ಜೀವನ ಸಂಭ್ರಮ : ಸಂಚಿಕೆ - 258
Sunday, August 30, 2026
Edit
ಜೀವನ ಸಂಭ್ರಮ : ಸಂಚಿಕೆ - 258
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಗುಣಗ್ರಹಣದ ಬಗ್ಗೆ ತಿಳಿದುಕೊಳ್ಳೋಣ. ಗುಣಗ್ರಹಣ ಅನ್ನುವುದು ಒಂದು ನೀತಿ. ಇದನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು.
ಗುಣ ಗ್ರಹಣ ಎಂದರೆ ದೋಷ ಗುರುತಿಸದೆ ಒಳ್ಳೆಯದನ್ನು ನೋಡಬೇಕು. ಪ್ರತಿಯೊಬ್ಬ ವ್ಯಕ್ತಿಯೊಳಗೆ, ಪ್ರತಿಯೊಂದು ವಸ್ತುವಿನಲ್ಲಿ ಎರಡು ಗುಣಗಳು ಜೊತೆಯಾಗಿ ಇರುತ್ತವೆ. ಒಂದು ಗುಣ ಮತ್ತು ಅದರ ವಿರುದ್ಧ ಗುಣವು ಜೊತೆಯಾಗಿರುತ್ತದೆ. ಒಂದು ಒಳ್ಳೆಯದು ಮತ್ತೊಂದು ದೋಷಪೂರಿತ ಕೆಟ್ಟುದ್ದು. ಎರಡನ್ನು ಗುರುತಿಸಬೇಕು. ಆ ಬಳಿಕ ಏನು ಬೇಡದ್ದು ಇದೆ ಅದರ ಕಡೆ ಲಕ್ಷ್ಯ ಕೊಡಬಾರದು. ಅದರಲ್ಲಿರುವ ಗುಣ (ಒಳ್ಳೆಯದನ್ನು) ಗಮನಿಸಬೇಕು. ಆಗ ಜಗತ್ತು ಚಂದ ಆಗುತ್ತದೆ. ಬಹಳ ಸುಂದರವಾಗುತ್ತದೆ. ಆಗ ನಾವು ಬದುಕಲಿಕ್ಕೆ ಕಲಿತಿದ್ದೇವೆ ಎಂದು ಅದರ ಅರ್ಥ.
ಕೆಲವರ ಸ್ವಭಾವ ಇದೆ. ಬರಿ ತಪ್ಪು ಹುಡುಕುವುದು. ಏನು ಸೂರ್ಯ ಉರಿಯುತ್ತಿದ್ದಾನೆ? ಅನ್ನುತ್ತೇವೆ. ಬೆಳಕು ಕೊಡುತ್ತಾನೆ ಅನ್ನುವುದು ಮಹತ್ವದಲ್ಲ. ಹೀಗಾಗಿ ಬದುಕು ಕೆಡಿಸಿಕೊಳ್ಳುತ್ತೇವೆ. ಸೂರ್ಯ ಅಂದ ಬಳಿಕ ಅದರಲ್ಲಿ ಎರಡು ಇದೆ. ಒಂದಿಷ್ಟು ಶಾಖ, ಒಂದಿಷ್ಟು ಬೆಳಕು ಇದೆ. ನಮಗೆ ಯಾವುದು ಹಿಡಿಸುತ್ತದೆ ಅದರ ಕಡೆ ಲಕ್ಷ್ಯ ಕೊಡುವುದು. ಯಾವುದು ಒಳ್ಳೆಯದು ಇದೆ ಅದರ ಕಡೆ ಲಕ್ಷ್ಯ ಕೊಡುವುದು. ಬರೀ ಕೆಟ್ಟದ್ದನ್ನು ಹುಡುಕುತ್ತಾ ಹೋದರೆ ಜೀವನ ಕೆಟ್ಟದಾಗುತ್ತದೆ. ಜೀವನವನ್ನು ನಾವೇ ಕೆಡಿಸಿಕೊಳ್ಳುತ್ತೇವೆ. ಸಣ್ಣ ಸಂಗತಿ ಅದೇ ಬಹಳ ದೊಡ್ಡದಾಗಿ ಬಿಡುತ್ತದೆ. ಆ ಬಳಿಕ ಹೇಳುತ್ತೇವೆ ಇದು ಸರಿಯಲ್ಲ ಅಂತ.
