-->
ಜೀವನ ಸಂಭ್ರಮ : ಸಂಚಿಕೆ - 201

ಜೀವನ ಸಂಭ್ರಮ : ಸಂಚಿಕೆ - 201

ಜೀವನ ಸಂಭ್ರಮ : ಸಂಚಿಕೆ - 201
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
             
ಮಕ್ಕಳೇ... ಇಂದು ಸಂಗ್ರಹದ ಬಗ್ಗೆ ತಿಳಿದುಕೊಳ್ಳೋಣ. 

ಒಂದೂರಿನಲ್ಲಿ ಒಬ್ಬ ಭಿಕ್ಷುಕನಂತೆ ಬದುಕಿದ್ದನು. ಆತ ನಿಜವಾದ ಬಿಕ್ಷುಕನಲ್ಲ. ಸಾಮಾನ್ಯರಂತೆ ಬದುಕುವ ಎಲ್ಲವೂ ಇತ್ತು. ಆತನ ಜಮೀನಿನಲ್ಲಿ ಎಷ್ಟೇ ಬೆಳೆಯಲಿ ಸಾಕಾಯ್ತು ಅಂತ ಒಮ್ಮೆಯೂ ಹೇಳಲಿಲ್ಲ. ಮನೆಯಲ್ಲಿ ಅಡುಗೆ ಮಾಡುವುದು ಕೂಡ ಕಡಿಮೆ. ಬೇರೆಯವರ ಮನೆಗೆ ಹೋಗುತ್ತಿದ್ದನು. ಕಾಫಿ ಕೊಡಿ , ಚಹಾ ಕೊಡಿ ಅನ್ನುತ್ತಿದ್ದನು. ಹೀಗೆ ಊರಲ್ಲೆಲ್ಲಾ ತಿರುಗಾಡುತ್ತಿದ್ದನು. 

ಹಬ್ಬ ಹರಿದಿನ ಬಂದರೆ ಊರಲ್ಲೆಲ್ಲಾ ತಿರುಗಾಡಿ ಯಾರದಾದರೂ ಒಬ್ಬರ ಮನೆಯಲ್ಲಿ ಕೂರುತ್ತಿದ್ದನು. ಊಟ ಮಾಡುವವರೆಗೆ ಮನೆ ಬಿಟ್ಟು ಏಳುತ್ತಿರಲಿಲ್ಲ. ಊರಿನಲ್ಲಿ ಮದುವೆ ಮುಂತಾದ ಕಾರ್ಯ ಇದ್ದರೆ ತನ್ನ ಮನೆ ಕಡೆ ತಿಗುಗಿಯೂ ನೋಡುತ್ತಿರಲಿಲ್ಲ. ಊರಿನ ವಿವಾಹಕ್ಕೆ ತಪ್ಪಿಸಿಕೊಳ್ಳುತ್ತಿರಲಿಲ್ಲ. 

ಒಂದು ದಿನವೂ ಚೆನ್ನಾಗಿರುವ ಬಟ್ಟೆ ತೊಡಲಿಲ್ಲ. ಒಂದು ದಿನವೂ ಯಾರನ್ನಾದರೂ ಕರೆದು ಅನ್ನ ನೀಡಲಿಲ್ಲ. ಒಂದು ದಿನವೂ ಮನೆಯಲ್ಲಿ ಸಂತೋಷವಾಗಿ ಊಟ ಮಾಡಲಿಲ್ಲ. ಲಗ್ನವೂ ಆಗಿರಲಿಲ್ಲ. ಹಾಗಾಗಿ ಮಕ್ಕಳಿರಲಿಲ್ಲ. ಏಕೆಂದರೆ ಸುಮ್ಮನೆ ಖರ್ಚು ಏತಕ್ಕೆ ಅಂತ. ಯಾವ ಮಟ್ಟದಲ್ಲಿ ಚಿಂತಿಸುತ್ತಿದ್ದ ಅಂದರೆ ಒಂದು ಕಸಪೊರಕೆ ತಂದು, ಕಸ ಹೊಡೆಯಲು ಖರ್ಚು ಏಕೆ ಮಾಡಬೇಕು ಅಂತ ಕಸಪೊರಕೆಯನ್ನೂ ತಂದಿರಲಿಲ್ಲ. ಮನೆ ಹೊಲಸು ಹೊಲಸಾಗಿತ್ತು. ಪಾತ್ರೆಗಳನ್ನು ನೀರಿನಿಂದ ಮಾತ್ರ ತೊಳೆಯುತ್ತಿದ್ದನು. ಬಟ್ಟೆ ನೀರಿನಲ್ಲಿ ಜಾಡಿಸಿ ಹಾಕಿಕೊಳ್ಳುತ್ತಿದ್ದನು. ಹರಿದಿದ್ದರೂ ಹೊಸ ಬಟ್ಟೆ ತೆಗೆದುಕೊಳ್ಳುವ ಮನಸ್ಸಿಲ್ಲ. ಯಾಕೆ ಸುಮ್ಮನೆ ಹಣ ಖರ್ಚು ಅಂತ. 

