ವಿಶೇಷ ಲೇಖನ : ಕಾಡುವ ಪ್ರಶ್ನೆಗಳು, ಲೇಖಕರು : ಸುರೇಖಾ ಯಾಳವಾರ
Wednesday, September 30, 2026
Edit
ವಿಶೇಷ ಲೇಖನ : ಕಾಡುವ ಪ್ರಶ್ನೆಗಳು
ಲೇಖಕರು : ಸುರೇಖಾ ಯಾಳವಾರ
ವಿಶೇಷ ಸಂಪನ್ಮೂಲ ವ್ಯಕ್ತಿ
ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಛಟೀರ್... ಅಂತ ಬಿದ್ದ ಅಮ್ಮನ ಪೆಟ್ಟಿನಿಂದ ಮನು ಬೆನ್ನು ಉಜ್ಜಿಕೊಳ್ಳುತ್ತಾ ಹಾಸಿಗೆಯಲ್ಲಿ ದಡಕ್ಕನೆ ಎದ್ದು ಕುಳಿತ. ಅಕ್ಕ ಕಣ್ಣೀರು ಹಾಕುತ್ತಾ ಏಳುತ್ತಾ ಇದ್ದೇನಮ್ಮ ಎನ್ನುತ್ತಾ ಹೊದಿಕೆಯನ್ನು ನಿಧಾನವಾಗಿ ಮಡಚುತಿದ್ದಳು. ಪೆಟ್ಟು ಬಿದ್ದಿರುವುದು ಅಕ್ಕನಿಗಾದರೂ ಬೆನ್ನು ಚುರುಚುರು ಅಂದದ್ದು ಮನುವಿನದ್ದು.
ಅಮ್ಮ ಗೊಣಗುತ್ತಾ ದಿನಾಲು ಇದೇ ಕಥೆ ಎಬ್ಬಿಸಿ ಶಾಲೆಗೆ ಕಳಿಸುವುದೇ ಹರಸಾಹಸ. ಪಕ್ಕದ ಮನೆಯ ರಮ್ಯಾ ಅಮ್ಮನೊಂದಿಗೆ ಬೆಳಗಿನ ಕೆಲಸದೊಂದಿಗೆ ಸೇರಿಕೊಂಡು ತನ್ನ ಕೆಲಸವನ್ನು ಮಾಡಿಕೊಂಡು ಹೋಗುವುದನ್ನು ಜಾನಕಿ ದಿನಾಲು ನೋಡುತ್ತಿದ್ದಳು. ನನ್ನ ಹಣೆಬರಹ ದೇವರು ಇಂತಹ ಮಕ್ಕಳನ್ನು ಕೊಟ್ಟಿದ್ದಾನೆ ಎಂದು ಮನದಲ್ಲಿ ಕೊರಗುತ್ತಾ ಮಕ್ಕಳನ್ನು ಬಡಿದೆಬ್ಬಿಸಿದಳು.
ಸ್ವಾತಿ ಎಲ್ಲಾ ಮಕ್ಕಳ ಹಾಗೆ ಚುರುಕು ಅಲ್ಲದಿದ್ದರೂ ಸೂಕ್ಷ್ಮಮತಿ. ಪಕ್ಕದ ಮನೆಯ ರಮ್ಯನ ಹಾಗೆ ಸ್ವಾತಿಯ ಕಲಿಕೆ, ನಿತ್ಯ ಚಟುವಟಿಕೆ ವರ್ತನೆಗಳು ಇರಬೇಕೆಂದು ಜಾನಕಿಯ ಛಲ. ಅದಕ್ಕೆ ತಕ್ಕ ಹಾಗೆ ಅತ್ತಿಗೆಯ ಕುಹಕದ ಮಾತುಗಳು. ಈ ಸಲ ಗೌರವ ಐದನೇ ತರಗತಿಯಲ್ಲಿ ಪ್ರಥಮ ಬಂದಿದ್ದಾನೆ, ಸೌರಭ ವಿಜ್ಞಾನ ಮಾದರಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ, ಅವನ ಫೋಟೋಗಳ ಸಹಿತ ಬ್ಯಾನರ್ ಗಳನ್ನು ಅಲ್ಲಲ್ಲಿ ಹಾಕಿದ್ದಾರೆ. ಅವನಿಗೆ ವಿಮಾನದಲ್ಲಿ ಹೋಗಲಿದೆ ಅಂತ ಅವನ ಮಾಸ್ಟ್ರು ಹೇಳಿದ್ದಾರೆ, ಗೌರವ್ ನಿಗೆ ಕರಾಟೆಯಲ್ಲಿ ಬಹುಮಾನ ಬಂದಿದೆ. ಇದೇ ವಿಚಾರಗಳು ಜಾನಕಿಯ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು. ಹೆಚ್ಚು ನೆನಪಾದಷ್ಟು ಹೆಚ್ಚು ಪೆಟ್ಟುಗಳು ಮಕ್ಕಳಿಗೆ.
