-->
ಅಪ್ರತಿಮ ಸಾಂಸ್ಕೃತಿಕ ಪ್ರತಿಭೆ- "ರಂಗ ಕಿನ್ನರ - ಮಾ|ಮನುಜ ನೇಹಿಗ ಸುಳ್ಯ"

ಅಪ್ರತಿಮ ಸಾಂಸ್ಕೃತಿಕ ಪ್ರತಿಭೆ- "ರಂಗ ಕಿನ್ನರ - ಮಾ|ಮನುಜ ನೇಹಿಗ ಸುಳ್ಯ"

ರಂಗಭೂಮಿ,ಯಕ್ಷಗಾನ,ಸಂಗೀತ,ವಾದ್ಯ ಪರಿಕರ ನುಡಿಸುದು,ಹಾಡುವುದು,
ನೃತ್ಯ ,ಜಾದೂ ,ಮಣಿಪುರಿ ಸ್ಟಿಕ್ ಡ್ಯಾನ್ಸ್  ,ಭರತನಾಟ್ಯ ,ಛದ್ಮವೇಷ,
ರಷ್ಯನ್ ರಿಂಗ್ --ಮುಂತಾದ ವಿಶೇಷ ಸಾಂಸ್ಕೃತಿಕ ಪ್ರತಿಭೆ ಹೊಂದಿರುವ ಬಹುಮುಖ ಪ್ರತಿಭೆ ಈ
ಮನುಜ ನೇಹಿಗ.
ತನ್ನ ಎರಡೂವರೆ ವರ್ಷದಲ್ಲೇ ಪ್ರತಿಷ್ಠಿತ "ಆಳ್ವಾಸ್ ಸಾಂಸ್ಕೃತಿಕ ವೈಭವ" ಕಾರ್ಯಕ್ರಮದಲ್ಲಿ  ಪಶ್ಚಿಮ ಬಂಗಾಲದ 'ಪುರುಲಿಯಾ ಜನಪದ ನೃತ್ಯದಲ್ಲಿ ಮರಿ ಸಿಂಹ'ವಾಗಿ ರಂಗ ಪ್ರವೇಶ ಮಾಡಿದವನು.
ಆಳ್ವಾಸ್ ವಿದ್ಯಾರ್ಥಿ ಸಿರಿ, ಆಳ್ವಾಸ್ ನುಡಿಸಿರಿ, ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ,ರಾಜ್ಯಮಟ್ಟದ ಚಿಣ್ಣರಮೇಳಗಳು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ  ತನ್ನ ಅದ್ಭುತ ಪ್ರತಿಭಾ ಸಾಮರ್ಥ್ಯ ಮೆರೆದಿದ್ದಾ‌ನೆ. 

ಅತೀ ಕಷ್ಟವೆನಿಸುವ ದೂರದ 'ಮಣಿಪುರಿ ಸ್ಟಿಕ್ ಡ್ಯಾನ್ಸ್' ಕಲೆಯನ್ನು ಕಠಿಣ ಶ್ರಮದಿಂದ ಕರಗತ ಮಾಡಿಕೊಂಡವನು..ಬಿದಿರ ತುಂಡೊಂದನ್ನು ಎರಡು ಕಡ್ಡಿಗಳ ಮೂಲಕ ಗಾಳಿಯಲ್ಲಿ ಕುಣಿಸುವ ಚಮತ್ಕಾರದ ಕಲೆಯನ್ನು ಕರಗತ ಮಾಡಿಕೊಂಡ ದಕ್ಷಿಣ ಭಾರತದ ಮೊದಲ ಕಿರಿಯ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಶೈಕ್ಷಣಿಕವಾಗಿಯೂ ಮುಂದಿರುವ ಈತ ತನ್ನ ತಂದೆ,ಖ್ಯಾತ ರಂಗನಿರ್ದೇಶಕ ಜೀವನ್ ರಾಂ ಸುಳ್ಯರು ಆಳ್ವಾಸ್ ನಲ್ಲಿ ಹಿರಿಕಿರಿಯ ವಿದ್ಯಾರ್ಥಿಗಳಿಗೆ ನಡೆಸುವ ಹೆಚ್ಚಿನೆಲ್ಲಾ ರಂಗ ತರಗತಿಗಳಲ್ಲಿ ಭಾಗವಹಿಸುತ್ತಾ ಬೆಳೆಯುತ್ತಿದ್ದಾನೆ. 

