ಜೀವನ ಸಂಭ್ರಮ : ಸಂಚಿಕೆ - 238
Sunday, April 19, 2026
Edit
ಜೀವನ ಸಂಭ್ರಮ : ಸಂಚಿಕೆ - 238
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ರಸಭಾವದ ಬಗ್ಗೆ ತಿಳಿದುಕೊಳ್ಳೋಣ. ಭಾವವನ್ನು ವರ್ಣಿಸಲು ಆಗುವುದಿಲ್ಲ. ಇದು ಬಹಳ ಸೂಕ್ಷ್ಮ, ಹಾಗಾಗಿ ಇದನ್ನು ಅನುಭವಿಸಬೇಕು. ರಸಭಾವಕ್ಕೆ ಭಕ್ತಿ ಎನ್ನುವರು.
ಒಬ್ಬ ಮನುಷ್ಯ ಗಿಳಿಹಿಡಿದು ಪಂಜರದಲ್ಲಿ ಇಟ್ಟಿದ್ದಾನೆ. ಅದಕ್ಕೆ ಕುಡಿಯಲು ನೀರು ಇಟ್ಟಿದ್ದಾನೆ. ತಿನ್ನಲು ಬಗೆಬಗೆಯ ಹಣ್ಣುಗಳನ್ನು ಇಟ್ಟಿದ್ದಾನೆ. ಆ ಗಿಳಿ ಕಂಡು ಸಂತೋಷವಾಗಿತ್ತು. ಅದನ್ನು ಪ್ರೀತಿಸಿದ್ದ ಹಾಗೂ ಬಂಧಿಸಿದ್ದನು. ಆ ಕ್ಷಣಕ್ಕೆ ಆ ಗಿಳಿ ಪಂಜರವನ್ನು ನೋಡುತ್ತಿದೆ. ಹಣ್ಣನ್ನು ನೋಡುತ್ತದೆ. ನೀರನ್ನು ನೋಡುತ್ತದೆ. ಈ ಮನುಷ್ಯನನ್ನು ನೋಡುತ್ತದೆ. ಆ ಬಳಿಕ ಕಣ್ಣಿನ ಮೂಲಕ ಒಂದು ಭಾವನೆಯನ್ನು ವ್ಯಕ್ತಪಡಿಸುತ್ತದೆ. ಅದು ಏನನ್ನು ವ್ಯಕ್ತ ಮಾಡುತ್ತಿದೆ ಅಂದರೆ ನನಗೆ ಇದ್ಯಾವುದೂ ಹಿಡಿಸುವುದಿಲ್ಲ. ನಿನ್ನ ಹಣ್ಣು ನನಗೆ ಬೇಡ. ನಿನ್ನ ನೀರು ನನಗೆ ಬೇಡ. ನಿನ್ನ ಈ ಬಂಗಾರದ ಪಂಜರ ನನಗೆ ಬೇಡ. ನನಗೆ ಬೇಕಾದದ್ದು ಸ್ವಾತಂತ್ರ್ಯ. ಆ ಹಕ್ಕಿಯಲ್ಲಿರುವ ಸ್ವಾತಂತ್ರ್ಯದ ಪ್ರೇಮ ಮೌನ ಭಾಷೆಯಲ್ಲಿ ವ್ಯಕ್ತವಾದದ್ದನ್ನು ಶಬ್ದಗಳಲ್ಲಿ ಹೇಗೆ ಹಿಡಿಯಲು ಸಾಧ್ಯ?. ಹೃದಯ ಇದ್ದರೆ ಅರ್ಥವಾಗುತ್ತದೆ. ಹೃದಯವಿಲ್ಲದಿದ್ದರೆ ಅದು ಅರ್ಥವಾಗುವುದಿಲ್ಲ. ಅದು ಅತ್ಯಂತ ಸೂಕ್ಷ್ಮಭಾವ. ಅದು ತನ್ನ ಕಣ್ಣಿನಲ್ಲಿ ಭಾವನೆಯನ್ನು ವ್ಯಕ್ತ ಮಾಡುತ್ತದೆ. ನಮ್ಮ ಮನಸ್ಸು ಪ್ರೀತಿಯಿಂದ ಹದವಾಗಿತ್ತು ಎಂದರೆ ನಮ್ಮ ಅನುಭವಕ್ಕೆ ಅದು ಬರುತ್ತದೆ. ಇದನ್ನು ಶಬ್ದಗಳಲ್ಲಿ ಹೇಗೆ ವರ್ಣಿಸುವುದು?. ಗಿಳಿಯನ್ನು ಶಬ್ದಗಳಲ್ಲಿ ವರ್ಣಿಸಬಹುದು. ಗಿಳಿಯ ರೂಪವನ್ನು ವರ್ಣಿಸಬಹುದು. ಆದರೆ ಗಿಳಿಯ ಭಾವನೆ ಸ್ವಾತಂತ್ರ್ಯದ ಪ್ರೇಮವನ್ನು ಹೇಗೆ ವರ್ಣಿಸುವುದು?. ಅದನ್ನು ವರ್ಣಿಸಲು ಆಗುವುದಿಲ್ಲ, ಅನುಭವಿಸಬೇಕು. ಹಾಗೆ ರಸಭಾವವನ್ನು ವರ್ಣಿಸುವುದು ಕಷ್ಟ. ಅದನ್ನು ಅನುಭವಿಸಬೇಕು.
