ಜೀವನ ಸಂಭ್ರಮ : ಸಂಚಿಕೆ - 268
Tuesday, November 10, 2026
Edit
ಜೀವನ ಸಂಭ್ರಮ : ಸಂಚಿಕೆ - 268
ಲೇಖಕರು : ಎಂ. ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
ಮಕ್ಕಳೇ, ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಮನಸ್ಸಿನ ಶಕ್ತಿಯ ಬಗ್ಗೆ ಭಕ್ತಿ ಸೂತ್ರ ಪ್ರವಚನದಲ್ಲಿ ಹೇಳಿದ್ದು. ಮನಸ್ಸು ಬಹಳ ಸೂಕ್ಷ್ಮವಾದ ಇಂದ್ರಿಯ. ಅದರಲ್ಲಿ ಅನೇಕ ಶಕ್ತಿಗಳಿವೆ. ಬದುಕಿಗೆ ಬೇಕಾದ ಎಲ್ಲಾ ಶಕ್ತಿಗಳು ಮನಸ್ಸಿನಲ್ಲಿವೆ. ಅದು ಎಷ್ಟು ಸೂಕ್ಷ್ಮ ಇದೆ ಅಂದರೆ ಅದನ್ನು ಗುರುತಿಸಲು ಆಗುವುದಿಲ್ಲ. ಅದಕ್ಕೆ ನಿಶ್ಚಿತ ರೂಪವಿಲ್ಲ. ಯಾವ ಬಣ್ಣವಿಲ್ಲ. ಅಂತಹದು ಅದು. ಆದರೆ ಈ ಮನಸ್ಸು ಎಲ್ಲರಲ್ಲೂ ಇದೆ.
ಬದುಕಿನ ಪ್ರತಿಯೊಂದು ವ್ಯವಹಾರ ನಡೆಯಬೇಕಾದರೆ ಆ ಮನಸ್ಸು ಬೇಕಾಗುತ್ತದೆ. ಮನಸ್ಸಿಲ್ಲ ಜ್ಞಾನವಿಲ್ಲ. ಮನಸ್ಸಿಲ್ಲ ಅನುಭವವಿಲ್ಲ. ಜ್ಞಾನ ಮತ್ತು ಅನುಭವಗಳಿಂದ ಬದುಕು ನೇಯಲ್ಪಡುತ್ತದೆ. ಮನಸ್ಸಿನ ಮಹತ್ವ ಎಷ್ಟಿದೆ ಯೋಚಿಸಬೇಕು?. ಒಂದು ಕ್ಷಣ ನಮ್ಮಿಂದ ಮನಸ್ಸನ್ನು ತೆಗೆದಿಟ್ಟರೆ ಎಲ್ಲವೂ ಶೂನ್ಯವಾಗುತ್ತದೆ. ಅಷ್ಟು ಮನಸ್ಸು ಕೆಲಸ ಮಾಡುತ್ತದೆ. ಕಣ್ಣು ನೋಡುತ್ತದೆ ಅಂತ ನಾವು ಹೇಳುತ್ತೇವೆ. ಆದರೆ ನಿಜವಾಗಿ ನೋಡುವುದು ಮನಸ್ಸು. ಕೇಳುವುದು ಮನಸ್ಸು. ಮುಟ್ಟುವುದು, ರುಚಿಸುವುದು, ಆಘ್ರಾಣಿಸುವುದು ಮನಸ್ಸೆ. ಇವು ಇಂದ್ರಿಯಗಳ ಹೊರಗೆ ಕಿಟಕಿ ಬಾಗಿಲುಗಳು ಇದ್ದಂತೆ.. ಆದರೆ ನೋಡುವವ ಮಾತ್ರ ಮನೆಯೊಳಗೇ ಇರುತ್ತಾನೆ. ಹಾಗೆ ಈ ಮನಸ್ಸು ಸುಂದರ ಸಾಧನ. ಈ ಸಾಧನವನ್ನು