ಪಯಣ : ಸಂಚಿಕೆ - 116 (ಬನ್ನಿ ಪ್ರವಾಸ ಹೋಗೋಣ)
Thursday, October 22, 2026
Edit
ಪಯಣ : ಸಂಚಿಕೆ - 116 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.
ಎಲ್ಲರಿಗೂ ನಮಸ್ಕಾರ.... ಇಂದಿನ ಪಯಣದ ಸಂಚಿಕೆಯಲ್ಲಿ ಕೇರಳ ರಾಜ್ಯದ 'ಪೂಕೋಡ್ ಸರೋವರ' ಕ್ಕೆ ಪ್ರವಾಸ ಮಾಡೋಣ ಬನ್ನಿ....
ಕೇರಳದ ವಯನಾಡು ಜಿಲ್ಲೆಯ ವೈತಿರಿ ಸಮೀಪದಲ್ಲಿರುವ ಪೂಕೋಡ್ ಸರೋವರ ಪ್ರಕೃತಿ ಸೌಂದರ್ಯ, ಹಚ್ಚಹಸಿರು ಕಾಡುಗಳು ಮತ್ತು ಮಂಜಿನಿಂದ ಆವೃತವಾದ ಪಶ್ಚಿಮ ಘಟ್ಟಗಳ ನಡುವೆ ನೆಲೆಗೊಂಡಿರುವ ಸುಂದರ ನೈಸರ್ಗಿಕ ಸಿಹಿನೀರಿನ ಸರೋವರವಾಗಿದೆ. ಇದು ವಯನಾಡಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಸಮುದ್ರಮಟ್ಟದಿಂದ ಸುಮಾರು 770 ಮೀಟರ್ ಎತ್ತರದಲ್ಲಿರುವ ಈ ಸರೋವರವು ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳು ಮತ್ತು ಬೆಟ್ಟಗಳಿಂದ ಸುತ್ತುವರಿದಿದೆ. ಸರೋವರದ ಆಕಾರವು ಭಾರತದ ಭೌಗೋಳಿಕ ನಕ್ಷೆಯನ್ನು ಹೋಲುತ್ತದೆ ಎಂಬುದು ಇದರ ವಿಶೇಷ ಆಕರ್ಷಣೆ. ಸರೋವರದ ವಿಸ್ತೀರ್ಣವನ್ನು ವಿವಿಧ ಸರ್ಕಾರಿ ಮೂಲಗಳು ಸುಮಾರು 5 – 8.5 ಹೆಕ್ಟೇರ್ ಎಂದು ದಾಖಲಿಸಿವೆ ; ಗರಿಷ್ಠ ಆಳವು ಸುಮಾರು 6.5 ಮೀಟರ್ ಎಂದು ವಯನಾಡು ಜಿಲ್ಲಾ ಆಡಳಿತದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಪೂಕೋಡ್ ಸರೋವರದ ಸುತ್ತಲಿನ ಹಸಿರು ಪರಿಸರ ಪ್ರವಾಸಿಗರಿಗೆ ಮನಸ್ಸಿಗೆ ಮುದ ನೀಡುತ್ತದೆ. ಸರೋವರದ ನೀರಿನಲ್ಲಿ ನೀಲಿ ಕಮಲ ಮತ್ತು ನೀರಿನ ಲಿಲ್ಲಿ ಹೂಗಳು ಕಾಣಸಿಗುತ್ತವೆ. ಇಲ್ಲಿನ ವಿಶೇಷ ಸಿಹಿನೀರಿನ ಮೀನು Pethia pookodensis ಈ ಸರೋವರಕ್ಕೆ ಸಂಬಂಧಿಸಿದ ಅಪರೂಪದ ಜೀವವೈವಿಧ್ಯದ ಉದಾಹರಣೆಯಾಗಿದೆ.
