ನಿಷ್ಪಾಪಿ ಸಸ್ಯಗಳು : ಸಂಚಿಕೆ - 161
Thursday, September 10, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 161
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ದಿನಗಳು ಓಡುತ್ತಿವೆ... ಪಾಠಗಳೂ ಓಡುತ್ತಾ ಅರ್ಧವಾರ್ಷಿಕ ಪರೀಕ್ಷೆಯನ್ನು ಹೊತ್ತು ತರುತ್ತಿರುವ ಈ ಹೊತ್ತಲ್ಲಿ ನಿಮಗೊಂದು ಬಹಳ ಅಚ್ಚರಿಯ ಸಸ್ಯವೊಂದನ್ನು ಪರಿಚಯಿಸುತ್ತಿದ್ದೇನೆ. ಇತ್ತೀಚೆಗೆ ಒಂದು ದಿನ ನನಗೆ ಸ್ವಲ್ಪ ಜ್ವರ ಕಾಣಿಸಿತ್ತು. ನಮ್ಮ ಹತ್ತಿರದ ಗ್ರಾಮದಲ್ಲಿರುವ ಆಸ್ಪತ್ರೆಗೆ ಹೋಗಲು ನಿರ್ಧರಿಸಿದೆ. ಅದು ಗ್ರಾಮೀಣ ಪ್ರದೇಶ. ತೋಪು ತೋಟ, ತೋಡುಗಳನ್ನು ದಾಟಿ ಹೋಗಿ ಹಿಂದೆ ಬರುವಾಗ ದಾರಿ ಬದಿಯ ಬೇಲಿಯಲ್ಲಿ ಒಂದು ವಿಶೇಷ ಗಿಡವನ್ನು ಕಂಡೆ.
ಮೂಡುಬಿದರೆಯಲ್ಲಿ ವರ್ಷವೂ ನಡೆಯುವ ಆಳ್ವಾಸ್ ನುಡಿಸಿರಿಯಲ್ಲಿ ಮಾಡುವ ಅಲಂಕಾರಗಳೇ ವಿಶಿಷ್ಟವಾದುವು. ಬಟ್ಟೆಯ ಕುಸುರಿಕೆಲಸದ ಗೂಡುಗಳಂತಹ ರಚನೆಯನ್ನು ಸಭಾಂಗಣ ಹಾಗೂ ಹೊರಗಡೆಗೆಲ್ಲಾ ಅಲಂಕಾರಕ್ಕೆ ಬಳಸುವುದನ್ನು ಕಂಡಿರುವಿರಾ? ಅಂತಹ ಕವಚಿಹಾಕಿದ ಗೂಡುಗಳ ಕೆಳ ಭಾಗದಲ್ಲಿ ಹೊಳೆಯುವ ಹಳದಿ ಬಣ್ಣದ ಮುದ್ದಾದ ಹೂಗಳು ನೆಲ ನೋಡುತ್ತಾ ಅರಳಿದ್ದವು. ಹಿಂದೆ ಸರಪಳಿಯಲ್ಲಿ ತೂಗುವ ದೀಪಗಳಿದ್ದವು. ಸರಪಳಿಯಲ್ಲಿ ತೂಗುವ ಹೂ ಗೊಂಚಲಂತೆಯೂ ಈ ಹೂವು ಭಾಸವಾಯಿತು. ಹುರುಪೆಗಳಂತಿರುವ ಪುಷ್ಪಪಾತ್ರೆಗಳು ಒಂದರ ಮೇಲೊಂದು ಕವಚಿ ಬಿದ್ದಂತೆ ಇಳಿ ಬಿದ್ದು ಉದ್ದನೆಯ ಜಡೆ ಹೆಣೆದಂತೆ ಕಾಣಿಸುವುದಷ್ಟೇ ಅಲ್ಲ, ಮುಕುಟವಿಟ್ಟಂತಿರುವ ಪುಟ್ಟ ಹಳದಿ ಹೂಗಳು! ಇಳಿಬಿದ್ದ ತೆನೆಗಳನ್ನು ಕಂಡು ನನಗರಿವಿಲ್ಲದೆಯೆ ಸ್ಕೂಟರ್ ನಿಂತಿತು ! . ಗಿಡದ ಸನಿಹಕ್ಕೆ ಹೋಗಿ ಅತ್ಯಾಶ್ಚರ್ಯ ಹಾಗೂ ಮಮತೆಯಿಂದ ಆ ನಿಷ್ಪಾಪಿ ಸಸ್ಯಕ್ಕೆ "ಹಾಯ್" ಎಂದೆ. ಬಿಸಿಲಿಗೆ ದಟ್ಟ ಹಸಿರು ರಂಗಲ್ಲಿ ಫಳಫಳ ಹೊಳೆಯುತ್ತಿದ್ದ ರುಪಾಯಿಯಗಲದ ಎಲೆಗಳು ಕುಣಿಕುಣಿದು "ಹಲೋ" ಅಂತಂದವು. ಆಗಷ್ಟೇ ತುಂತುರಿಗೆ ಮಿಂದೆದ್ದು ಮಿದುವಾಗಿ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ ಕುಳಿತಿದ್ದ ಗಿಡದ ಕೊಂಬೆ ಕೊಂಬೆಗಳಲ್ಲಿ ಗೀಜಗನ ಗೂಡಿನಂತೆ ಹೂವಿನ ಜಡೆಗಳು ಜೀಕುತ್ತಿದ್ದವು.
