-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 149

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 149

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 149
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ನಿಮ್ಮ ನೆಚ್ಚಿನ ಶಿಕ್ಷಕರಾದ ಶ್ರೀ ತಾರಾನಾಥ ಕೈರಂಗಳ ಸರ್ ಅವರನ್ನು ಪ್ರಶಸ್ತಿಯೊಂದು ಅರಸಿ ಬಂದಿದೆ. ಇದು ನಮಗೆಲ್ಲರಿಗೂ ಸಂತಸದ ವಿಷಯ. ಅವರಿಗೆ ಅಭಿನಂದನೆಗಳು.

ತೀರಾ ಇತ್ತೀಚೆಗೆ ಹಿಮ ಸರೋವರ ಸ್ಪೋಟದಿಂದ ನೇಪಾಳದಲ್ಲಿ ಹಠಾತ್ ನೆರೆ ಉಂಟಾಗಿ ಅಪಾರ ಜೀವಹಾನಿ ಮತ್ತು ಆಸ್ತಿ ಹಾನಿಯಾದದ್ದು ನೆನಪು ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ನೇಪಾಲದ ಸಚಿವರೊಬ್ಬರು ಈ ದಿಢೀರ್ ಪ್ರವಾಹಕ್ಕೆ ಭಾರತದ ಇಂಗಾಲದ ಹೆಜ್ಜೆ ಗುರುತುಗಳೇ ಕಾರಣ. ಆದ್ದರಿಂದ ಭಾರತ ನಮಗಾದ ನಷ್ಟವನ್ನು ಕಟ್ಟಿ ಕೊಡಬೇಕು ಎಂದು ಆಪಾದಿಸಿದ್ದರು. ಅಂದರೆ ಪ್ರತಿ ದೇಶಕ್ಕೂ ಇಂಗಾಲದ ಹೆಜ್ಜೆ ಗುರುತುಗಳಿವೆಯೇ? ಹಾಗಾದರೆ ಇದು ಹೇಗೆ ಎಂದು ನೋಡೋಣ.

ಒಂದು ದೇಶದ ಜನ, ಅಲ್ಲಿನ ಕಾರ್ಖಾನೆಗಳು ಮತ್ತು ಚಟುವಟಿಕೆಗಳಿಂದ ಬಿಡುಗಡೆಯಾಗುವ ಒಟ್ಟು ಹಸಿರು ಮನೆಯ ಅನಿಲಗಳಿಂದ ಅಲ್ಲಿ ಬಳಕೆಯಾಗುವ ಇಂಗಾಲದ ಡೈಆಕ್ಸೈಡ್ ಅನ್ನು ಕಳೆದಾಗ ಬರುವ ಹಸಿರು ಮನೆಯ ಅನಿಲಗಳು ಆ ದೇಶದ ಇಂಗಾಲದ ಹೆಜ್ಜೆ ಗುರುತು. ನೀವು ನಡೆಸುವ ಕಾರ್ಖಾನೆಗಳು, ನಿಮ್ಮನ್ನು ಸಾಗಿಸುವ ವಾಹನಗಳು, ನಿಮ್ಮ ಹೊಲ ಗದ್ದೆಗಳಲ್ಲಿ ದುಡಿಯುವ ಯಂತ್ರಗಳು ಸುಡುವ ಪಳೆಯುಳಿಕೆಗಳು ಹೊರ ಸೂಸುವ ಹೊಗೆ ನಿಮ್ಮ ಹೆಜ್ಜೆ ಗುರುತುಗಳನ್ನು ಆಳವಾಗಿಸುತ್ತಾ ಹೋಗುತ್ತವೆ. ನಿಮ್ಮ ಕಾಡು, ಉದ್ಯಾನವನಗಳು ನಿಮ್ಮ ಹೆಜ್ಜೆ ಗುರುತುಗಳನ್ನು ಅಳಿಸುತ್ತಾ ಸಾಗುತ್ತವೆ. ಆದ್ದರಿಂದ ಇಲ್ಲಿ ನಿಮ್ಮ ಹೆಜ್ಜೆಯ ಗುರುತುಗಳು ಆಳವಾಗಿರಬೇಕೆಂದೇನೂ ಇಲ್ಲ. ಆಳವಾದಷ್ಟೂ ಮುಂದಿನ ಪೀಳಿಗೆಗೆ ಅಪಾಯ ಜಾಸ್ತಿ. ಹೆಜ್ಜೆ ಗುರುತುಗಳನ್ನು ಮೂಡಿಸದಿದ್ದರೆ ಒಳ್ಳೆಯದು. ಉಳಲು ಎತ್ತುಗಳನ್ನು, ಬಳಸುತ್ತಿದ್ದ ಕಡೆ ಯಂತ್ರಗಳು ಮೊರೆಯುತ್ತಿವೆ. 

