-->
ಮಕ್ಕಳಿಗೆ ರಜೆಯ ಓದು : ಸಂಚಿಕೆ - 11

ಮಕ್ಕಳಿಗೆ ರಜೆಯ ಓದು : ಸಂಚಿಕೆ - 11

ಮಕ್ಕಳಿಗೆ ರಜೆಯ ಓದು
ಸಂಚಿಕೆ - 11
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815

                  
ನೀವು ಬಾಲ್ಯದಲ್ಲಿ ಬಾಲಮಿತ್ರ, ಚಂದಮಾಮ, ಬೊಂಬೆಮನೆಯಂತಹ ಪತ್ರಿಕೆಗಳನ್ನು ಓದಿರುವಿರಾದರೆ ನಿಮಗೆ ವಿಕ್ರಮ ಮತ್ತು ಬೇತಾಳ ಕಥೆಗಳ ಪರಿಚಯ ಇದ್ದೇ ಇರುತ್ತದೆ. ವಿಕ್ರಮಾದಿತ್ಯ ಅಥವಾ ವಿಕ್ರಮ ಎಂಬ ರಾಜನು ಸ್ಮಶಾನದ ಮರವೊಂದರಲ್ಲಿ ನೇತಾಡುತ್ತಿರುವ ಬೇತಾಳ (ಆತ್ಮ, ಪಿಶಾಚಿ) ವನ್ನು ಹೆಡೆಮುರಿಕಟ್ಟಿ ತೆಗೆದುಕೊಂಡು ಹೋಗುವಾಗ ಹೊತ್ತು ಕಳೆಯಲು ಬೇತಾಳವು ಮಾತನಾಡಲು ಶುರು ಮಾಡಿ ಕಥೆ ಹೇಳುತ್ತದೆ. ವಿಕ್ರಮನೇಕೆ ಈ ಬೇತಾಳವನ್ನು ತೆಗೆದುಕೊಂಡು ಹೋಗುತ್ತಾನೆ, ಯಾರ ಬಳಿ ತೆಗೆದುಕೊಂಡು ಹೋಗುವಂತೆ ಆಜ್ಞೆಯಾಗಿದೆ? ಎನ್ನುವುದನ್ನು ತಿಳಿದುಕೊಳ್ಳಲು ನೀವು ಇದರ ಹಿಂದಿನ ಕಥೆಯನ್ನು ಅರಿಯಬೇಕು.

ವಿಕ್ರಮಸೇನ, ತ್ರಿವಿಕ್ರಮಸೇನ, ವಿಕ್ರಮಾದಿತ್ಯ ಮುಂತಾದ ನಾಮಧೇಯವನ್ನು ಹೊಂದಿದ್ದ ವಿಕ್ರಮ ಎಂಬ ವ್ಯಕ್ತಿ ಗೋದಾವರಿ ನದಿ ತೀರದ ಪ್ರತಿಷ್ಟಾನ ಎಂಬ ರಾಜ್ಯದ ರಾಜನಾಗಿದ್ದ. ಒಮ್ಮೆ ಆತನ ದರ್ಬಾರಿಗೆ ಕಾಂತಿಶೀಲನೆಂಬ (ಕ್ಷಾಂತಿಶೀಲ) ಮುನಿಯು ಆಗಮಿಸಿ ಆತನನ್ನು ಹರಸಿ ಒಂದು ಹಣ್ಣನ್ನು ಕೊಟ್ಟು ಹೋಗುತ್ತಾನೆ. ರಾಜನು ಆ ಹಣ್ಣನ್ನು ತಿನ್ನದೇ ತನ್ನ ಮಂತ್ರಿಗೆ ನೀಡುತ್ತಾನೆ. ಮಂತ್ರಿಯೂ ಅದನ್ನು ತಿನ್ನದೇ ಒಂದು ಕೋಣೆಯಲ್ಲಿ ಇರಿಸುತ್ತಾನೆ. ಪ್ರತೀ ದಿನ ಮುನಿ ಬಂದು ಹಣ್ಣನ್ನು ರಾಜನಿಗೆ ನೀಡುತ್ತಲೇ ಇರುತ್ತಾನೆ. ಆದರೆ ಒಂದು ದಿನ ಆ ಮುನಿಯು ಹಣ್ಣನ್ನು ನೀಡುವಾಗ ಅಲ್ಲಿಗೆ ಒಂದು ಮಂಗ ಬರುತ್ತದೆ. ರಾಜನು ಆ ಹಣ್ಣನ್ನು ಆ ಮಂಗನಿಗೆ ಕೊಟ್ಟು ಬಿಡುತ್ತಾನೆ. ಮಂಗವು ಆ ಹಣ್ಣನು ತಿನ್ನುವಾಗ ಅದರೊಳಗಿನಿಂದ ಒಂದು ಅಮೂಲ್ಯವಾದ ರತ್ನವು ಕೆಳಗೆ ಬೀಳುತ್ತದೆ. ಇದನ್ನು ಕಂಡು ಚಕಿತನಾದ ವಿಕ್ರಮನು ತನ್ನ ಮಂತ್ರಿಯ ಬಳಿ ಹಿಂದೆ ನೀಡಿದ ಹಣ್ಣುಗಳ ಬಗ್ಗೆ ಕೇಳುತ್ತಾನೆ. ಆತ ರಾಜನನ್ನು ಹಣ್ಣು ಇರಿಸಿದ ಕೋಣೆ ಬಳಿ ಕರೆದುಕೊಂಡು ಹೋದಾಗ ಎಲ್ಲಾ ಹಣ್ಣುಗಳು ಕೊಳೆತು ರತ್ನಗಳು ಮಾತ್ರ ಹೊಳೆಯುತ್ತಿದ್ದವು.

