ಮಳೆಯ ರಜೆಗಳು
Thursday, August 28, 2025
Edit
ಲೇಖನ : ಮಳೆಯ ರಜೆಗಳು
ಬರಹ : ಶುಭ
ಅತಿಥಿ ಶಿಕ್ಷಕಿ
ದ. ಕ. ಜಿ. ಪಂ. ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ, ತಾಳಿತ್ತನೂಜಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಳೆ ಎನ್ನುವಂತದ್ದು ಸಕಲ ಜೀವರಾಶಿಗಳಿಗೆ ಪ್ರಕೃತಿಯು ನೀಡಿದ ಒಂದು ವರವಾಗಿದೆ. ಮಳೆಯು ವಾತಾವರಣವನ್ನು ತಂಪಾಗಿಸುತ್ತದೆ ಮತ್ತು ದೂಳು ಮಾಲಿನ್ಯವನ್ನು ತೊಳೆದು ಹಾಕುತ್ತದೆ. ಮಳೆ ನೀರಿನಿಂದ ನದಿಗಳು, ಕೆರೆಗಳು ಹಾಗೂ ಭೂಮಿಯಲ್ಲಿರುವ ಜಲಮೂಲಗಳು ತುಂಬಿ ಹರಿಯುತ್ತದೆ. ಮಳೆಯು ಎಷ್ಟು ಉಪಯುಕ್ತವೋ ಹೆಚ್ಚು ಮಳೆ ಆದರೆ ವಿಕೋಪಗಳು ಮತ್ತು ಹಾನಿಗಳೂ ಸಂಭವಿಸಬಹುದು. ಶಾಲೆಯ ಶೈಕ್ಷಣಿಕ ವರ್ಷವು ಮಳೆಯ ಪ್ರಾರಂಭದೊಂದಿಗೆ ಶುರುವಾಗುತ್ತದೆ. ಮಕ್ಕಳು ಹೊಸ ಸಮವಸ್ತ್ರ, ಹೊಸ ಬ್ಯಾಗ್, ಹೊಸ ಚಪ್ಪಲಿ, ಹೊಸ ಛತ್ರಿ ಎಲ್ಲವೂ ಹೊಸತು. ಅದರ ಜೊತೆಗೆ ಮಳೆಯು ಮಕ್ಕಳನ್ನು ಬಹಳ ಪ್ರೀತಿಯಿಂದಲೇ ಸ್ವಾಗತಿಸುತ್ತದೆ.
ನಾನು ಸಣ್ಣದಿರುವಾಗ ಶಾಲೆಗೆ ಹೊರಡುವ ಮುನ್ನ ಅಪ್ಪ ಹೇಳುವಂತಹ ಮಾತು ಇಂದಿಗೂ ನೆನಪಿದೆ, “ಮಗಳೇ ಅಣ್ಣನ ಕೈ ಹಿಡಿದು ತೊರೆಯನ್ನು ದಾಟು ಕೆಳಗೆ ನೋಡಬೇಡ ರಭಸವಾಗಿ ಹರಿಯುತ್ತಿರುವ ನೀರು ತಲೆಸುತ್ತುವಂತೆ ಮಾಡುತ್ತದೆ”. ತಂಗಿಯರನ್ನು
ತೊರೆದಾಟಿಸುವ ಜವಾಬ್ದಾರಿ ಅಣ್ಣನದ್ದಾಗಿತ್ತು. ಒಂದೊಂದು ದಿನ ತೊರೆಯನ್ನು ದಾಟಿಸಲು ತೊರೆಯ ದಂಡೆಯ ಈ ತುದಿಗೆ ಒಬ್ಬರು ನಿಂತರೆ ಇನ್ನೊಂದು ತುದಿಗೆ ಮತ್ತೊಬ್ಬರು, ಮಧ್ಯದಲ್ಲಿ ಒಬ್ಬರು ಹೀಗೆ ತೊರೆದಾಟುವ ಸಂತೋಷ ಇಂದಿಗೂ ಮರೆಯಲಾರದಂತಹ ಒಂದು ಸುಂದರ ನೆನಪು. ಎತ್ತುಗಳ ಮೂಲಕ ಉಳುಮೆ ಮಾಡಿ ಬಿತ್ತನೆ ಮಾಡಿದ ಹಸಿರಿನ ಮಧ್ಯದ ಬದುವನ್ನು ದಾಟಿ, ಕಂಗು, ತೆಂಗುಗಳ ಸಿರಿ ಸಂಪತ್ತಿನ ನಡುವೆ ಸಾಲಿನುದ್ದಕ್ಕೂ ನಡೆದು ತೊರೆಯನ್ನು ದಾಟಿ ಗುಡ್ಡವನ್ನು ಏರಿಳಿದು ಶಾಲೆಯತ್ತ ಸಾಗುವ ನಮ್ಮ ಪ್ರಯಾಣ ಬಾಲ್ಯದ ಸುಂದರ ಅನುಭವವಾಗಿತ್ತು.
