-->
ಜೀವನ ಸಂಭ್ರಮ : ಸಂಚಿಕೆ - 250

ಜೀವನ ಸಂಭ್ರಮ : ಸಂಚಿಕೆ - 250

ಜೀವನ ಸಂಭ್ರಮ : ಸಂಚಿಕೆ - 250
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
          

ಒಂದು ಪ್ರವಚನದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಅವರು ಹೇಳಿದ ಕಥೆ. ಒಬ್ಬ ರಾಜ ಇದ್ದನು. ಆತನಿಗೆ ಒಂದು ಅಭಿಮಾನವಿತ್ತು. ನನ್ನಷ್ಟು ಸಂಪತ್ತು ಯಾರು ಮಾಡಿಲ್ಲ. ಹಾಗಾಗಿ ನಾನು ಜಗತ್ತಿನಲ್ಲಿ ಶ್ರೇಷ್ಠ ಮನುಷ್ಯ ಅನ್ನುವ ಅಭಿಮಾನ ಇತ್ತು. ಒಂದು ದಿನ ಮಲಗಿದ್ದನು. ಮಲಗಿದಾಗ ಒಂದು ಕನಸು ಬಿತ್ತು. ಕನಸಿನಲ್ಲಿ ರಾಜ್ಯದ ಅಕ್ಕಪಕ್ಕದ ನಾಲ್ಕು ರಾಜರು ಕೂಡಿ ಈ ರಾಜನ ಮೇಲೆ ದಾಳಿ ಮಾಡಿದರು. ಈ ರಾಜನನ್ನು ಸೋಲಿಸಿಬಿಟ್ಟರು. ಸಂಪತ್ತನ್ನೆಲ್ಲ ದೋಚಿದರು. ಮೈ ಮೇಲಿನ ಬಟ್ಟೆ, ಒಡವೆ ಎಲ್ಲವನ್ನು ಕಿತ್ತುಕೊಂಡರು. ಆ ಬಳಿಕ ಹರಿದ ಬಟ್ಟೆ ಕೊಟ್ಟು ರಾಜ್ಯದಿಂದ ಹೊರದಬ್ಬಿದರು. ಹೊಟ್ಟೆ ಹಸಿದಿತ್ತು. ನೀರಡಿಕೆಯಾಗಿತ್ತು. ರಾಜ್ಯ ಹೋಗಿತ್ತು. ಹೀಗೆ ನಡೆದುಕೊಂಡು ಹೋಗುತ್ತಾ ಇದ್ದನು. ನೋಡಿಕೊಂಡ, ಮೈಯಲ್ಲಿ ಏನೂ ಉಳಿದಿರಲಿಲ್ಲ. ಆತನ ದೇಹದ ಪ್ರತಿ ಜೀವಕೋಶ ಅನ್ನ, ನೀರು ಬಯಸುತ್ತಿತ್ತು. ಅಷ್ಟು ಹಸಿವು ದಾಹವಾಗಿತ್ತು. ಹೋಗುತ್ತಿರಬೇಕಾದರೆ ಒಬ್ಬ ಬಡವ ಸಿಕ್ಕಿದ. ಆತ ದನ ಕಾಯೋ ಮನುಷ್ಯ. ಆತನ ಹತ್ತಿರ ಒಂದು ತತ್ರಾಣಿಗೆ ಇತ್ತು. ಅವನ ಬಳಿ ಒಂದು ಬುತ್ತಿ ಇತ್ತು. ಆತ ಬುತ್ತಿ ಬಿಚ್ಚಿಕೊಂಡು ಮುಂದೆ ತಂತ್ರಾಣಿ ಇಟ್ಟುಕೊಂಡು ಊಟಕ್ಕೆ ಕುಳಿತಿದ್ದನು. ಅಲ್ಲೇ ಪಕ್ಕದಲ್ಲಿ ಆತನ ದನಗಳು