ಸ್ಪೂರ್ತಿಯ ಮಾತುಗಳು : ಸಂಚಿಕೆ - 236
Monday, October 12, 2026
Edit
ಸ್ಪೂರ್ತಿಯ ಮಾತುಗಳು : ಸಂಚಿಕೆ - 236
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
ಇದ್ರೆ ನಮ್ಗೆ ಸಾಕು
ಐದು ಆರು ಏಳು ಎಂಟು
ಮಕ್ಕಳ್ ಯಾತ್ಕೆ ಬೇಕು?
ಹೆಚ್ಚು ಮಕ್ಕಳ ಹಡಿಯೋದ್ಗಿಂತ
ಸಾಕೋದ್ ಸಲಹೋದ್ ಬ್ಯಾಡ್ವಾ?
ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರ ರಚನೆಯಿದು.
ಜನಸಂಖ್ಯೆ ನಿಯಂತ್ರಿಸಲು ಮಕ್ಕಳ ಜನನ ಮಿತವಾಗಬೇಕೆಂಬ ಕಲ್ಪನೆ ಇಲ್ಲಿದೆ. ಮಕ್ಕಳ ಸಂಖ್ಯೆಗಿಂತ ಪಾಲನೆ-ಪೋಷಣೆ ಗುಣಾತ್ಮಕವಾಗಬೇಕು. “ನಾವಿಬ್ಬರು ನಮಗಿಬ್ಬರೇ” ನೀತಿಯಂತೆ ಗಂಡ, ಹೆಂಡತಿ ಮತ್ತು ಮಕ್ಕಳಿಬ್ಬರಿರುವ ಸಣ್ಣ ಕುಟುಂಬ ಸುಖಕರ. ಹೆಚ್ಚು ಮಕ್ಕಳನ್ನು ಹೆತ್ತು ಕಷ್ಟಪಡಬಾರದು, ಹಡೆದ ಮಕ್ಕಳಿಬ್ಬರನ್ನು ಆರ್ಥಿಕವಾಗಿ ಸುದೃಢರನ್ನಾಗಿ ಮಾಡುವುದು ಶ್ರೇಯಸ್ಕರ. ಸಂಸ್ಕಾರಯುತ ಉತ್ತಮ ಶಿಕ್ಷಣ ನೀಡಿ ಅವರನ್ನು ಬೆಳೆಸುವುದು ಜಾಣತನ.
1987ರಲ್ಲಿ ಪ್ರಪಂಚದ ಜನಸಂಖ್ಯೆ ಐದು ನೂರು ಕೋಟಿ ತಲುಪಿತು. ವಿಶ್ವಸಂಸ್ಥೆಯು 1989ರ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆಗೆ ಚಾಲನೆ ನೀಡಿತು. ಲಂಗು ಲಾಗಾಮಿಲ್ಲದೆ ಜನಸಂಖ್ಯೆಯು ಬೆಳೆದರೆ ಆಗಬಹುದಾದ ಭೀಕರ ಭವಿಷ್ಯದ ಬಗ್ಗೆ, ಜನರಿಗೆ ಶಿಕ್ಷಣ ನೀಡುವ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದುವು. ಭಾರತದಲ್ಲಿ ಜನಸಂಖ್ಯೆ ಮಿತಿಗೊಳಿಸಲು “ಆರತಿಗೊಂದು, ಕೀರುತಿಗೊಂದು” ಎಂಬ ಘೋಷಣೆ ಪ್ರಚಾರ ಪಡೆಯಿತು. ಜನಸಂಖ್ಯಾ ಶಿಕ್ಷಣದೊಂದಿಗೆ ಕುಟುಂಬ ಕಲ್ಯಾಣ ನೀತಿಯನ್ನು ಬಲಪಡಿಸುವ ವಿವಿಧ ಕಾರ್ಯಕ್ರಮಗಳು ಚಾಲನೆಗೊಂಡುವು. ಕುಟುಂಬದ ಆರೋಗ್ಯ, ಮಕ್ಕಳ ಮತ್ತು ತಾಯಂದಿರ ಆರೈಕೆ, ಗರ್ಭಿಣಿಯರ ಶುಶ್ರೂಷೆ ಮುಂತಾದ ಕ್ರಮಗಳು ಆಚರಣೆಗೆ ಬಂದುವು. ಕುಟುಂಬ ಯೋಜನೆ ಅಳವಡಿಸಿದ ಕುಟುಂಬಗಳು ಸರಕಾರದ ವಿಶೇಷ ಪ್ಯಾಕೇಜುಗಳನ್ನು ಪಡೆದುವು.