"ನಾನು ಇಷ್ಟರವರೆಗೆ ನಿನ್ನಂತಹ ಸಸ್ಯಗಳನ್ನು ಕಂಡೇ ಇಲ್ಲ. ಪ್ರಥಮ ಬಾರಿಗೆ ನೋಡುತ್ತಿದ್ದೇನೆ. ಪೊದೆಯ ಹಾಗೆ ಕಾಣುತ್ತಿರುವ ನಿನಗೆ ಈ ಸುಂದರ ಹೂಗೊಂಚಲ ಅಲಂಕಾರ ಸೊಬಗು ನೀಡಿದೆ" ಅಂತಂದೆ. ಗೊನೆಯಂತೆ ತಲೆಕೆಳಗಾಗಿ ಜೋತುಬಿದ್ದ ಹೊಂಬಾಳೆಯಲ್ಲಿ ಅಂಡಾಕಾರದ ಟೊಳ್ಳಿನ ತುದಿಭಾಗದಲ್ಲಿ ಪುಟಾಣಿ ದಳಗಳಿಂದ ಆವೃತವಾಗಿದ್ದ ಹೊಳೆವ ಹಳದಿ ಬಣ್ಣದ ದ್ವಿಲಿಂಗಿ ಪುಷ್ಪಗಳು ನಸು ನಕ್ಕವು. ಕೊಳವೆಗೊಂದು ಹೂವುಗಳ ಪೆಂಡೆಂಟ್ ರಚನೆಯಾದಂತೆ ಕಂಡಿತು. ನೋಡುತ್ತಾ ನನಗೂ ಖುಷಿಯಾಗಿ "ನಿನ್ನ ಹೆಸರೇನು?" ಎಂದು ಕೇಳಿದೆ.
ಗಿಡ ಭಾರವಾದ ದನಿಯಲ್ಲಿ "ಈ ಜನ ನನಗೇನೂ ಹೊಸ ಹೆಸರು ಇಟ್ಟಿಲ್ಲ. ಗಿಳಿಯ ಕೊಕ್ಕಿನಂತೆ ಹೂಗಳು ಕಾಣಿಸುತ್ತವೆಯೆಂದು ಪ್ಯಾರೆಟ್ಸ್ ಬೀಕ್, ಗಿಳಿ ಕೊಕ್ಕಿನ ಗಿಡ ಅಂತ ಕರೀತಾರೆ.. ತೆಲುಗಿನಲ್ಲಿ ಕಾಗೆ ಕೊಕ್ಕು, ಹಿಂದಿಯಲ್ಲಿ ಕೊಕ್ಕರೆ ಮುಖ, ಸಂಸ್ಕೃತದಲ್ಲಿ ಭದ್ರ ಎನ್ನುತ್ತಾರೆ ಎಂದಿತು. ನನಗೆ ಈ ಸಸ್ಯದ ಬಗ್ಗೆ ಪರಿಚಯವಿರದೆ ತುಳು, ಕನ್ನಡ ಹೆಸರುಗಳು ನನಗೂ ತಿಳಿದಿರಲಿಲ್ಲ. ಆದರೆ ಗಿಡವು ಮಾತನಾಡುತ್ತಾ ತಾನು ಗ್ಮೆಲಿನಾ ಕುಲದಲ್ಲಿದ್ದು ಲ್ಯಾಮಿಯೇಸಿ ಕುಟುಂಬಕ್ಕೆ ಸೇರಿದ್ದೇನೆಂದು ಹೇಳಿತು. ಗಿಮಿಲಿನಾ ಪಿಲಿಪ್ಪೆನ್ಸಿಸ್ ( Gmelina philippensis) ಎಂಬುದು ಸಸ್ಯಶಾಸ್ತ್ರೀಯ ಹೆಸರಾಗಿದ್ದು ಆಂಗ್ಲ ಭಾಷೆಯಲ್ಲಿ Hedgehog plant , Snapdragon tree, Wild sage ಎಂದೂ ಕರೆಯುತ್ತಾರೆಂದಿತು.