ಈ ರಸಭಾವ ಬರಲು ಹೃದಯದ ಕಠೋರತೆ ಹೋಗಬೇಕು. ಪ್ರೇಮ ರಸಭಾವ ಅಲ್ಲ. ಅಹಂನಿಂದ ಕೂಡಿದ ಪ್ರೇಮ ರಸಭಾವವವಲ್ಲ. ಈ ಕಥೆ ಓದಿ. ಒಂದು ಮನೆ. ಆ ಮನೆಯಲ್ಲಿ ಒಂದು ಆಕಳ ಇತ್ತು. ಆ ಆಕಳಿಗೆ ಒಂದು ಕರು ಆಯಿತು. ಕರು ಬಹಳ ಮುದ್ದಾಗಿತ್ತು. ಆ ಕರುವಿಗೆ ಹಾಲು ಕುಡಿಸಿ ಅಲ್ಲೇ ಬಿಟ್ಟು ಮೇಯಲು ಹೋಗುತ್ತಿತ್ತು. ಒಂದೇ ಕರು ಮೂಲೆಯಲ್ಲಿ ಬಿದ್ದುಕೊಂಡು ಇರುತ್ತಿತ್ತು. ತಾಯಿ ನೆನೆಸಿಕೊಂಡು ಮಲಗುತ್ತಿತ್ತು. ಅದೇ ಮನೆಯಲ್ಲಿ ಇನ್ನೊಂದು ಮೇಕೆ ಮರಿ ಇತ್ತು. ಆ ಮನೆಯ ಮಾಲಿಕ ಆ ಮೇಕೆ ಮರಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಅದಕ್ಕೆ ತಿನ್ನಿಸುವುದು, ಉಣ್ಣಿಸುವುದು, ಮೈಸವರುವುದು ಎಲ್ಲ ಮಾಡುತ್ತಿದ್ದನು. ಮೂಲೆಯಲ್ಲಿ ಬಿದ್ದ ಆಕಳ ಕರು ಇದನ್ನು ನೋಡುತ್ತಿತ್ತು. ತಿನ್ನಿಸುವುದನ್ನು, ಉಣಿಸುವುದನ್ನು, ಪ್ರೇಮ ಮಾಡುವುದನ್ನು ನೋಡುತ್ತಿತ್ತು. ಅದಕ್ಕೂ ಇಚ್ಚೆಯಾಗುತ್ತಿತ್ತು. ಯಜಮಾನ ನನ್ನ ಸಮೀಪಕ್ಕೂ ಬರಬೇಕು. ನನ್ನ ಮೈ ಸವರಬೇಕು. ನನ್ನನ್ನು ಪ್ರೀತಿಸಬೇಕು ಅಂತ ಅನಿಸುತ್ತಿತ್ತು. ಆದರೆ ಯಜಮಾನ ಆಕಳ ಕರು ಸಮೀಪಕ್ಕೆ ಬರಲೇ ಇಲ್ಲ. ಒಂದು ದಿನ ಖಿನ್ನವಾಗಿ ನಿಂತಿತ್ತು. ಅಷ್ಟರಲ್ಲಿ ತಾಯಿ ಆಕಳು ಮನೆಗೆ ಬಂತು. ಆಗ ತಾಯಿ ತನ್ನ ಕರುವಿಗೆ ಕೇಳುತ್ತದೆ ಏಕೆ ಖಿನ್ನವಾಗಿದೆಯಲ್ಲ? ಅಂತ. ಆವಾಗ ಕರು ಹೇಳಿತು. ಮನೆಯ ಯಜಮಾನ ನನ್ನನ್ನು ಪ್ರೀತಿಸುವುದಿಲ್ಲ. ಆ ಮೇಕೆಯನ್ನು ಎಷ್ಟು ಪ್ರೀತಿಸುತ್ತಾನೆ ಎಂದರೆ ಅದಕ್ಕೆ ತಿಂಡಿ ಹಾಕುವುದು, ನೀರು ಕುಡಿಸುವುದು, ಮೈ ಸವರುವುದು, ಎತ್ತಿಕೊಳ್ಳುವುದು, ಎಲ್ಲಾ ಮಾಡುವುದನ್ನು ನೋಡಿ ನನಗೂ ಹೀಗೆ ಪ್ರೀತಿಸಬೇಕು ಅನಿಸುತ್ತದೆ. ಆದರೆ ಆಯಿತಾ ಇಲ್ಲ. ಆಗ ತಾಯಿ ಆಕಳು ಹೇಳಿತು ನಿನಗೆ ಲೋಕದವರ ವ್ಯವಹಾರ ತಿಳಿಯುವುದಿಲ್ಲ. ಮಾನವೀಯ ಪ್ರೇಮ
ನಿನಗೆ ಗೊತ್ತಿಲ್ಲ. ಇಂದು ಗೊತ್ತಾಗುವುದಿಲ್ಲ. ಸ್ವಲ್ಪ ದಿನ ಹೋದ ಮೇಲೆ ನಿನಗೆ ಗೊತ್ತಾಗುತ್ತದೆ. ನಿನ್ನ ಪ್ರೇಮ ಮಾಡದಿರುವುದೇ ಒಳ್ಳೆಯದು. ನಾನಿದ್ದೀನಲ್ಲ ನಿನ್ನ ಪ್ರೇಮ ಮಾಡೋದಿಕ್ಕೆ. ನೀನು ಅವರ ಪ್ರೇಮ ತೆಗೆದುಕೊಂಡು ಏನು ಮಾಡುತ್ತೀಯಾ?. ನನ್ನ ಪ್ರೇಮ ಅಗಾಧ. ನೈಜವಾದದ್ದು. ಹಾಲಿನ ಮೂಲಕ ನನ್ನ ಪ್ರೇಮ ನೀಡುತ್ತಿದ್ದೇನೆ. ಕಣ್ಣಿನ ಮೂಲಕ ತೋರಿಸುತ್ತೇನೆ. ಅಂತಹ ಅದ್ಭುತ ಪ್ರೇಮವನ್ನು ಉಣ್ಣಿಸುತ್ತೇನೆ. ಇದನ್ನು ನೆನೆಸುತ್ತಾ ನೆನೆಸುತ್ತಾ ಬದುಕು. ಮಾನವರ ಪ್ರೇಮ ಉಣ್ಣುವ ಹವ್ಯಾಸಕ್ಕೆ ಹೋಗಬೇಡ. ಕರುವಿಗೆ ಇದು ತಿಳಿಯಲಿಲ್ಲ. ಸ್ವಲ್ಪ ದಿವಸಗಳು ಕಳೆದವು.
