ಮಕ್ಕಳಿಗೆ ರಜೆಯ ಓದು : ಸಂಚಿಕೆ - 15
Saturday, September 20, 2025
Edit
ಮಕ್ಕಳಿಗೆ ರಜೆಯ ಓದು
ಸಂಚಿಕೆ - 15
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ಪಿನಾಕಿಯೋ ಅಥವಾ ಪಿನೋಕಿಯೊ ಎನ್ನುವ ಹೆಸರನ್ನು ಬಹಳಷ್ಟು ಮಕ್ಕಳು ಕೇಳಿಯೇ ಇರುತ್ತೀರಿ. ಈ ಒಂದು ಪಾತ್ರದ ವಿಶೇಷತೆಯೆಂದರೆ ಇದು ಮರದಿಂದ ಮಾಡಿದ ಗೊಂಬೆ. ಮರದಿಂದ ಮಾಡಿದ ಈ ಸುಂದರ ಗೊಂಬೆಗೆ ಜೀವ ತುಂಬಿದವನು ಜೆಪ್ಪೆಟ್ಟೋ ಎಂಬ ಸಹೃದಯ ಗೊಂಬೆ ತಯಾರಕ. ಈತ ತಾನು ತಯಾರಿಸಿದ ಈ ಗೊಂಬೆಯ ಮೇಲೆ ಮೋಹಗೊಂಡು ಅದನ್ನು ತನ್ನ ಮಗನೆಂದು ಪರಿಗಣಿಸಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಆದರೆ ಪಿನಾಕಿಯೋ ಬಹಳ ತುಂಟ ಹಾಗೂ ಹಠಮಾರಿ ಹುಡುಗ. ಎಲ್ಲರನ್ನೂ ಚೇಷ್ಟೆ ಮಾಡಿಕೊಂಡು ತೊಂದರೆ ನೀಡುತ್ತಿದ್ದ. ಈ ಪಿನಾಕಿಯೋಗೆ ಒಂದು ವಿಚಿತ್ರ ಸಮಸ್ಯೆ ಇತ್ತು. ಆತ ಸುಳ್ಳು ಹೇಳಿದಾಕ್ಷಣ ಆತನ ಮೂಗು ಉದ್ದಕ್ಕೆ ಬೆಳೆಯಲಾರಂಭಿಸುತ್ತಿತ್ತು. ಈ ಕಾರಣದಿಂದ ಆತ ಸುಳ್ಳು ಹೇಳಿದರೆ ಎಲ್ಲರಿಗೂ ಗೊತ್ತಾಗಿಬಿಡುತ್ತಿತ್ತು. ಪಿನಾಕಿಯೋಗೆ ಹಲವಾರು ಕನಸುಗಳಿದ್ದವು. ಈ ಕನಸುಗಳನ್ನು ನನಸು ಮಾಡುವುದಾದರೆ ಜೆಪ್ಪೆಟ್ಟೋ ಜೊತೆಗಿದ್ದರೆ ಸಾಧ್ಯವಿಲ್ಲ ಎಂದು ಅರಿತ ಪಿನಾಕಿಯೋ ಒಂದು ದಿನ ಮನೆ ಬಿಟ್ಟು ಓಡಿಹೋಗುತ್ತಾನೆ. ಆತ ದಾರಿಯುದ್ದಕ್ಕೂ ಹಲವಾರು ತೊಂದರೆಗಳನ್ನು ಅನುಭವಿಸುತ್ತಾನೆ. ಒಮ್ಮೆ ಆತ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ಅಪ್ಸರೆಯೊಬ್ಬಳು ಆತನನ್ನು ರಕ್ಷಿಸುತ್ತಾಳೆ. ನಂತರ ಆ ಅಪ್ಸರೆಯ ಸಹಾಯದಿಂದ ಪಿನಾಕಿಯೋ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾನೆ.
ಮಕ್ಕಳ ಮನಸ್ಸನ್ನು ಮಂತ್ರಮುಗ್ಧಗೊಳಿಸುವ ಶಕ್ತಿ ಇರುವ ಈ ಅದ್ಭುತ ಸಾಹಸಮಯ ಕಥೆಯನ್ನು ಬರೆದವರು ಕಾರ್ಲೋ ಕೊಲೊಡಿ. ಆತ ಬರೆದ ಈ ಕಾದಂಬರಿಯು ಸುಮಾರು ೨೫೦ ಭಾಷೆಗಳಿಗೆ ಅನುವಾದಗೊಂಡಿದೆ. ಇದು ಅತ್ಯಧಿಕ ಭಾಷೆಗಳಿಗೆ ಅನುವಾದಗೊಂಡ ಕೃತಿ ಎಂದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ೩೬ ಅಧ್ಯಾಯಗಳನ್ನೊಳಗೊಂಡ ಈ ಕಾದಂಬರಿಯು ಪಿನಾಕಿಯೋ ಸಾಹಸ, ಪ್ರವಾಸದ ಅದ್ಭುತ ಲೋಕವನ್ನು ತೆರೆದಿಡುತ್ತದೆ. ಈ ಕಥೆಯಿಂದ ಮಕ್ಕಳು ಹಲವಾರು ಉತ್ತಮ ಸಂಗತಿಗಳನ್ನು ಕಲಿಯಬಹುದಾಗಿದೆ.