ಪ್ರವಾಸಿಗರಿಗೆ ಇಲ್ಲಿ ದೋಣಿ ವಿಹಾರ, ಕಯಾಕಿಂಗ್, ಮಕ್ಕಳ ಉದ್ಯಾನ, ಸಿಹಿನೀರಿನ ಅಕ್ವೇರಿಯಂ ಮುಂತಾದ ಸೌಲಭ್ಯಗಳಿವೆ. ಸ್ಥಳೀಯ ಕರಕುಶಲ ವಸ್ತುಗಳು, ಬಿದಿರು ಮತ್ತು ತೆಂಗಿನ ಚಿಪ್ಪಿನಿಂದ ತಯಾರಿಸಿದ ವಸ್ತುಗಳು ಹಾಗೂ ವಿವಿಧ ಮಸಾಲೆಗಳನ್ನು ಮಾರಾಟ ಮಾಡುವ ಅಂಗಡಿಗಳೂ ಇಲ್ಲಿವೆ.
ಈ ಸರೋವರದಿಂದ ಪನಮರಂ ನದಿ ಹುಟ್ಟುತ್ತದೆ. ಅದು ಮುಂದೆ ಕಬಿನಿ ನದಿಯ ಜಲವ್ಯವಸ್ಥೆಯೊಂದಿಗೆ ಸೇರುತ್ತದೆ. ಹೀಗಾಗಿ ಪೂಕೋಡ್ ಸರೋವರವು ಕೇವಲ ಪ್ರವಾಸಿ ತಾಣವಲ್ಲದೆ, ವಯನಾಡಿನ ನೈಸರ್ಗಿಕ ಪರಿಸರ ವ್ಯವಸ್ಥೆಯಲ್ಲಿಯೂ ಮಹತ್ವ ಹೊಂದಿದೆ.
ಸರೋವರದ ಸುತ್ತಲೂ ನಡೆಯುತ್ತಾ ಹಸಿರಿನ ಸೊಬಗನ್ನು ಆಸ್ವಾದಿಸುವುದು, ದೋಣಿ ವಿಹಾರ ಮಾಡುವುದು, ಪಕ್ಷಿ ಮತ್ತು ಪ್ರಕೃತಿಯನ್ನು ವೀಕ್ಷಿಸುವುದು ಹಾಗೂ ಛಾಯಾಚಿತ್ರಗಳನ್ನು ತೆಗೆಯುವುದು ಪ್ರವಾಸಿಗರಿಗೆ ಉತ್ತಮ ಅನುಭವ ನೀಡುತ್ತದೆ. ಸಮೀಪದಲ್ಲಿರುವ ಲಕ್ಕಿಡಿ ವ್ಯೂ ಪಾಯಿಂಟ್ ಮತ್ತು ಚೈನ್ ಟ್ರೀ ಮುಂತಾದ ಸ್ಥಳಗಳನ್ನೂ ಪ್ರವಾಸದ ಸಂದರ್ಭದಲ್ಲಿ ನೋಡಬಹುದು.
'ವಯನಾಡಿನ ಪ್ರವಾಸದಲ್ಲಿ ಪೂಕೋಡ್ ಸರೋವರವು ಪ್ರಕೃತಿಯ ಶಾಂತತೆ ಮತ್ತು ಸೌಂದರ್ಯವನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಅವಕಾಶ ನೀಡುವ ಸುಂದರ ತಾಣವಾಗಿದೆ. ಹಸಿರು ಬೆಟ್ಟಗಳು, ನಿರ್ಮಲ ಜಲ, ತಂಪಾದ ವಾತಾವರಣ ಮತ್ತು ಸಮೃದ್ಧ ಜೀವವೈವಿಧ್ಯ ಇದರ ಪ್ರಮುಖ ವೈಶಿಷ್ಟ್ಯಗಳು. ಪ್ರಕೃತಿ ಪ್ರಿಯರು, ವಿದ್ಯಾರ್ಥಿಗಳು, ಕುಟುಂಬಗಳು ಮತ್ತು ಛಾಯಾಗ್ರಹಣಾಸಕ್ತರಿಗೆ ಇದು ಮನಮೋಹಕ ಪ್ರವಾಸಿ ತಾಣವಾಗಿದೆ. '
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************