ಈತನ ಮನೆ ಹೇಗಿತ್ತು ಅಂದರೆ ಒಂದು ಅಂತಸ್ತಿನ ಮನೆ. ಈತ ಮೇಲಿನ ಮನೆಯಲ್ಲಿ ವಾಸವಾಗಿದ್ದನು. ನೆಲಮನೆಯಲ್ಲಿ ಮುತ್ತು, ರತ್ನ ಸಂಗ್ರಹಿಸಿದ್ದನು. ಮೇಲೆ ಸಾದಾಮನೆ. ಹಾಳಾದಂತೆ ಇತ್ತು. ನೆಲಮನೆಯಲ್ಲಿ ಸಂಪತ್ತೆ ಸಂಪತ್ತು. ಇಷ್ಟೆಲ್ಲ ಇದ್ದರೂ ಒಂದು ದಿನವಾದರೂ ಬಳಸದೆ ಸಂಗ್ರಹಿಸಿದ್ದ. ಸುಮ್ಮನೆ ಯಾಕೆ ಖರ್ಚು ಮಾಡುವುದು ಎಂದು ವಿಚಾರ ಮಾಡುತ್ತಿದ್ದನು. ರತ್ನ ಕೈಯಲ್ಲಿ ಹಿಡಿದು ನೋಡಿ ಅಲ್ಲೇ ಇಡುತ್ತಿದ್ದನು. ಕೆಳಗೆ ಬಂಗಾರ, ಮುತ್ತು, ರತ್ನ. ಮೇಲೆ ಬಡವ. 

ಮೇಲಿನ ಮನೆ ಹೇಗೆ ಎಂದರೆ ಕಳ್ಳ ಸಹಿತ ನೋಡಬಾರದು ಹಾಗೆ ಇಟ್ಟಿದ್ದನು. ವಯಸ್ಸಾಯಿತು ಹಾಗೆ 80 ವರ್ಷ ಬದುಕಿದ್ದಾನೆ. ಭಿಕ್ಷೆ ಬೇಡಿಕೊಂಡು ಬದುಕಿದ್ದಾನೆ. ಒಂದು ದಿನ ಪ್ರಾಣಬಿಟ್ಟ. ಧೂಳು ದೂಳಾದ ಮನೆ. ಹರಕು ಚಾಪೆ ಮೇಲೆ ಸತ್ತಿದ್ದಾನೆ. ಸುತ್ತ ಮುತ್ತಿನವರು ಪಾಪ 80 ವರ್ಷ ಬದುಕಿದ್ದ, ನಮ್ಮ ಮನೆ ಅನ್ನ ತಿಂದು ಬದುಕಿದ್ದ, ಇನ್ನೇನು ಅಂತಿಮ ಕಾರ್ಯ ಮಾಡೋಣ ಅಂತ ಸಮೀಪದ ಮನೆಯವರು ಬಂದರು. ಬಾಗಿಲು ತೆರೆದರು. ಬರಿ ದೂಳು ಧೂಳು. ಹರಕು ಚಾಪೆ, ಒಂದು ಚೊಂಬು, ಅಪರೂಪಕ್ಕೆ ಅಡುಗೆ ಮಾಡುತ್ತಿದ್ದ ಕೆಲವೇ ಪಾತ್ರೆಗಳು, ಅಷ್ಟು ಬಿಟ್ಟರೆ ಬೇರೇನು ಇರಲಿಲ್ಲ. ಬಂದವರು ಮನೆಯಲ್ಲೆಲ್ಲ, ಮನೆ ಒಳಗೆಲ್ಲ ಓಡಾಡುವಾಗ ಒಂದು ಮೂಲೆಯಲ್ಲಿ ಕೆಳಗೆ ಹೋಗಲು ದಾರಿ ಇದ್ದುದನ್ನು ನೋಡಿದರು. ಎಲ್ಲರಿಗೂ ಕುತೂಹಲ ಏನು ಅಂತ ನೋಡಲು ಕೆಳ ಮನೆಗೆ ಹೋದರು. ದೀಪ ಹಚ್ಚಿದರೆ, ಎಲ್ಲಾ ಮುತ್ತು, ರತ್ನಗಳು, ಬಂಗಾರ ಹೊಳೆಯುತ್ತಿತ್ತು. ಅಂದರು, ಏನು ಸಂಗ್ರಹ?. ಇದು ಬರೀ ಸಂಗ್ರಹ.

