-->
ಜೀವನ ಸಂಭ್ರಮ : ಸಂಚಿಕೆ - 253

ಜೀವನ ಸಂಭ್ರಮ : ಸಂಚಿಕೆ - 253

ಜೀವನ ಸಂಭ್ರಮ : ಸಂಚಿಕೆ - 253
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
             
ಮಕ್ಕಳೇ... ನಾವು ಸ್ವತಂತ್ರವಾಗಿರಬೇಕು ಅಂತ ಇಚ್ಛೆ. ಆದರೆ ನಾವು ಸ್ವಾತಂತ್ರ್ಯ ಕಳೆದುಕೊಂಡು ಬಂಧಿಯಾಗುತ್ತೇವೆ ಏಕೆ? ನೋಡೋಣ. 

ಪತಂಜಲ ಮಹರ್ಷಿಯವರ ಯೋಗ ಸೂತ್ರದ ಎರಡನೇ ಅಧ್ಯಾಯ ಸಾಧನ ಪಾದದ ಕ್ರಿಯಾ ಯೋಗದಲ್ಲಿ ಬರುತ್ತದೆ. ಪತಂಜಲ ಮಹರ್ಷಿ ಒಬ್ಬ ಮನಶಾಸ್ತ್ರಜ್ಞ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಕ್ರಿಯಾಯೋಗದಲ್ಲಿ ಕ್ಲೇಶ ಎನ್ನುವ ಪದ ಬರುತ್ತದೆ. ಕ್ಲೇಶ ಎಂದರೆ ಬಂಧನ. ಅಶಾಂತಿಗೆ ಕಾರಣವಾದದ್ದೇ ಕ್ಲೇಶ. ಇದು ಮನಸ್ಸಿನಲ್ಲಿರುವ ಸೂಕ್ಷ್ಮ ಅಂಶ. ಕ್ಲೇಶ ಸ್ವಾತಂತ್ರ್ಯವಿಲ್ಲದಂತೆ ಮಾಡುತ್ತದೆ ಹಾಗೂ ದುಃಖಕ್ಕೆ ಕಾರಣವಾಗುತ್ತದೆ. ಇದರಿಂದ ಸ್ವಾತಂತ್ರ್ಯ ಕಳೆದುಕೊಳ್ಳುತ್ತೇವೆ ಹಾಗೂ ಶಾಂತಿ ಕಳೆದುಕೊಳ್ಳುತ್ತೇವೆ. ಶಾಂತಿ ಇಲ್ಲದಕ್ಕೆ ದುಃಖ ಎನ್ನುತ್ತೇವೆ. ಸ್ವಾತಂತ್ರ್ಯ ಇಲ್ಲದ್ದಕ್ಕೆ ಬಂಧನ ಎನ್ನುತ್ತೇವೆ. ಬಂಧನ, ಅಶಾಂತಿಗೆ ಕಾರಣ ಹೇಗೆ?.