ಈಗ ರಸಾಯನ ಶಾಸ್ತ್ರದಲ್ಲಿ ಕಾರ್ಬನ್ ಡೈಯಾಕ್ಸೈಡ್ ಇದೆ. ಇದರಲ್ಲಿ ಎರಡು ಇದೆ. ಒಂದು ಕಾರ್ಬನ್ ಇನ್ನೊಂದು ಆಕ್ಸಿಜನ್ ಇದೆ. ಆಕ್ಸಿಜನ್ ನಮಗೆ ಬಹಳ ಇಷ್ಟ ಅಂತೀವಿ. ಯಾರಾದರೂ ಇಂಗಾಲ ಉಸಿರಾಡುತ್ತಾರೇನು?. ಇಲ್ಲ. ಎರಡು ಕೂಡಿದ ಕೂಡಲೇ ಬೇಡದ ವಾಯು ಆಯ್ತು. ಇದು ಮಿಶ್ರಣ. ನೀರಿನಲ್ಲಿ ಜಲಜನಕ ಮತ್ತು ಆಮ್ಲಜನಕ ಎರಡು ಇದೆ. ನಮಗೆ ಆಮ್ಲಜನಕ ಹಿಡಿಸುತ್ತೆ ಜಲಜನಕ ಹಿಡಿಸುವುದಿಲ್ಲ. ನೀರಿನಲ್ಲಿ ಎರಡು ಇದೆ. ಆ ಎರಡು ಮಿಶ್ರಣ, ಮಿಶ್ರಣ ಆದ ಕೂಡಲೇ ನಾವು ಆ ಕಡೆ ಈ ಕಡೆ ನೋಡಬಾರದು. ಆ ಮಿಶ್ರಣ ನಮಗೆ ಹಿತವಾದದ್ದು. ಹಾಗೆ ಜಗತ್ತಿನಲ್ಲಿ ಬೇಡವಾದುದ್ದು, ಬೇಕಾದದ್ದು ಎರಡು ಇದೆ. ಇಂತಹ ಮಿಶ್ರಣ ಜಗತ್ತು ಇಂತಹದರಲ್ಲಿ ನಾವು ಏನು ನೋಡಬೇಕೊ? ಅದನ್ನು ನೋಡಬೇಕು. ಏನು ಕೇಳಬೇಕೋ? ಅದನ್ನು ಕೇಳಬೇಕು. ಏನನ್ನು ಮನಸ್ಸಿನಲ್ಲಿ ಇಟ್ಟು ಸಂತೋಷ ಪಡಬೇಕೋ? ಸಂತೋಷ ಪಡಬೇಕು. ಎಲ್ಲವನ್ನು ತಲೆಗೆ ಹಾಕೊಬಾರದು.
ಮಿಶ್ರಣ ಈ ಜಗತ್ತು. ಈ ಜಗತ್ತು ನಮ್ಮೊಬ್ಬರ ಸಲುವಾಗಿ ಆಗಿಲ್ಲ. ನಾನು ಇರಬೇಕು. ನೀವು ಇರಬೇಕು. ಎಲ್ಲರೂ ಇರಬೇಕು. ಎಲ್ಲರ ಸಲುವಾಗಿ ಜಗತ್ತು ಇರುವುದರಿಂದ ಈ ಜಗತ್ತಿಗೆ ಬಹುಮುಖಗಳು ಇರುವುದು ಸಾಮಾನ್ಯ. ಕೆಲವು ಪ್ರಾಣಿಗಳಿಗೆ ರಾತ್ರಿ ಹಿಡಿಸುತ್ತದೆ. ಕೆಲವು ಪ್ರಾಣಿಗಳಿಗೆ ಹಗಲು ಹಿಡಿಸುತ್ತದೆ. ಹಗಲು ಹಿಡಿಸಿದವರು ರಾತ್ರಿಯನ್ನು ಬೈದುಕೊಳ್ಳುತ್ತಾ ಕುಳಿತರೆ, ರಾತ್ರಿ ಹಿಡಿಸಿದವರು ಹಗಲನ್ನು ಬೈದುಕೊಳ್ಳುತ್ತಾ ಕುಳಿತರೆ, ಜೀವನ ಚಂದ ಆಗುವುದಿಲ್ಲ. ರಾತ್ರಿ ನೋಡಿ ಎಂತ ವೈಭವ. ಹಗಲಿನ ವೈಭವ ಬೇರೆ ರಾತ್ರಿಯ ವೈಭವ ಬೇರೆ. ರಾತ್ರಿ ನಮ್ಮ ಸುತ್ತಮುತ್ತ ಕತ್ತಲೆ ಕತ್ತಲೆ. ಆದರೆ ಕಣ್ಣು ಆಕಾಶದ ಕಡೆ ನೋಡಿದರೆ ನಕ್ಷತ್ರಗಳೆ ನಕ್ಷತ್ರಗಳು. ಎಂತಹ ಸೌಂದರ್ಯ. ರಾತ್ರಿಯಲ್ಲೂ ಸೌಂದರ್ಯ ಇದೆ. ಇದನ್ನು ಗುರುತಿಸಬೇಕು. ರಾತ್ರಿಯನ್ನು ಬೈದುಕೊಳ್ಳತ್ತಾ ಕೂರಬಾರದು.