ಅಂದು ಎಷ್ಟೇ ಬಿರುಸಾದ ಗಾಳಿ ರಭಸವಾದ ಮಳೆ ಸುರಿದರು ನಾವು ಶಾಲೆಗೆ ಹೋಗಲೇ ಬೇಕಿತ್ತು. ಯಾರೂ ಶಾಲೆಗೆ ರಜೆಯನ್ನು ನೀಡುತ್ತಿರಲಿಲ್ಲ. “ಮಳೆಯ ರಜೆ” ಎನ್ನುವುದು ಅರಿವಿಗೆ ಬಾರದ ವಿಷಯವಾಗಿತ್ತು. ಜೋರಾದ ಮಳೆಗೆ ಮನೆಯಿಂದ ಶಾಲೆಗೆ ಹೋದ ಮಕ್ಕಳು ಹಿಂತಿರುಗಿ ಬರುವವರೆಗೆ ಬಾಗಿಲ ಮುಂದೆ ಕಾಯುತ್ತಿರುವ ಪೋಷಕರು. ಅಂದಿನ ಕಾಲಕ್ಕೆ
ಕೂಡು ಕುಟುಂಬಗಳೇ ಹೆಚ್ಚು. ಎಲ್ಲರೂ ಒಂದೇ ಮನೆಯಲ್ಲಿ. ನನ್ನ ಮಗ, ನಿನ್ನ ಮಗಳು, ಅನ್ನುವ ತಾರತಮ್ಯವಿಲ್ಲ. ಎಲ್ಲಾ ಮಕ್ಕಳು ನಮ್ಮ ಮನೆಯ ಮುತ್ತುಗಳು ಎನ್ನುವ ಭಾವನೆ. ಮಕ್ಕಳ ಜವಾಬ್ದಾರಿಯು ಎಲ್ಲಾ ಮನೆಯ ಸದಸ್ಯರದ್ದಾಗಿತ್ತು. ಮಕ್ಕಳು ಶಾಲೆಗೆ ತಲುಪಿ ಹಿಂದಿರುಗುವವರೆಗೂ ಎಲ್ಲರಿಗೂ
ಮಕ್ಕಳ ಬಗ್ಗೆ ಕಾಳಜಿಯಿರುತ್ತಿತ್ತು. ಮಳೆಗಾಲದಲ್ಲಿ ಶಾಲೆಯಿಂದ ಹಿಂದಿರುಗಿ ಸಂಜೆಯ ಹೊತ್ತಿಗೆ ಮನೆಗೆ ಬಂದಾಗ ಘಮಘಮ ಪರಿಮಳ ಮೂಗಿಗೆ ಹೊಡೆಯುತ್ತಿತ್ತು. ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ. ಅದನ್ನು ಸವಿಯುವ ಆ ಘಳಿಗೆ ಸುಂದರವಾಗಿತ್ತು. ಯಾವ ಕರಿದ ತಿಂಡಿಗೂ ಸರಿಸಾಟಿ ಇಲ್ಲದ ರುಚಿ. ಇದು ನಮ್ಮ ಕಾಲದ ಮಳೆಯ ಜೀವನ.
