ಜೀವನ ಸಂಭ್ರಮ : ಸಂಚಿಕೆ - 260
Monday, September 14, 2026
Edit
ಜೀವನ ಸಂಭ್ರಮ : ಸಂಚಿಕೆ - 260
ಲೇಖಕರು : ಎಂ. ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
ಮಕ್ಕಳೇ, ಈ ಕಥೆ ಓದಿ. ಒಂದೂರಿನಲ್ಲಿ ಒಬ್ಬ ರಾಜನಿದ್ದನು. ಆತನಿಗೆ ಒಬ್ಬ ಪ್ರಿಯನಾದ ಮಂತ್ರಿ ಇದ್ದನು. ಆತ ಯಾವಾಗಲೂ ರಾಜನ ಜೊತೆ ಇರುತ್ತಿದ್ದನು. ಆ ಮಂತ್ರಿಗೆ ಒಂದು ಹವ್ಯಾಸ. ಏನೇ ಆದರೂ ಒಳ್ಳೆಯದಾಯಿತು ಅಂತ ಹೇಳುತ್ತಿದ್ದನು. ಇದು ಅವನ ಸ್ವಭಾವ ಅಂತ ಎಲ್ಲರೂ ಭಾವಿಸಿದ್ದರು.
ಒಮ್ಮೆ ರಾಜನಿಗೆ ಒಂದು ಗಾಯವಾಗಿ ಒಂದು ಬೆರಳ ಸಣ್ಣ ಭಾಗ ತುಂಡಾಗಿ ಹೋಯಿತು. ರಾಜ ನೋವಿನಿಂದ ನರಳುತ್ತಿದ್ದನು. ಈ ಸುದ್ದಿ ಮಂತ್ರಿಗೆ ತಿಳಿದು ಧಾವಿಸಿ ಬಂದನು. ನೋಡಿದ ಒಳ್ಳೆದಾಯಿತು ಅಂದನು. ಈ ಮಾತು ರಾಜನಿಗೆ ಕೋಪ ಬರಿಸಿತು. ಗಾಯಕ್ಕೆ ಬರೆ ಎಳದಂತಾಯಿತು. ಬೆರಳು ತುಂಡಾದುದನ್ನು ಮಂತ್ರಿ ಒಳ್ಳೆಯದಾಯಿತು ಅಂತ ಹೇಳಿದ್ದನ್ನು ರಾಜ ಅರಗಿಸಿಕೊಳ್ಳಲು ಆಗದೆ ಕೋಪದಿಂದ ಮಂತ್ರಿಯನ್ನು ಜೈಲಿಗೆ ಹಾಕಲು ಆದೇಶಿಸಿದ. ಆಗಲೂ ಮಂತ್ರಿ ಒಳ್ಳೆಯದಾಯಿತು ಅಂತ ಹೇಳಿ ಜೈಲಿಗೆ ಹೋದನು. ರಾಜನು ಆತನ ವಿಚಿತ್ರ ವರ್ತನೆ ಕಂಡು ಸುಮ್ಮನಾದನು. ಆಮೇಲೆ ಒಂದಷ್ಟು ದಿನಗಳಾದ ಮೇಲೆ ಮೃಗಗಳ ಬೇಟೆಗೆ ಅಂತ ಕಾಡಿಗೆ ರಾಜ ಹೋದನು. ಪ್ರಾಣಿಗಳನ್ನು ಹುಡುಕುತ್ತಾ ಹುಡುಕುತ್ತಾ ದಟ್ಟ ಕಾಡಿನೊಳಗೆ ಹೋದನು. ದಾರಿ ತಪ್ಪಿ ಕಾಡಿನಲ್ಲಿ ಸಿಕ್ಕಿಹಾಕಿಕೊಂಡನು. ರಾಜನಿದ್ದಲ್ಲಿಗೆ ಕಾಡು ಮನುಷ್ಯರು ಬಂದು ರಾಜನನ್ನು ಹಿಡಿದು ತಾವಿದ್ದಲ್ಲಿಗೆ ಕರೆದುಕೊಂಡು ಹೋದರು. ರಾಜ ದಷ್ಟಪುಷ್ಟನಾಗಿದ್ದನು. ಹಾಗಾಗಿ ರಾಜನನ್ನು ಅವರ ದೇವತೆಗೆ ಬಲಿಕೊಡಲು ತೀರ್ಮಾನಿಸಿದರು. ಬಲಿ ಕೊಡುವ ಪ್ರಾಣಿ ಯಾವುದೇ ದೈಹಿಕ ನ್ಯೂನ್ಯತೆಗಳು ಇರಬಾರದು ಎಂಬುದು ಅವರ ನಿಯಮ. ಬಲಿಕೊಡುವ ಮುನ್ನ ದೇಹ ಪರಿಶೀಲನೆ ನಡೆಸಿದರು. ಒಂದು ಬೆರಳು ತುಂಡಾಗಿತ್ತು. ಹಾಗಾಗಿ ಆತನನ್ನು ಬಲಿ ಕೊಡದೆ ಬಿಟ್ಟು ಕಳುಹಿಸಿದರು. ರಾಜನಿಗೆ ಹೋದ ಜೀವ ಮರಳಿ ಬಂದಂತಾಗಿತ್ತು. ಸಂತೋಷದಿಂದ ಅರಮನೆಗೆ ಹಿಂತಿರುಗಿದನು. ನಡೆದ ಘಟನೆಯನ್ನು ಮೆಲುಕು ಹಾಕುವಾಗ ಆತನಿಗೆ ಮಂತ್ರಿ ಹೇಳಿದ್ದು ನೆನಪಾಯಿತು. ಆತ ಅಂದು ಒಳ್ಳೆದಾಯ್ತು ಅಂತ ಹೇಳಿದಾಗ ಸಿಟ್ಟು ಬಂದಿತ್ತು. ಹೌದಾದರೂ ನಿಜವಾಗಿ ಬೆರಳು ತುಂಡಾದದ್ದು ಒಳ್ಳೆಯದೇ ಆಗಿತ್ತು. ಇಲ್ಲವಾದರೆ ಜೀವವೇ ಹೋಗುತ್ತಿತ್ತು. ಇದನ್ನು ಮನವರಿಕೆ ಮಾಡಿಕೊಂಡ ರಾಜನು ಮಂತ್ರಿಯನ್ನು ಜೈಲಿನಿಂದ ಬಿಡುಗಡೆ ಮಾಡಿ ಕರೆಸಿಕೊಂಡನು. ನಡೆದ ಘಟನೆಯನ್ನು ಮಂತ್ರಿಗೆ ಹೇಳಿದ. ಆಗಲು ಮಂತ್ರಿ ಒಳ್ಳೆಯದಾಯಿತು ಅಂತ ಹೇಳಿದನು. ಆಗ ರಾಜನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. ಮಂತ್ರಿಯನ್ನು ಜೈಲಿಗೆ ಹಾಕಿದಾಗಲೂ ಮಂತ್ರಿ ಒಳ್ಳೆಯದಾಯಿತು ಅಂತ ಹೇಳಿದ್ದನ್ನು ನೆನೆದು ಅದು ಹೇಗೆ ಒಳ್ಳೆಯದು ಎಂದ. ಆಗ ಮಂತ್ರಿ ಹೇಳಿದ ಒಂದು ವೇಳೆ ನಾನು ಜೈಲಿನಲ್ಲಿ ಇರದಿದ್ದರೆ ಬೇಟೆಗೆ ನಿಮ್ಮ ಜೊತೆ ಬರಬೇಕಿತ್ತು. ಶರೀರದಲ್ಲಿ ಯಾವುದೇ ನ್ಯೂನತೆ ಇರದಿದ್ದರಿಂದ ಆ ಕಾಡು ಮನುಷ್ಯರು ನನ್ನನ್ನು ಬಲಿ ಕೊಡುತ್ತಿದ್ದರು. ಜೈಲಿನಲ್ಲಿ ಇದ್ದಿದ್ದರಿಂದ ನನ್ನ ಜೀವ ಉಳಿದಿದ್ದು ಒಳ್ಳೆಯದಲ್ಲವೇ? ಎಂದನು.
ಜೀವನದಲ್ಲಿ ಬರುವ ಅನುಭವಗಳನ್ನು ಒಳ್ಳೆಯದು ಅಂತಾನೆ ಸ್ವೀಕರಿಸಬೇಕು. ಬಹುತೇಕ ಹೆಚ್ಚಿನ ಸಂದರ್ಭದಲ್ಲಿ ಒಳ್ಳೆಯದೇ ಆಗುತ್ತದೆ. ಹಾಗೆ ಒಳ್ಳೆಯದಾಗಲು ಕಾರಣ ನಮ್ಮ ಮನಸ್ಸಿಗೆ ಇರುವ ಶಕ್ತಿ. ಒಳ್ಳೆಯದು ಅಂತ ಭಾವಿಸಿದರೆ ಅದು ಒಳ್ಳೆಯದಾಗುವಂತೆ ವಿಚಾರ ಮಾಡಿ ಒಳ್ಳೆಯದೇ ಸಂಭವಿಸುವಂತೆ ಮನಸ್ಸು ಮಾಡುತ್ತದೆ. ಆ ಶಕ್ತಿ ಮನಸ್ಸಿಗೆ ಇದೆ. ಅಲ್ಲವೇ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
****************************************