ಒಂದು ಗಿಡ ಇತ್ತು. ಅದರ ಫೊಟರೆಯಲ್ಲಿ ಒಂದು ಗೂಬೆ ವಾಸವಾಗಿತ್ತು. ಅದೇ ಗಿಡದಲ್ಲಿ ಬೇರೆ ಪಕ್ಷಿಗಳು ವಾಸ ಮಾಡುತ್ತಿದ್ದವು. ಗಿಡ ಎರಡಕ್ಕೂ ಅವಕಾಶ ಕೊಟ್ಟಿತ್ತು. ಗಿಡ ತಾರತಮ್ಯ ಮಾಡಿರಲಿಲ್ಲ. ಹಗಲಿನವರು ಮಾತ್ರ ಇರಲಿ. ಇರುಳಿನವರು ಬೇಡ ಅಂದಿರಲಿಲ್ಲ. ಗೂಬೆ ಹಗಲಿನಲ್ಲಿ ಪೊಟರೆಯಲ್ಲಿ ಕೂರುತ್ತಿತ್ತು. ಉಳಿದವು ರಾತ್ರಿ ತಮ್ಮ ತಮ್ಮ ಗೂಡಿನಲ್ಲಿ ಕೂರುತ್ತಿದ್ದವು. ಗೂಬೆ ರಾತ್ರಿ ವೇಳೆ ತಿರುಗಾಡುತ್ತಿತ್ತು. ಗೂಬೆಗೆ ರಾತ್ರಿ ಹಿಡಿಸುತ್ತಿತ್ತು. ಬೇರೆ ಪಕ್ಷಿಗಳಿಗೆ ಹಗಲು ಹಿಡಿಸುತ್ತಿತ್ತು. ಒಂದು ಸಲ ಪಕ್ಷಿಗಳು ಸೂರ್ಯನನ್ನು ಕೊಂಡಾಡಲು ಶುರು ಮಾಡಿದವು. ಏನ್ ಬೆಳಕು! ಎಷ್ಟು ಸುಂದರ!. ಎಂತಹ ಗಾಳಿ!. ಅಂದವು. ಅದಕ್ಕೆ ಗೂಬೆ ಹೇಳಿತು. ಎಷ್ಟು ಸುಳ್ಳು ಹೇಳುತ್ತಾರೆ? ಅಂದಿತು. ಗೂಬೆ ಹೇಳಿತು, ಏನು ರಾತ್ರಿ? ಎಷ್ಟು ಸೌಮ್ಯವಾದ ಬೆಳಕು!. ಎಂತಹ ಆಕಾಶದಲ್ಲಿ ನಕ್ಷತ್ರಗಳು!. ಆಗೊಮ್ಮೆ ಈಗೊಮ್ಮೆ ಚಂದ್ರ. ರಾತ್ರಿ ಎಷ್ಟು ಸುಂದರ ಅಂದಿತು. ಪಕ್ಷಿಗಳು ಹಗಲು ಹೊಗಳುತ್ತಿದ್ದವು. ಗೂಬೆ ರಾತ್ರಿಯನ್ನು ಹೊಗಳುತ್ತಿತ್ತು. ಪಕ್ಷಿಗಳು ಹೇಳುತ್ತಿದ್ದವು, ಎಷ್ಟು ಸುಳ್ಳು ಹೇಳುತ್ತಿದ್ದಾನೆ? ಗೂಬೆ. ರಾತ್ರಿ ಏನದೆ? ಕೆಟ್ಟ ಕತ್ತಲು. ಕಣ್ಣು ತೆರೆದರೆ ಏನು ಕಾಣುವುದಿಲ್ಲ. ಇಂತಹ ರಾತ್ರಿಯನ್ನು ಇವನು ಹೊಗಳುತ್ತಾನೆ. ಆದರೆ ಗಿಡ ರಾತ್ರಿಯನ್ನು ಸಂತೋಷಪಡುತ್ತದೆ. ಹಗಲನ್ನೂ ಸಂತೋಷಪಡುತ್ತದೆ. ಹಗಲು ನೀವು ತಿರುಗಾಡಿ ಎಂದು ಪಕ್ಷಿಗಳಿಗೆ, ರಾತ್ರಿ ನೀನು ತಿರುಗಾಡು