ಇಂದು ಬೆಳ್ಳಂಬೆಳಗ್ಗೆ ಮನೆಯ ಮುಂಭಾಗದಲ್ಲಿ ಬಂದು ಹಾರ್ನ್ ಹೊಡೆಯುವ ಶಾಲಾ ವಾಹನಗಳು. ಅದನ್ನು ಹತ್ತಿ ಶಾಲೆಯಂಗಳದಲ್ಲಿ ಇಳಿಯುವ ಇಂದಿನ ಮಕ್ಕಳು. ಒಂದೇ ಒಂದು ಮಳೆ ಹನಿ ಮಗುವಿನ ತಲೆಗೆ ತಾಗದಂತೆ ಮುಂಜಾಗೃತೆ. ಮಕ್ಕಳಿಗೆ ಜ್ವರ, ಶೀತ, ಕೆಮ್ಮು ಬರಬಹುದು ಹಾಗಾಗಿ ಬಿಸಿ ಬಿಸಿ ಆಹಾರ ಮತ್ತು ನೀರನ್ನು ಸೇವಿಸು ಎಂದೆನುತ ಕೈಯಲ್ಲಿ ಒಂದು ಬುತ್ತಿಯನ್ನು ಕಟ್ಟಿ ಕೊಟ್ಟು ಮತ್ತೊಂದು ಕಡೆ ಪುಸ್ತಕದ ಭಾರವನ್ನು ಮಕ್ಕಳ ಹೆಗಲಿಗೆ ಹೊರಿಸಿ ಕಳುಹಿಸುವ ತಾಯಂದಿರು. ಇದನ್ನು ಕಾಳಜಿ ಎನ್ನಬೇಕೆ ಅಥವಾ ಬದಲಾದ ಕಾಲದ ಒತ್ತಡ ಎನ್ನಬೇಕೇ ಒಂದೂ ಅರಿಯೆನು.
ಎರಡು ದಿವಸ ನಿರಂತರ ಮಳೆ ಸುರಿದರೆ ಸಾಕು.. “ನಿರಂತರ ಸುರಿಯುತ್ತಿರುವ ಮಳೆಯ ಕಾರಣದಿಂದ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ“. ಎನ್ನುವ ಆದೇಶ ಹೊರ ಬೀಳುತ್ತದೆ. ವಿಧಿ ಇಲ್ಲದೆ ರಜೆ ಕೊಡಬೇಕಾದ ಪರಿಸ್ಥಿತಿ ಇಂದಿನದು. ಅಭಿವೃದ್ಧಿಯ ನೆಪದಲ್ಲಿ ಗುಡ್ಡ ಬೆಟ್ಟಗಳು ಸಮತಟ್ಟಾಗಿದೆ. ನೇರವಾದ ರಸ್ತೆಗಳು ಕಾಂಕ್ರೀಟೀಕರಣಗೊಂಡಿದೆ. ಹರಿದು ಹೋಗುವ ಹಳ್ಳ ತೋಡುಗಳು ಒತ್ತುವರಿಯಾಗಿದೆ. ಹರಿದು ಹೋಗುವ ನೀರಿಗೆ, ಜಾಗ ಇಲ್ಲದೆ ಮನೆ ಅಂಗಳ ತುಂಬುವ ಪರಿಸ್ಥಿತಿಯನ್ನು ನಾವೇ ನಿರ್ಮಾಣ ಮಾಡಿ ಆಗಿದೆ. ಮಕ್ಕಳಿಗೆ ರಜೆ ನೀಡದೆ ಇನ್ನೇನು ಮಾಡಬೇಕಾದೀತು...!!
ಮಳೆರಜೆಯನ್ನು ಮಕ್ಕಳು ಯಾವ ರೀತಿಯಾಗಿ ಸ್ವೀಕರಿಸುತ್ತಾರೆ ಎನ್ನುವಂಥದ್ದು ಮುಖ್ಯ. ಕೆಲಸಕ್ಕೆ ತೆರಳುವ ಪೋಷಕರಿಗೆ ಈ ಮಳೆ ರಜೆ ಬಿಸಿ ತುಪ್ಪದಂತಾಗುತ್ತದೆ. ಮಕ್ಕಳನ್ನು ಮನೆಯಲ್ಲಿ ಯಾರ ಉಪಸ್ಥಿತಿಯಲ್ಲಿ ಬಿಡಬೇಕು? ಅವರನ್ನು ಬಿಟ್ಟು ಹೋದರೆ ಏನು ಮಾಡಿಯಾರು? ಸುಮ್ಮನೆ ಕಾಲಹರಣ ಮಾಡಿದರೆ ಏನು ಮಾಡುವುದು? ಇಂತಹದೆಲ್ಲಾ ಪ್ರಶ್ನೆಗಳು ಅವರಲ್ಲಿ ಮೂಡುತ್ತದೆ. ರಜೆ ಮಾಡಿ ಮಕ್ಕಳ ಜೊತೆ ಇರುವೆನೆಂದರೆ ದೈನಂದಿನ ಹೊಟ್ಟೆ ಹೊರೆಯುವ ಒತ್ತಡ. ಯಾಕಾದರೂ ರಜೆ ಕೊಟ್ಟರಪ್ಪ ಎನ್ನುವಂತಹ ವೇದನೆ ಹೆತ್ತವರದ್ದು. ಕೆಲವು ಹೆತ್ತವರು ರಜೆ ಕೊಡದಿದ್ದರೆ ಈ ಮಳೆಗೆ ಶಾಲೆ ಬೇಕಿತ್ತಾ ಎನ್ನುವ ಮಾತು. ರಜೆ ಕೊಡದೆ ಇದ್ದರೆ “ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ“ ಎನ್ನುವ ಹೆತ್ತವರ ಮಾತುಗಳು, “ಯಾಕೆ ರಜೆ ಮಳೆಯೇ ಇಲ್ಲ“ ಎನ್ನುವ ದ್ವಂದ್ವದ ಮಾತುಗಳು. ಆದರೆ ಶಿಕ್ಷಕರ ಕಷ್ಟವನ್ನು ಅರಿಯುವವರಾರು..?. ಒಂದೆಡೆ ಪಾಠ ಪ್ರವಚನಗಳನ್ನು ಮಾಡಬೇಕು, ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡಬೇಕು, ಮತ್ತೊಂದೆಡೆ ಚಟುವಟಿಕೆಗಳನ್ನು ನಿಗದಿತ ಸಮಯದೊಳಗೆ ಮುಗಿಸಬೇಕು ಎನ್ನುವ ಯೋಚನೆಗಳು ಭಾರವಾಗುತ್ತಾ ಸಾಗುತ್ತದೆ.