ಒಂದು ದಿನ ಆಕಳು ಹುಲ್ಲು ಮೇಯ್ದು ಸಾಯಂಕಾಲ ಮನೆಗೆ ಬಂತು. ಆಗ ಆಕಳ ಕರು ನಡುಗುತ್ತಿತ್ತು. ಗಾಬರಿಯಾಗಿತ್ತು. ಆಗ ತಾಯಿ ಬಂದು ತನ್ನ ಕರುವಿನ ಮೈಯ ನೆಕ್ಕಿ ಕೇಳಿತು. ಯಾಕೆ ಹೀಗಿದ್ದೀಯಲ್ಲ?. ಆಗ ಕರು ಹೇಳಿತು ಯಾವುದನ್ನು ಅವರು ಅಷ್ಟು ಪ್ರೀತಿಸುತ್ತಿದ್ದರೊ, ಯಾವುದಕ್ಕೆ ಅಷ್ಟು ಹಾಲು ಉಣಿಸುತ್ತಿದ್ದರೊ, ಅದನ್ನು ಇಂದು ಕತ್ತರಿಸಿ ಬಿಟ್ಟರು. ಆಗ ಆಕಳು ಹೇಳಿತು. ಇದು ಮನುಷ್ಯನ ಪ್ರೇಮ. ಇದು ಗೋವಿನ ವಾತ್ಸಲ್ಯವಲ್ಲ ಮಾನವ ಪ್ರೇಮ. ಅವರು ಯಾಕೆ ಪ್ರೀತಿಸುತ್ತಾರೆ ಎಂದರೆ ಭವಿಷ್ಯದಲ್ಲಿ ಒಂದು ಉದ್ದೇಶ ಇದೆ. ಅದಕ್ಕೆ ಅವರು ಪ್ರೀತಿಸುತ್ತಾರೆ. ಯಾವುದೋ ಉದ್ದೇಶಕ್ಕಾಗಿ ವಸ್ತುವನ್ನು ಪ್ರೀತಿಸ್ತಾ ಇರ್ತಿವಲ್ಲ ಇಂತಹ ಪ್ರೇಮ ಭಕ್ತಿಯಲ್ಲ. ಇದು ರಸಭಾವವಲ್ಲ. ಭಾವವೇ ರಸ ರೂಪ ತಾಳಬೇಕು. ಉದ್ದೇಶದ ಪ್ರೇಮ ಬೇರೆ, ಉದ್ದೇಶ ರಹಿತ ಪ್ರೇಮ ಬೇರೆ. ಉದ್ದೇಶ ರಹಿತ ಸಹಜ ಪ್ರೇಮವೇ ರಸಭಾವ.
ಒಮ್ಮೆ ಕಮಲದ ಹೂವು ಅರಳಿತ್ತು. ಒಂದು ಭೃಂಗ ಬಂದು ಕಮಲದ ಹೂವಿನೊಳಗೆ ಹೊಕ್ಕಿತ್ತು. ಸಾಯಂಕಾಲ ಆಗಿತ್ತು. ಸೂರ್ಯ ಮುಳುಗುತ್ತಾನೆ ಅನ್ನುವ ಕಲ್ಪನೆ ಆ ಭೃಂಗಕ್ಕೆ ಬರಲಿಲ್ಲ. ಒಳಗೆ ಮಕರಂದ ತುಂಬಿತ್ತು. ಮಕರಂದ ಕುಡಿಯುತ್ತಾ ಕುಡಿಯುತ್ತಾ ಮಗ್ನವಾಗಿತ್ತು. ಆಗ ಸೂರ್ಯ ಮುಳುಗಿದ. ಕಮಲದ ದಳಮುಚ್ಚಿದವು. ಭೃಂಗ ಒಳಗೆ ಸಿಕ್ಕಿಹಾಕಿಕೊಂಡಿತ್ತು. ಸಂತ ಅಲ್ಲಿ ಕುಳಿತು ನೋಡುತ್ತಾ ಇದ್ದನು. ಆತ ಭೃಂಗಕ್ಕೆ ಹೇಳಿದ. ಎಲೈ ಭೃಂಗವೇ ಪ್ರಾಣ ಕಳಕೋತಿಯಲ್ಲೋ ಅಂದನು. ಆಗ ಭೃಂಗ ಹೇಳಿತು, ಯಾಕೆ ಅಂದಿತು?. ಆಗ ಸಂತ ಹೇಳಿದ, ಸೂರ್ಯ ಮುಳುಗಿದೆ. ಕಮಲದ ದಳ ಮುಚ್ಚಿತು. ಹೊರಗೆ ಬರುವ ದಾರಿ ಇಲ್ಲ. ನೀನು ಸಾಯಬೇಕಾಗುತ್ತದೆ. ಗೊತ್ತಿಲ್ಲವೇನು?. ಅವಾಗ ಭೃಂಗ ಹೇಳಿತು "ಸಂತನೇ ನನ್ನ ಸಲುವಾಗಿ ನೀನು ಮರುಗುವ ಅವಶ್ಯಕತೆ ಇಲ್ಲ. ನನ್ನ ಹೃದಯದಲ್ಲಿ ಮಕರಂದದ ಪ್ರೇಮ ತುಂಬಿದೆ. ಈ ಪ್ರೇಮ ಜಗತ್ತಿನಲ್ಲಿ ನಾನು ಕಣ್ಣುಮುಚ್ಚುತ್ತಿದ್ದರೆ ನಾನು ಅಮರನಾಗುತ್ತೇನೆ ವಿನಹ ನಾನು ಸಾವನ್ನು ಅನುಭವಿಸುವುದಿಲ್ಲ. ಎಂತಹ ರಸಭಾವ. ಪ್ರಾಣ ಹೋಗುವ ಈ ಮರಣದ ಭಾವ ಕೂಡ ಆಗದಷ್ಟು ರಸ ದುಂಬಿಯಲ್ಲಿ ತುಂಬಿತ್ತು ಅಂದರೆ ಅದೇ ರಸಭಾವ. ಭಕ್ತಿ ಭಾವ.