ಈತ ಅಭಿನಯಿಸಿದ 'ಮಕ್ಕಳ ಮಾಯಾಲೋಕ','ಪಂಜರಶಾಲೆ,
'ಧಾಂ ಧೂಂ ಸುಂಟರಗಾಳಿ ' ನಾಟಕಗಳು ಕರ್ನಾಟಕದ ಅನೇಕ ಕಡೆಗಳಲ್ಲಿ ಪ್ರದರ್ಶನಗೊಂಡು ಜನ ಮೆಚ್ಚುಗೆ ಗಳಿಸಿವೆ.ಧಾಂ ಧೂಂ ಸುಂಟರಗಾಳಿ ನಾಟಕದಲ್ಲಿ ಈತ ನಿರ್ವಹಿಸಿದ 'ಗಾಳಿಕಿನ್ನರ' ಪಾತ್ರದ ಸ್ಪಷ್ಠ ಕನ್ನಡ ಉಚ್ಛಾರಣೆ ಹಾಗೂ ತನ್ನ  ಚುರುಕು ನಡೆಯ,ಭಾವಪೂರ್ಣ ಅಭಿನಯದಿಂದಾಗಿ ಈತ
'ರಂಗಕಿನ್ನರ'ನೆಂದೇ ಕರೆಸಿಕೊಂಡಿದ್ದಾನೆ. 

ಆಳ್ವಾಸ್ ಹಿರಿಯ ಪ್ರಾಥಮಿಕ ಶಾಲೆಯ 6 ನೇ ತರಗತಿಯಲ್ಲಿ  ಕಲಿಯುತ್ತಿರುವ ಈತ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ   ಯಕ್ಷಗಾನ,ಅಭಿನಯಗೀತೆ,ಕಥಾಭಿನಯ  ಇತ್ಯಾದಿ ವೈಯ್ಯಕ್ತಿಕ ವಿಭಾಗದಲ್ಲಿ ಸತತ 3 ವರ್ಷಗಳಿಂದ  ಪ್ರಥಮ ಪ್ರಶಸ್ತಿ ಯನ್ನೇ ಪಡೆಯುತ್ತಾ ಬಂದಿದ್ದಾನೆ.
ಬೆಂಗಳೂರಿನಲ್ಲಿ ಪ್ರದರ್ಶನಗೊಂಡ 'ಮಹಾಮಾಯಿ'ನಾಟಕದ 107 ನೇ ಪ್ರದರ್ಶನದ ಸಂದರ್ಭದಲ್ಲಿ  ಹಾರ್ಮೋನಿಯಂ ನುಡಿಸುತ್ತಿದ್ದ ಈತನ ಅಸಾಧಾರಣ  ಪ್ರತಿಭೆ ಗುರುತಿಸಿದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ|ಚಂದ್ರಶೇಖರ ಕಂಬಾರರು ಸ್ವತ: ಈತನನ್ನು ವೇದಿಕೆಯಲ್ಲಿ ಸನ್ಮಾನಿಸಿದ್ದಾರೆ.
ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಮೊತ್ತ ಮೊದಲ ಬಾರಿಗೆ ನೀಡುವ ರಾಜ್ಯಮಟ್ಟದ
'ಅಕಾಡೆಮಿ ಬಾಲ ಗೌರವ  ಪ್ರಶಸ್ತಿ'ಗೆ ಭಾಜನನಾಗಿದ್ದಾನೆ."ನಾಟ್ಯನಿಕೇತನ ಪ್ರತಿಭಾ ಪುರಸ್ಕಾರ" ,ಲಿಟ್ಲ್ ಫ್ಲವರ್ ಚಾರಿಟೇಬಲ್ ಟ್ರಸ್ಟ್ ಸನ್ಮಾನ,ಚಿಕ್ಕಮಗಳೂರು ಕಲ್ಕಟ್ಟೆ ಪುಸ್ತಕ ಮನೆ ಸನ್ಮಾನ,ಶೃಂಗೇರಿ,ಉಡುಪಿ,ಬೆಂಗಳೂರು, ಕೋಟೆಕಾರ್ - ಸೇರಿದಂತೆ ನಾಡಿನ ಹಲವೆಡೆ ಈತನಿಗೆ ಸನ್ಮಾನಗಳು ಲಭಿಸಿವೆ. ಅಲ್ಲದೆ ಇತ್ತೀಚೆಗೆ ಮೈಸೂರಿನ ಬೆಮೆಲ್ ಸಂಸ್ಥೆ ಕನ್ನಡಿಗರ ಒಕ್ಕೂಟವು ಈತನ ಬಹುಮುಖ ಪ್ರತಿಭೆಯನ್ನು ಗುರುತಿಸಿ 'ರಂಗ ಸವ್ಯಸಾಚಿ ' ಎಂಬ ಬಿರುದು ನೀಡಿ ಗೌರವಿಸಿದೆ.ಚಿಕ್ಕಮಗಳೂರಿನ ಕಲ್ಕಟ್ಟೆ ಪುಸ್ತಕ ಮನೆ ಸಂಸ್ಥೆಯು ನೇಹಿಗನ ಕಾರ್ಯಕ್ರಮ ವೀಕ್ಷಿಸಿ " ನಾಡಿನ ವಂಡರ್ ಕಿಡ್" ಎಂದು ಬಣ್ಣಿಸಿದೆ.
ಆಳ್ವಾಸ್ ವಿದ್ಯಾರ್ಥಿ ಸಿರಿ -2017 ರಲ್ಲಿ ನೆರೆದ ಹತ್ತು ಸಾವಿರಕ್ಕಿಂತಲೂ ಅಧಿಕ ಪ್ರೇಕ್ಷಕರೆದುರು ಈತ ಪ್ರದರ್ಶಿಸಿದ 'ದಶಕಲಾ ಕೌಶಲ'- ತನ್ನಲ್ಲಿದ್ದ ಹತ್ತು ವೈವಿಧ್ಯಮಯ ಕಲಾ ಪ್ರತಿಭೆಗಳ ಅನಾವರಣವು ಎಲ್ಲ ಮಾಧ್ಯಮಗಳ ಹೊಗಳಿಕೆಗೆ ಪಾತ್ರವಾದ ವಿಶೇಷ ಕಾರ್ಯಕ್ರಮವಾಗಿತ್ತು.ಅತೀ ಕಡಿಮೆ ಅವಧಿಯಲ್ಲಿ ಯೂ ಟ್ಯೂಬ್ ನಲ್ಲಿ ಒಂದು ಲಕ್ಷದ ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಜನ ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ..ಈತ ಪ್ರಸ್ತುಪಡಿಸುವ 'ದಶಕಲಾ ಕೌಶಲ' ವು ಇದೀಗ ಬಹು ಬೇಡಿಕೆಯ ಕಾರ್ಯಕ್ರಮವಾಗಿದೆ. 