ರಾಜನಿಗೆ ಈ ಅಚ್ಚರಿಯ ಜೊತೆ ಮುನಿ ತನ್ನಿಂದ ಏನು ಬಯಸುತ್ತಿದ್ದಾನೆ? ಎನ್ನುವ ಕುತೂಹಲ ಕಾಡತೊಡಗುತ್ತದೆ. ಮರುದಿನವೂ ಎಂದಿನಂತೆ ಮುನಿಯು ರಾಜನ ದರ್ಬಾರಿಗೆ ಬಂದಾಗ ಆತ ಹೇಳುತ್ತಾನೆ “ನನಗೆ ಒಂದು ಸಿದ್ಧಿ ಸಾಧನೆಗಾಗಿ ಒಬ್ಬ ವೀರನ ಅಗತ್ಯವಿದೆ. ತಾವು ನನಗೆ ಸಹಾಯ ಮಾಡುವಿರೆಂಬ ಆಶಾಭಾವನೆ ನನ್ನದು” ವಿಕ್ರಮನು ಮುನಿಯ ಮಾತಿಗೆ ಸಮ್ಮತಿ ತೋರಿಸುತ್ತಾನೆ. ಮುಂದಿನ ಚತುರ್ದರ್ಶಿಯ ದಿನ ವಿಕ್ರಮನು ಮುನಿಯು ಹೇಳಿದಂತೆ ನಗರದಿಂದ ಇಪ್ಪತ್ತು ಮೈಲಿ ದೂರದ ಸ್ಮಶಾನಕ್ಕೆ ಹೋಗುತ್ತಾನೆ. ರಾಜನನ್ನು ಕಂಡ ಮುನಿಯು “ಅಯ್ಯಾ ರಾಜನೇ, ನೀನು ಈಗ ದಕ್ಷಿಣ ದಿಕ್ಕಿಗೆ ಹೋದರೆ ಅಲ್ಲಿ ಸ್ಮಶಾನವೊಂದರಲ್ಲಿ ಮುತ್ತುಗದ ಮರ ಕಾಣಿಸುತ್ತದೆ. ಆ ಮರದ ಕೊಂಬೆಯ ಮೇಲೆ ಹೆಣವೊಂದು ತಲೆ ಕೆಳಗಾಗಿ ನೇತಾಡುತ್ತಿರುತ್ತದೆ. ಅದನ್ನು ನೀನು ನನಗೆ ತಂದುಕೊಡಬೇಕು” ಎನ್ನುತ್ತಾನೆ. 