ಚೆನ್ನಾಗಿ ಬಳಸಿದರೆ ಜೀವನ ಅಪ್ಯಾಯಮಾನವಾಗುತ್ತದೆ. ಇಂತಹ ಮನಸ್ಸನ್ನು ತಿಳಿದುಕೊಳ್ಳಲು ಮನುಷ್ಯ ಸಾವಿರಾರು ವರ್ಷಗಳಿಂದ ಪ್ರಯತ್ನ ಪಡುತ್ತಲೇ ಇದ್ದಾನೆ. ಆದರೆ ಇನ್ನೂ ಪಕ್ಕ ತಿಳಿದಿದೆ ಅಂತ ಇಲ್ಲ. ನಮ್ಮಲ್ಲೇ ಇದೆ. ಇಷ್ಟೆಲ್ಲಾ ಕೆಲಸ ಮಾಡುತ್ತದೆ. ಆದರೆ ಅದು ಏನು ಅಂತ ಸರಿಯಾಗಿ ಗೊತ್ತಿಲ್ಲ. ನಿಸರ್ಗ ಮನಸ್ಸನ್ನು ರಹಸ್ಯವಾಗಿ ಇಟ್ಟಿದೆ. ನಿಸರ್ಗ ಅಂತಹ ಸುಂದರ ಸಾಧನ ತಯಾರು ಮಾಡಿದೆ. ನಾವೆಲ್ಲ ಆಶ್ಚರ್ಯ ಪಡಬೇಕು. ಮನುಷ್ಯ ಅನ್ನುವ ಹೆಸರು ಬಂದಿದ್ದೆ ಮನಸ್ಸಿನಿಂದ. ಚಿಂತಿಸುತ್ತಾನೆ ಅಂತ ಮನುಷ್ಯ ಆಗಿದ್ದು. ಯಂತ್ರವಾಗಿದ್ದರೆ ಮನುಷ್ಯ ಆಗುತ್ತಿರಲಿಲ್ಲ. ಕಂಪ್ಯೂಟರ್ ನಮಗಿಂತ ಚೆನ್ನಾಗಿ ಕೆಲಸ ಮಾಡುತ್ತದೆ. ಕ್ಯಾಮರಗಳು ಚೆಂದಾಗಿ ನೋಡುತ್ತವೆ. ಆದರೆ ಅವು ಅನುಭವಿಸುವುದಿಲ್ಲ. ಅನುಭವಿಸಬೇಕಾದರೆ ಮನಸ್ಸಿರಬೇಕು. ಆ ಮನಸ್ಸಿನಲ್ಲಿ ಮೂರು ಭಾಗಗಳು ಇವೆ.
1. ಅರಿಯುವ ಭಾಗ ತಿಳಿಯುತ್ತದೆ
2. ಅನುಭವಿಸುತ್ತದೆ. ಭಾವಿಸುತ್ತದೆ
3. ಬಯಸುತ್ತದೆ.
ಎಲ್ಲರ ಮನಸ್ಸಿನಲ್ಲಿ ಇರುವುದು ಇವೆ ಮೂರು. ಇದಕ್ಕೆ ಜೀವನ ಎನ್ನುವುದು. ಬಹಳ ದೊಡ್ಡವರು ಮಾಡುವುದು ಇವೆ ಮೂರು. ಸಣ್ಣವರಿದ್ದಾರೆ ಅಂದರು ಇವೇ ಮೂರು ಮಾಡುವುದು. ಸೂರ್ಯನ ನೋಡುವುದು, ಸೂರ್ಯನ ಬಿಸಿಲು ಅನುಭವಿಸುವುದು. ಚಳಿಗಾಲದಲ್ಲಿ ಸ್ವಲ್ಪ ಬಿಸಿಲು ಬರಲಿ ಅಂತ ಬಯಸುವುದು. ಇವೆ ಮೂರು. ಬಯಕೆಯಲ್ಲಿ ಎರಡು ವಿಧ. ಬೇಕು ಮತ್ತು ಬೇಡ. ಅನುಭವದಲ್ಲಿ ಎರಡು ವಿಧ ಸುಖ ಮತ್ತು ದುಃಖ. ತಿಳಿಯುವಿಕೆಯಲ್ಲೂ ಎರಡು ವಿಧ ಯಥಾರ್ಥ ಜ್ಞಾನ ಮತ್ತು ಆಯಥಾರ್ಥ ಜ್ಞಾನ.