ಸ್ವಾತಿಯಷ್ಟು ನಿಧಾನ ಕಲಿಕೆ ಅಲ್ಲದಿದ್ದರೂ ಸ್ವಲ್ಪಮಟ್ಟಿಗೆ ಚುರುಕಾಗಿದ್ದ ಮನುವನ್ನು ಅವನಿಂದಾದರೂ ಏನಾದರೂ ಸಾಧಿಸಲೇಬೇಕೆಂಬ ಬಯಕೆ ಜಾನಕಿಯದ್ದು. ಅವನ ಸಾಮರ್ಥ್ಯದ ಬಗ್ಗೆ ಯೋಚಿಸದೆ ಐದನೇ ತರಗತಿಯಿಂದ ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಗೊಳಿಸಿದರು. ಕ್ರಮೇಣ ಮನುವಿನ ಕಡಿಮೆ ಅಂಕ ನಿರಾಸಕ್ತಿಯೊಂದಿಗೆ ಮಂಕಾಗಿ ಯಾರೊಂದಿಗೂ ಬೆರೆಯದೆ ಇರುವುದನ್ನು ರೂಡಿಸಿಕೊಂಡ. ಇದನ್ನು ಕಂಡ ಶಾಲಾ ಶಿಕ್ಷಕಿ ಒಬ್ಬರು ಆಪ್ತ ಸಮಾಲೋಚನೆಯೊಂದಿಗೆ ಮಾತನಾಡಿಸಿದಾಗ ಮನುವಿನ ವೇದನೆ ತಿಳಿಯಿತು. ಅಕ್ಕ ಎಲ್ಲಾ ವಿಷಯಗಳಲ್ಲಿ ನಿಧಾನ. ಅದಿಕ್ಕೆ ಅಮ್ಮ ಬೇರೆ ಮಕ್ಕಳ ಹಾಗೆ ಆಗಬೇಕೆಂದು ಬಡಿತಾರೆ. ಅಕ್ಕ ಅಳುವುದನ್ನು ನೋಡಲು ನನಗೆ ಆಗುವುದಿಲ್ಲ. ಬೇರೆಯವರೊಂದಿಗೆ ಹೋಲಿಸಿ ಬಯ್ಯುವಾಗ ತುಂಬಾ ಬೇಸರವಾಗುತ್ತದೆ. ಹಾಗೆ ಒತ್ತಾಯದಲ್ಲಿ ನನ್ನನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿದ್ದಾರೆ. ಅದರಲ್ಲಿ ನನಗೆ ಸ್ವಲ್ಪವೂ ಆಸಕ್ತಿ ಇಲ್ಲ. ಅಮ್ಮನ ಭಯಕ್ಕೆ ಹೋಗ್ತಾ ಇದ್ದೇನೆ ಅಷ್ಟೇ ಅಂದ.
ಮುಖದಲ್ಲಿ ಏನು ಬಿಳಿಯ ಕಲೆಗಳು ಅಂತ ಆಪ್ತ ಸಮಾಲೋಚಕಿ ಕೇಳಿದಾಗ ನಾಟಕದಲ್ಲಿ ಬಣ್ಣ ಹಚ್ಚಿದ್ದು ಅಲರ್ಜಿ ಆಗಿದೆ ಅಂತ ನಸುನಗುತ್ತಾ ಹೇಳಿದ. ಆತನ ನಾಟಕದ ಆಸಕ್ತಿಯ ಬಗ್ಗೆ ಕೇಳಿದಾಗ ತಂದೆಯು ನಾಟಕದಲ್ಲಿ ಭಾಗವಹಿಸಿ ಒಳ್ಳೆಯ ಪಾತ್ರ ನಿರ್ವಹಣೆ ಮಾಡುವವರು. ಮಗನಿಗೂ ಅದರಲ್ಲಿ ಆಸಕ್ತಿ ಇದ್ದು ಸಣ್ಣ ಪುಟ್ಟ ಪಾತ್ರಗಳನ್ನು ಅತ್ಯಂತ ಆಸಕ್ತಿಯಿಂದ ಮಾಡುತ್ತಿದ್ದ.
