ನಿಷ್ಪಾಪಿ ಸಸ್ಯಗಳು : ಸಂಚಿಕೆ - 170
Thursday, November 26, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 170
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ...? ದಿನನವೂ ನಾವು ಹಸಿರಿನ ಜೊತೆ ಜೊತೆಗೇ ಇರುತ್ತೇವಲ್ವೇ? ಅವೆಷ್ಟೋ ಪುಟಾಣಿ ಸಸ್ಯಗಳು ನಮ್ಮ ಪಾದದ ಅಡಿಯಲ್ಲೇ ನಗುತ್ತಿರುತ್ತವೆ. ನಮ್ಮ ಕಾಲಿಗೆ ಮೆತ್ತೆಯಾಗಿ ತಂಪು ನೀಡುತ್ತವೆ. ರಭಸದಿಂದ ಸುರಿವ ಮಳೆ ನೀರನ್ನು ತಾನು ಹರಡಿಕೊಂಡ ಜಾಗದಲ್ಲಿ ಬಚ್ಚಿಟ್ಟುಕೊಳ್ಳುತ್ತವೆ. ಮಳೆ ಬಂದು ಹೋದ ಮೇಲೆ ನೆಲವನ್ನು ಆವರಿಸಿ ಹರಡಿದ ಮೃದುವಾದ ಹುಲ್ಲು, ಬಳ್ಳಿಗಳ ಮೇಲೆ ನಡೆದಾಡುವುದು ಒಂದು ಅಪ್ಯಾಯಮಾನವಾದ ಅನುಭವ.
ನಮ್ಮ ಶಾಲೆಯ ಅಂಗಳದಲ್ಲಿ ಪ್ರತೀ ಮಳೆಗಾಲದಲ್ಲಿ ದುಂಡಾದ ಪರ್ಯಾಯ ಎಲೆಗಳ ಬಳ್ಳಿಗಳು ಹುಟ್ಟಿಕೊಳ್ಳುತ್ತವೆ. ಪುಟಾಣಿ ಎಲೆಗಳ ಮಧ್ಯಭಾಗದಲ್ಲಿ ಪುಟ್ಟ ಬಿಳಿ ಗೆರೆ. ಬಹುವಾರ್ಷಿಕ ಸಸ್ಯವಾದುದರಿಂದ ಬೇಸಗೆಯಲ್ಲಿ ಸಂಪೂರ್ಣ ಒಣಗಿಹೋಗುವ ಈ ಬಳ್ಳಿ ಮಳೆಹನಿ ಬಿದ್ದ ಕೂಡಲೇ ಚಿಗುರೊಡೆದು ನೆಲವನ್ನಾವರಿಸತೊಡಗುತ್ತದೆ. ನಾನು ಪ್ರತೀ ವರ್ಷ ಗಮನಿಸುತ್ತೇನೆ. ಅದೆಷ್ಟು ಬೆಳೆದರೂ ಹೆಚ್ಚೆಂದರೆ ಒಂದು ಮೀಟರ್ ನಷ್ಟು ಸುತ್ತಳತೆ ಪಡೆಯುವುದಷ್ಟೇ. ಇತರ ಹುಲ್ಲಿನ ಜಾತಿಯ ತೆವಳುವ ಸಸ್ಯಗಳ ಜೊತೆಗೆ ಎಷ್ಟು ಹೊಂದಾಣಿಕೆಯಿಂದ ಬೆಳೆಯುವುದೆಂದರೆ ಈ ಬಳ್ಳಿಯ ಮೇಲೆಯೇ ಇತರ ಬಳ್ಳಿಗಳು ಬೆಳೆದಿರುತ್ತವೆ!.
ಇದು ಮಣ್ಣಿನ ಸವೆತವನ್ನು ತಡೆಯುವುದಲ್ಲದೆ ವಾತಾವರಣದಲ್ಲಿರುವ ಸಾರಜನಕವನ್ನು ಮಣ್ಣಿಗೆ ಸೇರಿಸುತ್ತದೆ. ಮಳೆನೀರನ್ನು ಹಿಡಿದಿಟ್ಟು ಭೂಮಿಯೊಳಕ್ಕೆ ಇಂಗಿಸುವ ಕೆಲಸಕ್ಕೆ ಈ ನಿಷ್ಪಾಪಿ ಸಸ್ಯ ಹೇಳಿ ಮಾಡಿದಂತಿದೆ. ಜಾನುವಾರಿಗೂ ಬಹಳ ಇಷ್ಟದ ಮೇವು.