ತಿಳಿಯುತ್ತಾನೆ ಒಮ್ಮೊಮ್ಮೆ ಸರಿಯಾಗಿ ತಿಳಿಯುತ್ತಾನೆ. ಒಮ್ಮೊಮ್ಮೆ ತಪ್ಪಾಗಿ ತಿಳಿಯುತ್ತಾನೆ. ಅನುಭವಿಸುತ್ತಾನೆ ಒಮ್ಮೊಮ್ಮೆ ಸುಖ ಅನುಭವಿಸುತ್ತಾನೆ. ಒಮ್ಮೊಮ್ಮೆ ದುಃಖ ಅನುಭವಿಸುತ್ತಾನೆ. ಬಯಸುತ್ತಾನೆ ಒಮ್ಮೆ ಬೇಕು ಅಂತಾನೆ. ಇನ್ನೊಮ್ಮೆ ಬೇಡ ಅನ್ನುತ್ತಾನೆ. ಹೀಗೆ ಆರು ವಿಧದಲ್ಲಿ ಮನಸ್ಸು ಕೆಲಸ ಮಾಡುತ್ತದೆ. ಯಾವುದೇ ಕ್ಷಣ ತೆಗೆದುಕೊಳ್ಳಿ ಈ ಕಾರ್ಯ ನಡಿಯುತ್ತಿರುತ್ತದೆ. ಇದನ್ನು ನಮ್ಮ ಋಷಿಮುನಿಗಳು ಕಂಡುಕೊಂಡರು. ಋಷಿ ಅಂದರೆ ಕಂಡವರು. ನಾವು ನೋಡುತ್ತೇವೆ ನಮಗೆ ಋಷಿ ಅನ್ನುವುದಿಲ್ಲ. ಏಕೆಂದರೆ ಎಲ್ಲರೂ ನೋಡುತ್ತಾರೆ. ಆದರೆ ಏನು ಕಾಣಿಸುತ್ತದೆ ಅದರ ಆಚೆ ನೋಡುವವರಿಗೆ ಋಷಿ ಎನ್ನುವರು.
ಋಷಿಗಳಿಗೆ ಇದರ ಹಿಂದಿರುವ ಸೂಕ್ಷ್ಮಜಾನ ಗೊತ್ತಾಗುತ್ತದೆ. ಋಷಿ ಅಂದರೆ ಸೂಕ್ಷ್ಮ ಜ್ಞಾನಿಗಳು ಎಂದರ್ಥ. ಇಂತಹ ಮನಸ್ಸು ನಮ್ಮ ನಿಜವಾದ ಆಸ್ತಿ. ಇದೇ ನಮ್ಮ ಶ್ರೇಷ್ಠ ಸಂಪತ್ತು. ಇದು ಎಲ್ಲಾ ಸಂಪತ್ತಿನ ಸಂಪತ್ತು. ಜೀವನದ ದೊಡ್ಡ ಸಂಪತ್ತೆ ನಮ್ಮ ಮನಸ್ಸು. ಜೀವನ ತುಂಬಿಕೊಳ್ಳುವುದು ಮನಸ್ಸಿನ ಅನುಭವಗಳಿಂದ. ಜೀವನ ಬಡವಾಗುವುದು ಮನಸ್ಸಿನ ಬಡ ಅನುಭವಗಳಿಂದ. ಯಾವ ಮನಸ್ಸು ಹೆಚ್ಚು ಅನುಭವಿಸುತ್ತದೆ ಆ ಜೀವನ ಶ್ರೀಮಂತವಾಗಿರುತ್ತದೆ. ಯಾವ ಮನಸ್ಸು ಕಡಿಮೆ ಅನುಭವಿಸುತ್ತದೆ ಆ ಜೀವನ ಬಡವಾಗಿರುತ್ತದೆ. ನಮ್ಮ ಜೀವನ ಶ್ರೀಮಂತವಾಗಿಸುವುದು, ನಮ್ಮ ಜೀವನ ಬಡವಾಗಿಸುವುದು ನಮ್ಮ ಅನುಭವ ಅಥವಾ ಮನಸ್ಸು. ಆದ್ದರಿಂದ ನಮ್ಮ ಮನಸ್ಸಿಗೆ ಅಷ್ಟು ಬೆಲೆ ಕೊಡಬೇಕು. ಮನಸೇ ನಮ್ಮ ಸಂಪತ್ತು. ಈಗ ಸಂಪತ್ತು ಅಂತ ಕರೆಯುತ್ತಿದ್ದೆವಲ್ಲ ಉದಾಹರಣೆಗೆ ಒಂದು ಬಂಗಾರದ ಹೂವು ಹಾಗೂ ಮತ್ತೊಂದು ಸಾಮಾನ್ಯ ಹೂ. ನೀವು ಆಯ್ಕೆ ಮಾಡಿ ಅಂದರೆ ಯಾರು ಸಾಮಾನ್ಯ ಹೂ ಆಯ್ಕೆ ಮಾಡುವುದಿಲ್ಲ. ಎಲ್ಲರೂ ಚಿನ್ನ ಸಂಪತ್ತು ಅಂತ ತಿಳಿದಿದ್ದಾರೆ. ಇದು ಸಂಪತ್ತು ಅಂತ ಹೇಳುವುದು ಇದೇ ಮನಸ್ಸು.