ಈಗಲೂ ಕೆಲವರು ಬೇರೆ ಬೇರೆ ಬ್ಯಾಂಕಿನಲ್ಲಿ, ವಿದೇಶಿ ಬ್ಯಾಂಕಿನಲ್ಲಿ ಸಂಗ್ರಹಿಸಿದ್ದಾರೆ. ಇಡುವುದರಾಗಿನ ಮಜಾ ಖರ್ಚು ಮಾಡುವಾಗ ಇರುವುದಿಲ್ಲ. ನಮ್ಮಲ್ಲಿ ಕೆಲವರು ಇದ್ದಾರೆ. ಒಬ್ಬ, ಇನ್ನೊಬ್ಬ ಗೆಳೆಯನಿಗೆ ಹೇಳುತ್ತಿದ್ದ. ನಾನು ಒಂದು ಜೊತೆ ಬೂಟು ತಂದಿದ್ದೇನೆ. ತುಂಬಾ ಚೆನ್ನಾಗಿದೆ ಅಂದ. ಎಲ್ಲಿ ಅಂದರೆ, ಕಪಾಟಿನಲ್ಲಿ ಇಟ್ಟಿದ್ದೇನೆ ಅಂದನು. ಎಷ್ಟು ವರ್ಷ ಆಯ್ತು?. ಎಂದು ಸ್ನೇಹಿತ ಕೇಳಿದೆ. 4 ವರ್ಷ ಆಯ್ತು ಅಂದನು. ಈಗ ಹೇಳಿ, ಬೂಟು ಸಹಿತ ಕಪಾಟಿನಲ್ಲಿ ಇರುವ ಮನುಷ್ಯ... ಇನ್ನು ಸಂತೋಷದಿಂದ ಹೇಗೆ ಬದುಕುತ್ತಾನೆ. ಬೂಟಿರುವುದು ಏತಕ್ಕೆ? ಹಾಕಿಕೊಳ್ಳುವುದಕ್ಕೆ. ಸಂಪತ್ತು ಇರುವುದು ಏತಕ್ಕೆ? ಬದುಕನ್ನು ಶೃಂಗಾರ ಮಾಡುವುದಕ್ಕೆ. ಸಂಗ್ರಹಿಸುವುದು, ಬದುಕನ್ನು ಕಟ್ಟೋದಕ್ಕೆ. ಆದರೆ ಮರೆತಿದ್ದೇವೆ. ಹಣ, ವಸ್ತು ಎಲ್ಲ ಇರುವುದು ಏತಕ್ಕೆ? ಸಂಪತ್ತಿರುವುದೇ ಏತಕ್ಕೆ?. ವಸ್ತು ಒಡವೆಗಳು ಇರುವುದು ಏತಕ್ಕೆ?. ಸಂಗ್ರಹಕಲ್ಲ. ಬಳಸಿ ಆನಂದ ಪಡುವುದಕ್ಕೆ. 