ಇದು ದೊಡ್ಡ ಸಮಸ್ಯೆ. ಈ ಬಂಧನ ಇಂತಹವರಿಗೆ ಅಂತ ಅಲ್ಲ. ವಿದೇಶದವರಾಗಲಿ, ಭಾರತೀಯರಾಗಲಿ, ಚಿಕ್ಕವರಾಗಲಿ, ದೊಡ್ಡವರಾಗಲಿ, ಶ್ರೀಮಂತನಾಗಿರಲಿ ಮತ್ತು ಬಡವನಾಗಿರಲಿ ಇದು ಇದ್ದಿದ್ದೆ. ಬಂಧನಕ್ಕೆ ಮತ್ತು ಅಶಾಂತಿಗೆ ಕಾರಣವಾದದ್ದೇ ಕ್ಲೇಶ. ಇದೊಂದು ಬಗೆಯ ಮಾಲಿನ್ಯ. ಮನಸ್ಸಿನ ವಿಕೃತಿ. ಆ ಕ್ಲೇಶ ಇರುವವರಿಗೆ ಮನುಷ್ಯ ಸ್ವಾತಂತ್ರ್ಯ ಮತ್ತು ಶಾಂತಿ ಪಡೆಯಲು ಆಗುವುದಿಲ್ಲ. ಬಾಹ್ಯ ಸ್ವಾತಂತ್ರ್ಯ ಬೇರೆ, ಆಂತರಿಕ ಸ್ವಾತಂತ್ರ್ಯ ಬೇರೆ. ಮನಸ್ಸು ಯಾವುದಕ್ಕಾದರೂ ಒಳಗಾಗಿತ್ತು ಅಂದರೆ ಅದಕ್ಕೆ ಬಂಧನ ಎನ್ನುತ್ತೇವೆ. ಯಾವುದೋ ಒತ್ತಡಕ್ಕೆ ಸಿಲುಕಿ, ಯಾವುದೋ ಪ್ರಭಾವಕ್ಕೆ ನಾನು ಸಿಕ್ಕಿದೆ ಅಂದರೆ ಮನಸ್ಸು ಸ್ವತಂತ್ರವಲ್ಲ. ಮನಸ್ಸು ಸ್ವಾತಂತ್ರ್ಯ ಕಳೆದುಕೊಳ್ಳುತ್ತದೆ. ಮನಸ್ಸು ಹಗುರವಾಗುವುದಿಲ್ಲ. ವಿಸ್ತಾರವಾಗುವುದಿಲ್ಲ. ಬಂಧನಗಳು ತಮ್ಮ ಚೌಕಟ್ಟಿನಲ್ಲಿ ನಮ್ಮ ಮನಸ್ಸನ್ನು ಹಿಡಿದಿಡುತ್ತವೆ. ಒಬ್ಬ ವ್ಯಕ್ತಿಯನ್ನು ಜೈಲಿನಲ್ಲಿ ಇಟ್ಟಿದ್ದಾರೆ ಎಂದರೆ ಹೊರಗೆ ಹೋಗದಂತೆ ಕೂಡಿಟ್ಟಿದ್ದಾರೆ ಎಂದರ್ಥ. ತಿನ್ನುವುದಕ್ಕೆ, ಉಡುವುದಕ್ಕೆ ಮತ್ತು ಕೆಲಸ ಮಾಡುವುದಕ್ಕೆ ಎಲ್ಲಾ ಅವಕಾಶವಿದೆ. ಆದರೆ ಹೊರಗೆ ಹೋಗುವಂತಿಲ್ಲ. ಮನಸ್ಸು ತಾನೇ ಹೋಗಿ ಬಂಧನದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಜಾತಿ ನಾವೇ ಹಾಕಿಕೊಂಡ ಬಂಧನ. ಯಾರು ಹಾಕಿಲ್ಲ. ನಮ್ಮ ಮನಸ್ಸೇ ಹಾಕಿಕೊಂಡಿದೆ. ಯಾರಾದರೂ ಹೊರಗೆ ಗೋಡೆ ಕಟ್ಟಿದ್ದಾರೇನು?. ಕಟ್ಟಿಲ್ಲ. ಮನಸ್ಸು ತಾನೇ ಹಾಕಿಕೊಳ್ಳುತ್ತದೆ. ನಾನು ಈ ಜಾತಿ. ಇದು ನನ್ನ ಮತ. ಇದು ನನ್ನ ಧರ್ಮ. ಹೀಗೆ ಹಾಕಿಕೊಂಡು ತಾನೆ ಸಿಕ್ಕಿಹಾಕಿಕೊಳ್ಳುತ್ತದೆ. ಸಾಯೋತನಕ ಬಿಡುವುದಿಲ್ಲ. ಮಲಗಿದ್ದವನು ಎಚ್ಚರಿಸಿ ಕೇಳಿದರೆ ತಕ್ಷಣ ಅದನ್ನೇ ಹೇಳುತ್ತಾನೆ. ಅಷ್ಟು ಸೂಕ್ಷ್ಮವಾಗಿ ಹಾಕಿಕೊಂಡಿರುತ್ತದೆ. 