೧೯೪೦ರಲ್ಲಿ ವಾಲ್ಟ್ ಡಿಸ್ನಿ ಈ ಕಾದಂಬರಿಯ ಹಕ್ಕನ್ನು ಪಡೆದುಕೊಂಡ ಬಳಿಕ ಪಿನಾಕಿಯೋ ಕೃತಿ ಇನ್ನಷ್ಟು ಪ್ರಸಿದ್ಧಿಯನ್ನು ಪಡೆಯಿತು. ನಂತರ ಪಿನಾಕಿಯೋ ಎಂಬ ಚಲನಚಿತ್ರವೂ ನಿರ್ಮಾಣವಾಯಿತು. ಬಹಳಷ್ಟು ವರ್ಷಗಳು ಕಳೆದರೂ ಈಗಲೂ ಪಿನಾಕಿಯೋ ತನ್ನ ಪ್ರಸಿದ್ಧಿಯನ್ನು ಕಾಪಾಡಿಕೊಂಡು ಬಂದಿದೆ. ಈ ಕೃತಿಯನ್ನು ಮಕ್ಕಳು ಅವಶ್ಯವಾಗಿ ಓದಬೇಕು.
ಮಕ್ಕಳ ಓದಿಗೆ ಇನ್ನಷ್ಟು ಪುಸ್ತಕಗಳು: ದಿ ರನ್ ಅವೇ ಬನ್ನಿ (The Runaway Bunny) ಎನ್ನುವ ಮಕ್ಕಳ ಕಥೆ ಪುಸ್ತಕವನ್ನು ಬರೆದವರು ಮಾರ್ಗರೆಟ್ ವೈಸ್ ಬ್ರೌನ್. ಒಂಬತ್ತು ವರ್ಷದ ಪಿಪ್ಪಿ ಎನ್ನುವ ಹೆಸರಿನ ಹುಡುಗಿಯ ಸಾಹಸಮಯ ಕಥೆಗಳಿಗಾಗಿ ‘ಪಿಪ್ಪಿ ಲಾಂಗ್ ಸ್ಟಾಕಿಂಗ್’ (Pippi Longstocking) ಕಥೆಯನ್ನು ಓದಬಹುದು. ಇದನ್ನು ಬರೆದವರು ಆಸ್ಟ್ರಿಡ್ ಲಿಂಡ್ಗ್ರಿನ್. ಈ ಪುಸ್ತಕಗಳ ಜೊತೆಗೆ ಲಿಟಲ್ ಔಲ್ಸ್ ನೈಟ್ (Little Owl’s Night) ಮತ್ತು ದಿ ಇನ್ವಿಸಿಬಲ್ ಬಾಯ್ (The Invisible Boy) ಕೃತಿಗಳನ್ನು ನಿಮ್ಮ ಓದಿನ ಪಟ್ಟಿಗೆ ಸೇರಿಸಿಕೊಳ್ಳಬಹುದು.
ಮಕ್ಕಳೇ, ಪುಸ್ತಕಗಳು ನಿಮ್ಮ ಉತ್ತಮ ಗೆಳೆಯರು. ಈ ಗೆಳೆಯರನ್ನು ನಿಮ್ಮ ಮನೆಯೊಳಗೆ ತಂದರೆ ನಿಮ್ಮ ಭವಿಷ್ಯ ಉತ್ತಮವಾಗುವುದರಲ್ಲಿ ಸಂಶಯವಿಲ್ಲ. ಮೊಬೈಲ್, ಟಿವಿಯನ್ನು ಸ್ವಲ್ಪ ದೂರ ಇಟ್ಟು. ಪುಸ್ತಕ ಓದಲು ಪ್ರಾರಂಭಿಸಿ. ಸ್ವಲ್ಪವೇ ದಿನಗಳಲ್ಲಿ ನಿಮ್ಮಲ್ಲಾಗುವ ಬದಲಾವಣೆ ನಿಮಗೇ ಆಶ್ಚರ್ಯ ತರಿಸುತ್ತದೆ. ಪೋಷಕರೂ ತಮ್ಮ ಮಕ್ಕಳಿಗೆ ಇಂತಹ ಉತ್ತಮ ಕಥೆಗಳನ್ನು ಹೊಂದಿರುವ ಪುಸ್ತಕಗಳನ್ನು ತಂದುಕೊಟ್ಟು ಓದುವ ಹವ್ಯಾಸವನ್ನು ಬೆಳಸಬಹುದು.
(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************