ಮೇಯುತ್ತಿದ್ದವು. ಅಲ್ಲಿಗೆ ಈತ ಬಂದನು. ಈತ ಮಹಾರಾಜ. ಆದರೆ ಏನು ಮಾಡುವುದು ಹೊಟ್ಟೆ ಹಸಿದಿತ್ತು. ರಾಜ್ಯ ಹೋಗಿತ್ತು. ಆತ ಬಡವನ ಕಡೆ ಕನಿಕರ ದೃಷ್ಟಿಯಿಂದ ನೋಡಿದ. ದನ ಕಾಯುವವ, ಈ ಮಹಾರಾಜನನ್ನು ಕರೆದ. ಬಾ ಕುಳಿತುಕೊ ಅಂದನು. ಮಹಾರಾಜ ಬಂದು ಕುಳಿತ. ಸುಮ್ಮನೆ ಕುಳಿತಿಯಲ್ಲ ಒಂದು ರೊಟ್ಟಿ ತಿನ್ನು ಅಂದನು. ಆ ರೊಟ್ಟಿ ಬೆಳಿಗ್ಗೆ ಮಾಡಿತ್ತು. ಅದಕ್ಕೆ ಚಟ್ನಿಪುಡಿ ಉಪ್ಪಿನಕಾಯಿ ಹಾಕಿ ತಿನ್ನಲು ನೀಡಿದ. ಮಸ್ತಾಗಿ ತಿನ್ನು ಅಂದನು. ಆ ರೊಟ್ಟಿ ತಿನ್ನುವಾಗ ಆ ರಾಜನಿಗೆ ರಾಜ್ಯವೇ ಮರೆತು ಹೋಗಿತ್ತು. ಹೊಟ್ಟೆ ತುಂಬಿತ್ತು ಸಂತೋಷವಾಯಿತು. ಎಲ್ಲಾ ಮರೆತಿದ್ದ ಅವಾಗ ಹೇಳಿದ. ಏನ್ ಬೇಕಾದ ಕೇಳು ಕೊಡ್ತೀನಿ ಅಂದನು. ರೊಟ್ಟಿ ತಿನ್ನುವಾಗ ರಾಜ್ಯ ಕಳೆದುಕೊಂಡಿದ್ದನ್ನು ಮರೆತಿದ್ದನು. ಆಗ ದನ ಕಾಯೋ ಮನುಷ್ಯ ಹೇಳಿದ. ಏನ್ ಕೊಡಬೇಕು ಅಂತ ಹೇಳ್ತಾ ಇದಿಯಲ್ಲ ಅದೆಲ್ಲ ಹೋಗೆ ಬಿಟ್ಟಿದ್ದೀಯಲ್ಲ ಅಂದ. ತಿಳಿದುಕೋ, ಯಾವುದಕ್ಕೆ ಬಹಳ ಬೆಲೆ ಇದೆ? ತಿಳಿದುಕೋ. ರಾಜ್ಯ ಇದ್ದರೆ ಏನಾಯ್ತು?. ಕೈ ಬಿಟ್ಟು ಹೋಗ್ತದೆ. ಪ್ರಾಣ ಉಳಿಸಿದ್ದು ರೊಟ್ಟಿ ಅನ್ನುವುದನ್ನು ತಿಳಿದುಕೊ. ಗೆದ್ದವನು ರೊಟ್ಟಿಯಿಂದಲೇ ಬದುಕಬೇಕು. ಸೋತವನು ಕೂಡ ರೊಟ್ಟಿಯಿಂದಲೇ ಬದುಕಬೇಕು. ಗೆದ್ದವನಿಗೆ ಗೆದ್ದ ಸಂಪತ್ತು ಹೊಟ್ಟೆ ತುಂಬಿಸಲ್ಲ. ಸೋತವನಿಗೆ ಸೋತ ಸಂಪತ್ತು ಹೊಟ್ಟೆ ತುಂಬಿಸಲ್ಲ. ಹೊಟ್ಟೆ ತುಂಬೋದು, ಪ್ರಾಣ ಉಳಿಯೋದು ರೊಟ್ಟಿ ಮತ್ತು ನೀರು. ಅದಕ್ಕೆ ನೀನೇನು ಕೊಡ್ತೀಯಾ? ಅಂದನು. ಅಷ್ಟರಲ್ಲಿ ರಾಜನಿಗೆ ನಿದ್ರೆಯಿಂದ ಎಚ್ಚರವಾಯಿತು. 