ನಮ್ಮ ಮನಸ್ಸು ವಸ್ತುಗಳಿಗೆ ಬೆಲೆ ಕಟ್ಟುತ್ತದೆ. ಆ ಬಳಿಕ ಹೇಳುತ್ತದೆ ಇದರ ಬೆಲೆ ಹೆಚ್ಚು.ಇದರ ಬೆಲೆ ಕಡಿಮೆ ಅಂತ ಹೇಳುತ್ತದೆ. ಅದು ಮನಸ್ಸು ಕಟ್ಟಿದ ಬೆಲೆಯೆ ವಿನಃ ವಸ್ತುವಿಗೆ ನಿಜವಾದ ಬೆಲೆ ಇಲ್ಲ. ಮನಸು ತನಗೆ ಹೇಗೆ ಬೇಕೋ ಹಾಗೆ ಬೆಲೆ ಕಟ್ಟಿಕೊಳ್ಳುತ್ತಾ ಹೋಗುತ್ತದೆ. ಒಂದೇ ರೀತಿ ಬೆಲೆ ಕಟ್ಟುವುದಿಲ್ಲ. ಒಮ್ಮೆ ಈ ಹೂವಿಗೆ ಬೆಲೆ ಕಟ್ಟುತ್ತದೆ. ಒಮ್ಮೊಮ್ಮೆ ಚಿನ್ನಕ್ಕೆ ಬೆಲೆ ಕಟ್ಟುತ್ತದೆ. ಅದು ಮನಸ್ಸಿನ ಸ್ವಭಾವ. ಯಾವುದಕ್ಕೆ ಬೆಲೆ ಕಟ್ಟಬೇಕು ಅನ್ನುವುದು ಮನಸ್ಸಿನ ಕೈಯಲ್ಲಿದೆ.
ಒಬ್ಬ ಮಗ, ತಂದೆ ಸಾಗರಕ್ಕೆ ಹೋಗಿದ್ದರು. ಸಾಗರ ತೀರದಲ್ಲಿ ತಂದೆ ಕುಳಿತಿದ್ದನು. ಹುಡುಗ ಓಡಾಡುತ್ತಿದ್ದನು. ಮರಳಿನಲ್ಲಿ ಹೊಳಪಾದ ಬಣ್ಣ ಬಣ್ಣದ ಕಲ್ಲಿನ ಹರಳನ್ನು ನೋಡಿ ಏನು ಸಂಪತ್ತು ಅಂದನು. ಆ ಕಲ್ಲುಗಳನ್ನೆಲ್ಲ ತಂದೆಗೆ ಗೊತ್ತಾಗದಂತೆ ಸಂಗ್ರಹಿಸಿ ಇಟ್ಟನು. ಮನೆಗೆ ಹೋಗುವ ಸಮಯ ಆಗ ಮಗ ತಂದೆಗೆ ಹೇಳಿದ ನಾನು ಎಂತಹ ಸಂಪತ್ತು ಸಂಗ್ರಹಿಸಿದ್ದೀನಿ ಗೊತ್ತೇ ಅಂತ ತೋರಿಸಿ ಇದನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಜನರೆಲ್ಲ ಬಂದು ನೋಡಬೇಕು ಅಂದನು. ತಂದೆ ನೋಡಿ ನಕ್ಕು ಏನು ಕಲ್ಲು ಅಂದನು. ಹುಡುಗ ಹೇಳಿದ ಇದು ಕಲ್ಲು ಸಂಪತ್ತು. ನಮ್ಮ ಮನೆಯಲ್ಲಿ ಇಂತಹದು ಎಲ್ಲಿದೆ?. ಬರೀ ನೋಟು ಹಾಳೆಗಳಿವೆ ಎಂದನು. ತಂದೆಯ ಮನಸ್ಸಿಗೆ ನೋಟು ಸಂಪತ್ತು. ಮಗನ ಮನಸ್ಸಿಗೆ ಕಲ್ಲು ಸಂಪತ್ತು. ತಂದೆ ದೃಷ್ಟಿನೇ ಬೇರೆ. ಮಗನ ದೃಷ್ಟಿನೇ ಬೇರೆ. ಅವರವರ ಮನಸ್ಸು ಬೆಲೆ ಕಟ್ಟುತ್ತದೆ. ಇಂತಹ ಮನಸ್ಸನ್ನು ಚೆನ್ನಾಗಿ ಬಳಸಿಕೊಂಡರೆ ಎಲ್ಲವೂ ಸಂಪತ್ತಾಗುತ್ತದೆ.
ನಾವು ಸಂಪತ್ ಭರಿತರಾಗಬೇಕಾದರೆ ನಮ್ಮ ಮನಸ್ಸು ಶ್ರೀಮಂತವಾಗಬೇಕು. ಅಂತಹ ದೃಷ್ಟಿಯನ್ನು ನಾವು ಪಡೆಯಬೇಕಾಗುತ್ತದೆ. ಮನಸ್ಸನ್ನು ಶ್ರೀಮಂತ ಮಾಡಲು ಮನಸ್ಸನ್ನೇ ಬಳಸಬೇಕು. ಅನುಭವಗಳಿಂದ ಶ್ರೀಮಂತ ಮಾಡಬೇಕು. ಎಂತೆಂಥದೋ ಅನುಭವವಾದರೆ ಮನಸ್ಸು ಹೊಲಸಾಗುತ್ತದೆ. ಅನುಭವ ಕೆಟ್ಟದಿತ್ತು ಅಂದರೆ ಜೀವನ ಕೆಟ್ಟು ಹೋಗುತ್ತದೆ. ಮನಸ್ಸಿನ ಅಂಗಳ ಅಂದರೆ ಇದೇ ಮನಸ್ಸು. ಇದರಲ್ಲಿ ಹೊಲಸು ಕಸ ಬೀಳುತ್ತದೆ. ಇದರಲ್ಲಿ ಮುಳ್ಳು ಕಲ್ಲುಗಳು ಬೀಳುತ್ತವೆ. ಬದುಕಿನ ಅಂಗಳದಲ್ಲಿ ಸಂತೋಷ ಕೊಡುವುದನ್ನೆ ಬೆಳೆಯಬೇಕು.
ಮನಸ್ಸು ಸಾಧನವು ಸರಿ ಅನುಭವದ ತಾಣವು ಸರಿ. ಮನಸ್ಸನ್ನು ಪಡೆದ ನಾವು ಬಡವರಲ್ಲ. ಮನಸ್ಸು ಮಾಡಿದರೆ ಇದೇ ಕ್ಷಣ ಶ್ರೀಮಂತರು. ಇದರ ಅರ್ಥ ಹಣ ಸಂಗ್ರಹಿಸುವುದು ಅಂತ ಅಲ್ಲ. ಯಾವುದು ಸಂಪತ್ತು ಅಂತ ತಿಳಿದುಕೊಳ್ಳಬೇಕು. ಯಾವುದನ್ನು ಸಂಪತ್ತು ಮಾಡಬೇಕು ಅನ್ನೋದನ್ನ ತಿಳಿದುಕೊಳ್ಳುವುದು ಮುಖ್ಯ. ಅಲ್ಲವೆ ಮಕ್ಕಳೆ.
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
****************************************