ಫಿಲಿಫೈನ್ಸ್, ಮಲೇಷ್ಯಾ ಮೂಲದ ಗಿಳಿ ಕೊಕ್ಕು ಹೂವಿನ ಗಿಡ ಭಾರತಕ್ಕೆ ಬಂದು ಲಾಲ್ ಬಾಗ್ ನಂತಹ ಉದ್ಯಾನಗಳಲ್ಲಿ, ಬೋನ್ಸಾಯ್ ಪ್ರಿಯರ ಅಂಗಳದಲ್ಲಿ, ರೆಂಬೆಕೊಂಬೆಗಳಲ್ಲಿ ಮುಳ್ಳುಗಳಿರುವುದರಿಂದ ನೈಸರ್ಗಿಕ ಬೇಲಿಗಳಲ್ಲಿ ಜಾಗ ಪಡೆದಿದೆ, ಎಂದು ನಾನು ತಿಳಿದುಕೊಂಡೆ. ಉಷ್ಣವಲಯದ ಹವಾಮಾನದಲ್ಲಿ ಬಲಿತ ರೆಂಬೆ ಹಾಗೂ ಬೀಜಗಳ ಮೂಲಕ ಸುಲಭವಾಗಿ ವೇಗವಾಗಿ ಬೆಳೆಯುವ ಗಿಳಿ ಕೊಕ್ಕು ಹೂವಿನ ಗಿಡ ಸಾಂಪ್ರದಾಯಿಕ ಹಾಗೂ ಆಯುರ್ವೇದ ಔಷಧಿ ಪದ್ದತಿಯಲ್ಲಿ ಉಸಿರಾಟದ ತೊಂದರೆ, ಕೆಮ್ಮು, ಚರ್ಮದ ಅಲರ್ಜಿ, ಕೀಲುನೋವು, ನರಗಳ ಬಲಹೀನತೆ, ಜೀವಕೋಶಗಳ ರಕ್ಷಣೆ, ಉರಿಯೂತದಂತಹ ಕಾಯಿಲೆಗಳಿಗೆ ಉಪಶಮನ ನೀಡಲು ಬಳಕೆಯಲ್ಲಿದೆಯಂತೆ. ಅಷ್ಟು ಮಾತ್ರವಲ್ಲದೆ ಸಂಶೋಧನೆಗಳೂ ನಡೆಯುತ್ತಿವೆಯಂತೆ.
ಇಷ್ಟಪಟ್ಟರೆ ಅಡ್ಡಾದಿಡ್ಡಿ ಬೆಳೆದು ಪೊದೆಯಂತೆ ಕಾಣುವ ಈ ಸಸ್ಯವನ್ನು ಚಟ್ಟಿಗಳಲ್ಲೂ ನೆಟ್ಟು ಸಾಕಬಹುದು. ಹೂವುಗಳು ಚಿಟ್ಟೆ, ಜೇನು, ಇರುವೆಗಳಿಗೆ ಮಧುವುಣಿಸಿದರೆ, ತಿರುಳು ತುಂಬಿದ ಹಳದಿ ಹಣ್ಣುಗಳು ಸಣ್ಣ ಪ್ರಾಣಿ ಪಕ್ಷಿಗಳಿಗೆ ತಿನಿಸಾಗುತ್ತದೆ.
ಮಕ್ಕಳೇ, ತಾವೂ ಈ ಗಿಡವನ್ನು ಎಲ್ಲಾದರೂ ಕಂಡರೆ ಸುಲಭವಾಗಿ ಹೇಗೆ ಗುರುತಿಸುವಿರಿ? ಒಂದರ ಮೇಲೊಂದು ಎಲೆಗಳಂತಹ ರಚನೆಗಳು ಜೋಡಣೆಯಾಗಿ ತುದಿಯಲ್ಲಿ ಗಿಳಿಕೊಕ್ಕಿನ ಆಕಾರದ ಹಳದಿ ಬಣ್ಣದ ಹೂವುಗಳನ್ನೇ ಕಾಣಬೇಕಾಗುತ್ತದೆ. ಆಗಸ್ಟ್ ನಿಂದ ಡಿಸೆಂಬರ್ ವರೆಗೂ ಹೂಬಿಡುವ ಕಾಲವಾಗಿದ್ದು ತಾವು ಗುರುತಿಸಿದರೆ ಅಥವಾ ಪ್ರಾದೇಶಿಕ ಹೆಸರುಗಳಿದ್ದರೆ ನನಗೂ ತಿಳಿಸುವಿರಲ್ಲವೇ?
ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************