ಎಂದು ಗೂಬೆಗೆ ಹೇಳುತ್ತಿತ್ತು. ಆದರೆ ನನ್ನ ಬಳಿ ನೀವು ಇರಿ ಎನ್ನುತ್ತಿತ್ತು. ಜಗತ್ತು ಹೇಗಿದೆ ಎಂದರೆ ನಮಗೂ ಆಶ್ರಯ ಕೊಡುತ್ತದೆ. ನಿಮಗೂ ಆಶ್ರಯ ಕೊಡುತ್ತದೆ. ಎಲ್ಲರಿಗೂ ಆಶ್ರಯ ಕೊಡುತ್ತದೆ. ಹೀಗಿರೋದೆ ಅಂತ ನಾವು ಪಕ್ಕ ತಿಳಿದುಕೊಂಡಿರಬೇಕು. ಒಂದರ ಕಡೆ ಬಹಳ ತಲೆ ಕೆಡಿಸಿಕೊಳ್ಳಬಾರದು. ಗುಣ ಗ್ರಹಣ ಮಾಡಬೇಕು. ಆಗ ಗಿಡ ಹೇಳಿತು. ಹಗಲು ರಾತ್ರಿ ಎರಡು ಬೇಕು. ನೀವು ಬಯ್ಯುವುದು ಬೇಡ. ಹಗಲು ಗೂಬೆಗೆ ಆಶ್ರಯ. ರಾತ್ರಿ ಪಕ್ಷಿಗಳಿಗೆ ಆಶ್ರಯ. ಇಬ್ಬರೂ ಬದುಕುವುದರಿಂದ ಇಬ್ಬರಿಗೂ ಸಂತೋಷ. ಹಗಲು ಪಕ್ಷಿಗಳು ಹಾಡುತ್ತವೆ, ನೀನು ಕೇಳಿಸಿಕೊಳ್ಳುತ್ತಾ ಇರು. ರಾತ್ರಿ ಅವುಗಳಿಗೆ ಕಾವಲು ಮಾಡಿ ಕೊಡುತ್ತಿರು. ಪಕ್ಷಿಗಳು ನಿಶ್ಚಿಂತೆಯಿಂದ ನಿದ್ರೆ ಮಾಡಲಿ ಅಂತ ಗಿಡ ಹೇಳಿತು. ಸರಿಯಾಗಿ ತಿಳಿದುಕೊಂಡರೆ ಹೀಗೆ. ಇಲ್ಲದಿದ್ದರೆ ಪಕ್ಷೀಗಳನ್ನೇ ಓಡಿಸಬೇಕು ಅಂತ ಗೂಬೆ, ಗೂಬೆಯನ್ನು ಓಡಿಸಬೇಕಂತ ಪಕ್ಷಿಗಳಿಗೆ ಶುರವಾಗುತ್ತದೆ. ಜಗತ್ತು ಮಿಶ್ರಣ. ಪರಸ್ಪರ ವಿರುದ್ಧವಿರುವ ಸಂಗತಿಗಳಿಂದ ಈ ಜಗತ್ತು ಕೂಡಿಕೊಂಡಿದೆ. ಆದ್ದರಿಂದ ನೀತಿ ಏನೆಂದರೆ ಗುಣ ಗ್ರಹಣ ಇರಬೇಕು. ದೋಷ ದೃಷ್ಟಿ ಇಟ್ಟುಕೊಳ್ಳಬಾರದು. ಬರೀ ಕೆಟ್ಟದ್ದನ್ನು, ಕೆಟ್ಟದ್ದನ್ನು ಹುಡುಕುತ್ತಾ ಹೋದರೆ ಜೀವನದಲ್ಲಿ ಸಂತೋಷಪಡುವುದು ಹೇಗೆ?. ಎಲ್ಲದರಲ್ಲೂ ದೋಷಗಳು ಸಿಕ್ಕೇ ಸಿಗುತ್ತವೆ. ನಾವು ದುರ್ಬೀನು ಹಾಕಿ ನೋಡುವುದಾದರೆ ದೋಷಗಳೆ ದೋಷಗಳು. ಅದಕ್ಕಾಗಿ ಎಷ್ಟು ದೂರದಿಂದ ನೋಡಬೇಕೋ ಅಷ್ಟು ದೂರದಿಂದ ನೋಡಬೇಕು.