ರಜೆ ಎಂದಾಕ್ಷಣ ಶಿಕ್ಷಕರು ವಿಚಲಿತರಾಗುತ್ತಾರೆ. ಪಾಠ ಪ್ರವಚನಗಳನ್ನೆಲ್ಲಾ ಯಾವಾಗ ಪೂರ್ಣಗೊಳಿಸುವುದು ಎನ್ನುವ ಆಲೋಚನೆ. ಮುಂದೊಂದು ದಿನ ಬರುವ "ಸುತ್ತೋಲೆ.“ ಮಳೆಯ ರಜೆಯನ್ನು ಶನಿವಾರ ಮತ್ತು ಮುಂದಿನ ರಜಾದಿನಗಳಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಶೈಕ್ಷಣಿಕ ಕರ್ತವ್ಯದ ಅವಧಿಗಳನ್ನು ಪೂರ್ಣ ಗೊಳಿಸುವುದು“ ಈ ಮಾಹಿತಿಯು ಶಿಕ್ಷಕರಿಗೆ ಸಂತೋಷ ನೀಡಿದರೂ ಮಕ್ಕಳ ಚಿಂತನೆ ಬೇರೆಯಾಗಿರುತ್ತದೆ. ಶನಿವಾರ ಎನ್ನುವುದು ಮಕ್ಕಳಿಗೆ ಖುಷಿಯ ದಿನ. ಅರ್ಧ ದಿನ ಮಾತ್ರ ಶಾಲೆ ಎನ್ನುವಂತದ್ದು. ಅದು ಪೂರ್ಣ ದಿನ ಅಂದಾಗ ಮಕ್ಕಳು ಅದಕ್ಕೆ ಹೊಂದಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ. ಪಾಠ ಪ್ರವಚನ ಕೇಳುವ ತಾಳ್ಮೆ ಇರುವುದಿಲ್ಲ. ಅದರ ಜೊತೆಗೆ ಮಕ್ಕಳಿಗೆ ಬೇರೆ ಚಟುವಟಿಕೆಗಳನ್ನು ಮಾಡಿದರೂ ಅದರಲ್ಲಿ ಭಾಗವಹಿಸುವ ಉತ್ಸಾಹವನ್ನು ತೋರಿಸುವ ಮಕ್ಕಳು ವಿರಳ. ಇದು ಶಿಕ್ಷಕರ ಮತ್ತು ಮಕ್ಕಳ ಪಾಡು.
ನಾವು ಆಲೋಚನೆ ಮಾಡಬೇಕಾದದ್ದು ಇಷ್ಟೇ.. ಮಳೆಯ ರಜೆಯು ಮಳೆಗೆ ಸೀಮಿತವಾಗದೆ ಆ ದಿನದಲ್ಲಿ ಯಾವ ಕಾರ್ಯವನ್ನು ಮಾಡಲು ಸಾಧ್ಯವೋ ಅದನ್ನು ಮಾಡಬೇಕು. ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ರಜೆಯನ್ನು ಸರಕಾರ ಘೋಷಣೆ ಮಾಡಿರುತ್ತದೆ. ರಜೆಯನ್ನು ವಿನಿಯೋಗಿಸುವ ಕೆಲಸವು ಮಕ್ಕಳ ಜವಾಬ್ದಾರಿ. ಅದನ್ನು ಅರಿಯುವಂತೆ ಮಾಡುವ ಕೆಲಸ ಪೋಷಕರು ಮತ್ತು ಶಿಕ್ಷಕರದ್ದಾಗಿರುತ್ತದೆ. ಮಕ್ಕಳಿಗೆ ಒಳಾಂಗಣ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಮಕ್ಕಳು ಸಮಯವನ್ನು ಸದ್ವಿನಿಯೋಗ ಮಾಡುವಂತೆ ನೋಡಿಕೊಳ್ಳಬೇಕು. ಜೀವನ ಕೌಶಲ್ಯದ ಬಗ್ಗೆ ಅರಿವನ್ನು ನೀಡಬೇಕು. ಇಂತಹ ಕಾರ್ಯಗಳನ್ನು ಮಾಡಿದ್ದಾದಲ್ಲಿ ಮಳೆರಜೆಯು ಇನ್ನಷ್ಟು ಸಾರ್ಥಕವೆನಿಸುವುದು.
ಅತಿಥಿ ಶಿಕ್ಷಕಿ
ದ. ಕ. ಜಿ. ಪಂ. ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ, ತಾಳಿತ್ತನೂಜಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************