ಜನಸಂಖ್ಯಾ ಹೆಚ್ಚಳ ಅಭಿವೃಧ್ಧಿಶೀಲ ರಾಷ್ಟ್ರಗಳಿಗೆ ನುಂಗಲಾಗದ ಸಮಸ್ಯೆ. ರಾಷ್ಟ್ರದ ಆರ್ಥಿಕತೆ, ಪರಿಸರ ಹಾಗೂ ಸಮಾಜದ ಮೇಲೆಯೂ, ಮಿತಿಮೀರಿದ ಜನಸಂಖ್ಯೆ ತೀವ್ರ ಒತ್ತಡವನ್ನುಂಟು ಮಾಡುತ್ತದೆ. ದೇಶದ ಸಂಪನ್ಮೂಲ ಮತ್ತು ಜನಸಂಖ್ಯೆಗಳ ಅನುಪಾತ ಸಂತುಲಿತವಾಗಿರಬೇಕು. ಜನಸಂಖ್ಯೆ ಅಶನ – ವಸನ - ವಸತಿಗಳ ಕೊರತೆಗೂ ಕಾರಣವೆನಿಸಬಾರದು ; ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳಿಗೂ ಬಾಧಕವಾಗಬಾರದು. 1989ರಲ್ಲಿ ಭಾರತವು ಜನಸಂಖ್ಯೆಯಲ್ಲಿ ಚೀನಾಕ್ಕಿಂತ ಹಿಂದಿತ್ತು. ಈಗ ಚೀನಾದ ಜನ ಸಂಖ್ಯೆ 141ಕೋಟಿಯಾದರೆ ಭಾರತದ ಜನಸಂಖ್ಯೆ, ಅಬ್ಬಬ್ಬಾ147 ಕೋಟಿ! ಎಂದು ಹುಬ್ಬೇರಿಸುತ್ತೇವೆ. ಆದರೆ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆಯೆಂಬ ಭೀಕರ ಸತ್ಯವೂ ಇದೆ. ಯುವಕರ ಸಂಖ್ಯೆ ತೃಪ್ತಿಕರವಾಗಿದೆ. ವೃದ್ಧರ ಸಂಖ್ಯೆ ಹೆಚ್ಚು ಬಲಗೊಳ್ಳುತ್ತಿದೆ. ಭವಿಷ್ಯದ ಭಾರತವು, ಕೆನಡಾದಂತೆ “ವೃದ್ಧರ ದೇಶ” ಆಗುವ ಸಂಭವನೀಯತೆಯಿದೆ. ದೇಶದ ಪ್ರಗತಿಗೆ ಯುವಸಂಖ್ಯೆ ಹೆಚ್ಚು ಬಲಾಢ್ಯವಾಗುತ್ತಾ ಸಾಗಬೇಕು.
ಜನಸಂಖ್ಯೆ ಆಪತ್ತೇ ಸಂಪತ್ತೇ? ಶತಮಾನದಾಚೆ ವಿಶ್ವ ನಾಗರಿಕತೆ ಹೇಗಿತ್ತು? ಅಂದಿನ ಜನಜೀವನ ಹೇಗಿತ್ತು? ಎಂಬ ಪ್ರಶ್ನೆಗೆ ಉತ್ತರ : ಜನಜೀವನ ಖಂಡಿತವಾಗಿಯೂ ಅತ್ಯದ್ಭುತವಾದ ಸುಧಾರಣೆ ಕಂಡಿದೆ. ಅಗಾಧ ಜನಸಂಖ್ಯೆಯ ಬುದ್ಧಿಮತ್ತೆಯ ಪರಿಣಾಮವಿದು. ಹಾಗಾಗಿ ಜನಸಂಖ್ಯೆ ಸಂಪತ್ತೇ ಅಲ್ಲವೇ? ಸರಕಾರಗಳು ಏರುತ್ತಿರುವ ಜನಸಂಖ್ಯೆಯನ್ನು ಸಕಾರಾತ್ಮಕವಾಗಿ ಬಳಸಿದರೆ, ದೇಶದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ವೇಗ ದೊರೆಯಬಹುದಲ್ಲವೇ? ಜನಸಂಖ್ಯಾ ಬಾಹುಳ್ಯದ ನಡುವೆಯೇ ಭಾರತವು “ವಿಶ್ವಗುರು” ಸ್ಥಾನಕ್ಕೇರುತ್ತಿದೆ ಎಂದಾದರೆ ಜನಸಂಖ್ಯೆ ನಮಗೆ ಅನುಗ್ರಹಕಾರಕ ಆಯಿತಲ್ಲ! ಈ ತರಹದ ಯೋಚನೆಗಳನ್ನು “ನಕಾರಾತ್ಮಕ” ವೆಂದು ಅಲ್ಲಗಳೆಯ ಬೇಕೇ ಅಥವಾ “ಸಕಾರಾತ್ಮಕ” ವೆಂದು ಪುಷ್ಟೀಕರಿಸ ಬೇಕೇ? ನಮಗಿದು ಗೊಂದಲ.
