ಮಕ್ಕಳಿಗೆ ರಜೆಯ ಓದು : ಸಂಚಿಕೆ - 14
Saturday, September 13, 2025
Edit
ಮಕ್ಕಳಿಗೆ ರಜೆಯ ಓದು
ಸಂಚಿಕೆ - 14
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ಮಕ್ಕಳಿಗೆ ಹಾಗೂ ಯುವ ಓದುಗರಿಗೆ ಕರುಣೆ, ಪರಸ್ಪರ ಸಹಕಾರ ಮತ್ತು ಗೆಳೆತನದ ಮಹತ್ವವನ್ನು ತಿಳಿ ಹೇಳುವ ಉತ್ತಮ ಕಥಾ ಹಂದರವನ್ನು ಹೊಂದಿರುವ ಕಾದಂಬರಿಯೇ ‘ಲಿಟಲ್ ಬ್ಲೂ ಟ್ರಕ್’. ಇಲ್ಲಿ ಕಥಾ ನಾಯಕ ಒಂದು ನೀಲಿ ಬಣ್ಣದ ಪುಟ್ಟ ಲಾರಿ ಅಥವಾ ಟ್ರಕ್. ಈ ಲಾರಿಯ ಮನಸ್ಸು ತುಂಬಾ ದೊಡ್ಡದು. ಈ ಕಾದಂಬರಿಯನ್ನು ಬರೆದದ್ದು ಆಲಿಸ್ ಶೆರ್ಟಲ್. ಈಕೆ ಬರೆದ ಈ ಕಥೆ ಪುಸ್ತಕಕ್ಕೆ ಸೊಗಸಾದ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳ ಮನಸ್ಸನ್ನು ಕದಿಯುವಲ್ಲಿ ಸಹಕರಿಸಿದ್ದು ಚಿತ್ರಗಾರ ಜಿಲ್ ಮೆಕ್ ಎಲ್ ಮುರೆ. ಇವರು ಬಿಡಿಸಿದ ಚಿತ್ರಗಳು ಆ ಪುಸ್ತಕಕ್ಕೆ ಹೊಸ ಮೆರುಗನ್ನು ತಂದುಕೊಟ್ಟಿತು ಅಂದರೆ ತಪ್ಪಾಗಲಾರದು.
ಪುಟ್ಟದಾದ ನೀಲಿ ಲಾರಿಯ ಕಥೆ ಎಲ್ಲಾ ಮಕ್ಕಳಿಗೆ ರುಚಿಸುವಂತದ್ದು. ಈ ನೀಲಿ ಲಾರಿ ಎಲ್ಲರಿಗೂ ಸಹಾಯ ಮಾಡುವಂತಹ ಗುಣವನ್ನು ಹೊಂದಿತ್ತು. ಒಂದು ರೀತಿಯಲ್ಲಿ ಪರೋಪಕಾರಿ ಮನೋಭಾವ. ಅದು ಹೆಚ್ಚಾಗಿ ಕಾಡಿನ ಮಾರ್ಗವಾಗಿ ಹೋಗುತ್ತಿದ್ದ ಕಾರಣ ಆ ಕಾಡಿನಲ್ಲಿದ್ದ ವಿವಿಧ ಪ್ರಾಣಿ, ಪಕ್ಷಿಗಳ ಗೆಳೆತನವನ್ನು ಹೊಂದಿತ್ತು. ಇದನ್ನು ಕಂಡ ದೊಡ್ಡ ಲಾರಿಯೊಂದಕ್ಕೆ ಹೊಟ್ಟೆ ಉರಿ ಪ್ರಾರಂಭವಾಗಿತ್ತು. ಒಮ್ಮೆ ನೀಲಿ ಲಾರಿ ಆ ದೊಡ್ಡ ಲಾರಿ ಬಳಿ ಸಹಾಯ ಕೇಳಿದಾಗ ಅದು ನಿರಾಕರಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಆ ದೊಡ್ಡ ಲಾರಿಯು ಕಾಡಿನಲ್ಲಿದ್ದ ಕೆಸರಿನ ಹೊಂಡದಲ್ಲಿ ಸಿಕ್ಕಿ ಬಿದ್ದು ಒದ್ದಾಡುತ್ತಿತ್ತು. ಅದನ್ನು ಕಂಡ ನೀಲಿ ಲಾರಿಯು ತನ್ನ ಕಾಡಿನ ಗೆಳೆಯರಾದ ಪ್ರಾಣಿಗಳ ಸಹಾಯದಿಂದ ಹೊರಗೆ ತರುವಲ್ಲಿ ಸಮರ್ಥವಾಗಿತ್ತು. ಈ ಸಹಾಯವನ್ನು ನೋಡಿದ ದೊಡ್ಡ ಲಾರಿ ನಾಚಿಕೆಯಿಂದ ತಲೆ ತಗ್ಗಿಸಿತ್ತು. ಪರಸ್ಪರ ಸಹಕಾರವೇ ಬದುಕಿನಲ್ಲಿ ಅತ್ಯಂತ ಉತ್ತಮ ಗುಣ ಎಂದು ಅದಕ್ಕೆ ಅರ್ಥವಾಗಿತ್ತು.