ಯಾವಾಗ ಹೃದಯದಲ್ಲಿ ರಸಭಾವ ತುಂಬಿತು ಆಗ ದೃಷ್ಟಿಯಲ್ಲಿ ಪ್ರಸಾದ ಭಾವ ಶುರುವಾಗುತ್ತದೆ. ಮನಸ್ಸಿನಲ್ಲಿ ರಸಭಾವ, ದೃಷ್ಟಿಯಲ್ಲಿ ಪ್ರಸಾದಭಾವ ಬರುತ್ತದೆ. ಪ್ರಸಾದ ಭಾವ ಎಂದರೆ ಎಲ್ಲೆಲ್ಲಿ ಸೌಂದರ್ಯ ಇದೆ ಅದನ್ನು ಗ್ರಹಿಸಲು ಶುರುಮಾಡುತ್ತದೆ. ನೋಡಿದಲ್ಲೆಲ್ಲ ಸೌಂದರ್ಯ ಅನುಭವಿಸಲು ಶುರುಮಾಡುತ್ತದೆ. ಇದಕ್ಕೆ ರಸಬಾವ ಅಭಿವ್ಯಕ್ತಿ ಎನ್ನುವರು. ಕಣ್ಣೇ ರಸವಾದ ಬಳಿಕ ಹೊರಗೆ ಏನು ನೋಡುತ್ತಾನೆ?. ನೋಡಿ ಸಂತೋಷ ಪಡುತ್ತಾನೆ, ನಿಸರ್ಗದಲ್ಲಿ ಸೌಂದರ್ಯ ಮಡುಗಟ್ಟಿ ನಿಂತಿದೆ. ಸೌಂದರ್ಯ ರೂಪದಲ್ಲಿ ಭಗವಂತ ಕಾಣಿಸುತ್ತಾನೆ. ಭಗವಂತ ಎಲ್ಲರಿಗೂ ಕಾಣಬೇಕು ಅಂತ ಸೌಂದರ್ಯ ರೂಪ ತಾಳಿದ. ಹೀಗೆ ಭಾವ ಬದಲಾಗುತ್ತದೆ. ಭಗವಂತನನ್ನು ಆನಂದ ರೂಪ ಎನ್ನುತ್ತೇವೆ. ರಸಭಾವ ಇರುವ ವ್ಯಕ್ತಿ ಯಾವುದೇ ವಸ್ತುವನ್ನು ನನ್ನದು ಅಂತ ನೋಡುವುದಿಲ್ಲ. ಬೇರೆಯವರದು ಅಂತ ನೋಡುವುದಿಲ್ಲ. ಬೇಕು ಅಂತ ನೋಡುವುದಿಲ್ಲ. ಬೇಡ ಅಂತ ನೋಡುವುದಿಲ್ಲ. ಕೇವಲ ವಸ್ತುವನ್ನು ವಸ್ತು ಅಂತ ನೋಡಿ ಆ ವಸ್ತುವಿನ ಸೌಂದರ್ಯದಲ್ಲಿ ಮಗ್ನನಾಗುತ್ತಾನೆ. ಆ ಸೌಂದರ್ಯ ಮನತುಂಬಿ ಸಂತೋಷಪಡುತ್ತಾನೆ. ಆ ಸಂತೋಷದ ಅನುಭವವೇ ಭಗವಂತನ ಅನುಭವ ಎಂದು ತಿಳಿಯುತ್ತಾನೆ. ಅಷ್ಟು ಅದ್ಭುತ ರಸಾನುಭವ. ಅಲ್ಲವೇ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************