ಒಂದು ಕಾಗದ ಇತ್ತು. ತೆರೆದು ನೋಡಿದ. ಬರೆದದ್ದನ್ನು ಓದಿದ ಬಸವನಿಗೆ, ಆಕಾಶವೇ ತಲೆ ಮೇಲೆ ಬಿತ್ತೇನೋ ಎಂಬ ಅನುಭವ. ಅದರಲ್ಲಿ " ಮಗು ಬಸವ , ನಿನ್ನ ಪ್ರೀತಿಗೆ, ಮುಗ್ಧತೆಗೆ ಮಾರು ಹೋದೆ. ನಾನು ನಿನಗೆ ಅಪರಿಚಿತನಾಗಿದ್ದರೂ , ನಿನ್ನ ಹಾಗೂ ಮನೆಯವರ ಕಾಳಜಿ ನನಗೆ ಬಹಳ ಮೆಚ್ಚುಗೆಯಾಯಿತು. ನಾನು ಬೇರಾರು ಅಲ್ಲ. ನಿನ್ನ ತಂದೆ ನಾನೇ , ನಾನು ಈ ಊರನ್ನು ಸುತ್ತಲು ಬಂದವನಲ್ಲ. ನಿಮ್ಮನ್ನೆಲ್ಲಾ ಹುಡುಕಿಕೊಂಡು ಬಂದೆ. ನನಗೋ ನನ್ನ ಸಾವು ಸಮೀಪಿಸುತ್ತಿದೆಯೆಂದು ಭಾಸವಾಯಿತು. ಕೊನೆಯ ದಿನಗಳನ್ನಾದರು ನಿಮ್ಮೊಡನೆ ಕಳೆಯಬೇಕೆಂದೆನಿಸಿತು. ಹಾಗಾಗಿ ನಿಮ್ಮನ್ನರಸಿ ಬಂದೆ. ದೇವರು ದೊಡ್ಡವನು. ನಿಮ್ಮ ಜೊತೆ ಕಳೆಯುವ ಭಾಗ್ಯವನ್ನು ನನಗೆ ಒದಗಿಸಿಕೊಟ್ಟ. ನಾನು ಪ್ರತಿದಿನ ಹೊರಗೆ ಹೋಗುತ್ತಿದ್ದುದು ಒಂದು ವಕೀಲರ ಬಳಿಗೆ ಹಾಗೂ ನನ್ನ ಮನೆಯಿರುವ ಸ್ಥಳಕ್ಕೆ. ಈ ಪತ್ರದ ಜೊತೆಯಲ್ಲಿ ವೀಲ್ ಅನ್ನು ಇಟ್ಟಿದ್ದೇನೆ. ನನ್ನ ಆಸ್ತಿಯನ್ನೆಲ್ಲಾ ನಿನ್ನ ಹಾಗು ಸೊಸೆಯ ಕೈಗೆ ನೀಡುತ್ತಿದ್ದೇನೆ. ಇನ್ನು ನನ್ನಲ್ಲಿ ನೀಡಲು ಏನೂ ಇಲ್ಲ. ನನ್ನ ಮೊಮ್ಮಕ್ಕಳ ಜೊತೆ ಆಡುವ ಭಾಗ್ಯ ನೀಡಿದ್ದಕ್ಕಾಗಿ ನಿನಗೆ ಕೃತಜ್ಞನಾಗಿರುತ್ತೇನೆ. ಪತ್ನಿಯನ್ನು ತೊರೆದ ನಂತರ ಸ್ವಲ್ಪ ಕಾಲ ಮಾತ್ರ ನೆಮ್ಮದಿಯಾಗಿ ಇದ್ದೆ. ಕೊನೆಕೊನೆಗೆ ಪತ್ನಿಯೂ , ಮಕ್ಕಳು ಜೊತೆಗಿದ್ದರೇನೆ ಬಾಳು ಒಂದರ್ಥದಲ್ಲಿ ಚೆನ್ನ ಎಂದು ಅರಿವಾಯಿತು. ನಿನಗೆ ಹಾಗೂ ನಿನ್ನ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ..." ಎಲ್ಲರೂ ಅವನನ್ನು ಕಳೆದುಕೊಂಡಿದ್ದಕ್ಕಾಗಿ ನೋವಿನಿಂದ ಅಳತೊಡಗಿದರು. ಬಸವನ ತಾಯಿಯಂತೂ ಎದೆಬಡಿದುಕೊಂಡು ಅತ್ತಳು. ಕೊನೆಗೆ ಬಸವನೇ ಹೇಗೋ ಸಮಾಧಾನಪಡಿಸಿದ. ತಂದೆಯ ಅಂತ್ಯಕ್ರಿಯೆಗಳನ್ನೆಲ್ಲಾ ಮುಗಿಸಿ, ಆ ಆಸ್ತಿಯನ್ನು ಒಂದು ಅನಾಥ ಆಶ್ರಮಕ್ಕೆ ದಾನವಾಗಿ ನೀಡಿದ. ಸ್ವಲ್ಪಕಾಲ ತನ್ನ ತಂದೆಯವರೊಡನೆ ಕಳೆಯಲು ಅವಕಾಶ ನೀಡಿದ್ದಕ್ಕಾಗಿ ದೇವರಿಗೆ ಮನದಲ್ಲಿಯೇ ಕೃತಜ್ಞತೆಯನ್ನು ಅರ್ಪಿಸಿದ.

ಬಿಂದುಶ್ರೀ 
10 ನೇ ತರಗತಿ 
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ 
ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article