ಬಯಲು, ರಸ್ತೆಬದಿ, ಹುಲ್ಲುಗಾವಲುಗಳಲ್ಲಿ ಕಾಣಿಸುವ ಈ ತೆವಳುವ ಬಳ್ಳಿ ಜನಪದರ ಬಾಯಲ್ಲಿ ಹುಲ್ಲು ಎಂದಷ್ಟೇ ಕರೆಸಿಕೊಳ್ಳುವ ಈ ಬಳ್ಳಿ ಕನ್ನಡದಲ್ಲಿ ನಾಮದ ಸೊಪ್ಪು ಎಂದು ಕರೆಯಲ್ಪಡುತ್ತದೆ. ತುಳು ಭಾಷೆಯಲ್ಲಿ ನಿಮಗೇನಾದರೂ ಹೆಸರು ತಿಳಿದರೆ ನನಗೂ ತಿಳಿಸಿರಿ.
ಇದರಲ್ಲಿ ಸುಂದರವಾದ ಪುಟ್ಟಪುಟ್ಟ ಕೆಂಪು ನೇರಳೆ ಮಿಶ್ರಿತ ಹೂವುಗಳು ತೆನೆಯ ರೀತಿಯಲ್ಲಿ ಗೊಂಚಲಾಗಿ ಕಾಣಿಸುತ್ತದೆ. ಮುಟ್ಟಿದರೆ ಮುನಿ ಸಸ್ಯದ ಕಾಯಿಯಂತೆ ಕಾಣಿಸುವ ಸಣ್ಣಸಣ್ಣ ಕೋಡುಗಳು ಕೂಡ ಗೊಂಚಲು ಗೊಂಚಲಾಗಿ ಇರುತ್ತದೆ. ಆಧುನಿಕ ವೈದ್ಯಕೀಯ ಸಂಶೋಧನೆಗಳು ಈ ಸಸ್ಯದ ಬಗ್ಗೆ ನಡೆದೇ ಇಲ್ಲವೇನೋ. ಆದರೆ ಮೂತ್ರಪಿಂಡ ದ ಕಾರ್ಯಕ್ಷಮತೆಗೆ, ಕೆಮ್ಮು, ಕೀಲು ನೋವು, ಜ್ವರಕ್ಕೆ ಬಳಸುತ್ತಾರೆ ಎಂದು ಹೇಳುವರಾದರೂ ಅದರ ಬಗ್ಗೆ ಹೆಚ್ಚೇನೂ ಹೇಳಲಾಗದು.
ಅಂದ ಹಾಗೆ ಈ ಮಳೆ ಸ್ನೇಹಿ ಸಸ್ಯದ ವೈಜ್ಞಾನಿಕ ಹೆಸರೇನೆಂದರೆ Alysicarpus Vaginalis. Fabaceae ಕುಟುಂಬದ ಸದಸ್ಯತನ ಪಡೆದ ಈ ನಾಮದ ಸೊಪ್ಪು ಆಂಗ್ಲ ಭಾಷೆಯಲ್ಲಿ Alyce clover, White Moneywort ಎಂದು ಕರೆಸಿಕೊಳ್ಳುತ್ತದೆ. ಭಾರತ, ಏಷ್ಯಾದ ಇತರ ಭಾಗ, ಆಫ್ರಿಕಾಗಳಲ್ಲಿ ಸಾಮಾನ್ಯವಾಗಿರುವ ನಾಮದ ಸೊಪ್ಪು ಆಸ್ಟ್ರೇಲಿಯಾ, ಅಮೇರಿಕಾಗಳಿಗೂ ಸದ್ದಿರದೆ ಹಾರಿ ಭೂಮಿತಾಯಿಯನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿವೆ!.
ನಿಮ್ಮ ಮನೆ, ಶಾಲಾ ಅಂಗಳದಲ್ಲೂ ಈ ಬಳ್ಳಿ ಖಂಡಿತವಾಗಿ ಇರಬಹುದು. ನೀವೂ ಹುಡುಕುವಿರಾ? ಅದರ ಬೆಳವಣಿಗೆ, ಹೂವು, ಕಾಯಿಗಳನ್ನು ಗಮನಿಸುವಿರಾ..?
ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************