ಕೃಷಿ ಹಾಗೂ ನಾಟಕದಲ್ಲಿ ಆಸಕ್ತಿ ಇರುವ ಮನುವಿಗೆ ತಾಯಿಯ ಸಮಾಜದೊಂದಿಗಿನಾ ಹೋಲಿಕೆ, ತಮ್ಮಿಂದ ಸಾಧಿಸಲಾಗದ ಕನಸುಗಳು, ಅಂಕಗಳಿಂದ ಮಾತ್ರ ಯಶಸ್ಸು, ಮಗನ ಮುಂದಿನ ಜೀವನದ ಚಿಂತೆ, ಆರ್ಥಿಕ ಹೊಂದಾಣಿಕೆ ಈ ಎಲ್ಲ ಒತ್ತಡಗಳನ್ನು ಮಗುವಿಗೆ ಹೇರಿದಾಗ ಮಗುವಿನ ಆಸಕ್ತಿಯ ವಿಷಯಗಳು ಮಣ್ಣು ಪಾಲಾಗಿ ಸಮಾಜದಲ್ಲಿ ಏನೂ ಅಲ್ಲದ ಸ್ಥಿತಿಗೆ ಬಂದು ನಿಲ್ಲುತ್ತಾನೆ, ಎನ್ನುವ ಸಣ್ಣ ಸುಳಿವು ಪೋಷಕರಿಗೆ ಇಲ್ಲದಾಗಿದೆ. ಮಗುವಿನ ಆತ್ಮವಿಶ್ವಾಸ ಕುಗ್ಗಿಸಿ ಭಯವೇ ಆವರಿಸಿಕೊಳ್ಳುವಂತೆ ಮಾಡುತ್ತಾರೆ.
ಪ್ರತಿ ಮಗು ಪ್ರಶ್ನಿಸಲು ಪ್ರಯತ್ನಿಸಿದಾಗ ಬಾಯಿ ಮುಚ್ಚಿಸುತ್ತೇವೆ, ಜವಾಬ್ದಾರಿಯ ಕೆಲಸ ಕೊಡದೆ ನಿನಗೇನು ಗೊತ್ತಿದೆ ಎಂದು ಹಣೆಪಟ್ಟಿ ಹಚ್ಚುತ್ತೇವೆ. ತಪ್ಪುಗಳಿಂದ ಕಲಿಯಲು ಬಿಡದೆ ಪದೇಪದೇ ಮಾಡಿದ ತಪ್ಪನ್ನೇ ಹೇಳುತ್ತೇವೆ. ಮಗುವಿನ ಪ್ರಯತ್ನಕ್ಕೆ ಪ್ರೋತ್ಸಾಹಿಸದೆ ಫಲಿತಾಂಶಕ್ಕೆ ಒತ್ತು ಕೊಡುತ್ತೇವೆ. ಈ ಎಲ್ಲದರ ನಡುವೆ ಮನುವಿನ ಭವಿಷ್ಯವೇನು..?
ಸಕಾರಾತ್ಮಕ ಮಾತು, ಕೆಲಸಕ್ಕೆ ಪ್ರೋತ್ಸಾಹ, ಸೋತರೆ ನಾವಿದ್ದೇವೆ ಎನ್ನುವ ಧೈರ್ಯ ಕೊಡುವುದರೊಂದಿಗೆ ಅವನ ಅಂತರಾತ್ಮದ ನುಡಿಗಳನ್ನು ಆಲಿಸುವುದು ಪೋಷಕರಿಂದ ಸಾಧ್ಯವೇ..? ಆತನ/ಆಕೆಯ ಸಾಮರ್ಥ್ಯ ಆಸಕ್ತಿ ಅಭಿರುಚಿಗೆ ಪ್ರೋತ್ಸಾಹ ನೀಡುವವರು ಯಾರು..? ನೀವೇ ಹೇಳಿ..
ವಿಶೇಷ ಸಂಪನ್ಮೂಲ ವ್ಯಕ್ತಿ
ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 63604 91682
******************************************