ವಿಕ್ರಮನು ಮುನಿಯ ಮಾತಿನಂತೆ ಆ ಸ್ಥಳಕ್ಕೆ ಹೋಗಿ ಹೆಣವನ್ನು ಮರದಿಂದ ಇಳಿಸಿ ಬೆನ್ನಿಗೆ ಹಾಕಿ ತೆಗೆದುಕೊಂಡು ಹೋಗುವಾಗ ಅದು ಮೌನ ಮುರಿದು ರಾಜನಿಗೆ ಕಥೆ ಹೇಳಲು ಪ್ರಾರಂಭಿಸುತ್ತದೆ. ಆದರೆ ಕಥೆ ಹೇಳುವ ಸಮಯದಲ್ಲಿ ರಾಜನು ಒಂದೇ ಒಂದು ಮಾತನ್ನೂ ಆಡಬಾರದು ಎನ್ನುವ ನಿಬಂಧನೆಯನ್ನೂ ಹಾಕುತ್ತದೆ. ರಾಜನು ಆ ಮಾತಿಗೆ ಒಪ್ಪುತ್ತಾನೆ. ದಾರಿಯುದ್ದಕ್ಕೂ ಆ ಬೇತಾಳ ಸೊಗಸಾದ ಕಥೆಯ ಮೂಲಕ ರಾಜನನ್ನು ರಂಜಿಸುತ್ತದೆ. ಆದರೆ ಕಥೆಯು ಅಂತಿಮ ಹಂತಕ್ಕೆ ಬರುವಾಗ ಮಾತ್ರ ಹೇಳುವುದನ್ನು ನಿಲ್ಲಿಸಿ ರಾಜನ ಬಳಿ ಅದು ಪ್ರಶ್ನೆಯನ್ನು ಕೇಳುತ್ತದೆ. “ನೀನು ಬುದ್ಧಿವಂತನೇ ಆಗಿದ್ದರೆ ನನ್ನ ಪ್ರಶ್ನೆಗೆ ಉತ್ತರ ನೀಡು, ಇಲ್ಲವಾದಲ್ಲಿ ನಿನ್ನ ತಲೆಯು ಸಿಡಿದು ಸಾವಿರ ಹೋಳಾಗುವುದು” ಎಂದು ಆಜ್ಞೆ ಮಾಡುತ್ತದೆ. ವಿಕ್ರಮನು ಆ ಬೇತಾಳನಿಗೆ ಪ್ರಾರಂಭದಲ್ಲಿ ನೀಡಿದ ಮಾತನ್ನು ಮರೆತು ಉತ್ತರ ನೀಡುತ್ತಾನೆ. ಉತ್ತರ ನೀಡಿದ ಕೂಡಲೇ ಕೊಟ್ಟ ಮಾತು ತಪ್ಪಿದಂತಾಗಿ ಬೇತಾಳವು ಹಾರಿ ಹೋಗಿ ಮತ್ತೆ ಆ ಮುತ್ತುಗದ ಮರದಲ್ಲಿ ನೇತಾಡಲು ಪ್ರಾರಂಭಿಸುತ್ತದೆ. ಮರುದಿನ ಮತ್ತೆ ವಿಕ್ರಮನು ಬೇತಾಳನನ್ನು ಹಿಡಿದು ತರುವುದು, ಬೇತಾಳ ಕಥೆ ಹೇಳುವುದು, ಮಾತಾಡಿದ ಕೂಡಲೇ ಬೇತಾಳ ಹಾರಿ ಹೋಗುವುದು ಇದು ನಡೆಯುತ್ತದೆ. ಈ ಘಟನೆಗಳು ಪ್ರತೀ ದಿನ ನಡೆಯುತ್ತದೆ. ಈ ಬೇತಾಳ ಕಥೆಗಳಿಗೆ ಕೊನೆಯೇ ಇಲ್ಲವೇ? ಇದನ್ನು ನೀವು ಓದಿಯೇ ತಿಳಿದುಕೊಂಡರೆ ಸ್ವಾರಸ್ಯ ಹೆಚ್ಚುತ್ತದೆ. 

ಬೇತಾಳ ಕಥೆಗಳಿಗೆ ಅಂತ್ಯವೇ ಇಲ್ಲ ಏಕೆಂದರೆ ಪ್ರತಿಯೊಂದು ಕಥೆಯ ಕೊನೆಗೆ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಈ ಕಾರಣದಿಂದ ಈಗಲೂ ಬೇತಾಳ ಕಥೆಗಳು ಎನ್ನುವ ಪುಸ್ತಕಗಳು ಹೊರಬರುತ್ತಿವೆ. ವಿಕ್ರಮ ಔರ್ ಬೇತಾಳ್ ಎಂಬ ಹಿಂದಿ ಭಾಷೆಯ ಧಾರಾವಾಹಿ ಹಿಂದೆ ದೂರದರ್ಶನದಲ್ಲಿ ಪ್ರತೀ ರವಿವಾರ ಸಾಯಂಕಾಲ ಗಂಟೆ ೪.೩೦ಕ್ಕೆ ಮೂಡಿಬರುತ್ತಿತ್ತು. ೧೯೮೫ರಿಂದ ಒಂದು ವರ್ಷಗಳ ಕಾಲ ಇದು ಪ್ರಸಾರವಾಗಿತ್ತು. ವಿಕ್ರಮನಾಗಿ ಅರುಣ್ ಗೋವಿಲ್ ಹಾಗೂ ಬೇತಾಳನಾಗಿ ಸಜ್ಜನ್ ನಟಿಸಿದ್ದರು. ರಮಾನಂದ ಸಾಗರ್ ಈ ಧಾರಾವಾಹಿಯ ನಿರ್ದೇಶನ ಮಾಡಿದ್ದರು. ಅಂದು ಈ ಧಾರಾವಾಹಿ ಬಹಳ ಜನಪ್ರಿಯವಾಗಿತ್ತು. ಮಕ್ಕಳು ಈ ಕಥೆ ಪುಸ್ತಕ ಸಿಕ್ಕರೆ ಓದಲು ಮರೆಯಬೇಡಿ. ಚಂದಮಾಮ, ಬೊಂಬೆಮನೆ ಪತ್ರಿಕೆಗಳಲ್ಲೂ ಬೇತಾಳ ಕಥೆಗಳು ಪ್ರಕಟವಾಗುತ್ತಿದ್ದವು. 