ನಾನು ಸುಮಾರು 40 ವರ್ಷಗಳ ಹಿಂದೆ ಮೈಸೂರಿನ ಬೀದಿಯಲ್ಲಿ ಹೋಗುತ್ತಿದ್ದಾಗ ಅಲ್ಲಿನ ಒಂದು ಮನೆಯ ಗೇಟಿನ ಬಳಿ ಒಂದು ಬರೆಹವನ್ನು ನೋಡಿದ್ದೆ. ಅದು ನನ್ನ ಮನಸ್ಸಿನಲ್ಲಿ ಹಾಗೆಯೇ ಉಳಿದು ಹೋಗಿದೆ. ಅಲ್ಲಿನ ಬರೆಹ ಹೀಗಿತ್ತು. "ಎತ್ತುಗಳು ಹೊಗೆ ಉಗುಳುವುದಿಲ್ಲ ಟ್ರ್ಯಾಕ್ಟರ್ ಸಗಣಿ ಹಾಕುವುದಿಲ್ಲ." ನಾನು ಅಲ್ಲಿನ ಗೇಟಿನ ಬಳಿ ನಿಂತೆ. ಸ್ವಲ್ಪ ಹೊತ್ತಿನ ನಂತರ ಒಬ್ಬರು ಹಿರಿಯರು ಹೊರ ಬಂದು ಏನಪ್ಪಾ ಎಂದು ಕೇಳಿದರು. ಸರ್ ಈ ಬರೆಹ ಓದಿದೆ ಇದರ ವಿವರಣೆ ತಮ್ಮ ಬಳಿ ಕೇಳಬೇಕಿತ್ತು ಎಂದೆ. ಆಗ ಕೃಷಿ ಯಾಂತ್ರೀಕರಣಗೊಳ್ಳುತ್ತಿದ್ದ ಸಮಯ. ವಿಜ್ಞಾನ ಮತ್ತು ತಾಂತ್ರಿಕತೆ ನಮ್ಮ ಹೊಲಗಳ ಮೇಲೆ ದಾಂಗುಡಿ ಇಡುತ್ತಿತ್ತು. ಅದಕ್ಕೆ ವ್ಯಾಪಕ ಸ್ವಗತ ಕೂಡಾ ಇತ್ತು. ಹಿರಿಯರು ಹೇಳಿದರು ನೋಡಪ್ಪಾ ನಾವು ಎತ್ತುಗಳನ್ನು ಬಳಸಿ ಮಾಡುತ್ತಿರುವ ಕೆಲಸಕ್ಕೆ ಯಂತ್ರಗಳನ್ನು ಬಳಸಲಾಗುತ್ತಿದೆ. ಇವು ಉಗುಳುವ ಹೊಗೆಯ ವಿರುದ್ಧ ಹೋರಾಡುವ ಕಾಲ ಬರುತ್ತದೆ ನೋಡು ಎಂದರು. ಅವರಿಗೆ ಖಂಡಿತವಾಗಿಯೂ ಇಂಗಾಲದ ಹೆಜ್ಜೆ ಗುರುತುಗಳ ಬಗ್ಗೆ ಗೊತ್ತಿರಲಿಲ್ಲ. ನನಗೂ ಆಗ ತಿಳಿದಿರಲಿಲ್ಲ. ಆದರೆ ಈಗ ಅನ್ನಿಸುತ್ತದೆ ಅವರು ಹೇಳಿದ ಮಾತು ಎಷ್ಟು ನಿಜವಾಗಿತ್ತು ಎಂದು.

ಉಳಿದ ವಿಷಯಗಳಿಗಾಗಿ ಕಾಯುತ್ತೀರಿ ತಾನೆ...?
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article