ಒಬ್ಬ ಪಂಡಿತ ಇದ್ದಾನೆ. ಆತ 60, 70 ವರ್ಷ ಓದಿದ್ದಾನೆ. ಎಲ್ಲಾ ತಲೆಯಲ್ಲಿ ತುಂಬಿದೆ. ಆದರೆ ಒಂದೇ ಒಂದು ದಿನ ಒಬ್ಬರಿಗೂ ಒಂದೂ ಮಾತು ಹೇಳಲಿಲ್ಲ. ಸಾಯುವಾಗ ಒಂದು ಪಟ್ಟಿ ಮಾಡಿಟ್ಟು ಹೋದ. ನಾನು ಇಷ್ಟು ಪುಸ್ತಕ ಓದಿದ್ದೇನೆ. ಸಾವಿರ ಸಾವಿರ ಪುಸ್ತಕ ಓದಿದ್ದೇನೆ. ಒಂದು ದಿನ ಸಹಿತ ಇಂಥ ಪುಸ್ತಕದಲ್ಲಿ ಒಂದು ಸುಂದರ ಮಾತಿದೆ ಅಂತ ಹೇಳಲಿಲ್ಲ. ಒಂದು ಹುಡುಗನಿಗೂ ಕಲಿಸಲಿಲ್ಲ. ಬಹಳ ದೊಡ್ಡ ವಿದ್ವಾಂಸ. ಆದರೆ ಮಕ್ಕಳಿಗೆ ಕಲಿಸಬೇಕಲ್ಲ. ನಾವೆಲ್ಲರೂ ಸಿರಿವಂತರೇ, ಸಂಗ್ರಹದಿಂದ. ಒಂದನ್ನು ತೆಗೆದು ಇಡಲಾರದಷ್ಟು ಮುಳುಗಿದ್ದೇವೆ. 

ಒಂದು ಪುರಾಣ ಕಥೆ. ದೇವರು, ಮನುಷ್ಯ ಪ್ರಾಣಿ ಪಕ್ಷ ಎಲ್ಲ ಸೃಷ್ಟಿಸಿದ. ನಂತರ ಎಲ್ಲರಿಗೂ ಅಮೃತ ನೀಡುತ್ತಾ ಬಂದನು. ಮನುಷ್ಯನಿಗೆ ಕಳಸದಲ್ಲಿ ಮುಕ್ಕಾಲು ಭಾಗ ನೀಡಿದ. ಉಳಿದುದ್ದನ್ನು ಪ್ರಾಣಿಪಕ್ಷಿಗಳಿಗೆ ನೀಡಿದ. ಪ್ರಾಣಿ ಪಕ್ಷಿಗಳು ಸಾಕು ಎಂದವು. ಹಾಗಾಗಿ ಅವು ಇದುವರೆಗೂ ತೃಪ್ತಿಯಿಂದ ಬದುಕುತ್ತಾ ಇದ್ದಾವೆ. ಮನುಷ್ಯ ತುಂಬಿದ ಕಡೆ ನೋಡಲಿಲ್ಲ. ಹಾಗಾಗಿ ಇನ್ನೂ ಉಳಿದಿದೆ, ಅದನ್ನು ತುಂಬಬೇಕು ಅನ್ನುವ ಬಯಕೆ ಇನ್ನೂ ಇರುವುದರಿಂದ, ಆತ ಅತೃಪ್ತನಾಗಿದ್ದಾನೆ. 

ಮಕ್ಕಳೇ ನಾವು ಸಂಗ್ರಹಕ್ಕಾಗಿ ಬಂದವರಲ್ಲ. ಅನುಭವಿಸಲು ಬಂದವರು. ಅನುಭವಿಸಲು ಬೇಕಾಗುವಷ್ಟು ಸಂಗ್ರಹಿಸಿ ಅನುಭವಿಸಿ ಬಿಡಬೇಕು. ಆಗ ಸಂಗ್ರಹಿಸಿದ್ದು ಸಾರ್ಥಕ. ಅನುಭವಿಸದೆ ಇದ್ದರೆ ಸಂಗ್ರಹಿಸಿದ್ದು ವ್ಯರ್ಥ. ಸಂಗ್ರಹ ಬದುಕಲ್ಲ. ಅನುಭವಿಸುವುದು ಬದುಕು. ಅಲ್ಲವೇ ಮಕ್ಕಳೆ...?
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************





Ads on article

Advertise in articles 1

advertising articles 2

Advertise under the article