ವಿಕ್ರಮ ಮತ್ತು ಬೇತಾಳನ ಕಥೆಗಳು ಮೂಲತಃ ಸಂಸ್ಕೃತದಲ್ಲಿ ರಚನೆಯಾಗಿದೆ ಎಂದು ನಂಬಿಕೆ ಇದೆ. ೨೫೦೦ ವರ್ಷಗಳ ಹಿಂದೆ ಮಹಾಕವಿ ಸೋಮದೇವ ಭಟ್ಟ ಎಂಬಾತ ಬರೆದ ‘ಬೇತಾಳ್ ಪಚ್ಚೀಸಿ’ ಎನ್ನುವ ಕಾದಂಬರಿಯೇ ನಂತರದ ಎಲ್ಲಾ ವಿಕ್ರಮ-ಬೇತಾಳ ಕಥೆಗಳಿಗೆ ಮೂಲ ಎಂದು ಹೇಳಲಾಗುತ್ತದೆ. ದೂರದರ್ಶನದಲ್ಲಿ ಧಾರವಾಹಿಯಾಗಿ ಮೂಡಿ ಬಂದ ‘ವಿಕ್ರಮ್ ಔರ್ ಬೇತಾಳ್’ ಕೂಡಾ ಈ ಕಾದಂಬರಿಯ ಮೇಲೆ ಆಧಾರಿತವಾಗಿತ್ತು. ಕನ್ನಡ ಭಾಷೆಯ ಜೊತೆಗೆ ಇನ್ನಿತರ ಭಾಷೆಯಲ್ಲೂ ವಿಕ್ರಮ-ಬೇತಾಳ ಕಥೆಗಳ ನೂರಾರು ಪುಸ್ತಕಗಳು ಸಿಗುತ್ತವೆ. ಓದಲು ಮರೆಯದಿರಿ.

ಈ ಪುಸ್ತಕದ ಜೊತೆಯಲ್ಲಿ ಓದಬಹುದಾದ ಇನ್ನೆರಡು ಪುಸ್ತಕಗಳೆಂದರೆ, ಆನಿ ಆಫ್ ಗ್ರೀನ್ ಗೇಬಲ್ಸ್ (Anne of Green Gables) ಎನ್ನುವ ಪುಸ್ತಕವು ಆನಿ ಶೆರ್ಲಿ ಎನ್ನುವ ಅನಾಥ ಹುಡುಗಿಯ ಸಾಹಸ ಮತ್ತು ಬುದ್ಧಿವಂತಿಕೆಯ ಕಥೆ. ಈ ಕಾದಂಬರಿಯನ್ನು ೧೯೦೮ರಲ್ಲಿ ಲೂಸಿ ಮೌಡ್ ಮೌಂಟಗೋಮೆರಿ ಬರೆದು ಪ್ರಕಟಿಸಿದ್ದರು. 

೧೯೫೪ರಲ್ಲಿ ವಿಲಿಯಂ ಗೋಲ್ಡಿಂಗ್ ಬರೆದು ಪ್ರಕಟಿಸಿದ ‘ಲಾರ್ಡ್ ಆಫ್ ದಿ ಫ್ಲೈಸ್’ (Lord of the Flies) ಎನ್ನುವ ಕಾದಂಬರಿಯನ್ನು ಮಕ್ಕಳು ತಮ್ಮ ಓದಿನ ಪಟ್ಟಿಗೆ ಸೇರಿಸಬಹುದು. ಇದು ಬ್ರಿಟೀಷ್ ಶಾಲಾ ಮಕ್ಕಳ ಒಂದು ಗುಂಪಿನ ಕಥೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇವರು ಆ ವಿಮಾನ ಅಪಘಾತಕ್ಕೀಡಾಗಿ ಒಂದು ನಿರ್ಜನ ದ್ವೀಪದಲ್ಲಿ ತುರ್ತು ಇಳಿಕೆ ಮಾಡಬೇಕಾಗುತ್ತದೆ. ಅಲ್ಲಿಯ ರೋಚಕ ಘಟನಾವಳಿಗಳು, ಅಪಾಯಗಳು, ಮರಳಿ ಬರುವ ಪ್ರಯತ್ನ ಇವೆಲ್ಲದರ ಸಾಹಸಮಯ ಕಥೆ ಈ ಕಾದಂಬರಿಯಲ್ಲಿದೆ. 

(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
..................................... ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************




Ads on article

Advertise in articles 1

advertising articles 2

Advertise under the article