ನಾವು ಅಂತಹವರು, ಇಂತಹವರು ಅಂದರೆ ಅದರ ಅರ್ಥ ನಾವು ಸಣ್ಣವರು ಅಂತಾನೇ ಅರ್ಥ. ನಾವು ಒಳಗೆ ಸಿಕ್ಕಿದ್ದೀವಿ ಅಂತಾನೆ ಅರ್ಥ. ಯಾವ ದೇವರು, ಋಷಿ , ಯಾರೂ ಹೇಳಿಲ್ಲ. ಒಂದು ಪಕ್ಷಿಯನ್ನು ಸೃಷ್ಟಿಸಿ ಇಷ್ಟರಲ್ಲಿ ಓಡಾಡು ಅಂತ ಹೇಳಿಲ್ಲ. ಪಕ್ಷಿಗೆ ಗೊತ್ತಿದೆ ನಾನು ಬೇಕಾದಲ್ಲಿ ಹಾರಾಡಬಲ್ಲೆ ಅಂತ. ಅದಕ್ಕೆ ದೇಶ, ಖಂಡ ಮತ್ತು ಸಾಗರದ ಪರಿಮಿತಿ ಇಲ್ಲ. ಸ್ವಚ್ಛಂದವಾಗಿ ಹಾರಾಟ ಮಾಡುತ್ತಾ ಇರುತ್ತದೆ. ಮನಸ್ಸು ಸ್ವಚ್ಛಂದವಾಗಿರುತ್ತದೆ. ಅಷ್ಟು ಸ್ವಚ್ಛಂದತೆ ಮನುಷ್ಯನಿಗೆ ಇಲ್ಲ. ಯೋಗ ಮನುಷ್ಯನನ್ನು ವಿಶ್ವಾತ್ಮನನ್ನಾಗಿ ಮಾಡುತ್ತದೆ. ಒಂದು ದೀಪ ಹಚ್ಚಿ ಒಂದು ಕೋಣೆಯಲ್ಲಿ ಇಟ್ಟರೆ ಕೋಣೆಯಷ್ಟಾಗುತ್ತದೆ. ಅದರ ಬೆಳಕು ಅಷ್ಟೇ ಆಗುತ್ತದೆ. ದೀಪ ಸಣ್ಣದಲ್ಲ. ದೀಪ ಇಡೋ ಜಾಗ ಸಣ್ಣದು ಅಷ್ಟೇ. ಆ ದೀಪ ತಂದು ದೊಡ್ಡ ಅರಮನೆಯಲ್ಲಿ ಇಟ್ಟರೆ ದೊಡ್ಡದಾಗುತ್ತದೆ. ಅದೇ ದೀಪ ರಾತ್ರಿ ಹೊರಗೆ ಕತ್ತಲಿನಲ್ಲಿ ಇಟ್ಟರೆ ಬೆಳಕು ವಿಶಾಲವಾಗುತ್ತದೆ. ನಮ್ಮ ಮನಸ್ಸು ದೀಪ ಇದ್ದಂತೆ ಅದು ವಿಸ್ತಾರವಾಗುತ್ತದೆ. ನಮ್ಮ ಮನಸ್ಸು ಬಟ್ಟೆ ಹಾಕಿಕೊಂಡು ಸಣ್ಣದಾಗಿದ್ದೀವಿ. ಅಲಂಕಾರ ಮಾಡಿಕೊಂಡು ಅದರಲ್ಲೇ ಸಣ್ಣದಾಗಿದ್ದೀವಿ. ಏನೇನು ಮಾಡಿದ್ದೀವಿ ನಾವು ಕರ್ಮ ಅದರಲ್ಲಿ ಕಟ್ಟು ಹಾಕಿಕೊಂಡಿದ್ದೇವೆ. ಮೇರೆ ಇದ್ದರೆ ಜಗಳ. ಮೇರೆ ಇಲ್ಲದಿದ್ದರೆ ಜಗಳವಿಲ್ಲ. ಜಗಳ ಸಣ್ಣ ಸಣ್ಣದಕ್ಕೆ ವಿನಹ ದೊಡ್ಡದಕ್ಕಲ್ಲ. ನದಿಗಳು ನೀರೆ ವಿನಹ ಬೇರೆನಿಲ್ಲ. ಆದರೆ ಆ ನದಿಗಳಲ್ಲಿ ಬಂಧಿಯಾಗಿದ್ದೀವಿ. ನಾವು ಬಂಧಿಯಾದದ್ದು ಶ್ರೇಷ್ಠ ಅಂತ ಭಾವಿಸಿದ್ದೇವೆ. ಮನಸ್ಸು ಬಂಧನದಿಂದ ಸಣ್ಣದಾಯಿತು. ಕಟ್ಟು ಬಹಳ ಹಾಕಿಕೊಂಡಿದ್ದೇವೆ. ವಿಶ್ವ ಹಾಕಲಿಲ್ಲ ನಾವೇ ಹಾಕಿಕೊಂಡಿದ್ದೇವೆ. ನಿಸರ್ಗ ಹಾಕಿಲ್ಲ. ದೇವ ಹಾಕಿಲ್ಲ. ತಿಳಿದವರು ಹಾಕಿಲ್ಲ. ತಿಳಿಯಲಾರದವರು ಹಾಕಿದ್ದರೊಳಗೆ ನಾವು ಸಿಕ್ಕಿಹಾಕಿಕೊಂಡಿದ್ದೇವೆ. ನೋಡಿದ್ದರಲ್ಲಿ ಬಂಧಿತರಾಗಿದ್ದೇವೆ. ಕೇಳಿದ್ದರಲ್ಲಿ ಬಂಧಿತರಾಗಿದ್ದೇವೆ. ತಿನ್ನುವುದರಲ್ಲಿ ಬಂಧಿತರಾಗಿದ್ದೇವೆ. ಬಟ್ಟೆ ಹಾಕಿ ಬಂಧಿತರಾಗಿದ್ದೀವಿ. ಮಾಡುವ ಕೆಲಸದಲ್ಲಿ ಬಂಧಿತರಾಗಿದ್ದೀವಿ. ಸ್ಪರ್ಶದಲ್ಲಿ ಬಂಧಿತರಾಗಿದ್ದೇವೆ. ಮೇಷ ಭೂಷಣದಲ್ಲಿ ಬಂಧಿತರಾಗಿದ್ದೇವೆ. ಓದಿದ್ದರಲ್ಲಿ ಬಂಧಿತರಾಗಿದ್ದೇವೆ. ಭಾವಿಸಿ ಬಂಧಿತರಾಗಿದ್ದೇವೆ. ಸ್ಥಳದಲ್ಲಿ ಬಂಧಿ. ಭಾಷೆಯಲ್ಲಿ ಬಂಧಿಯಾಗಿದ್ದೇವೆ. ಹೀಗೆ ನಡೆ-ನುಡಿಯಲ್ಲಿ ಬಂಧಿತರಾಗಿದ್ದೇವೆ. ಹೀಗೆ ಬಂಧಿತರಾಗಿ ಮನಸ್ಸು ಸಣ್ಣದಾಗಿದೆ. ಇಂತಹವರಿಗೆ ಮುಕ್ತಿ ಎಲ್ಲಿ?. 