ತಕ್ಷಣ ಎದ್ದು ಸುತ್ತುಮುತ್ತ ನೋಡಿದ. ಬಂಗಾರದ ವಸ್ತುಗಳು ಕಂಡವು. ಆಗ ಆತನಿಗೆ ನೆನಪಾಯಿತು ರೊಟ್ಟಿ ಮತ್ತು ನೀರು. ಆವಾಗ ವಿಚಾರ ಮಾಡಿದ ಒಂದು ರೊಟ್ಟಿ ಬೆಲೆ ಈ ಆಭರಣಗಳಿಗೆ ಇಲ್ಲ. ಈ ಆಭರಣಗಳು ನನ್ನನ್ನು ಒಮ್ಮೆ ಅಡವಿಗೆ ಕಳಿಸುತ್ತದೆ ರೊಟ್ಟಿ ನನ್ನನ್ನು ಕಾಪಾಡುತ್ತದೆ. ಆದ್ದರಿಂದ ರೊಟ್ಟಿ ಉಳ್ಳವನೇ ಶ್ರೇಷ್ಠವಂತನೆ ಹೊರತು ಆಭರಣ ಹೊಂದಿದವನಲ್ಲ ಅಂತ ಹೊಳೆಯಿತು. ಅಲ್ಲಿಂದ ರಾಜ ಬದಲಾದ. ಎಷ್ಟು ಬದಲಾದ ಎಂದರೆ ಮುಂದೆ ಸಂತನೆ ಆದ. ಅನ್ನದ ಬೆಲೆ ಅಷ್ಟೇ. ನೀರಿನ ಬೆಲೆ ಅಷ್ಟೇ. ಅನ್ನ ದೇವರ ಮುಂದೆ ಇನ್ನು ದೇವರೇ ಇಲ್ಲ, ಅನ್ನಕ್ಕೆ ಮೇಲು ಇನ್ನಿಲ್ಲ, ಲೋಕಕ್ಕೆ ಅನ್ನವೇ ದೇವ ಸರ್ವಜ್ಞ. ಈ ಮಾತನ್ನು ಸರ್ವಜ್ಞ ಅನ್ನದ ಮಹತ್ವ ಕುರಿತು ಹೇಳಿದ. ಅನ್ನ ಹೊರಗೆ ಬರುವುದು ಒಕ್ಕಲಿಗರಿಂದ. ಅನ್ನ ನಗರಗಳಲ್ಲಿ ತಯಾರಾಗುವುದಿಲ್ಲ. ನಗರಗಳಲ್ಲಿ ಜೋಳ, ರಾಗಿ ಅಕ್ಕಿ ತಿನ್ನುತ್ತಾರೆ. ಆದರೆ ಬೆಳೆಯುವುದು ಹಳ್ಳಿಗಳಲ್ಲಿ. ಬೆಳೆಯುವವನು ರೈತ. ಶ್ರೇಷ್ಠ ಒಕ್ಕಲಿಗರು. ಅನ್ನಕ್ಕೆ ಬೆಲೆ ಇಲ್ಲ ಅಂತ ಭಾವಿಸಿ ರೈತ ಬಡವನಾಗುತ್ತಾನೆ. ಅನ್ನಕ್ಕೆ ಬೆಲೆ ಬಹಳ ಮಹತ್ವ ಅಂದ್ರೆ ರೈತ ಶ್ರೀಮಂತನಾಗುತ್ತಾನೆ. ನೆಲದ ಸಮೀಪ ಬದುಕಬೇಕು. ನೀರು ಧಾನ್ಯದ ಸಮೀಪ ಬದುಕಬೇಕು. ಅದೇ ಶ್ರೀಮಂತ ಸುಂದರ ಜೀವನ.

ಭಾರತೀಯರು ಬಹಳ ಒಳ್ಳೆಯವರು. ಏಕೆಂದರೆ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ. ಸ್ವರ್ಗ ಇರೋದು ಹಳ್ಳಿಯಲ್ಲಿ. ಅನ್ನ ಇರೋದು ಹಳ್ಳಿಯಲ್ಲಿ. ಅನ್ನವೇ ದೇವರಾದ ಬಳಿಕ ದೇವರು ಇರೋದು ಹಳ್ಳಿಯಲ್ಲಿ. ಅನ್ನ ಯಾರು ಹತ್ತಿರ ಇದೆಯೋ ಅವರ ಬಳಿ ದೇವರು ಇದ್ದಾನೆ. ಹಾಗೆ ನಾವು ಭಾವಿಸಿದರೆ ಹಳ್ಳಿಯವರೆಲ್ಲ ಶ್ರೇಷ್ಠ ಶ್ರೀಮಂತರೇ. ಅನ್ನ ನೀರು ಕೊರತೆ ಇರುವವರು ಬಡವರು, ಅಲ್ಲವೇ ಮಕ್ಕಳೆ..?
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************




Ads on article

Advertise in articles 1

advertising articles 2

Advertise under the article