ಒಬ್ಬ ದೊಡ್ಡ ಕಲೆಗಾರ ಒಂದು ಸುಂದರ ಚಿತ್ರ ಬರೆದಿದ್ದಾನೆ. ಅದನ್ನು ಒಬ್ಬ ಹತ್ತಿರ ಹೋಗಿ ನೋಡುವುದಕ್ಕೆ ಶುರು ಮಾಡಿದನು. ಸೌಂದರ್ಯ ಕಾಣಲಿಲ್ಲ ಬರಿ ಬಣ್ಣ, ಗೆರೆ ಕಾಣುತ್ತಿತ್ತು. ಆಗ ಕಲೆಗಾರ ಹೇಳಿದ ಇಲ್ಲಿ ನಿಂತು ನೋಡಬೇಡ, ಅಷ್ಟು ದೂರದಿಂದ ನೋಡು ಅಂದನು. ಇಲ್ಲಿ ನಿಂತು ನೋಡಿದರೆ ನಿನಗೆ ಏನು ಗೊತ್ತಾಗೋದಿಲ್ಲ. ದೂರದಿಂದ ನೋಡಿದರೆ ಸೌಂದರ್ಯ ಕಾಣುತ್ತದೆ. ಜಗತ್ತನ್ನು ಸ್ವಲ್ಪ ದೂರದಿಂದ ನೋಡಬೇಕು. ಎಲ್ಲವೂ ಚಂದ ಕಾಣಿಸುತ್ತದೆ. ಹೇಗೆ ನಿಂತು ನೋಡಬೇಕು ಹಾಗೆ ನಿಂತು ನೋಡಬೇಕು. ನಮ್ಮ ಬದುಕು ಚೆಂದ ಆಗಬೇಕಾದರೆ ದೂರದಿಂದ ನೋಡಬೇಕು.
ಒಬ್ಬ ಪಾಪಿ ಮನುಷ್ಯ ಒಂದು ಸುಂದರ ತೋಟ ಮಾಡಿದ್ದನು. ಅದುವರೆಗೂ ಒಂದು ಒಳ್ಳೆಯ ಕೆಲಸ ಮಾಡಿರಲಿಲ್ಲ. ಈಗ ತೋಟ ಮಾಡಿ ಒಂದು ನಾಮಫಲಕ ಹಾಕಿದ್ದ. "ಇದು ನಿಮ್ಮ ತೋಟ". ನಾವು ಬಹುತೇಕ ಕಡೆ ನೋಡುವುದು ಅಪ್ಪಣೆ ಇಲ್ಲದೆ ಪ್ರವೇಶವಿಲ್ಲ. ಪ್ರವೇಶ ನಿಷೇಧಿಸಲಾಗಿದೆ ಅನ್ನುವ ನಾಮಫಲಕ. ನಿಮ್ಮ ತೋಟ ಅಂದರೆ ಕಾಳಜಿ ಇರಬೇಕು. ತೋಟ ನಿಮ್ಮದೇ ಆಗಿರುವುದರಿಂದ ಒಳಗೆ ಬನ್ನಿ ಬಂದ ಮೇಲೆ ತೋಟದ ಬಗ್ಗೆ ಕಾಳಜಿ ಇರಲಿ. ಹಾದಿಯಲ್ಲಿ ಹೋಗುವ ಕೆಲವರು ಈ ಪಾಪಿ ತೋಟಕ್ಕೆ ನಾವೇ ಹೋಗಬೇಕೆಂದು ನೇರವಾಗಿ ಹೋದರು. ಇನ್ನು ಕೆಲವರು ತೋಟದ ಸೌಂದರ್ಯ ನೋಡಿ ಒಳ ಹೋಗಿ ಸಂತೋಷಪಟ್ಟರು. ಆ ಪಾಪಿ ಮನುಷ್ಯನಿಗೆ ಧನ್ಯವಾದ ಹೇಳಿದರು. ಯಾರು ಪಾಪಿ ಅಂತ ಬೈದು ನೇರವಾಗಿ ಹೋದವರು ಅನುಭವಿಸಲಿಲ್ಲ. ಯಾರು ಸೌಂದರ್ಯ ಕಂಡರೊ ಅವರು ಆತನ ಪಾಪವನ್ನು ಗಮನಿಸಲಿಲ್ಲ. ಬೈದುಕೊಳ್ಳುತ್ತಾ ಹೋದವರು ಮುಂದಿನ ಊರಿನಲ್ಲಿ ಹೇಳಿದರು. ಏನು ಪಾಪಿ ಮನುಷ್ಯ ಮಾಡಬಾರದು ಮಾಡಿ, ಅನ್ಯಾಯವಾಗಿ ಗಳಿಸಿ, ಜೈಲಿನಲ್ಲಿದ್ದು ಬಂದು, ಈಗ ತೋಟ ಮಾಡಿದ್ದಾನೆ. ಆ ಪಾಪಿ ತೋಟಕ್ಕೆ ಹೋಗುವುದೇನು?. ಅಂದರು. ಅಲ್ಲೂ ಕೂಡ ಬೈಯಲು ಶುರು ಮಾಡಿದರು. ಸೌಂದರ್ಯ ನೋಡಿದವರು ಆ ಊರಿಗೆ ಹೋಗಿ ಹೇಳಿದರು "ಎಂತಹ ತೋಟ ಮಾಡಿದ್ದಾನೆ ಮನುಷ್ಯ!. ಮನುಷ್ಯ ಹಾಗೆ ತೋಟ ಮಾಡಬೇಕು ಅಂದರು. ಅವರು ಹಿಂದಿನದನ್ನು ಗಮನಿಸಲಿಲ್ಲ. ಇಲ್ಲಿಯವರೆಗೆ ಏನಾದರೂ ಮಾಡಿರಲಿ ನಮಗೇನು ಈಗ ಚೆಂದಾಗಿ ಮಾಡಿದ್ದಾನಲ್ಲ ಅಂದರು.
ನಾವು ಗುಣ ಗ್ರಹಣ ಕಲಿತರೆ ಜಗತ್ತು ಅದ್ಭುತವಾಗುತ್ತದೆ. ಹೀಗೆ ತಪ್ಪು ಹುಡುಕಿದರೆ ಬದುಕುವುದು ಹೇಗೆ?. ಜಗತ್ತಿನಲ್ಲಿ ಅದು ಇದು ತಲೆಗೆ ಹಾಕಿಕೊಳ್ಳುವುದನ್ನು ಬಿಟ್ಟು ಒಳ್ಳೆಯದನ್ನು ಹಾಕಿಕೊಳ್ಳಬೇಕು. ಗುಲಾಬಿ ಗಿಡದಲ್ಲಿ ಮುಳ್ಳು ಇರುತ್ತದೆ. ಮುಳ್ಳು ಕಡೆ ನೋಡುತ್ತಾ ಇದ್ದರೆ ಮುಳ್ಳು ತಲೆ ತುಂಬುತ್ತದೆ. ಮುಳ್ಳು ಇರಲಿ ನಾವು ಹೂವಿನ ಕಡೆ ನೋಡಬೇಕು. ಹಾಗೆ ಜನರಲ್ಲಿ ಸಣ್ಣ ಪುಟ್ಟ ದೋಷಗಳು ಇರುತ್ತವೆ. ಒಳ್ಳೆಯದರ ಕಡೆ ನೋಡುವುದನ್ನು ಕಲಿತರೆ ನಮ್ಮ ಜೀವನ ಚಂದ ಆಗುತ್ತದೆ. ಅಲ್ಲವೇ ಮಕ್ಕಳೆ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************