ಪತಂಜಲ ಹೇಳೋದು ಎಲ್ಲಾ ಬಂಧನ ತೆಗೆಯುವುದೇ ಮತ್ತು ಶಾಂತಿಯಿಂದ ಬದುಕುವುದೇ ಮುಕ್ತಿ, ಮೋಕ್ಷ. ಸತ್ತ ಮೇಲೆ ಮೋಕ್ಷ ಅಲ್ಲ. ಬದುಕಿದ್ದಾಗಲೇ ಎಲ್ಲಾ ಬಂಧನ ತೆಗೆದು ಬಿಸಾಡಿದರೆ ಅದೇ ಕ್ಷಣ ಮೋಕ್ಷ ದೊರೆತಂತೆ. ಇದಕ್ಕೆಲ್ಲ ಕಾರಣ ಅವಿದ್ಯೆ. ಹೊರುವುದೇ ಕಷ್ಟ, ಇಳಿಸಲು ಅಲ್ಲ. ಬಂಧನಕ್ಕೆ ಸಿಲುಕುವುದು ಕಷ್ಟ. ಬಂಧನದಿಂದ ಬಿಡುಗಡೆ ಸುಲಭ. ನಾವು ತಿಳಿದುಕೊಂಡಿರುವುದು ಮೋಕ್ಷ ಕಠಿಣ ಅಂತ ಅಲ್ಲ. ಮುಕ್ತಿ ಅಂದರೆ ಸುಲಭ. ಇದಕ್ಕೆ ಕಾರಣ ಅವಿದ್ಯ. 

