-->
ಬಹುಮುಖ ಪ್ರತಿಭೆಯ ಬಾಲಕಿ - ಯೋಗ್ನಾ ಬಿ. ಅಮೀನ್

ಬಹುಮುಖ ಪ್ರತಿಭೆಯ ಬಾಲಕಿ - ಯೋಗ್ನಾ ಬಿ. ಅಮೀನ್

     ಯೋಗ್ನಾ ಬಿ. ಅಮೀನ್
     6 ನೇ ತರಗತಿ
      ಕೇಂದ್ರೀಯ ವಿದ್ಯಾಲಯ ಪಣoಬೂರು

                ಬಹುಮುಖ ಪ್ರತಿಭೆಯ 
           ಬಾಲಕಿ : ಯೋಗ್ನಾ ಬಿ . ಅಮೀನ್ 
     ನಮ್ಮ ಪ್ರತಿಯೊಂದು ಸಾಧನೆಗಳ ಹಿಂದೆ ಪರಿಶ್ರಮವೆಂಬುದು ಇದ್ದೇ ಇರುತ್ತದೆ. ಯಾವುದೇ ಒಂದು ಗುರಿಯನ್ನು ತಲುಪಬೇಕಿದ್ದರೂ ಸಮಯದ ಸದ್ಬಳಕೆಯ ಅರಿವು , ನಿರಂತರ ಅಭ್ಯಾಸ , ಆಸಕ್ತಿ ಮತ್ತು ಛಲ ಮುಖ್ಯವಾಗುತ್ತದೆ. ಸಾಧಕರನ್ನು ಮಾದರಿಯಾಗಿಟ್ಟುಕೊಂಡು ಮಾರ್ಗದರ್ಶಕರ ಸಹಾಯ ಪಡೆದು ಬೆಳೆಯುವ ಅನೇಕ ಮಕ್ಕಳನ್ನು ನಾವು ಕಾಣುತ್ತೇವೆ. ಅಂತಹ ಮಹತ್ತರ ಕನಸಿಟ್ಟುಕೊಂಡು ಸಾಧನೆಯ ಪಥದಲ್ಲಿ ಸಾಗುತ್ತಿರುವ ಬಹುಮುಖ ಪ್ರತಿಭೆಯ ಬಾಲಕಿಯೇ ಯೋಗ್ನಾ ಬಿ. ಅಮೀನ್.
    ಭಾಸ್ಕರ ಅಮೀನ್ ಕುಳಾಯಿ ಮತ್ತು ಶ್ರೀಮತಿ ಹೇಮಲತಾ ಇವರ ಮಗಳು ಯೋಗ್ನಾ ಬಿ. ಅಮೀನ್ . ಕೇಂದ್ರೀಯ ವಿದ್ಯಾಲಯ ಪಣಂಬೂರು ನಂ-1 ಇಲ್ಲಿ ಆರನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಎಳೆಯ ವಯಸ್ಸಿನಲ್ಲೇ ಚುರುಕಾಗಿರುತ್ತಿದ್ದ ಯೋಗ್ನಾಳಿಗೆ ಆಸಕ್ತಿಯ ಎಲ್ಲಾ ಕ್ಷೇತ್ರಗಳನ್ನು ಪರಿಚಯಿಸಿದರು. ತನ್ನ 5 ನೇ ವಯಸ್ಸಿನಲ್ಲೇ ಚಿತ್ರಕಲೆ, ಕರಾಟೆ, ಡಾನ್ಸ್ ಮ್ಯೂಸಿಕ್ ವಿಷಯಗಳಲ್ಲಿ ತರಬೇತು ಪಡೆಯಲು ಆರಂಭಿಸಿದಳು.
      ಯೋಗ್ನಾ ಯಾವುದೇ ವಿಷಯವನ್ನು ಹಗುರವಾಗಿ ಪರಿಗಣಿಸದೆ ಕಠಿಣ ಪರಿಶ್ರಮ ಪಡುತ್ತಾಳೆ. ಶಾಲಾ ಕಲಿಕೆಯ ಚಟುವಟಿಕೆಗಳ ಜೊತೆಗೆ ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ವಿಶೇಷ ಗಮನವಹಿಸುತ್ತಾಳೆ. ಸಮಯದ ಹೊಂದಾಣಿಕೆಯನ್ನು ಕರಗತ ಮಾಡಿಕೊಂಡು ಅತೀ ಹೆಚ್ಚು ವಿಷಯಗಳನ್ನು ಅಭ್ಯಸಿಸಬೇಕೆಂದು ಅಂದುಕೊಂಡವಳು. 
      ವಿಜ್ಞಾನ ಮಾದರಿಗಳ ಪ್ರದರ್ಶನ , ಛದ್ಮವೇಷ ಸ್ಪರ್ಧೆಗಳಲ್ಲಿ ನಿರಂತರ ಭಾಗವಹಿಸುತ್ತಾ ತನ್ನ ಪ್ರತಿಭೆ ಪ್ರದರ್ಶಿಸುತ್ತಾ ಬಂದಿದ್ದಾಳೆ. ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಪಡೆದಿರುವ ಯೋಗ್ನಾ ತುಂಬಾ ಬಹುಮಾನಗಳನ್ನು ಪಡೆದಿದ್ದಾಳೆ. ಹುಬ್ಬಳ್ಳಿ, ಬೆಂಗಳೂರು, ಉಡುಪಿ, ಮಂಗಳೂರಲ್ಲಿ ನಡೆದಿರುವ ಮುಕ್ತ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾಳೆ.
     ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಈಕೆ ನಿರಂತರ ಅಭ್ಯಾಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. 2020 - 21 ರಲ್ಲಿ ಭೂ ವಿಜ್ಞಾನ ಇಲಾಖೆ ಬೆಂಗಳೂರು ಇವರು ಆಯೋಜಿಸಿದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆಯುವ ಜೊತೆಗೆ ಇನ್ನೂ
 ಅನೇಕ ತಾಲೂಕು, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ.
     ಈಜು ಕಲಿಯುತ್ತಿರುವ ಈಕೆಗೆ ಏನಾದರೊಂದು ಸಾಧಿಸಬೇಕೆನ್ನುವ ಛಲ. ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸಿ ಸಮಾಜಮುಖಿ ಶಿಬಿರಗಳಲ್ಲಿ ಪಾಲ್ಗೊಂಡ ಅನುಭವ ಈಕೆಯದು. ಹೀಗೆ ವೈವಿಧ್ಯ ಪ್ರತಿಭೆಯನ್ನು ಮೈಗೂಡಿಸಿಕೊಂಡು ಬೆಳೆಯುತ್ತಿದ್ದಾಳೆ.
     ಕ್ಲೇ ಮಾಡಲಿಂಗ್ ಈಕೆಯ ಇನ್ನೊಂದು ಆಸಕ್ತಿಯ ಕ್ಷೇತ್ರ. ಮಣ್ಣಿನಲ್ಲಿ ಕಲಾಕೃತಿ ರಚಿಸುವುದರಿಂದ ತನ್ನ ಕೈಗಳಿಗೆ ಆಗುವ ವ್ಯಾಯಾಮದ ಜೊತೆಗೆ ಕೌಶಲ್ಯ ಮತ್ತು ಸೃಜನಶೀಲತೆಗಳ ಅಭಿವೃದ್ಧಿಯ ಸಾಧ್ಯತೆಯನ್ನು ಕಂಡು ಪ್ರಬುದ್ಧ ಕಲಾವಿದ ವೆಂಕಿ ಪಲಿಮಾರು ಗರಡಿಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
    ತಂದೆ ಮತ್ತು ತಾಯಿಯ ವಿಶೇಷ ಪ್ರೋತ್ಸಾಹದಿಂದ ನಿರಂತರ ಚಟುವಟಿಕೆಯಲ್ಲಿ ಬೆಳೆಯುತ್ತಿರುವ ಯೋಗ್ನಾ ಮುಂದಿನ ದಿನಗಳಲ್ಲಿ ಬಹುಮುಖ ಪ್ರತಿಭೆಯ ಮಕ್ಕಳಲ್ಲಿ ತಾನೂ ಒಬ್ಬಳಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಅವಕಾಶಗಳನ್ನು ಬಳಸಿಕೊಳ್ಳುತ್ತಾ ಬೆಳೆಯುತ್ತಿರುವ ಯೋಗ್ನಾ ಇನ್ನಷ್ಟು ಎತ್ತರಕ್ಕೆ ಏರಲಿ ಎನ್ನುವುದು ಮಕ್ಕಳ ಜಗಲಿಯ ಬಯಕೆ.

Ads on article

Advertise in articles 1

advertising articles 2

Advertise under the article