ಈ ಪುಟ್ಟ ನೀಲಿ ಲಾರಿಯ ಕಥೆಯು ಮಕ್ಕಳಲ್ಲಿ ಪ್ರಾಮಾಣಿಕತೆ, ಸಹಾಯ, ಕರುಣೆ, ಗೆಳೆತನ ಮುಂತಾದ ಉದಾತ್ತ ಗುಣಗಳನ್ನು ಬೆಳೆಸುವಲ್ಲಿ ದೊಡ್ಡ ಪಾತ್ರವಹಿಸುತ್ತದೆ. ಈ ಪುಸ್ತಕವನ್ನು ನಿಮ್ಮ ಮಕ್ಕಳ ಓದಿನ ಚೀಲಕ್ಕೆ ಸೇರಿಸಬಹುದಾಗಿದೆ.
ಮಕ್ಕಳು ಓದಬಹುದಾದ ಇನ್ನಷ್ಟು ಪುಸ್ತಕಗಳು: ಟು ಕಿಲ್ ಎ ಮೋಕಿಂಗ್ ಬರ್ಡ್ (To Kill A Mockingbird) ಹಾರ್ಪರ್ ಲೀ ಎಂಬಾತ ಬರೆದು ೧೯೬೦ರಲ್ಲಿ ಪ್ರಕಾಶಿತವಾದ ಪುಸ್ತಕವೇ ಟು ಕಿಲ್ ಎ ಮೋಕಿಂಗ್ ಬರ್ಡ್. ಈ ಕಾದಂಬರಿಯ ಕಥೆಯು ಲೇಖಕರಾದ ಹಾರ್ಪರ್ ಲೀ ಅವರ ಜೀವನದ ಕೆಲವು ಘಟನೆಗಳನ್ನೇ ಅವಲಂಬಿಸಿದೆ. ಅವರು ಅಲಬಾಮಾ ನಗರದಲ್ಲಿ ತಮ್ಮ ಜೀವನವನ್ನು ಕಳೆಯುತ್ತಿದ್ದಾಗ ನಡೆದ ಘಟನಾವಳಿಗಳ ಚಿತ್ರಣ ಈ ಕಾದಂಬರಿಯಲ್ಲಿ ಲಭಿಸುತ್ತದೆ. ಈ ಕಾದಂಬರಿಯು ನಂತರದ ದಿನಗಳಲ್ಲಿ ಚಲನ ಚಿತ್ರ ರೂಪದಲ್ಲೂ ಹೊರಬಂದಿತ್ತು.
ಮಕ್ಕಳು ಓದಬಹುದಾಗ ಮತ್ತೊಂದು ಪುಸ್ತಕವೆಂದರೆ ‘ದಿ ಗಿವರ್’ (The Giver). ೧೯೯೩ರಲ್ಲಿ ಬರೆಯಲಾದ ಈ ಕಾದಂಬರಿಯ ಲೇಖಕರು ಲೂಯಿಸ್ ಲೌರಿ. ಇದು ಜೊನಾಸ್ ಎಂಬ ೧೨ ವರ್ಷದ ಹುಡುಗನ ಜೀವನದ ಕಥೆ. ಈ ಹುಡುಗನ ಕಷ್ಟದ ಜೀವನದ ಚಿತ್ರಣ ಇದರಲ್ಲಿದೆ.
(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************