ಈತ ಅಭಿನಯಿಸಿದ  'ಬಾರಲ್ಲೊಂದಿನ'ಜನಜಾಗೃತಿ ಕಿರುಚಿತ್ರವು ಮಿರಾಕಿ ಅಂತರ್ ರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಆಯ್ಕೆಯಾಗಿರುತ್ತದೆ.
ಕೊಡಗು ಜಿಲ್ಲಾ ಬುಡಕಟ್ಟು ಜನಾಂಗದ ಮಕ್ಕಳಿಗೆ ಕಿರುನಾಟಕವೊಂದರ ನಿರ್ದೇಶಕನಾಗಿಯೂ ಕಾಣಿಸಿಕೊಂಡಿದ್ದಾನೆ.
ಯಕ್ಷಗಾನದ ಮಾತುಗಾರಿಕೆ, ಅಭಿನಯ,ಹೆಜ್ಜೆಗಾರಿಕೆಯಲ್ಲಿ ತನ್ನದೇ ಪ್ರತಿಭೆ ಹೊಂದಿರುವ ನೇಹಿಗ ನಿರ್ವಹಿಸಿದ ಪಾತ್ರಗಳು ಆತನ ಯಕ್ಷ ಸಾಮರ್ಥ್ಯವನ್ನು ಬಿಂಬಿಸುತ್ತವೆ.
ಸುದರ್ಶನ ಗರ್ವಭಂಗದ ಸುದರ್ಶನನಾಗಿ,ವೀರಮಣಿ ಕಾಳಗದ ಹನುಮಂತನಾಗಿ,ಅಭಿಮನ್ಯು ಕಾಳಗದ ವೀರ ಅಭಿಮನ್ಯುವಾಗಿ,ಗಜೇಂದ್ರ ಮೋಕ್ಷದ ವಿಷ್ಣುವಾಗಿ ಈತನ ಅಭಿನಯ ಮರೆಯುವಂತಿಲ್ಲ. 

ಆಳ್ವಾಸ್ ರಂಗ ಅಧ್ಯಯನ ಕೇಂದ್ರ, ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಹಾಗೂ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ,ಆಳ್ವಾಸ್ ಧೀಂಕಿಟ ಯಕ್ಷಗಾನ ಕೇಂದ್ರ,ನಾಟ್ಯಾಂಜಲಿ ಕಲಾ ಅಕಾಡೆಮಿ,ವಿಸ್ಮಯ ಜಾದೂ ತಂಡ ಇದರ ವಿದ್ಯಾರ್ಥಿಯಾಗಿದ್ದಾನೆ. ಶಿಕ್ಷಣದ ಜೊತೆ ಜೊತೆಗೆ ಚಿತ್ರಕಲೆ,ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ,ತಬಲ,ಕೊಳಲು,ಚೆಂಡೆ,ಮದ್ದಳೆ,ಇತ್ಯಾದಿ ಅಭ್ಯಾಸದಲ್ಲೂ ತೊಡಗಿದ್ದಾನೆ.
ಈತನ ಪ್ರತೀ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಿರುವವರು ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ|ಎಂ.ಮೋಹನ ಆಳ್ವರು..
ಈತ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಮತ್ತು ಪ್ರಾಧ್ಯಾಪಕಿ ಡಾ| ಮೌಲ್ಯ ಜೀವನ್ ದಂಪತಿಗಳ ಪುತ್ರನಾಗಿದ್ದಾನೆ.

Ads on article

Advertise in articles 1

advertising articles 2

Advertise under the article