ಸತ್ಯದಲ್ಲಿ ಎರಡು ಪ್ರಕಾರ. ಒಂದು ಶಾಶ್ವತ ಸತ್ಯ. ಇನ್ನೊಂದು ತಾತ್ಕಾಲಿಕ ಸತ್ಯ. ಶಾಶ್ವತ ಸತ್ಯ ಎಂದರೆ ಸದಾ ಇರುವಂತಹದ್ದು. ತಾತ್ಕಾಲಿಕ ಸತ್ಯ ಅಂದರೆ ಸ್ವಲ್ಪ ದಿನ ಇದ್ದು ಮರೆಯಾಗುವಂಥದ್ದು. ಬದಲಾಗುವಂತಹದ್ದು. ನಾವು ನೋಡಿದ್ದೆ ಶಾಶ್ವತ ಸತ್ಯ, ಕೇಳಿದ್ದೆ ಶಾಶ್ವತ ಸತ್ಯ, ಓದಿದ್ದೆ ಶಾಶ್ವತ ಸತ್ಯ, ಮಾಡಿದ್ದೆ ಶಾಶ್ವತ ಸತ್ಯ, ನಾವು ಭಾವಿಸಿದ್ದು, ಆಲೋಚಿಸಿದ್ದು ಶಾಶ್ವತ ಸತ್ಯ, ನಮ್ಮ ಚಿಂತನೆ ಶಾಶ್ವತ ಸತ್ಯ, ಹೀಗೆ ಭಾವಿಸುವುದರಿಂದ ಮನಸ್ಸು ಅದರ ಬಂಧಿಯಾಗುತ್ತದೆ. ಮುಕ್ತಿ ಕಳೆದುಕೊಳ್ಳುತ್ತದೆ. ನೋಡಿದ್ದು ಹಾಗೆ ಇದೆ ಏನು?. ಕೇಳಿದ್ದು ಹಾಗೆ ಇದು ಏನು?. ಮಾಡಿದ್ದು ಹಾಗೆ ಇದೆ ಏನು?. ಭಾವಿಸಿದ್ದು, ಚಿಂತಿಸಿದ್ದು ಹಾಗೆ ಇದೆಯೇನು?. ಇಲ್ಲ ಅದು ಎಲ್ಲಾ ಮರೆಯಾಗುತ್ತದೆ ಬದಲಾಗುತ್ತದೆ ಎಂಬ ಜ್ಞಾನ ಸರಿಯಾಗಿ ಮನದಟ್ಟಿದ್ದರೆ ನಾವು ಬಂದಿಯಾಗುವುದಿಲ್ಲ. ಮುಕ್ತರಾಗುತ್ತೇವೆ. ಅಲ್ಲವೆ ಮಕ್ಕಳೆ..?
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************



Ads on article

Advertise in articles 1

advertising articles 2

Advertise under the article