ಜನಸಂಖ್ಯೆ ಮಿತಿಮೀರುತ್ತಾ ಇದ್ದರೆ ಭೂಗರ್ಭದಲ್ಲಿರುವ ಸೀಮಿತ ಜಲನಿಧಿ, ಪೆಟ್ರೋಲಿಯಂ, ನಾನಾ ಖನಿಜಗಳು, ಕಲ್ಲಿದ್ದಲು ಬೇಗನೆ ಬರಿದಾಗುತ್ತವೆ. ಪರಿಸರ ಮತ್ತು ಜೀವ ಸಂಕುಲಗಳ ಸಂರಕ್ಷಣೆಗೆ ತೊಡಕು. ಮುಂದಿನ ಜನಾಂಗ ಈ ಸಂಪನ್ಮೂಲಗಳಿಗಾಗಿ ತಡಕಾಡಬೇಕಾಗುತ್ತದೆ. ಅದಕ್ಕಾಗಿ ಜನಸಂಖ್ಯೆ ಹದ್ದುಬಸ್ತಿನಲ್ಲಿ ಇರಬೇಕು ಎಂಬುದು ಗ್ರಾಹ್ಯ.
ತಂದೆ ಮತ್ತು ತಾಯಿ ಹೊಂದಿರಲೇ ಬೇಕಾದ ಮಕ್ಕಳೆಷ್ಟು? ಎರಡು ಕಡ್ಡಾಯ. ಮೂರಾದರೆ ಸಂತೋಷ. ಮೂರನೇ ಮಗುವಿಗೂ ಆಸ್ತಿ ಹಕ್ಕು ಸೇರಿದಂತೆ ಕಾನೂನಿನಲ್ಲಿ ಎಲ್ಲ ಅವಕಾಶಗಳಿರಬೇಕು. ಮೂರಕ್ಕಿಂತ ಹೆಚ್ಚು ಮಕ್ಕಳು ಬೇಕೆಂಬುದು ಕಾನೂನು ಬಾಹಿರವೂ ಶಿಕ್ಷಾರ್ಹವೂ ಆಗಬೇಕು. ಶಿಕ್ಷೆಗಳು ಸಮಾಜದ ಒಂದು ವಿಭಾಗಕ್ಕೆ ಮಾತ್ರ ಸೀಮಿತವಾಗದೆ ಸಮಾನವಿರಬೇಕು.
ಸಾಗರ ತರಂಗಗಳು ಒಂದು ಬಿಂದುವಿನಲ್ಲಿ ಹುಟ್ಟಿ ವಿಸ್ತಾರವಾಗುತ್ತಾ ಸಾಗರವನ್ನೇ ವ್ಯಾಪಿಸುತ್ತವೆ. ಜನಸಂಖ್ಯೆಯೂ ಮೂಲ ಬಿಂದುವಿನಲ್ಲಿ ಸೃಷ್ಟಿಯಾಗಿ ವರ್ಧಿಸುತ್ತಾ ವ್ಯಾಪಿಸಿದೆ. ಜನಸಂಖ್ಯೆ ಮಿತಿಗೊಳಗಾಗದೇ ಇದ್ದರೆ ಅಪಾಯ ಎಂಬ ಭಯ ಮೂಡುವಂತಾಗಿದೆ. ಸಾಗರ ತರಂಗಗಳ ಆವೃತ್ತಿ ವರ್ತುಲವು ಹಿಂದಕ್ಕೆ ಸರಿಯುತ್ತಾ ಹೋದರೆ ತರಂಗವಿರದ ಮೂಲ ಸ್ಥಿತಿ ಬರುವುದು. ಹಾಗೆಯೇ ಜನಸಂಖ್ಯಾ ನಿಯಂತ್ರಣದ ಅಬ್ಬರ ಮತ್ತು ಮಕ್ಕಳ ಜನನ ನಿಯಂತ್ರಣದ ಅಮಲಿನಲ್ಲಿ “ಒಂದೇ ಮಗು ಸಾಕು”, ಅಥವಾ “ಒಂದೂ ಬೇಡ” ಎಂಬ ಧೋರಣೆ ಪಾಲಿಸಿದರೆ ಭವಿಷ್ಯದ ಕೆಲವೇ ವರ್ಷಗಳಲ್ಲಿ ಯುವಕರ ಸಂಖ್ಯೆ ಇಳಿಯಲಿದೆ. ಜನ ಸಂಖ್ಯಾ ತರಂಗ ಶೂನ್ಯದತ್ತ ಸಾಗುವ ಅಪಾಯವಿದೆ ಜನ ಸಂಖ್ಯೆಯು “ಪ್ರಪಾತ ಮುಖಿ” ಯಾ “ಪರ್ವತ ಮುಖಿ” ಎರಡೂ ಆಗಬಾರದು. ಜನಸಂಖ್ಯೆಯನ್ನು ಅಪಾಯ ರಹಿತವಾದ ಮಧ್ಯಮ ಸಂಖ್ಯೆಯಲ್ಲಿ ಕಾಪಾಡುವ ಜಾಣತನ ಮೆರೆದಾಗ, “ವಿಶ್ವ ಜನಸಂಖ್ಯಾ ದಿನಾಚರಣೆಯು ಅರ್ಥಪೂರ್ಣವಾಗುತ್ತದೆ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
'ಸ್ಕಂದ' ಕುಳ ಗ್ರಾಮ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
****************************************